ವಿಷಯಕ್ಕೆ ಹೋಗು

ವಾಸ್ತುಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಾಸ್ತುಶಿಲ್ಪ ಇಂದ ಪುನರ್ನಿರ್ದೇಶಿತ)
The 8x8 (64) grid Manduka Vastu Purusha Mandala layout for Hindu Temples. It is one of 32 Vastu Purusha Mandala grid patterns described in Vastu sastras. In this grid structure of symmetry, each concentric layer has significance.[]
vastu directional chakara

ವಾಸ್ತುಶಾಸ್ತ್ರ - ವಾಸ್ತು ವೇದ. ವಾಸ್ತುಶಾಸ್ತ್ರವು ಪ್ರಮುಖವಾದ ಹಿಂದೂ ನಿರ್ಮಾಣ ವಿಧಾನವಾಗಿರುತ್ತದೆ. ಇದನ್ನು ದೇವಸ್ಥಾನ ನಿರ್ಮಾಣದಲ್ಲಿ ಅತೀ ಮುಖ್ಯವಾದ ಅಂಶ ಎಂದು ಭಾವಿಸಲಾಗುತ್ತದೆ. ವಾಸ್ತುಶಾಸ್ತ್ರವನ್ನು ದೇವಾಲಯ ಮತ್ತು ಮನುಷ್ಯಾಲಯ ನಿರ್ಮಾಣಗಳಲ್ಲಿ ಬಹಳವಾಗಿ ಬಳಸಲಾಗುತ್ತದೆ. ಇನ್ನು ಯಾನ-ವಾಹನ, ಆಸನ ಇತ್ಯಾದಿಗಳ ನಿರ್ಮಾಣದಲ್ಲಿಯೂ ಬಳಸಲಾಗುತ್ತದೆ. ನಗರಗಳ ನಿರ್ಮಾಣಗಳ ಬಗ್ಗೂ ವಿಚಾರಗಳು ಲಭ್ಯವಿವೆ. ಇಲ್ಲಿ ನಿವೇಶನದ ಆಯ್ಕೆ, ಮನೆಯ ಉದ್ದಗಲ, ಎತ್ತರ ಮತ್ತು ವಿನ್ಯಾಸ, ನೋಡಬೇಕಾದ ತಿಥಿ-ವಾರ ಇತ್ಯಾದಿಗಳು. ಉಪಯೋಗಿಸಬೇಕಾದ ಮರಮುಟ್ಟುಗಳು-ಈ ಎಲ್ಲ ವಿಷಯಗಳು ಬರುತ್ತವೆ.

ಪರಿಭಾಷೆ

[ಬದಲಾಯಿಸಿ]
  • "ವಸತಿ ಇತಿ ವಾಸ್ತುಃ" = "ವಾಸ ಮಾಡಲ್ಪಡುತ್ತದೆ ಎನ್ನುವುದರಿಂದ ವಾಸ್ತು"ಎಂದು ಮಯಮತದಲ್ಲಿ ನಿರ್ವಚಿಸಲಾಗಿದೆ. ಸಂಸ್ಕೃತದಲ್ಲಿ ವಾಸ್ತು ಅಂದರೆ ಯಾವುದೇ ಸ್ಥಿರವಾದ ವಸ್ತು, ಪದಾರ್ಥ, ಭೌತಿಕವಸ್ತು, ಅಥವಾ ಸರಕು; ಸಾಮಾನು, ಸಂಪತ್ತು ಅಥವಾ ಆಸ್ತಿ, ಸ್ವತ್ತು, ಸಂಪತ್ತು. ಸಂಸ್ಕೃತದಲ್ಲಿ ಶಾಸ್ತ್ರ ಅಂದರೆ ವಿಜ್ಞಾನ-ವಿಶೇಷ ಜ್ಞಾನ; ವೈಜ್ಞಾನಿಕ /ಪಾರಂಪರಿಕ ಬೋಧನೆ ಎನ್ನಬಹುದು[].
  • ಪಾರಂಪರಿಕವಾಗಿ ಆಗಮ ಶಾಸ್ತ್ರ ಕೇಂದ್ರಿತವಾಗಿಯೇ ವಾಸ್ತುವು ಬೆಳೆದುಬಂದಿದೆ. ಈ ಮಧ್ಯೆಯೂ ಯೋಗಶಾಸ್ತ್ರ ಮತ್ತಿತರ ದರ್ಶನ ಶಾಸ್ತ್ರಗಳನ್ನು ಆಧರಿಸಿದ ಮೂಲಭೂತ ವಿಜ್ಞಾನವನ್ನು ಒಳಗೊಂಡ ಆದರೆ ವ್ಯಾಪಕವಾಗಿ ಬಳಕೆಯಲ್ಲಿ ಇಲ್ಲದ ಯೋಗಿಗಳ ಅರಿವಿನ ಒಳಗೇ ಹುದುಗಿರುವ ವಿಭಿನ್ನವಾದ ಪರಂಪರೆಯೂ ಇದೆ.

ಇತಿಹಾಸ

[ಬದಲಾಯಿಸಿ]
  • ಭೃಗು, ಅತ್ರಿ, ವಸಿಷ್ಠ, ವಿಶ್ವಕರ್ಮ, ಯಮ, ನಾರದ, ನಗ್ನಜಿತ್, ವಿಶಾಲಾಕ್ಷ, ಪುರಂದರ, ಬ್ರಹ್ಮ, ಕುಮಾರ, ನಂದೀಶ, ಶೌನಕ, ಗರ್ಗ, ವಾಸುದೇವ, ಅನಿರುದ್ಧ, ಶುಕ್ರ, ಬೃಹಸ್ಪತಿ-ಈ ಹದಿನೆಂಟು ಮಂದಿ ವಾಸ್ತುಶಾಸ್ತ್ರದ ಉಪದೇಶಕರು. ಮತ್ಸ್ಯರೂಪಿಯಾದ ಭಗವಂತನಿಂದ ಮನುವಿಗೆ ಇದು ಉಪದಿಷ್ಟವಾಗಿದೆ. ವಿಶ್ವಕರ್ಮ ಪ್ರಕಾಶದಲ್ಲಿರುವಂತೆ ಮೊಟ್ಟಮೊದಲು ಲೋಕಹಿತಕ್ಕಾಗಿ ಇದನ್ನು ತಿಳಿಸಿದವ ಶಂಭು.
  • ಪುರಾತನವಾದ ಈ ಶಾಸ್ತ್ರವನ್ನು ಪರಾಶರ ಬೃಹದ್ರಥನಿಗೂ ಬೃಹದ್ರಥ ವಿಶ್ವಕರ್ಮನಿಗೂ ತಿಳಿಸುತ್ತಾನೆ. ವಿಶ್ವಕರ್ಮ ಈ ಶಾಸ್ತ್ರವನ್ನೇ ಲೋಕದಲ್ಲಿ ಪ್ರಚಾರ ಮಾಡಿರುತ್ತಾನೆ.[] ಬಹಳ ಹಿಂದೆ, ತ್ರೇತಾಯುಗದಲ್ಲಿ, ದೊಡ್ಡ ಆಕಾರದ ಒಂದು ಭೂತ ತನ್ನ ಶರೀರದಿಂದ ಪ್ರಪಂಚವನ್ನೆಲ್ಲ ಆವರಿಸಿಕೊಂಡು ನಿದ್ರಿಸುತ್ತಿತ್ತು.
  • ಇಂದ್ರನೇ ಮೊದಲಾದ ದೇವತೆಗಳು ಆ ಭಯಂಕರಾಕಾರದ ಭೂತವನ್ನು ನೋಡಿ ವಿಸ್ಮಿತರಾಗಿ ಭಯಪಟ್ಟು ಬ್ರಹ್ಮನ ಮೊರೆಹೊಕ್ಕು, ಭಯಂಕರ ರೂಪಿಯಾದ ಭೂತವೊಂದು ಮಲಗಿ ಪ್ರಪಂಚವನ್ನೆಲ್ಲ ಆವರಿಸಿಕೊಂಡಿದೆ, ನಾವು ಭೀತರಾಗಿದ್ದೇವೆ, ಈಗ ಎಲ್ಲಿಗೆ ಹೋಗುವುದು. ಏನು ಮಾಡುವುದು ಎಂಬ ಅರಿವಿಲ್ಲದೆ ನಿನ್ನಲ್ಲಿಗೆ ಬಂದಿದ್ದೇವೆ-ಎಂದು ವಿಷಯವನ್ನು ತಿಳಿಸಿ, ತಮ್ಮ ದುರಿತಗಳನ್ನು ನಿವಾರಿಸಿ ರಕ್ಷಿಸುವಂತೆ ಪ್ರಾರ್ಥಿಸಿದರು.
  • ಆಗ ಬ್ರಹ್ಮ, ದೇವತೆಗಳಿಗೆ ಅಭಯ ಪ್ರದಾನಮಾಡಿ, ನೀವು ಹೆದರಬೇಡಿ, ಆ ಭೂತವನ್ನು ಕೆಳಮುಖ ಮಾಡಿ ತಳ್ಳಿ, ನಿಮಗೆ ಯಾವ ಭಯವೂ ಇರುವುದಿಲ್ಲ ಎಂದು ತಿಳಿಸುತ್ತಾನೆ. ಅದರಂತೆ, ದೇವತೆಗಳು ಆ ಭೂತವನ್ನು ಕೆಳಮೊಗನಾಗಿ ತಳ್ಳಿ ಹಿಂಸಿಸಿದರು. ಅವನೇ ಬ್ರಹ್ಮಕೃತ ವಾಸ್ತುಪುರುಷ.
  • ಭಾದ್ರಪದ ಮಾಸದ ಕೃಷ್ಣಪಕ್ಷ ತೃತೀಯಾ ತಿಥಿ, ಕೃತ್ತಿಕಾ ನಕ್ಷತ್ರ, ವ್ಯತೀಪಾತ ಯೋಗ, ಭದ್ರಾಕರಣ ಶನಿವಾರ, ಗುಳಿಕ ಕಾಲದಲ್ಲಿ ವಾಸ್ತುಪುರುಷ ಬ್ರಹ್ಮನಲ್ಲಿಗೆ ಹೋಗಿ ಜಗತ್ಪ್ರಭುವೇ! ಚರಾಚರಾತ್ಮಕವಾದ ಸರ್ವವೂ ನಿನ್ನಿಂದ ಸೃಷ್ಟವಾಗಿದೆ. ಯಾವ ತಪ್ಪು ಇಲ್ಲದ ನನ್ನನ್ನು ವಿನಾಕಾರಣ ದೇವತೆಗಳು ಪೀಡಿಸುತ್ತಿದ್ದಾರೆ ಎನ್ನಲು ಪ್ರೀತನಾದ ಬ್ರಹ್ಮ ಅವನಿಗೆ ಗ್ರಾಮ, ನಗರ, ದುರ್ಗ, ಪ್ರಾಸಾದ, ಉದ್ಯಾನ, ಗೃಹ-ಈ ಸ್ಥಳಗಳಲ್ಲಿ ಯಾರು ನಿನ್ನನ್ನು ಪೂಜಿಸದೆ ಕಟ್ಟಡ ಮೊದಲಾದುವನ್ನು ನಿರ್ಮಿಸಲು ಪ್ರಾರಂಭಿಸುತ್ತಾರೊ ಅವರ ಸಂಪತ್ತು ನಾಶವಾಗುತ್ತದೆ, ವಿಘ್ನಪರಂಪರೆಗಳು ಬರುತ್ತವೆ, ಕಟ್ಟಡ ಕಟ್ಟುವವನಿಗೂ ಮೃತ್ಯು ಸಂಭವಿಸುತ್ತದೆ ಎಂದು ವರವನ್ನು ಕೊಟ್ಟು ಅಂತರ್ಧಾನನಾದ. ಅಂದಿನಿಂದ ಯಾವ ಕಟ್ಟಡವನ್ನು ಕಟ್ಟಿಸಲು ಪ್ರಾರಂಭಿಸಬೇಕಾದರೂ ಮೊದಲು ವಾಸ್ತುಪುಜೆಯನ್ನು ಮಾಡುತ್ತಾರೆ. ಇಂದಿಗೂ ಇದು ಆಚರಣೆಯಲ್ಲಿದೆ.

ವಾಸ್ತುಶಾಸ್ತ್ರವನ್ನು ಒಳಗೊಂಡ ಪಾರಂಪರಿಕ ಗ್ರಂಥಗಳು

[ಬದಲಾಯಿಸಿ]
  1. ಮಾನಸಾರ ಶಿಲ್ಪಶಾಸ್ತ್ರ
  2. ಮಯಮತ (ಮಯಾಸುರನ ರಚನೆ)
  3. ವಿಶ್ವಕರ್ಮ ವಾಸ್ತುಶಾಸ್ತ್ರ (ವಿಶ್ವ ಕರ್ಮನ ರಚನೆ)
  4. ಸಮರಾಂಗಣ ಸೂತ್ರಧಾರ (ರಾಜ ಭೋಜನ ರಚನೆ)
  5. ಅಪರಾಜಿತ ಪೃಚ್ಛ (ವಿಶ್ವ ಕರ್ಮ ಮತ್ತು ಅವನ ಮಗ ಅಪರಾಜಿತರ ನಡುವಿನ ಮಾತುಕತೆ)
  6. ಶಿಲ್ಪರತ್ನ
  7. "ಮನುಷ್ಯಾಲಯ ಚಂದ್ರಿಕಾ"
  8. "ತಂತ್ರಸಮುಚ್ಚಯ" ಮತ್ತು "ಶೇಷಸಮುಚ್ಚಯ"
  9. "ವಾಸ್ತುಸೂತ್ರೋಪನಿಷತ್"

ಮೂಲಭೂತ ಪರಿಕಲ್ಪನೆ

[ಬದಲಾಯಿಸಿ]

ಪಾರಂಪರಿಕ ಆಗಮ ಕೇಂದ್ರಿತ ವಾಸ್ತುಶಾಸ್ತ್ರದಲ್ಲಿ ಬಹಳಷ್ಟು ಪರಿಕಲ್ಪನೆಗಳನ್ನು ಆಗಮ ತಂತ್ರಗಳಿಂದಲೇ ಪಡೆಯಲಾಗಿದೆ. ಇದರಲ್ಲಿ "ವಾಸ್ತುಸೂತ್ರೋಪನಿಷತ್" ಎನ್ನುವ ಗ್ರಂಥದಲ್ಲಿ ವಿವರಿಸಿದಂತಹ ವೈದಿಕ ಮೂಲವಾದ ಪರಿಕಲ್ಪನೆಗಳು ಮತ್ತು ಆಗಮಗಳಲ್ಲಿ ಸ್ವತಂತ್ರವಾಗಿರುವ ಪರಿಕಲ್ಪನೆಗಳು ಇವೆ. ಬಹಳ ಗೌಣವಾಗಿ ಯೋಗ ಶಾಸ್ತ್ರ ಮತ್ತಿತರ ದರ್ಶನ ಶಾಸ್ತ್ರ ಕೇಂದ್ರಿತ ಕಲ್ಪನೆಗಳು ಇವೆ. ಉದಾ: ಪಂಚ ಮಹಾಭೂತಗಳು-

  1. ಪೃಥ್ವೀ/ಭೂಮಿ ;
  2. ಜಲ/ನೀರು;
  3. ವಾಯು/ಗಾಳಿ;
  4. ಅಗ್ನಿ/ಬೆಂಕಿ;
  5. ಆಕಾಶ/ನಭ

ವಾಸ್ತು ಪುರುಷ ಮಂಡಲ

[ಬದಲಾಯಿಸಿ]
ವಾಸ್ತು ಪುರುಷ ಮಂಡಲ ಸಿದ್ದಾಂತ

ವಾಸ್ತು ಪುರುಷ ಮಂಡಲ ಎನ್ನುವುದು ವಾಸ್ತುಶಾಸ್ತ್ರದಲ್ಲಿ ಅತ್ಯಗತ್ಯವಾದ ಭಾಗ. ಹಿಂದೂ ವಿಶ್ವವಿಜ್ಞಾನದ ಪ್ರಕಾರ ಭೂಮಿಯ ಮೇಲ್ಮೈ ಚೌಕ, ಭೂಮಿಯು ವಾಸ್ತು ಪುರುಷ ಮಂಡಲದ ನಾಲ್ಕು ಬದಿಗಳನ್ನು ದಿಗಂತವೆಂದೂ ಸೂರ್ಯಾಸ್ತ ಹಾಗೂ ಸೂರ್ಯೋದಯ ಹಾಗೂ ಉತ್ತರ ದಕ್ಶಿಣ ದಿಕ್ಕುಗಳೆನ್ನಲಾಗಿದೆ. ವಾಸ್ತು ಪುರುಷ ಮಂಡಲದ ನಂಬಿಕೆಯು ಈ ಪ್ರಕಾರವಾಗಿದೆ. ಒಮ್ಮೆ ಅಗೋಚರ ಶಕ್ತಿಯು ಸ್ವರ್ಗವನ್ನು ಭೂಮಿಯಿಂದ ತಡೆಗಟ್ಟಿದಾಗ ಬ್ರಹ್ಮ ಹಾಗೂ ಇತರೆ ದೇವರುಗಳು ಸೇರಿ ಅವನ್ನನ್ನು ಭೂಮಿಯ ಅಡಿಯಲ್ಲಿ ಬಂದಿಸಿ ಇಡುತ್ತಾರೆ. ಈ ಕಥೆಯ ಪ್ರಕಾರ ವಾಸ್ತು ಪುರುಷ ಮಂಡಲವು ರಚನೆಯಾಗಿದೆ. ವಾಸ್ತು ಪುರುಷ ಮಂಡಲದಲ್ಲಿ ೪೫ ದೇವರುಗಳು ಇವೆ, ಅವರಲ್ಲಿ ೩೨ ಅನ್ಯರು ಸೇರಿವೆ.

ಪ್ರಾಣ

[ಬದಲಾಯಿಸಿ]

ವಾಸ್ತುಶಾಸ್ತ್ರವು ವೈಶಿಷ್ಟ್ಯವು ಕಟ್ಟಡ ಹಾಗೂ ಸ್ಠಳದ ಮೂಲಕ ಶಕ್ತಿಯ ಹರಿವನ್ನು ನಿರ್ಧರಿಸುವುದಾಗಿದೆ. ಗುರುತ್ವಾಕರ್ಷಣಾ ಶಕ್ತಿಯ ಅಧಿಪತಿಯೇ "ವಾಸ್ತುಪುರುಷ".ಭೂಮಿ ಮೇಲೆ ನಿರ್ಮಿಸಿದ ಎಂಥದೇ ಕಟ್ಟಡದಲ್ಲಿ ವಾಸ್ತುಪುರುಷ ವಾಸಿಸುತ್ತಾನೆ ಮತ್ತು ನಿಯಮಗಳನುಸಾರ ಆ ಕಟ್ಟಡದೊಳಗೆ ಪ್ರವೇಶಿಸುವ ದುಷ್ಟ ಹಾಗೂ ಅನಿಷ್ಟಕಾರ ಶಕ್ತಿಗಳನ್ನು ಆತ ನಿಯಂತ್ರಿಸುತ್ತಾನೆ. ಇದಲ್ಲದೆ ಆದ್ಯ ಶಿಲಾಸ್ತಂಭ ವಿನ್ಯಾಸ ಸ್ಥಳವನ್ನು ಗೊತ್ತುಮಾಡುವಾಗ ತತ್ಕಾಲದಲ್ಲಿ ವಾಸ್ತುಪುರುಷನ ಸ್ಥಿತಿಯನ್ನು ಅರಿಯಬೇಕು. ಈ ವಾಸ್ತುವೇ ಚರವಾಸ್ತು. ಇದರ ವಿವರ ವಿದ್ಯಾಮಾಧವೀಯದಲ್ಲಿ ಹೀಗಿದೆ:

ಮಾರ್ತಾಂಡಾರೂಢ ರಾಶೌ ವಿನಿಹಿತಚರಣಸ್ತನ್ಮದನ್ಯಸ್ತ ಮೂರ್ಧಾ
ವಾಮೇ ಪಾಶ್ವೇ ಶಯಾನೋ ಭ್ರಮತಿ ಸ ಪರಿತಃ ಪುರುಷೋ ವಾಸ್ತು ರೂಪಃ!
ಪಾದೇ ಯದ್ಯರ್ಥನಾಶಃ ಶಿರಸಿ ಚ ಮರಣಂ ತಸ್ಯ ಪೃಷ್ಠೇ ವಿಪತ್ತಿಃ
ವಕ್ಷಸ್ಯೂರೌ ಚ ನಾಶಶ್ಯು ಭಫಲಮುದರೇ ಸ್ತಂಭಮಾದ್ಯಂ ವಿದಧ್ಯತ್ ||

ನಿರ್ಮಾಣದಲ್ಲಿ ಮಂಡಲದ ಪಾತ್ರ

[ಬದಲಾಯಿಸಿ]

ಮಂಡಲದಲ್ಲಿರುವ ದೇವರುಗಳು ನೆಲಸಿದ ಪ್ರಕಾರ ಕಟ್ಟಡ ನಿರ್ಮಾಣ ಕೈಗೊಳ್ಳಲಾಗುತ್ತದೆ. ಅದರ ಪ್ರಕಾರ ಕಟ್ಟಡದ ಕೊಣೆಗಳನ್ನು ಕಟ್ಟಲಾಗುತ್ತದೆ. ಕೆಳಗಿನವು ಕೆಲವು ಉದಾಹರಣೆ:

  • ಉತ್ತರ - ಖಜಾನೆ, ಬೊಕ್ಕಸ, ಕೋಶಾಗಾರ, ಭಂಡಾರ
  • ಈಶಾನ್ಯ - ಪೂಜಾ ಸ್ಥಳ
  • ಪೂರ್ವ - ಮನೆಯ ದ್ವಾರ
  • ಆಗ್ನೇಯ - ಅಡುಗೆ ಮನೆ
  • ದಕ್ಷಿಣ - ಮಲಗುವ ಕೋಣೆ, ಶಯನಗೃಹ
  • ನೈಋತ್ಯ - ಶಸ್ತ್ರಾಗಾರ
  • ಪಶ್ಚಿಮ - ಊಟದ ಕೊಣೆ , ಕೊಟ್ಟಿಗೆ
  • ವಾಯವ್ಯ - ಉಗ್ರಾಣ

ನಿರ್ಮಾಣ ವಿಧಾನ

[ಬದಲಾಯಿಸಿ]
  • ಕಟ್ಟಡವನ್ನು ಕಟ್ಟುವುದಕ್ಕೆ ಮೊದಲು ಸ್ಥಳವನ್ನು ಪರೀಕ್ಷಿಸುವುದು ಆದ್ಯ ಕರ್ತವ್ಯ. ನಿವೇಶನವನ್ನು ಚಾತುರ್ವರ್ಣಾನುಗುಣವಾಗಿ ನಿಷ್ಕರ್ಷಿಸಿಕೊಳ್ಳಬೇಕು. ಮಣ್ಣು ಬಿಳುಪು ವರ್ಣದವರಿಗೆ ಪುರ್ವೋತ್ತರಗಳಲ್ಲಿ ತಗ್ಗಾದ ಭೂಮಿಯಾಗಿದ್ದು, ಮಣ್ಣು ಬಿಳುಪು ಬಣ್ಣದ್ದಾಗಿ, ಸುವಾಸನೆ ಉಳ್ಳದ್ದೂ ಮಧುರವೂ ದರ್ಭೆ ಬೆಳೆದಿರುವುದೂ ಆಗಿದ್ದರೆ ಶ್ರೇಯಃಪ್ರದ. ಕ್ಷತ್ರಿಯರಿಗೆ ತಿಟ್ಟುಪ್ರದೇಶವೂ ರಕ್ತಗಂಧವೂ ಕಷಾಯರುಚಿಯೂ ಆಗಿ ಹುಲ್ಲು ಬೆಳೆದಿರುವ ಕೆಂಪು ಮಣ್ಣಿನ ಭೂಮಿ ಶ್ರೇಷ್ಠ.
  • ವೈಶ್ಯರಿಗೆ ಹಳ್ಳತಿಟ್ಟುಗಳಿಲ್ಲದ ಹಳದಿ ಬಣ್ಣದ, ಜೇನಿನ ವಾಸನೆ ಮತ್ತು ಸ್ವಲ್ಪ ಹುಳಿಯಾದ ರುಚಿಯುಳ್ಳ ಮಣ್ಣಿನಿಂದ ಕೂಡಿ ಫಲಪುಷ್ಪ ಭರಿತವಾದ ಭೂಮಿ ಉತ್ತಮ. ನಾಲ್ಕನೆಯ ವರ್ಣದವರಿಗೆ ಹಳ್ಳತಿಟ್ಟುಗಳುಳ್ಳ, ಮದ್ಯದ ವಾಸನೆಯಿಂದ ಕೂಡಿ ಆದ ಹುಲ್ಲು ಬೆಳೆದಿರುವ ಕಪ್ಪು ಮಣ್ಣಿನ ನಿವೇಶನ ಶುಭಪ್ರದ. ಹಳ್ಳತಿಟ್ಟುಗಳಿಲ್ಲದ ಸಮವಾದ ಬಿಳುಪು ಮಣ್ಣಿನಿಂದ ಕೂಡಿದ ಭೂಮಿ ಎಲ್ಲರಿಗೂ ಗ್ರಾಹ್ಯ.
  • ನಿವೇಶನದ ಪುರ್ವಭಾಗ ಎತ್ತರವಾಗಿದ್ದು ಉಳಿದ ಭಾಗ ತಗ್ಗಾಗಿದ್ದರೆ ಅದಕ್ಕೆ ಗೋವೀಥಿ ಎಂದು ಹೆಸರು. ಇಲ್ಲಿ ಗೋಗಳಿಗೆ ವೃದ್ಧಿ ಇರುತ್ತದೆ. ಆಗ್ನೇಯದಲ್ಲಿ ಎತ್ತರವಾಗಿದ್ದರೆ ಅಗ್ನಿವೀಥಿ. ಇಲ್ಲಿ ಅಗ್ನಿಭಯ. ದಕ್ಷಿಣದಲ್ಲಿ ಎತ್ತರವಾಗಿದ್ದರೆ ಪ್ರೇತವೀಥಿ. ಇಲ್ಲಿ ಮೃತ್ಯುಭಯ. ನೈಋತ್ಯದಲ್ಲಿ ಎತ್ತರವಾಗಿದ್ದರೆ ನಾಗವೀಥಿ. ಇಲ್ಲಿ ಸರ್ಪಭಯ. ಪಶ್ಚಿಮದಲ್ಲಿ ಎತ್ತರವಾಗಿದ್ದರೆ ಜಲವೀಥಿ. ಇಲ್ಲಿ ದಾರಿದ್ರ್ಯ.
  • ವಾಯವ್ಯದಲ್ಲಿ ಎತ್ತರವಾಗಿದ್ದರೆ ಧಾನ್ಯವೀಥಿ. ಇಲ್ಲಿ ಧನಪ್ರಾಪ್ತಿ. ಉತ್ತರದಲ್ಲಿ ಎತ್ತರವಾಗಿದ್ದರೆ ಗಜವೀಥಿ. ಇಲ್ಲಿ ಸಂಪದಭಿವೃದ್ಧಿ. ಈಶಾನ್ಯದಲ್ಲಿ ಎತ್ತರವಾಗಿದ್ದರೆ ಧನವೀಥಿ. ಇಲ್ಲಿ ಪುತ್ರಪೌತ್ರಧನವೃದ್ಧಿ. ನಿವೇಶನದ ಮಧ್ಯದಲ್ಲಿ ತಗ್ಗಾಗಿದ್ದರೆ ಸಿಂಹವೀಥಿ. ಇಲ್ಲಿ ಸರ್ವಸಮೃದ್ಧಿ. ಕಟ್ಟಡ ಕಟ್ಟಲು ನಿವೇಶನವನ್ನು ಗೊತ್ತುಮಾಡುವಾಗ ಈ ಫಲಗಳನ್ನು ಗಮನಿಸಿ ನಿವೇಶನವನ್ನು ಆರಿಸಬೇಕು.
  • ಕಟ್ಟಡ ಕಟ್ಟಬೇಕೆಂದಿರುವ ಭೂಮಿಯಲ್ಲಿ ಇಪ್ಪತ್ತುನಾಲ್ಕು ಅಂಗುಲ ಪ್ರಮಾಣದ ಆಳವುಳ್ಳ ಒಂದು ಬಿಲವನ್ನು ತೋಡಿ ಮತ್ತೆ ಅದೇ ಮಣ್ಣನ್ನು ಆ ಬಿಲಕ್ಕೆ ತುಂಬುವುದು. ಬಿಲ ತುಂಬಿ ಮಣ್ಣು ಹೆಚ್ಚಾಗಿ ಉಳಿದರೆ ಆ ಪ್ರದೇಶದಲ್ಲಿ ಕಟ್ಟಡವನ್ನು ಕಟ್ಟುವುದರಿಂದ ವೃದ್ಧಿಯುಂಟಾಗುತ್ತದೆ. ಸಮನಾದರೆ ಹಾನಿವೃದ್ಧಿಗಳಿಲ್ಲದೆ ಸಮಫಲಪ್ರದವಾಗುತ್ತದೆ. ಮಣ್ಣು ಸಾಲದೆ ಬಂದರೆ ಆ ನಿವೇಶನ ಶ್ರೇಷ್ಠವಲ್ಲವೆಂದು ತಿಳಿಯಬೇಕು.
  • ಆ ಹಳ್ಳದಲ್ಲಿ ಮೊದಲ ದಿವಸ ನೀರು ತುಂಬಿ ಮಾರನೆಯ ದಿವಸ ಬೆಳಗ್ಗೆ ನೋಡುವಾಗ ನೀರು ಉಳಿದಿದ್ದರೆ ಆ ನಿವೇಶನ ಕಟ್ಟಡವನ್ನು ಕಟ್ಟಲು ಯೋಗ್ಯವಾಗಿದೆ ಎಂದು ನಿಷ್ಕರ್ಷಿಸಬೇಕು. ಬದಿ ಇದ್ದರೆ ಅಲ್ಲಿ ಗೃಹವನ್ನು ಕಟ್ಟುವುದರಿಂದ ಹಲವು ದಾರಿದ್ರ್ಯಗಳ ಪೀಡೆ ಉಂಟಾಗುತ್ತದೆ. ನೀರಿನ ಅಂಶ ಸ್ವಲ್ಪವೂ ಇಲ್ಲದೆ ಒಣಗಿದ್ದರೆ ಆ ಜಾಗದಲ್ಲಿ ಮನೆಯನ್ನು ಕಟ್ಟಿದರೆ ಮೃತ್ಯು ಉಂಟಾಗುತ್ತದೆ.
  • ನಿವೇಶನದಲ್ಲಿ ಬಾವಿಯನ್ನು ತೆಗೆದಾಗ ಅದಕ್ಕೆ ಅನ್ಯಗೃಹದ ನೀರು ಬರುವ ಹಾಗಿದ್ದರೆ ಹಾನಿ ಮತ್ತು ಕಲಹ ಉಂಟಾಗುತ್ತವೆ. ಆ ಜಾಗದ ನೀರು ಉತ್ತರ ಈಶಾನ್ಯ ಪುರ್ವ ದಿಕ್ಕುಗಳಿಗೆ ಹರಿದರೆ ಶುಭಫಲಪ್ರದವಾಗುತ್ತದೆ.ಈ ಕ್ರಮದಲ್ಲಿ ಭೂಮಿಯನ್ನು ಪರೀಕ್ಷಿಸಿ ದೋಷಾಲ್ಪವೂ ಗುಣಬಾಹುಳ್ಯವೂ ಇರುವ ಸ್ಥಳವನ್ನು ಆರಿಸಿ ಅಲ್ಲಿ ಮನೆ ಕಟ್ಟಬೇಕು.
  • ಮೊದಲು ನಿವೇಶನವನ್ನು ಚೌಕನಾಗಿಯೂ ಸಮನಾಗಿಯೂ ಇರುವೆಡೆ ಅಗೆದು ಅಲ್ಲಿರುವ ಹುಲ್ಲು ಮೊದಲಾದುವನ್ನು ತೆಗೆದು ಚೊಕ್ಕಟಮಾಡಬೇಕು. ಬಳಿಕ ದಿಕ್ಕುಗಳನ್ನು ಗುರುತಿಸಬೇಕು. ಶುಭಮುಹೂರ್ತದ ದಿನದಲ್ಲಿ ನಿವೇಶನವನ್ನು ಪಂಚಗವ್ಯ ಮತ್ತು ಔಷಧಿ ಜಲದಿಂದ ಶುದ್ಧಿಮಾಡಿ ಎಂಟು ದಿಕ್ಕುಗಳಲ್ಲೂ ಪುರ್ಣಕುಂಭಗಳನ್ನಿರಿಸಿ, ಗಣಪತಿ ಗ್ರಹಾದಿಗಳನ್ನು ಪುಜಿಸಿ ಪುಣ್ಯಾಹಮಾಡಿ ಆ ಜಲದಿಂದ ಸ್ಥಳಶುದ್ಧಿಮಾಡಿ ವಾಸ್ತು ದೇವತೆಯನ್ನು ಬರೆದು ಪ್ರತಿಷ್ಠಿಸಿ ಪೂಜಿಸಬೇಕು.
  • ವಾಸ್ತುಪುರುಷನ ಕುಕ್ಷಿಸ್ಥಾನದಲ್ಲಿ ಅಗೆದು ಶಿಲಾನ್ಯಾಸವನ್ನು ಮಾಡಬೇಕು. ಬಳಿಕ ಈಶಾನ್ಯಾದಿ ದಿಕ್ಕುಗಳಲ್ಲಿ ಪ್ರದಕ್ಷಿಣವಾಗಿ ಶಿಲೆಗಳನ್ನು ಇಡಬೇಕು.ಮನೆಯ ವಿಸ್ತಾರವನ್ನು ಒಂಬತ್ತು ವಿಭಾಗಮಾಡಿ ಬಲಗಡೆಗೆ ಐದು ಭಾಗಗಳನ್ನು ಎಡಗಡೆಗೆ ಮೂರು ಭಾಗವನ್ನು ಬಿಟ್ಟÄ ಮಧ್ಯದ ಒಂದು ಭಾಗದಲ್ಲಿ ಬಾಗಿಲನ್ನು ಇಡಬೇಕು. ಬಾಗಿಲಿಗೆ ದಕ್ಷಿಣ ಅಥವಾ ಪಶ್ಚಿಮಕ್ಕೆ ಕಿಟಕಿ ಇರಬೇಕು.
  • ಗೃಹನಿರ್ಮಾಣ ಸ್ಥಳ ಆಯಾಕಾರದಲ್ಲಿರಬೇಕು. ಗೃಹನಿವೇಶನದ ಉದ್ದ ಅಗಲಗಳನ್ನು ಯಜಮಾನನ ಹಸ್ತದಿಂದ ಅಳತೆಮಾಡಿ ಮೊಳೆಗಳಲ್ಲಿ ಗೊತ್ತು ಮಾಡಿಕೊಂಡು ಉದ್ದ ಅಗಲಗಳ ಪ್ರಮಾಣಗಳನ್ನು ಗುಣಿಸಿ ಬಂದ ಫಲವೇ ಕ್ಷೇತ್ರಫಲ. ಇದನ್ನು ಒಂಬತ್ತರಿಂದ ಗುಣಿಸಿ ಎಂಟರಿಂದ ಭಾಗಿಸಿ ನಿಂತ ಶೇಷಕ್ಕೆ ಆಯ ಎಂದು ಹೆಸರು.
  • ಒಂದು ಶೇಷ ನಿಂತರೆ ಧ್ವಜಾಯ, ಎರಡು ನಿಂತರೆ ಧೂಮ್ರಾಯ, ಮೂರು ನಿಂತರೆ ಸಿಂಹಾಯ, ನಾಲ್ಕು ನಿಂತರೆ ಶುನಕಾಯ, ಐದು ನಿಂತರೆ ವೃಷಭಾಯ, ಆರು ನಿಂತರೆ ಖರಾಯ, ಏಳು ನಿಂತರೆ ಗಜಾಯ, ಎಂಟು ನಿಂತರೆ ಕಾಕಾಯ ಇವೆಂಟೂ ಆಯಗಳು. ಇವುಗಳಲ್ಲಿ 1, 3, 5, 7 ಈ ನಾಲ್ಕು ವಿಷಮಾಯಗಳು ಗೃಹ ನಿರ್ಮಾಣಕ್ಕೆ ಶುಭಪ್ರದಗಳು. ಧ್ವಜಾಯ ಎಲ್ಲರಿಗೂ ಶ್ರೇಷ್ಠ. ಸಿಂಹಾಯ ಬ್ರಾಹ್ಮಣನಿಗೆ ಕೂಡದು.
  • ಇದರಲ್ಲಿ ಪಶುವೃದ್ಧಿ ಇಲ್ಲ. ಪಶ್ಚಿಮ ದಿಕ್ಕಿನ ಧ್ವಜಾಯ ಬ್ರಾಹ್ಮಣನಿಗೂ ಉತ್ತರಮುಖದ ಸಿಂಹಾಯ ರಾಜರಿಗೂ ಪುರ್ವಾಭಿಮುಖದ ವೃಷಭಾಯ ವೈಶ್ಯನಿಗೂ ದಕ್ಷಿಣಾಭಿಮುಖದ ಗಜಾಯ ಶೂದ್ರನಿಗೂ ಶ್ರೇಷ್ಠ. ಆನೆ, ಒಂಟೆಗಳ ಶಾಲೆಗೆ ಧ್ವಜ, ಗಜಾಯಗಳೂ ಕುದುರೆಲಾಯ, ದನದ ಕೊಟ್ಟಿಗೆಗಳಿಗೆ ಧ್ವಜ, ವೃಷಭಾಯಗಳೂ ಸ್ತ್ರೀಶಯ್ಯಾಗೃಹ, ಆಸ್ಥಾನ, ಯಂತ್ರಶಾಲೆಗಳಿಗೆ ಸಿಂಹ, ಧ್ವಜ, ವೃಷಭಾಯಗಳೂ ಉತ್ತಮ. ಕೊಳ, ಬಾವಿಗಳಿಗೆ ಗಜಾಯವೂ ಪೀಠಕ್ಕೆ ಸಿಂಹಾಯವೂ ಮ್ಲೇಚ್ಛರಿಗೆ ಶುನಕಾಯವೂ ವೈಶ್ಯರಿಗೆ ಖರಾಯವೂ ಶ್ರೇಷ್ಠ. ಕ್ಷೇತ್ರಫಲವನ್ನು ಒಂಬತ್ತರಿಂದ ಗುಣಿಸಿ ಏಳರಿಂದ ಭಾಗಿಸಿದರೆ ನಿಂತ ಶೇಷ ಕ್ರಮವಾಗಿ ಭಾನುವಾರಾದಿಯಾಗಿ ವಾರಗಳನ್ನು ಸೂಚಿಸುತ್ತದೆ.
  • ಶುಭಗ್ರಹಗಳ ವಾರವಾದರೆ ಒಳ್ಳೆಯ ಫಲ. ಕ್ಷೇತ್ರಫಲವನ್ನು ಆರರಿಂದ ಗುಣಿಸಿ ಒಂಬತ್ತರಿಂದ ಭಾಗಿಸಿ ನಿಂತ ಶೇಷ ಅಂಶವಾಗುತ್ತದೆ. ಅಧಿಕಾಂಶ ಬಂದರೆ ಶುಭಪ್ರದ. ಎಂಟರಿಂದ ಗುಣಿಸಿ ಹನ್ನೆರಡರಿಂದ ಭಾಗಿಸಿ ನಿಂತ ಶೇಷ ಧನ ಎಂದರೆ ಲಾಭವನ್ನು ಸೂಚಿಸುತ್ತದೆ. ಮೂರರಿಂದ ಗುಣಿಸಿ ಎಂಟರಿಂದ ಭಾಗಿಸಿ ನಿಂತ ಶೇಷ ಋಣ ಎಂದರೆ ನಷ್ಟವನ್ನು ಸೂಚಿಸುತ್ತದೆ. ನಷ್ಟಕ್ಕಿಂತ ಲಾಭ ಅಧಿಕವಾಗಿದ್ದರೆ ಶುಭಪ್ರದ.
  • ಎಂಟರಿಂದ ಗುಣಿಸಿ ಇಪ್ಪತ್ತೇಳರಿಂದ ಭಾಗಿಸಿ ನಿಂತ ಶೇಷ ಅಶ್ವಿನ್ಯಾದಿ ನಕ್ಷತ್ರಗಳನ್ನು ಸೂಚಿಸುತ್ತದೆ. ಶುಭನಕ್ಷತ್ರವಾಗಿದ್ದು ಗೃಹದ ಯಜಮಾನನಿಗೆ ಅನುಕೂಲ ತಾರೆ ಆದರೆ ಶುಭಪ್ರದ. ಕ್ಷೇತ್ರಫಲವನ್ನು ಎಂಟರಿಂದ ಗುಣಿಸಿ ಹದಿನೈದರಿಂದ ಭಾಗಿಸಿದರೆ ನಿಂತ ಶೇಷ ತಿಥಿಯನ್ನು ಸೂಚಿಸುತ್ತದೆ. ಶುಭತಿಥಿ ಶುಭಪ್ರದ. ಕ್ಷೇತ್ರಫಲವನ್ನು ನಾಲ್ಕರಿಂದ ಗುಣಿಸಿ ಇಪ್ಪತ್ತೇಳರಿಂದ ಭಾಗಿಸಿ ನಿಂತ ಶೇಷ ಯೋಗವನ್ನು ಸೂಚಿಸುತ್ತದೆ. ಶುಭಯೋಗವಾದರೆ ಶುಭ.
  • ಕ್ಷೇತ್ರಫಲವನ್ನು ಎಂಟರಿಂದ ಗುಣಿಸಿ ನೂರಿಪ್ಪತ್ತರಿಂದ ಭಾಗಿಸಿದರೆ ನಿಂತ ಶೇಷ ಆಯುಸ್ಸನ್ನು ಸೂಚಿಸುತ್ತದೆ. ಇದರಲ್ಲಿ ತಾರುಣ್ಯಾವಸ್ಥೆ ಶುಭಪ್ರದ. ಈ ಎಲ್ಲದರಲ್ಲೂ ಶುಭಫಲದ್ಯೋತಕವಾದ ಆಯ ಶುಭ. ಈ ಅಳತೆಯ ನಿವೇಶನದಲ್ಲಿ ಕಟ್ಟಡವನ್ನು ಕಟ್ಟಿದರೆ ಯಜಮಾನನಿಗೆ ಸುಖಪ್ರದವಾಗಿರುತ್ತದೆ.
  • ಅಗಲದಷ್ಟೇ ಎತ್ತರವಿರುವ ಗೃಹ ಒಳ್ಳೆಯದು. ವಿಸ್ತಾರಕ್ಕೆ ಎರಡರಷ್ಟು ಉದ್ದವಿದ್ದರೆ ಏಕಶಾಲಾ ಎಂದೂ ಎರಡರಷ್ಟಿದ್ದರೆ ದ್ವಿಶಾಲಾ ಎಂದೂ ಮೂರರಷ್ಟಿದ್ದರೆ ತ್ರಿಶಾಲಾ ಎಂದೂ ನಾಲ್ಕರಷ್ಟಾದರೆ ಚತುಃಶಾಲಾ ಎಂದೂ ಕರೆಯುತ್ತಾರೆ. ಉದ್ದ ಅಗಲದ ಐದರಷ್ಟಕ್ಕಿಂತ ಮೀರಬಾರದು.

ಸ್ನಾನಾಗಾರಂ ದಿಶಿಪ್ರಾಚ್ಯಾಮಾಗ್ನೇಯ್ಯಾಂ ಚ ಮಹಾನಸಂ
ಯಾಮ್ಯಾಯಾಂ ಶಯನಾಗಾರಂ ನೈಋತ್ಯಾಂ ವಸ್ತ್ರಮಂದಿರಂ |
ವಾರುಣ್ಯಾಂ ಭೋಜನಗೃಹಂ ವಾಯವ್ಯಾಂ ಪಶುಮಂದಿರಂ
ಭಂಡಾರವೇಶ್ಮೋತ್ತರಸ್ಯಾಮೈಶಾನ್ಯಾಂ ದೇವತಾಲಯಂ ||

  • ಎಂದು ನಾರದ ತಿಳಿಸಿರುವಂತೆ ಮನೆಯ ಪುರ್ವ ವಿಭಾಗದಲ್ಲಿ ಸ್ನಾನಗೃಹವೂ ಆಗ್ನೇಯ ವಿಭಾಗದಲ್ಲಿ ಅಡಿಗೆಮನೆಯೂ ದಕ್ಷಿಣ ವಿಭಾಗದಲ್ಲಿ ಮಲಗುವ ಮನೆಯೂ ನೈಋತ್ಯ ವಿಭಾಗದಲ್ಲಿ ವಸ್ತ್ರಮಂದಿರವೂ ಪಶ್ಚಿಮ ವಿಭಾಗದಲ್ಲಿ ಊಟದ ಮನೆಯೂ ವಾಯವ್ಯ ವಿಭಾಗದಲ್ಲಿ ದನದ ಕೊಟ್ಟಿಗೆಯೂ ಉತ್ತರ ವಿಭಾಗದಲ್ಲಿ ಭಂಡಾರವೂ ಈಶಾನ್ಯ ವಿಭಾಗದಲ್ಲಿ ದೇವರ ಮನೆಯೂ ಇರುವಂತೆ ಮನೆಯನ್ನು ಅಳವಡಿಸಬೇಕು.
  • ಚೈತ್ರ ಮಾಸದಲ್ಲಿ ಮನೆಯನ್ನು ಕಟ್ಟಲು ಪ್ರಾರಂಭಿಸಿದರೆ ವ್ಯಾಧಿಯೂ ವೈಶಾಖದಲ್ಲಿ ಧನಪ್ರಾಪ್ತಿಯೂ ಜೇೖಷ್ಠದಲ್ಲಿ ಮೃತ್ಯುವೂ ಆಷಾಢದಲ್ಲಿ ಪಶುಹಾನಿಯೂ ಶ್ರಾವಣದಲ್ಲಿ ಮಿತ್ರಲಾಭವೂ ಭಾದ್ರಪದದಲ್ಲಿ ಹಾನಿಯೂ ಆಶ್ವಯುಜದಲ್ಲಿ ಜಗಳವೂ ಕಾರ್ತಿಕದಲ್ಲಿ ಧನಧಾನ್ಯವೃದ್ಧಿಯೂ ಮಾರ್ಗಶೀರ್ಷದಲ್ಲಿ ಧನವೃದ್ಧಿಯೂ ಪುಷ್ಯದಲ್ಲಿ ಕಳ್ಳರ ಭಯವೂ ಮಾಘದಲ್ಲಿ ಹೆಚ್ಚು ಮಕ್ಕಳೂ ಫಾಲ್ಗುಣದಲ್ಲಿ ದ್ರವ್ಯಲಾಭವೂ ವಂಶವೃದ್ಧಿಯೂ ಉಂಟಾಗುತ್ತದೆ.

ಮಾಘ ಫಾಲ್ಗುನ ವೈಶಾಖ ಮಾರ್ಗ ಶ್ರವಣ ಕಾರ್ತಿಕಾಃ |
ಮಾಸಾಸ್ಸ್ಯುರ್ಗೃಗೃಹನಿರ್ಮಾಣೇ ಪುತ್ರಾರೋಗ್ಯಧನಪ್ರದಾಃ ||

ಎಂದು ನಾರದನ ಉಕ್ತಿ. ಮೇಷ-ವೃಷಭ ಮಾಸಗಳಲ್ಲಿ ಮನೆಯನ್ನು ಕಟ್ಟಿದರೆ ಶುಭಪ್ರದವೂ ಮಿಥುನ ಮಾಸದಲ್ಲಿ ಮರಣಭಯವೂ ಕರ್ಕಾಟಕ ಮಾಸದಲ್ಲಿ ಸೌಖವೂ ಸಿಂಹ ಮಾಸದಲ್ಲಿ ಭೃತ್ಯವೃದ್ಧಿಯೂ ಕನ್ಯಾಮಾಸದಲ್ಲಿ ರೋಗವೂ ತುಲಾಮಾಸದಲ್ಲಿ ಸೌಖ್ಯವೂ ವೃಶ್ಚಿಕಮಾಸದಲ್ಲಿ ಧನಧಾನ್ಯವೃದ್ಧಿಯೂ ಧನುರ್ಮಾಸದಲ್ಲಿ ತೊಂದರೆಯೂ ಮಕರಮಾಸದಲ್ಲಿ ಧನಪ್ರಾಪ್ತಿಯೂ ಕುಂಭಮಾಸದಲ್ಲಿ ಲಾಭವೂ ಮೀನಮಾಸದಲ್ಲಿ ಭಯಂಕರ ಸ್ವಪ್ನವೂ ಉಂಟಾಗುತ್ತವೆ.

  1. ಉಲ್ಲೇಖ ದೋಷ: Invalid <ref> tag; no text was provided for refs named stellakramrisch76
  2. Monier-Williams (1899).
  3. http:// vijaykarnataka. indiatimes. com/ religion /astro/-/articleshow/22555856.cms