ವಿಷಯಕ್ಕೆ ಹೋಗು

ಆವಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಟ್ಟಿಗೆಯ ಆವಿಗೆ

ಒಂದು ವಸ್ತುವಿಗೆ ಅಧಿಕೋಷ್ಣವನ್ನು ಪುರೈಸುವುದರ ಮೂಲಕ ಅದರಲ್ಲಿರುವ ತೇವವನ್ನು ನಿವಾರಿಸುವ ಸಾಧನ (ಕಿಲ್ನ್). ಇಂಗ್ಲಿಷಿನಲ್ಲಿ ಕಿಲ್ನ್, ಫರ್ನೆಸ್, ಸ್ಟವ್ ಮತ್ತು ಓವನ್ ಇವನ್ನು ಪರ್ಯಾಯ ಪದಗಳಾಗಿ ಬಳಸುವುದಿದೆ. ಆದರೆ ತಾಂತ್ರಿಕ ಬಳಕೆಯಲ್ಲಿ ಒಂದು ಸಂಪ್ರದಾಯ ಉಂಟು-ವಸ್ತುವನ್ನು ಅದರ ದ್ರವಬಿಂದುವಿನವರೆಗೆ (ಮೆಲ್ಟಿಂಗ್ ಪಾಯಿಂಟ್) ಕಾಯಿಸುವ ಸಾಧನ ಕಿಲ್ನ್ (ಆವಿಗೆ); ಅದಕ್ಕಿಂತ ಅಧಿಕ ಮಟ್ಟದವರೆಗೆ ಕಾಯಿಸುವ ಸಾಧನ ಫರ್ನೆಸ್ ಕುಲುಮೆ; ಅನಿಲವನ್ನಾಗಲೀ ನೀರನ್ನಾಗಲೀ ಕಾಯಿಸಲು ಉಪಯೋಗಿಸುವ ನಿತ್ಯಬಳಕೆಯ ಸಾಧನ ಸ್ಟವ್; ಬಟ್ಟೆ ಒಣಗಿಸಲು ಚಳಿ ಕಾಯಿಸಲು ಉಪಯೋಗಿಸುವ ಸಾಧನ ಓವನ್ (ಅಗ್ಗಿಷ್ಟಿಕೆ). ಆದ್ದರಿಂದ ಇಟ್ಟಿಗೆಯನ್ನು ಸುಡುವ ಸಾಧನ ಆವಿಗೆ; ಕಬ್ಬಿಣದ ಅದಿರಿನಿಂದ ಕಬ್ಬಿಣ ಲೋಹದ್ರವ ಪಡೆಯಲು ಉಪಯೋಗಿಸುವ ಸಾಧನ ಕುಲುಮೆ; ಅಕ್ಕಸಾಲಿಗರು ಬಳಸುವ ಮೂಸೆ ತಾತ್ತ್ವಿಕವಾಗಿ ಕುಲುಮೆಯೇ.

ಇಟ್ಟಿಗೆ ಸುಡುವ ಆವಿಗೆಗಳು: ಊರ ಇಟ್ಟಿಗೆ ಇಟ್ಟಿಗೆ ತಯಾರಿಸುವಾಗ ಹಸಿ ಇಟ್ಟಿಗೆಗಳ ದೊಡ್ಡ ದೊಡ್ಡ ಗೂಡುಗಳನ್ನು ಬಯಲಿನಲ್ಲಿ ಕಟ್ಟುತ್ತರೆ. ಅವುಗಳ ಒಳಗೆ ಒಂದು ಕ್ರಮದಲ್ಲಿ ಮರದ ಕುಂಟೆಗಳನ್ನು ಅಳವಡಿಸಿ ಗೂಡು ಪುರ್ಣವಾದ ಮೇಲೆ ತಳಭಾಗದ ಕಂಡಿಗಳಲ್ಲಿ ಜೋಡಿಸಿರುವ ಸೌದೆಗೆ ಬೆಂಕಿಯಿಕ್ಕುತ್ತಾರೆ. ಇಂಥ ಗೂಡು ಒಂದು ಸ್ವಯಂಪುರ್ಣ ವ್ಯವಸ್ಥೆ. ಅದರಲ್ಲಿರುವ ಕುಂಟೆಗಳು ಉರಿದು ಉಷ್ಣವನ್ನು ಸಮವಾಗಿ ಎಲ್ಲ ಇಟ್ಟಿಗೆಗಳಿಗೂ ಒದಗಿಸಿ ಅವನ್ನು ಬೇಯಿಸುತ್ತವೆ. ಬೆಂಕಿ ನಂದಿ ಕಾವು ತಗ್ಗಿದಾಗ ಗೂಡು ಉಪಯೋಗಕ್ಕೆ ಸಿದ್ಧ. ಅದನ್ನು ಒಡೆದು ಬೆಂದ ಇಟ್ಟಿಗೆಗಳನ್ನು ಹೊರತೆಗೆಯುತ್ತಾರೆ. ಇಂಥ ಊರ ಇಟ್ಟಿಗೆ ಹಸಿ ಇಟ್ಟಿಗೆಗಿಂತ ಗಡಸು (ಹಾರ್ಡ್) ; ಆದರೆ ಬಲು ಪೆಡಸು (ಬ್ರಿಟಲ್). ಇಂದಿಗೂ ಹಳ್ಳಿಗಳಲ್ಲಿ ಇಂಥ ಆವಿಗೆಗಳನ್ನು ನೋಡಬಹುದು. ಆದರೆ ಈ ಕ್ರಮದಲ್ಲಿ ಶಕ್ತಿಯ ಅಪವ್ಯಯ ಅಧಿಕ. ಆದ್ದರಿಂದ ಸುಧಾರಿಸಿದ ಆವಿಗೆಗಳನ್ನು ಶಾಶ್ವತಕಟ್ಟಡಗಳಲ್ಲಿ ನಿರ್ಮಿಸಿದ್ದಾರೆ. ಇವು ಸತತ ಕ್ರಿಯಾಶೀಲ ಆವಿಗೆಗಳು. ಹಸಿ ಇಟ್ಟಿಗೆಗಳ ಸಂಗ್ರಹ, ಅವನ್ನು ಸುಡುವ ಆವಿಗೆ ಕೊಠಡಿಗಳು, ಸುಟ್ಟ ಇಟ್ಟಿಗೆಗಳನ್ನು ಹೊರತೆಗೆದು ಒಟ್ಟಲು ಸ್ಥಳ-ಇಷ್ಟು ಒಂದು ಕವಾಯಿತಿಯಲ್ಲಿ ನಡೆದಂತೆ ಅನೂಚಾನವಾಗಿ ಮುಂದುವರಿಯುತ್ತವೆ. ಇದರಿಂದ ಪ್ರತಿಸಲವೂ ಗೂಡು ಕಟ್ಟುವ ಅಥವಾ ಶಕ್ತಿ ಅಪವ್ಯಯವಾಗುವ ಅಥವಾ ಮಳೆ, ಗಾಳಿ, ಮಂಜುಗಳಿಗೆ ಹೆದರಬೇಕಾದ ಪ್ರಸಂಗವಿಲ್ಲ.

ಇತರ ಉಪಯೋಗಗಳು: ಪಿಂಗಾಣಿ ಪಾತ್ರೆ ತಯಾರಿಕೆಯಲ್ಲಿ ಆಧುನಿಕ-ಮೃತ್ಕಲಾತಂತ್ರ ಹಸಿ ಮರವನ್ನು ಒಣಗಿಸಿ ಹದಗೊಳಿಸಲು, ಏಲಕ್ಕಿಯನ್ನು ಹದವಾಗಿ ಕಾಯಿಸಿ ಮಾರುಕಟ್ಟೆಗೆ ಸಿದ್ಧಗೊಳಿಸಲು, ಚಿಪ್ಪುಗಳನ್ನು ಸುಟ್ಟು ಸುಣ್ಣ ತಯಾರಿಸಲು ಆವಿಗೆಗಳ ಉಪಯೋಗವಿದೆ. ಅಪಕರ್ಷಕ ವಾತಾವರಣದಲ್ಲಿ ಕಬ್ಬಿಣದ ಅದಿರುಗಳನ್ನು ಕಾಂತಸ್ಥಿತಿಗೆ ಅಪಕರ್ಷಿಸಲು ಉಪಯೋಗಿಸುವ ಒಲೆ. ಉಷ್ಣದ ಪುರೈಕೆ: ಮರದ ಕುಂಟೆಗಳು, ಮರದಪುಡಿ, ಇದ್ದಿಲು ಮುಂತಾದುವನ್ನು ಸುಟ್ಟು ಉಷ್ಣವನ್ನು ಪುರೈಸುವ ಕ್ರಮ ಇಂದಿಗೂ ನಮ್ಮ ದೇಶದಲ್ಲಿ ಬಳಕೆಯಲ್ಲಿದೆ. ಆದರೆ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಮತ್ತು ಮುಂದುವರಿದ ರಾಷ್ಟ್ರಗಳಲ್ಲಿ ಎಣ್ಣೆ, ಇಂಧನಾನಿಲ, ವಿದ್ಯುಚ್ಛಕ್ತಿ ಇವುಗಳ ಸಹಾಯದಿಂದ ಬೇಕಾದ ಉಷ್ಣಶಕ್ತಿ ಪಡೆಯುತ್ತಾರೆ.