ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟ್ರೂಮನ್, ಹ್ಯಾರಿ ಎಸ್
ಟ್ರೂಮನ್, ಹ್ಯಾರಿ ಎಸ್
1884-1972. ಅಮೆರಿಕ ಸಂಯುಕ್ತ ಸಂಸ್ಥಾನಗಳ 33 ನೆಯ ಅಧ್ಯಕ್ಷ. 1884ರ ಮೇ 8ರಂದು ಮಿಸೂರಿಯ ಲಮಾರ್ ಎಂಬಲ್ಲಿ ಜನಿಸಿದರು. ಟ್ರೂಮನ್‍ಗೆ ನಾಲ್ಕು ವರ್ಷ ಆಗಿದ್ದಾಗ ಇವರ ತಂದೆ ಜಾನ್ ಆಂಡರ್ಸನ್ ಟ್ರೂಮನ್‍ಗೆ ಕ್ಯಾನ್ಸಸ್ ನಗರದ ಬಳಿ 600 ಎಕರೆ ವಿಸ್ತೀರ್ಣದ ಕೃಷಿಕ್ಷೇತ್ರವನ್ನು ಕೊಂಡು ಅಲ್ಲಿ ನೆಲೆಸಿದರು. ಟ್ರೂಮನರ ವಿದ್ಯಾಭ್ಯಾಸ ಮುಗಿದ ಅನಂತರ ಇವರಿಗೆ ವೆಸ್ಟ್‍ಪಾಯಿಂಟ್ ಮಿಲಿಟರಿ ಶಾಖೆಯಲ್ಲಿ ಉದ್ಯೋಗ ದೊರಕಿತಾದರೂ ದೃಷ್ಟಿದೋಷದ ಪ್ರಯುಕ್ತ ಇವರ ನೇಮಕವನ್ನು ತಳ್ಳಿಹಾಕಲಾಯಿತು. ಅನಂತರ ಟ್ರೂಮನರು ಅನೇಕ ತೆರನಾದ ಉದ್ಯೋಗಗಳಲ್ಲಿ ಕೆಲಸ ನಿರ್ವಹಿಸಿದರು. 1906ರಲ್ಲಿ ಇವರು ತಮ್ಮ ತಂದೆಯ ಕೃಷಿಕ್ಷೇತ್ರಕ್ಕೆ ಹಿಂದಿರುಗಿ ಹತ್ತು ವರ್ಷಗಳ ಕಾಲ ವ್ಯವಸಾಯಗಾರರಾಗಿದ್ದರು. ಅದೇ ಕಾಲದಲ್ಲಿ ಮಿಸೂರಿ ರಾಷ್ಟ್ರೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಪೋರ್ಟ್‍ಸಿಲ್ ಮಿಲಿಟರಿ ಶಾಲೆಯಲ್ಲಿ ತರಬೇತು ಪಡೆದ ಅನಂತರ ಒಂದನೆಯ ಮಹಾಯುದ್ಧದಲ್ಲಿ ಫ್ರಾನ್ಸಿನ ಮಿಲಿಟರಿ ತುಕಡಿಯೊಂದರ ನಾಯಕರಾಗಿ ಹೋರಾಟ ನಡೆಸಿ ಹಿಂದಿರುಗಿದರು. ಆಫೀಸರ್ಸ್ ರಿಸರ್ವ್ ದಳದಲ್ಲಿ ಕಮಿಷನ್ ನೇಮಕ ಪಡೆದು 1927ರಲ್ಲಿ ಕರ್ನಲ್ ದರ್ಜೆಗೇರಿದರು. ಬಾಲ್ಯದಿಂದಲೂ ಮೆಚ್ಚಿಕೊಂಡಿದ್ದ ಬೆಸ್ ವ್ಯಾಲೇಸರನ್ನು 1919ರಲ್ಲಿ ವಿವಾಹವಾದರು. ಅನಂತರ ಇವರು ತಮ್ಮ ಗೆಳೆಯರೊಬ್ಬರೊಂದಿಗೆ ಕ್ಯಾನ್ಸಸ್ ನಗರದಲ್ಲಿ ವ್ಯಾಪಾರ ಸಂಸ್ಥೆಯೊಂದರ ಪಾಲುದಾರರಾದರು. ಆದರೆ ಅದರಲ್ಲಿ ಭಾರಿ ನಷ್ಟವಾಯಿತು. ದಿವಾಳಿತನಕ್ಕೆ ಅರ್ಜಿ ಹಾಕಲೊಲ್ಲದೆ, ತಮ್ಮ ಸಾಲಗಾರರಿಗೆ ಸಂಪೂರ್ಣವಾಗಿ ಹಣ ಸಲ್ಲಿಸುವ ಹಟ ತೊಟ್ಟು, 15 ವರ್ಷಗಳ ಕಾಲ ತಮ್ಮ ದುಡಿಮೆಯಿಂದ ಈ ಸಾಲವನ್ನು ತೀರಿಸಿದರು. ಟ್ರೂಮನ್ 1922ರಲ್ಲಿ ಜಾಕ್ಸನ್ ಕೌಂಟಿ ಕೋರ್ಟಿಗೆ ಚುನಾಯಿತರಾದರು. 1926-1934ರ ಅವಧಿಯಲ್ಲಿ ಅದರ ಮುಖ್ಯ ನ್ಯಾಯಮೂರ್ತಿಯಾಗಿದ್ದರು. 1923-25ರಲ್ಲಿ ಕ್ಯಾನ್ಸ್‍ಸ್ ನಗರದ ರಾತ್ರಿಯ ಶಾಲೆಯಲ್ಲಿ ನ್ಯಾಯಶಾಸ್ತ್ರವನ್ನು ಕಲಿತರು. 1934ರಲ್ಲಿ ಅಮೆರಿಕದ ಸಂಯುಕ್ತ ಸಂಸ್ಥಾನಗಳ ಸೆನೆಟ್ ಸದಸ್ಯರಾಗಿ ಚುನಾಯಿತರಾಗಿ ತಮ್ಮ ಮೊದಲನೆಯ ಅವಧಿಯಲ್ಲೇ ನ್ಯೂ ಡೀಲ್ ಯೋಜನೆಗೆ ಬೆಂಬಲವಿತ್ತರಲ್ಲದೆ, ರೈಲ್ವೆ ಹಣಕಾಸು ತನಿಖೆ ಉಪಸಮಿತಿಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿ ಸಾರಿಗೆ ಅಧಿನಿಯಮ ಜಾರಿಗೆ ಬರಲು ಕಾರಣರಾದರು. 1940ರಲ್ಲಿ ಸೆನೆಟ್ ಸಭೆಗೆ ಪುನರಾಯ್ಕೆಯಾಗಿ ರಕ್ಷಣಾ ಯೋಜನೆ ಮತ್ತು ಯುದ್ಧ ಸಾಮಗ್ರಿಗಳ ಉತ್ಪಾದನೆಯಲ್ಲಿ ದುಂದು ವೆಚ್ಚದ ಆಪಾದನೆಗಳನ್ನು ತನಿಖೆ ಮಾಡಲು ಸೆನೆಟ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಜನಪ್ರಿಯರಾದರು. 1944ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಉಪಾಧ್ಯಾಕ್ಷಸ್ಥಾನಕ್ಕೆ ಇವರು ಡೆಮೋಕ್ರ್ಯಾಟ್ ಅಭ್ಯರ್ಥಿಯಾಗಿ ಆರಿಸಲ್ಪಟ್ಟು ಚುನಾವಣೆಯಲ್ಲಿ ಜಯ ಗಳಿಸಿದರು. ಅಧ್ಯಕ್ಷ ರೂಸ್‍ವೆಲ್ಡ್ 1945ರ ಏಪ್ರಿಲ್ 12ರಂದು ಮರಣ ಹೊಂದಿದಾಗ ಟ್ರೂಮನರು ಅಧ್ಯಕ್ಷರಾದರು. ಆಗ ಎರಡನೆಯ ಮಹಾಯುದ್ಧ ಅಂತಿಮ ಘಟ್ಟ ಮುಟ್ಟಿತು. ಮೇ 8 ರಂದು ಜರ್ಮನಿ ಶರಣಾಗತವಾಯಿತು. ಜಪಾನಿನ ಎರಡು ಜನಭರಿತ ನಗರಗಳ ಮೆಲೆ ಜುಲೈನಲ್ಲಿ ವಿಶ್ವದ ಪ್ರಥಮ ಪರಮಾಣು ಬಾಂಬುಗಳನ್ನು ಹಾಕಲು ಇವರು ಆಜ್ಞೆ ನಿಡಿದರು. ಆಗಸ್ಟ್ 14ರಂದು ಜಪಾನು ಶರಣಾಯಿತು. 1945ರ ಜುಲೈ ತಿಂಗಳಲ್ಲಿ ಆಟ್ಲಿ ಮತ್ತು ಸ್ಟಾಲಿನರೊಡನೆ ಟ್ರೂಮನರು ಪಾಟ್ಸ್‍ಡ್ಯಾಮ್ ಸಮ್ಮೇಳನದಲ್ಲಿ ಭಾಗವಹಿಸಿದರು. ಯುದ್ಧೋತ್ತರ ಜಗತ್ತಿನ ಸಮಸ್ಯೆಗಳನ್ನು ಚರ್ಚಿಸುವುದು ಇದರ ಉದ್ದೇಶ. ಆದರೆ ಯುದ್ಧ ಮುಗಿದ ಸ್ವಲ್ಪ ಕಾಲದಲ್ಲೇ ಈ ಬೃಹದ್ರಾಷ್ಟ್ರಗಳ ಸೌಹಾರ್ದಭಾವ ಕರಗಿಹೋಯಿತು. ಅಂತರರಾಷ್ಟ್ರೀಯ ಸಮಸ್ಯೆಗಳು ತೀವ್ರವಾಗತೊಡಗಿದಾಗ ಆಂತರಿಕವಾಗಿಯೂ ಸಮಸ್ಯೆಗಳು ತೋರಿದುವು. ದೇಶಾದ್ಯಂತ ರೈಲ್ವೆ ಕೆಲಸಗಾರರು ಮುಷ್ಕರದ ಬೆದರಿಕೆ ಹಾಕಿದರು. ಸರ್ಕಾರ ವಶಪಡಿಸಿಕೊಂಡ ಕೈಗಾರಿಕೆಗಳಲ್ಲಿ ಕಾರ್ಮಿಕರು ಕೆಲಸ ಮಾಡಲು ನಿರಾಕರಿಸಿದರೆ ಅಂಥವನ್ನು ಸೇನೆಗೆ ತೆಗೆದುಕೊಳ್ಳಲು ಕಾನೂನು ಮಾಡಬೇಕೆಂದು ಟ್ರೂಮನರು ಕಾಂಗ್ರೆಸನ್ನು ಕೇಳಿದರು. ಇದರಿಂದ ಇವರು ಕೆಲವು ಕಾರ್ಮಿಕ ಮುಖಂಡರ ದ್ವೇಷ ಕಟ್ಟಿಕೊಂಡರು. ಕಾಂಗ್ರೆಸ್ಸು ಟ್ರೂಮನರ ಬೇಡಿಕೆಯನ್ನೊಪ್ಪಲಿಲ್ಲ. ಆಂತರಿಕವಾಗಿ ಅನೇಕ ಸುಧಾರಣೆಗಳನ್ನು ಒಳಗೊಂಡ ಟ್ರೂಮನರ ಕಾರ್ಯಕ್ರಮಕ್ಕೆ ಕಾಂಗ್ರೆಸ್ಸಿನ ಸಂಪ್ರದಾಯವಾದಿಗಳ ಒಪ್ಪಿಗೆ ಇರಲಿಲ್ಲ. ಟ್ರೂಮನರು ಕ್ರಮಕ್ರಮವಾಗಿ ಈ ಸುಧಾರಣೆಗಳ ಯೋಜನೆಗಳನ್ನು ಕೈಬಿಡಬೇಕಾಯಿತು. ಆದರೆ ಗ್ರೀಸ್ ಮತ್ತು ತುರ್ಕಿ ದೇಶಗಳಿಗೆ ಅಧಿಕ ಆರ್ಥಿಕ ನೆರವು ನೀಡುವ ಟ್ರೂಮನ್ ಯೋಜನೆಗಳನ್ನು ಕಾಂಗ್ರೆಸ್ ಅನುಮೋದಿಸಿತು. ಇಟಲಿ, ಹಂಗರಿ, ಬಲ್ಗೇರಿಯ ಮತ್ತು ರುಮೇನಿಯಗಳ ನಡುವೆ ಶಾಂತಿ ಕೌಲುಗಳು ಟ್ರೂಮನರ ಅಧಿಕಾರದ ಅವಧಿಯಲ್ಲಿ ಆದುವು. ಯುದ್ಧಾನಂತರ ಯೂರೋಪಿನ ಪುನರ್‍ನಿರ್ಮಾಣಕ್ಕಾಗಿ ನೆರವು ನೀಡುವ ಮಾರ್ಷಲ್ ಯೋಜನೆ ಜಾರಿಗೆ ಬಂತು. 1948ರಲ್ಲಿ ಟ್ರೂಮನ್ ಮತ್ತೆ ಅಧ್ಯಕ್ಷರಾಗಿ ಚುನಾಯಿತರಾದರು. ಟ್ರೂಮನರು ಕಮ್ಯೂನಿಸಂ ಹರಡುವುದರ ವಿರುದ್ಧ ಪರಿಣಾಮಕಾರಿ ನೀತಿಯನ್ನು ಅನುಸರಿಸಲಿಲ್ಲವೆಂದು ಹಲವರ ಟೀಕೆಗೆ ಗುರಿಯಾದರು. 1950ರಲ್ಲಿ ಕೊರಿಯದಲ್ಲಿ ಆಕ್ರಮಣ ನಡೆದಾಗ ಇವರು ಅಲ್ಲಿಗೆ ಅಮೆರಿಕನ್ ಸೇನೆಯನ್ನು ಕಳಿಸಿದರಲ್ಲದೆ ಅದಕ್ಕೆ ವಿಶ್ವಸಂಸ್ಥೆಯ ಬೆಂಬಲವನ್ನೂ ಪಡೆದರು. 1951ರಲ್ಲಿ ಕೊರಿಯದ ಯುದ್ಧನೀತಿಯ ಬಗ್ಗೆ ಭಿನ್ನಾಭಿಪ್ರಾಯ ತಲೆದೋರಿದಾಗ ದೂರ ಪ್ರಾಚ್ಯ ಸೇನಾಧಿಪತಿಯಾಗಿದ್ದ ಜನರಲ್ ಮೆಕಾರ್ಥರನ್ನು ಟ್ರೂಮನ್ ಹಠಾತ್ತನೆ ನಿವೃತ್ತಿಗೊಳಿಸಿದರು. 1952ರ ಅಧ್ಯಕ್ಷ ಚುನಾವಣೆಯಲ್ಲಿ ಟ್ರೂಮನರು ಸ್ಪರ್ಧಿಸಲಿಲ್ಲ. 1953ರಲ್ಲಿ ಅವರು ಇಂಡಿಪೆಂಡೆನ್ಸ್‍ಗೆ ತೆರಳಿ ರಾಜಕಾರಣದಿಂದ ನಿವೃತ್ತರಾದರು. 1972ರಲ್ಲಿ ತೀರಿಕೊಂಡರು. (ಎಂ.ಕೆ.ಎಸ್.)