ವಿಷಯಕ್ಕೆ ಹೋಗು

ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇರುಪ್ಪು ಜಲಪಾತ
ಎಸ್. ಎಲ್. ಭೈರಪ್ಪನವರ ಕಾದಂಬರಿಯ ಬಗ್ಗೆ ಮಾಹಿತಿಗೆ "ಜಲಪಾತ (ಕಾದಂಬರಿ)" ಲೇಖನ ನೋಡಿ

ಜಲಪಾತ- ನದೀಪಾತ್ರ ಬಲು ಕಡಿದೂ ಆಳವೂ ಆಗಿರುವೆಡೆಯಲ್ಲಿ ಹರಿಯುತ್ತಿರುವ ನೀರು ಎತ್ತರದಿಂದ ದುಮುಕುವ ಒಂದು ಭೌಗೋಳಿಕ ಲಕ್ಷಣ (ವಾಟರ್ ಫಾಲ್). ಸಾಮಾನ್ಯವಾಗಿ ಬೆಟ್ಟಪ್ರದೇಶಗಳಲ್ಲಿ ಏರು ತಗ್ಗುಗಳಲ್ಲಿ ಹರಿಯುವ ನದಿಗಳು [] ಸೃಷ್ಟಿಸುತ್ತವೆ.ಜಲಪಾತಗಳು ಸಾಮಾನ್ಯವಾಗಿ ನದಿಯ ಮೇಲಿನ ಪಥವುಗಳಿಂದ ರಚನೆಯಾಗುತ್ತವೆ.ನೀರಿನ ರಭಸ, ಹಾಲ್ನೊರೆಯಂತಹ ಬಣ್ಣ, ಗಂಭೀರವಾದ ಸದ್ದು, ಹತ್ತಿರದ ಸ್ಥಳಗಳಲ್ಲಿ ತಂಪಾದ ನೀರಿನ ಚಿಕ್ಕ ಚಿಕ್ಕ ಹನಿಗಳ ಸಿಂಚನ, ಇವೆಲ್ಲವೂ ಜನರನ್ನು ಆಕರ್ಷಿಸುತ್ತವೆ.

ಬರೆಯ ಅಂಚು ಬಲು ಕಡಿದಾಗಿದ್ದರೆ ಅಲ್ಲಿ ನೀರು ಅತಿ ರಭಸದಿಂದ ನೆಗೆಯುವಾಗ, ನೆಲಸಂಪರ್ಕವೇ ಇಲ್ಲದೆ, ಹಲವಾರು ಅಡಿಗಳ ಆಳದಲ್ಲಿನ ತಳಕ್ಕೆ ಕೆಡೆಯಬಹುದು. ಬರೆ ಅಷ್ಟೊಂದು ಕಡಿದಾಗಿರದಿದ್ದರೆ ನೀರು ಅದರ ಮೈಯನ್ನು ತೊಳೆದುಕೊಂಡೇ ವೇಗದಿಂದ ಕೆಳಕ್ಕೆ ಬೀಳುತ್ತದೆ.

ಒಂದು ನದಿಯ ಉಗಮದಿಂದ ಅದು ಕೊನೆಯಾಗುವ ಮುಖದ ವರೆಗಿನ ಅದರ ಪ್ರವಾಹ ಮಾರ್ಗವನ್ನು ಮೇಲ್ಕಣಿವೆ (ಪರ್ವತಭಾಗ), ನಡುಕಣಿವೆ (ಮಧ್ಯಭಾಗ) ಮತ್ತು ಕೆಳಭಾಗ (ಬಯಲು ಭಾಗ) ಎಂಬುದಾಗಿ ವಿಭಾಗಿಸಬಹುದು. ಈ ಮೂರು ವಿಭಾಗಗಳಲ್ಲೂ ನದಿಯ ಚಲನಾತ್ಮಕ ಕ್ರಿಯೆಗಳಾದ ಕೊರೆಯುವಿಕೆ, ಸ್ಥಾನಾಂತರೀಕರಣ ಸಂಚಯನಗಳು ಆಯಾ ಭಾಗದ ಇಳಿಜಾರು ಮತ್ತು ಶಿಲಾಪ್ರಸ್ತರಗಳ ಲಕ್ಷಣ ಹವೆ ಮತ್ತು ಇತರ ವೈಶಿಷ್ಟ್ಯಗಳಿಗೆ ಅನುಸಾರವಾಗಿ ಸಾಗುತ್ತವೆ. ನದಿಯ ಮೇಲ್ಕಣಿವೆ ಎತ್ತರವಾದ ಪರ್ವತದಲ್ಲಿರುತ್ತದೆ. ಈ ಭಾಗದಲ್ಲಿ ಕಡಿದಾದ ಇಳಿಜಾರುಗಳು ಸ್ವಾಭಾವಿಕ. ಅಲ್ಲಿ ನದಿ ಅತಿ ವೇಗದಿಂದ ಪ್ರವಹಿಸುವುದರಿಂದ ಅದರ ಪಾತ್ರದ ಕೊರೆತ ಅತ್ಯಧಿಕವಾಗಿಯೂ ತೀವ್ರವಾಗಿಯೂ ನಡೆಯುತ್ತದೆ. ಪ್ರವಾಹದ ಕೊರೆವ ಸಾಮರ್ಥ್ಯ ನೀರಿನ ಮತ್ತು ಅದರಲ್ಲಿರುವ ಇತರ ವಸ್ತುಗಳ ಪರಿಮಾಣ, ಶಿಲಾಪ್ರಸ್ತರಗಳ ಲಕ್ಷಣ ಮತ್ತು ಎತ್ತರಗಳನ್ನು ಅವಲಂಬಿಸಿದೆ. ನದಿಯ ಪ್ರವಾಹಮಾರ್ಗದಲ್ಲಿ ಕಠಿಣ ಮತ್ತು ಮೃದು ಶಿಲಾ ಪ್ರಸ್ತರಗಳು ಪರ್ಯಾಯ ಕ್ರಮದಲ್ಲಿ ಬೆರೆತಿರುವುದುಂಟು. ಕಠಿಣ ಶಿಲೆಗಳ ಕೊರೆತ ಬಲು ನಿಧಾನ; ಮೃದು ಶಿಲೆಗಳಾದರೋ ಬಲು ಬೇಗನೆ ಶಿಥಿಲಗೊಳ್ಳುತ್ತವೆ. ಆಗ ಕಡಿದಾದ ಇಳಿತವುಂಟಾಗಿ ಮೇಲಿನ ಕಠಿಣಶಿಲೆಯ ಅಡಿಯಲ್ಲಿ ಹಳ್ಳವೊಂದು ನಿರ್ಮಾಣವಾಗುತ್ತದೆ. ಕೊರೆತ ಇನ್ನಷ್ಟು ಮುಂದೊತ್ತಿದಂತೆ ಕಠಿಣ ಶಿಲಾಮುಖ ಲಂಬವಾಗಿ ನಿಂತಮತೆ ಕಾಣುವುದು. ಆಗ ನದಿಯ ನೀರು ಅದರ ಮೇಲಿಂದ ಹರಿಯುತ್ತ ಒಮ್ಮೆಲೆ ಕೆಳಕ್ಕೆ ಹಾರಿಬೀಳುವುದು. ಇದೇ ಜಲಪಾತ. ಮೇಲಿನ ಕಠಿಣ ಶಿಲೆಗೆ ಜಲಪಾತಕಾರಿ ಎಂದು ಹೆಸರು. ಕಾಲಕ್ರಮದಲ್ಲಿ ಅದು ಶಿಥಿಲವಾಗುತ್ತ ಹೋದಂತೆ ಜಲಪಾತ ಹಿಮ್ಮೆಟ್ಟುವುದು. ಜಲಪಾತಗಳು ಹಲವು ಅಡಿಗಳಿಂದ ನೂರಾರು ಅಡಿಗಳಷ್ಟು ಆಳದ ವರೆಗೆ ಧುಮುಕುವವು. ಅವುಗಳ ಠೀವಿ ಸಿಡಿಯುವ ತುಷಾರಗಳ ಚೆಲುವು ಬಿಸಿಲಿನಲ್ಲಿ ಚೆಲ್ಲಾಡುವ ಬಣ್ಣಗಳ ಬೆಡಗು, ಭೋರ್ಗರೆಯುವ ಶಬ್ದಗಾಂಭೀರ್ಯ ಮತ್ತು ಪರಿಸರದ ಸೃಷ್ಟಿಸೌಂದರ್ಯ ವೀಕ್ಷಕರ ಕೆವಿ ಕಣ್ಮನಗಳನ್ನು ಸೂರೆಗೊಳ್ಳುತ್ತವೆ. ಜಲಪಾತಗಳ ಚಲನಶಕ್ತಿಯನ್ನು ಉಪಯುಕ್ತವಾಗಿ ಪರಿವರ್ತಿಸಿಕೊಳ್ಳುವುದು ಕೂಡ ಸಾಧ್ಯ.

ಪ್ರಪಂಚದ ಕೆಲವು ಸುಪ್ರಸಿದ್ಧ ಜಲಪಾತಗಳು

[ಬದಲಾಯಿಸಿ]

ಉತ್ತರ ಅಮೆರಿಕದ ಅತ್ಯದ್ಭುತ ಹಾಗೂ ಚೇತೋಹಾರಿ ದೃಶ್ಯಗಳಲ್ಲೊಂದೆನಿಸಿದ ವಿಶಾಲವಾದ ನಯಾಗರ ಜಲಪಾತ.

[ಬದಲಾಯಿಸಿ]

ಇದು ಕೆನಡ ಮತ್ತು ಅಮೆರಿಕದ ಸಂಯುಕ್ತ ಸಂಸ್ಥಾನಗಳ ಗಡಿಯಲ್ಲಿದೆ. ನಡುವಣ ದ್ವೀಪ ಈ ಜಲಪಾತವನ್ನು ಕೆನಡ ಮತ್ತು ಅಮೆರಿಕದ ವಿಭಾಗಗಳನ್ನಾಗಿ ವಿಂಗಡಿಸುತ್ತದೆ. ಪಂಚ ಮಹಾಸರೋವರಗಳ ಪಂಕ್ತಿಗೆ ಸೇರಿದ ಈರಿ ಸರೋವರದಿಂದ ಆಂಟೇರಿಯೋ ಸರೋವರಕ್ಕೆ ಹರಿಯುವ 100 ಮೈಲಿ ಉದ್ದದ ನಯಾಗರ ನದಿಯಿಂದ ಈ ಜಲಪಾತ ಉಂಟಾಗಿವೆ. ಕೆನಡ ಭಾಗದ ಜಲಪಾತದ ಆಕಾರ ದೊಡ್ಡ ಲಾಳದಂತೆ. 2500' ಅಗಲ ಮತ್ತು 155' ಎತ್ತರ ಅಮೆರಿಕದ ಭಾಗ 1000' ಅಗಲ ಮತ್ತು 165' ಎತ್ತರವಾಗಿದೆ. ಈ ಜಲಪಾತ ನಿರ್ಮಾಣ ಕಾಲದಿಂದ ಇದುವರೆಗೆ (1974) ಇದರ ಮೇಲಿನ ಶಿಲಾಮುಖ ಮೂರು ಮೈಲಿಗಳಷ್ಟು ಹಿಂದೊತ್ತಿದೆ. ಅದು ವರ್ಷಕ್ಕೆ 3-4 ಅಡಿಗಳಂತೆ ಹಿಮ್ಮೆಟ್ಟುತ್ತಿದೆ. ಎಂದು ಅಂದಾಜು ಮಾಡಲಾಗಿದೆ. ಮೇಲಿನ ಎರಡು ರಾಷ್ಟ್ರಗಳಿಗೆ ಸೇರಿರುವ ಈ ಜಲಪಾತದ ಅಗಾಧ ಜಲಸಾಮಥ್ರ್ಯವನ್ನು ಆ ರಾಷ್ಟ್ರಗಳು ಜಲವಿದ್ಯುದುತ್ಪಾದನೆಗಾಗಿ ಬಳಸುತ್ತಲಿವೆ. ಈ ಕಾರಣದಿಂದಲೂ ಹೊಸದಾಗಿ ನಿರ್ಮಿಸಲ್ಪಟ್ಟ ಸೇಂಟ್ ಲಾರೆನ್ಸ್ ಸಮುದ್ರಮಾರ್ಗದಿಂದಲೂ ನಯಾಗಾರ ಜಲಪಾತದಿಂದ ಇಳಿಯುವ ನೀರಿನ ಗಾತ್ರ ಕುಗ್ಗುತ್ತಲಿದೆ. ಅಮೆರಿಕ ವಿಭಾಗದ ಜಲಪಾತಕ್ಕೆ ಕಾಮನಬಿಲ್ಲು ಸೇತುವೆಯನ್ನು (ರೇನ್‍ಬೊ ಬ್ರಿಜ್) ರಚಿಸಿರುತ್ತಾರೆ.

ಆಫ್ರಿಕ ಖಂಡದ ಉತ್ತರ ಮತ್ತು ದಕ್ಷಿಣ ರೊಡಿಷಿಯಗಳ ಗಡಿಯಾಗಿ ಹರಿಯುವ ಜಾಂಬೀಸೀ ನದಿಯ ಮೇಲಿರುವ ಭವ್ಯವಾದ ವಿಕ್ಟೊರಿಯ ಜಲಪಾತ.

[ಬದಲಾಯಿಸಿ]

1 ಮೈಲಿ ಅಗಲ 340' ಎತ್ತರವಿರುವ ಈ ಜಲಪಾತವನ್ನು ಆ ಖಂಡದ ಶೋಧಕರಲ್ಲಿ ಒಬ್ಬನಾದ ಡೇವಿಡ್ ಲಿವಿಂಗ್‍ಸ್ಟನ್ ಎಂಬಾತ 1855ರಲ್ಲಿ ಮೊದಲಬಾರಿಗೆ ಆವಿಷ್ಕರಿಸಿದ. ಇದರ ನಾಲ್ಕು ವಿಭಾಗಗಳ ಒಂದಕ್ಕೆ ಇಂದ್ರಚಾಪ ಜಲಪಾತವೆಂಬ ಹೆಸರುಂಟು. ಈ ಜಲಪಾತದಿಂದ ಧುಮುಕುವ ನೀರಿನ ಭೋರ್ಗರೆತ ಅಸಾಧಾರಣವಾಗಿದೆ. ಆ ನೀರಿನಿಂದೇಳುವ ತುಷಾರ ರಾಶಿ 30 ಮೈಲಿಗಳ ದೂರಕ್ಕೂ ಕಾಣಿಸುತ್ತದೆ. ಮಳೆಗಾಲದಲ್ಲಿ ನೀರು ತುಂಬಿ ಹರಿಯುವಾಗ ಈ ಅಗಾಧ ತುಷಾರ ಸಮೂಹವೇ ಸರ್ವತ್ರ ವ್ಯಾಪಿಸಿ ಜಲಪಾತವನ್ನೇ ಮುಚ್ಚಿ ಬಿಡುವುದು. ಅಷ್ಟು ದೊಡ್ಡಗಾತ್ರದಿಂದ ಕೆಳಕ್ಕಿಳಿವ ಅಪಾರ ಜಲರಾಶಿ ಕೇವಲ 100' ಅಗಲದ ತೊರೆಯ ರೂಪದಲ್ಲಿ ಹಲವಾರು ಎಡಬಲ ತಿರುವುಗಳಿಂದ ಪ್ರವಹಿಸಿ ಮುಂದೆ ಸಾಗುತ್ತಿರುವುದು ಇಲ್ಲಿಯ ಇನ್ನೊಂದು ವೈಚಿತ್ರ್ಯ.

ಪ್ರಪಂಚದ ಇತರ ಜಲಪಾತಗಳು

[ಬದಲಾಯಿಸಿ]

ಪ್ರಪಂಚದ ವಿವಿಧ ದೇಶಗಳಲ್ಲಿ ಇನ್ನೂ ಅನೇಕ ನಿಸರ್ಗ ಸುಂದರವೂ ಆಕರ್ಷಣೀಯವೂ ಆದ ಜಲಪಾತಗಳಿವೆ. ದಕ್ಷಿಣ ಅಮೆರಿಕವೆನಿಜುವೀಲ ಆಗ್ನೇಯ ಭಾಗದಲ್ಲಿ 3212' ಎತ್ತರದಿಂದ ಸುಮನೋಹರವಾಗಿ ನರ್ತಿಸುತ್ತ ಧುಮುಕುವ ಏಂಜೆಲ್ ಜಲಪಾತ ಉನ್ನತ ತಮ ಜಲಪಾತ.

ಭಾರತದ ಪ್ರಸಿದ್ಧ ಜಲಪಾತಗಳು

[ಬದಲಾಯಿಸಿ]

ಭಾರತದ ಪ್ರಸಿದ್ಧ ಜಲಪಾತಗಳಲ್ಲಿ ಕರ್ನಾಟಕದ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಯಲ್ಲಿ ಹರಿಯುವ ಶರಾವತಿ ನದಿಯ ಜಲಪಾತ (ಗೇರುಸೊಪ್ಪೆ ; ಜೋಗ್) ಅತ್ಯಂತ ರಮಣೀಯವಾದುದು. ಶರಾವತಿ ಇಲ್ಲಿ ರಾಜಾ, ರೋರರ್, ರಾಕೆಟ್ ಮತ್ತು ಲೇಡಿ (ರಾಣಿ) ಎಂಬ ನಾಲ್ಕು ಭಾಗಗಳಾಗಿ 830' ಎತ್ತರದಿಂದ ಆಕಾಶಗಂಗೆಯಂತೆ ಭೋರ್ಗರೆಯುತ್ತ ಕೆಳಕ್ಕೆ ರಭಸವಾಗಿ ಧುಮುಕುತ್ತದೆ. ಹಾಲಿನ ರಾಶಿಯಂತೆ ನೊರೆಗೂಡಿದ ನೀರಿನ ಪ್ರವಾಹವೂ ಅಂತರಾಳದಲ್ಲಿ ಶೋಭಿಸುವ ವಿವಿಧ ವರ್ಣಗಳ ಸಾವಿರಾರು ಕಾಮನಬಿಲ್ಲುಗಳ ದೃಶ್ಯವೂ ಉಪಮಾತೀತವಾಗಿವೆ. ಇಲ್ಲಿನ ಜಲಸಾಮರ್ಥ್ಯದ ಸಹಾಯದಿಂದ ಜೋಗ್ (ಮಹಾತ್ಮಾಗಾಂಧಿ ಜಲವಿದ್ಯುತ್ ಉತ್ಪಾದನಾಕೇಂದ್ರ) ಮತ್ತು ಶರಾವತಿ ಕಣಿವೆಯ ಹೊಸ ಜಲವಿದ್ಯುಚ್ಛಕ್ತಿ ಯಂತ್ರಾಗಾರಗಳು ನಡೆಯುತ್ತಿವೆ. ಇಲ್ಲಿ ಏಷ್ಯದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ಜಲವಿದ್ಯುಚ್ಛಕ್ತಿ ನಿರ್ಮಾಣವಾಗುತ್ತಿದೆ. ಎಂಬ ಪ್ರತೀತಿ ಉಂಟು.

ಕರ್ನಾಟಕದ ಇತರ ಕೆಲವು ಜಲಪಾತಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Read more at: http://kannada.nativeplanet.com/travel-guide/beautiful-waterfalls-south-india-000035.html

ಇಗುವಾಸ್ಸು ಜಲಪಾತ (ಅರ್ಜೆಂಟೀನ)
ಅಬ್ಬೆ ಜಲಪಾತ

ಉಲ್ಲೇಖಗಳು

[] []

Reflist http://www.kannadakavi.com/janapadajagattu/euuru/waterfalls.htm

ಉಲ್ಲೇಖಗಳು

[ಬದಲಾಯಿಸಿ]