ವಿಷಯಕ್ಕೆ ಹೋಗು

ಅಬುಲ್ ಕಲಾಂ ಆಜಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮೌಲಾನಾ ಆಜಾದ್ ಇಂದ ಪುನರ್ನಿರ್ದೇಶಿತ)
ಮೌಲಾನ ಅಬ್ದುಲ್ ಕಲಾಂ ಆಜಾದ್
Bornನವೆಂಬರ್ ೧೧, ೧೮೮೮
ಮೆಕ್ಕಾ, ಸೌದಿ ಅರೇಬಿಯಾ
Diedಫೆಬ್ರುವರಿ ೨೨, ೧೯೫೮
ದೆಹಲಿ
Known forಭಾರತ ಸ್ವಾತಂತ್ರ್ಯ ಹೋರಾಟಗಾರರು, ಕೇಂದ್ರ ಶಿಕ್ಷಣ ಮಂತ್ರಿಗಳು
Signature

ಮೌಲಾನಾ ಅಬ್ದುಲ್ ಕಲಾಂ ಅಜಾದ್ (ಬಂಗಾಳಿ:আবুল কালাম মুহিয়ুদ্দিন আহমেদ আজাদ, ಉರ್ದು: مولانا ابوالکلام محی الدین احمد آزاد; ನವೆಂಬರ್ ೧೧, ೧೮೮೮ - ಫೆಬ್ರುವರಿ ೨೨, ೧೯೫೮) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ, ಭಾರತ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿ ಪ್ರಸಿದ್ಧರೆನಿಸಿದ್ದಾರೆ. ಅವರ ಜನ್ಮದಿನವಾದ ನವೆಂಬರ್ ೧೧ ದಿನಾಂಕವನ್ನು ಭಾರತದ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ.

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮಗಾಂಧಿಯವರ ಜೊತೆಗಾರರಾಗಿದ್ದ ಪ್ರಮುಖರಲ್ಲಿ ಮೌಲಾನಾ ಅಬುಲ್ ಕಲಾಂ ಒಬ್ಬರು. ಅವರು ಜನಿಸಿದ್ದು ನವೆಂಬರ್ ೧೧, ೧೮೮೮ರಲ್ಲಿ. ತಂದೆ ಮೌಲಾನಾ ಸಯ್ಯಿದ್ ಸುಮಾರು ೧೨ ಪುಸ್ತಕ ಬರೆದವರು. ತಾಯಿ ಶೇಖಾ ಅಲಿಯಾಸ್, ಮೆದಿನಾ ದ ದೊಡ್ಡ ವಿದ್ವಾಂಸರ ಮಗಳು. ಮನೆಯಲ್ಲೇ ಆಜಾದ್ ರವರಿಗೆ ಶಿಕ್ಷಣ ಆಯಿತು. ಉರ್ದು, ಹಿಂದಿ, ಅರೇಬಿಕ್, ಪರ್ಶಿಯನ್, ಇಂಗ್ಲಿಷ್ ಭಾಷೆಗಳನ್ನೂ, ಗಣಿತ, ತತ್ತ್ವಶಾಸ್ತ್ರ, ಇತಿಹಾಸ, ಶರಿಯಾತ್ ಮತ್ತು ವಿಜ್ಞಾನವನ್ನು ಕರಗತ ಮಾಡಿಕೊಂಡರು. ೧೨ನೇ ವಯಸ್ಸಿನಲ್ಲಿಯೇ ಅಲ್-ಮಿಸ್ಬಾಹ್ ಎಂಬ ಸಾಪ್ತಾಹಿಕ ಪತ್ರಿಕೆ ಸಂಪಾದಿಸುತ್ತಿದ್ದರು. ೧೯೦೩ರಲ್ಲಿ ಲಿಸ್ಸನ್-ಉಸ್-ಸಿದ್ಕ್ ಎಂಬ ಮಾಸಿಕ ಪತ್ರಿಕೆಯನ್ನು ಹೊರತಂದು ಪ್ರಸಿದ್ಧಿ ಪಡೆದರು. ತಮ್ಮ ೧೩ನೇ ವಯಸ್ಸಿನಲ್ಲಿ ಆಜಾದ್‍ರವರು ಲೇಖಾ ಬೇಗಂ ಅವರನ್ನು ವಿವಾಹವಾದರು.

ಉರ್ದು ವಿದ್ವಾಂಸರು

[ಬದಲಾಯಿಸಿ]

ಉರ್ದು ವಿದ್ವಾಂಸರಾಗಿದ್ದ ಅವರು ತಮ್ಮ ಬರವಣಿಗೆಗಾಗಿ ‘ಆಜಾದ್’ ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. 'ಆಜಾದ್' ಎಂದರೆ ಸ್ವತಂತ್ರ. ಯಾವುದೇ ಪೂರ್ವಗ್ರಹ ಆಲೋಚನೆಗೆ ಒಳಗಾಗಿರಲಿಲ್ಲ ಅವರು. ಮೌಲಾನಾ ಎಂಬುದು ಅವರ ಮನೆತನದಿಂದ ಬಂದ ಹೆಸರು. ಅವರ ತಂದೆ ಮೆಕ್ಕಾದಲ್ಲಿ ಬಹು ದೊಡ್ಡ ವಿದ್ವಾಂಸರು. ಹೀಗಾಗಿ ಅವರು ಮೌಲಾನಾ ಆಜಾದ್ ಎಂದೇ ಪ್ರಸಿದ್ದರು. ಕಲ್ಕತ್ತಾಗೆ ಬಂದ ತಮ್ಮ ತಂದೆಯವರನ್ನು, ಅವರ ವಿದ್ವತ್ತಿಗೆ ಮಾರುಹೋಗಿ ಜನರು ಬಲವಂತ ಮಾಡಿ ಭಾರತದಲ್ಲಿಯೇ ಉಳಸಿಕೊಂಡರು.

ಸ್ವಾತಂತ್ರ್ಯ ಚಳುವಳಿಯಲ್ಲಿ

[ಬದಲಾಯಿಸಿ]

ಪತ್ರಕರ್ತರಾಗಿ ಬ್ರಿಟಿಷ್ ಆಡಳಿತ ವಿರುದ್ಧ ಬರೆಯುತ್ತಿದ್ದ ಲೇಖನಗಳಿಂದ ಮೌಲಾನಾ ಆಜಾದರು ಪ್ರಸಿದ್ಧಿ ಪಡೆದಿದ್ದರು. ಖಿಲಾಫತ್ ಚಳುವಳಿಯ ನೇತೃತ್ವ ವಹಿಸಿದ್ದ ಆಜಾದರು ಮಹಾತ್ಮ ಗಾಂಧೀಜಿಯವರ ನಿಕಟವರ್ತಿಗಳಾದರು. ಮಹಾತ್ಮರು ಆಯೋಜಿಸಿದ್ದ ಅಸಹಕಾರ ಚಳುವಳಿಯಲ್ಲಿ ಅತ್ಯಂತ ಕ್ರಿಯಾಶೀಲ ಯುವಕ ಎಂದು ಹೆಸರಾದರು.

ಅಕ್ಟೋಬರ್ ೧೯೨೦ ರಂದು ಅವರನ್ನು 'ಜಾಮಿಯಾ ಮಿಲಿಯಾ ಇಸ್ಲಾಮಿಯಾ' ಸ್ಥಾಪನಾ ಸಮಿತಿಗೆ ಆಯ್ಕೆ ಮಾಡಲಾಯಿತು. ಆಲೀಘಡದಲ್ಲಿ ಸ್ಥಾಪಿಸಲಾದ ಈ ವಿಶ್ವವಿದ್ಯಾನಿಲಯವನ್ನು ದಿಲ್ಲಿಗೆ ಸ್ಥಳಾಂತರಿಸಿದರು. ಈ ವಿಶ್ವವಿದ್ಯಾಲಯದ ಮುಖ್ಯ ದ್ವಾರಕ್ಕೆ ಇವರ ಹೆಸರನ್ನೇ ಇಡಲಾಗಿದೆ.

ಗಾಂಧೀಜಿಯವರ ‘ಸ್ವದೇಶಿ’, ‘ಸ್ವರಾಜ್’ ಚಿಂತನೆಗಳಿಗೆ ಮಾರು ಹೋಗಿ ಅವರ ಜೊತೆ ನಿರಂತರವಾಗಿದ್ದ ಅಬ್ದುಲ್ ಕಲಾಂ ೧೯೨೩ರ ವರ್ಷದಲ್ಲಿ ತಮ್ಮ ೩೫ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಕಿರು ವಯಸ್ಸಿನವರಾಗಿದ್ದರು.

೧೯೩೧ರ ವರ್ಷದಲ್ಲಿ ‘ಧರಾಸಣಾ ಸತ್ಯಾಗ್ರಹ’ದ ಪ್ರಮುಖ ಆಯೋಜಕರಾಗಿದ್ದ ಮೌಲಾನ ಹಲವಾರು ಕಠಿಣ ಸೆರೆವಾಸಗಳನ್ನು ಕಂಡರು. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಮೂರು ವರ್ಷಗಳ ಕಾಲ ಸತತವಾಗಿ ಸೆರೆಯಲ್ಲಿಯೇ ಇದ್ದರು. ಸ್ವಾತಂತ್ರ್ಯದ ಸಮಯದಲ್ಲಿ ದೇಶದ ವಿಭಜನೆಯ ಕೂಗನ್ನು ಬೆಂಬಲಿಸದಿದ್ದ ಅವರು ಭಾರತದ ಪರವಾಗಿಯೇ ಇದ್ದರು. ಸ್ವಾತಂತ್ರ್ಯಕ್ಕೆ ಮುಂಚೆಯೇ, ಪಾಕಿಸ್ತಾನ ರಾಷ್ಟ್ರವಾದರೆ ಅಲ್ಲಿ ಪ್ರಜಾಪ್ರಭುತ್ವ ನಿರ್ಮಾಣವಾಗದೆ ಮಿಲಿಟರಿ ಆಡಳಿತವೇ ಗತಿಯಾಗುತ್ತದೆ ಎಂಬ ಎಚ್ಚರಿಕೆ ಸಹ ನೀಡಿದ್ದರು.

'ಅಲ್ ಹಿಲಾಲ್' ಪತ್ರಿಕೆಯ ಮುಖಾಂತರ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಶ್ರಮಿಸಿದರು.

ಕಾಂಗ್ರೆಸ್ ನಾಯಕ

[ಬದಲಾಯಿಸಿ]

ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾಗಿ ಬೆಳೆದ ಆಜ಼ಾದ್ ಅವರು, ಪಕ್ಷದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದರು. ಬ್ರಿಟಿಷ್ ಸರ್ಕಾರ ನೇಮಿಸಿದ್ದ ಸೈಮನ್ ಕಮಿಷನ್ ಭಾರತದ ಯಾವ ಸದಸ್ಯರನ್ನು ಒಳಗೊಂಡಿರಲಿಲ್ಲ. ಸಾಂವಿಧಾನಿಕ ಬದಲಾವಣೆಗಳನ್ನು ಜಾರಿಗೆ ತರಲು ಕಾಂಗ್ರೆಸ್ ಪಕ್ಷದ ೧೯೨೮ ರ ಮೋತಿಲಾಲ್ ನೆಹರು ಅವರ ವರದಿಯನ್ನು ಅನುಮೋದಿಸಿದರು. ಇದರಿಂದಾಗಿ ಅಲಿ ಸಹೋದರರು ಮತ್ತು ಜಿನ್ನಾರ ಕೆಂಗಣ್ಣಿಗೆ ಗುರಿಯಾದರು. ಧರ್ಮ ಆಧಾರಿತ ಅಭ್ಯರ್ಥಿ ಆಯ್ಕೆಯನ್ನು ಕಾಂಗ್ರೆಸ್ ಪಕ್ಷ ತಿರಸ್ಕರಿಸಿತ್ತು. ಇದನ್ನು ಸಹ ಆಜಾದ್ ಅವರು ಒಪ್ಪಿದ್ದರು. ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಸದಾ ಮಾನ್ಯ ಮಾಡುತ್ತಿದ್ದರು. ಗುವಾಹಟಿಯಲ್ಲಿ ೧೯೨೮ರಲ್ಲಿ ನಡೆದ ಕಾಂಗ್ರೆಸ್ ಅಧವೇಶನದಲ್ಲಿ ಗಾಂಧೀಜಿಯವರು ಭಾರತಕ್ಕೆ ಅರೆ-ಸ್ವಾತಂತ್ರ್ಯ ರಾಜ್ಯದ ಸ್ಥಾನಮಾನ ಸಿಗಬೇಕೆಂದು ಬ್ರಿಟಿಷರನ್ನು ಒತ್ತಾಯಿಸಿದರು. ಇನ್ನೊಂದು ವರ್ಷದಲ್ಲಿ ಈ ಬೇಡಿಕೆ ನರವೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟಿದ್ದರು. ಗಾಂಧೀಜಿಯವರಿಗೆ ಹತ್ತಿರವಿದ್ದರೂ ಆಜ಼ಾದ್ ಅವರು ನೆಹರೂ ಮತ್ತು ಸುಭಾಷ್ ಬೋಸ್ ರವರ ತೀವ್ರ ವಾದಕ್ಕೆ ಬೆಂಬಲ ನೀಡುತ್ತಿದ್ದರು. ಸಮಾಜವಾದಿ ನಿಲುವು ತಳೆದಿದ್ದ ಆಜ಼ಾದ್ ಅಸಮಾನತೆ, ಬಡತನದ ವಿರುದ್ಧ ಯುದ್ಧ ಸಾರಿದರು. ಗಾಂಧಿಯವರ ದಂಡಿ ಸತ್ಯಾಗ್ರಹ ಸಂದರ್ಭದಲ್ಲಿ ಧರಾಸಣಾ ಉಪ್ಪಿನ ಸತ್ಯಾಗ್ರಹ ಕೈಗೊಂಡರು. ಇದಕ್ಕಾಗಿ ೧೯೩೦ ರಿಂದ ೧೯೩೪ರವರೆಗೆ ಹಲವು ಬಾರಿ ಸೆರೆವಾಸ ಅನುಭವಿಸಬೇಕಾಯಿತು. ೧೯೨೫ರ ಭಾರತ ಸರ್ಕಾರ ಕಾಯ್ದೆಯ ಪ್ರಕಾರ ಚುನಾವಣೆ ಘೋಷಣೆಯಾದಾಗ, ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡರು. ಸಮಾಜವಾದದಲ್ಲಿ ತೀವ್ರ ನಂಬಿಕೆಯಿರಿಸಿದ್ದ ಅವರು, ಸಮಾಜವಾದಿ ನೆಹರೂ ಅವರನ್ನು ೧೯೩೭ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆಗೆ ಬೆಂಬಲಿಸಿದರು. ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ನಡುವೆ ಮಾತುಕತೆ ಬೆಂಬಲಿಸಿದರಾದರೂ 'ಮುಸಲ್ಮಾನ ಸಮುದಾಯದ ಏಕಮೇವ ಪ್ರತಿನಿಧಿಯು ಮುಸ್ಲಿಂ ಲೀಗ್' ಎನ್ನುವ ಲೀಗ್ ನ ಸಿದ್ಧಾಂತಕ್ಕೆ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದರು.

ಬರೆವಣಿಗೆಗಳು

[ಬದಲಾಯಿಸಿ]

ಆಜ಼ಾದ್ ಅವರು ೨೦ನೇ ಶತಮಾನ ಕಂಡ ದೊಡ್ಡ ಉರ್ದು ವಿದ್ವಾಂಸರು. ಅವರ ಪ್ರಮುಖ ಬರೆವಣಿಗೆಗಳು- India Wins Freedom, ಘುಬರ್-ಎ-ಖತಿರ್, ತಜ಼್ಕಿರಾಹ್, ತರ್ಜುಮನುಲ್ ಕುರಾನ್

ರಾಷ್ಟ್ರೀಯ ಶಿಕ್ಷಣ ದಿನ

[ಬದಲಾಯಿಸಿ]

ಸ್ವತಂತ್ರ ಭಾರತದಲ್ಲಿ ಶಿಕ್ಷಣ ಸಚಿವರಾಗಿದ್ದ ಮೌಲನಾ ಅಬ್ದುಲ್ ಕಲಾಂ ಅವರು ಹುಟ್ಟಿದ ಈ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನ ಎಂದು ಆಚರಣೆಗೆ ತರಲಾಗಿದೆ[]

R

ವಿದಾಯ

[ಬದಲಾಯಿಸಿ]

ಮೌಲಾನಾ ಅಬುಲ್ ಕಲಾಂ ಅವರು ಫೆಬ್ರವರಿ ೨೨, ೧೯೫೮ರ ವರ್ಷದಲ್ಲಿ ನಿಧನರಾದರು. []

ಉಲ್ಲೇಖ

[ಬದಲಾಯಿಸಿ]