ವಿಷಯಕ್ಕೆ ಹೋಗು

ಮೊಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೊಲಗಳು
ಕುರುಚಲು ಪೊದೆಯ ಮೊಲ (ಲೀಪಸ್ ಸ್ಯಾಕ್ಸಾಟಿಲಿಸ್)
Scientific classification e
ಕ್ಷೇತ್ರ: Eukaryota
ಸಾಮ್ರಾಜ್ಯ: Animalia
ವಿಭಾಗ: ಕಾರ್ಡೇಟಾ
ವರ್ಗ: Mammalia
ಗಣ: ಲ್ಯಾಗೊಮಾರ್ಫ಼ಾ
ಕುಟುಂಬ: ಲೆಪೊರಿಡೀ
ಕುಲ: ಲೀಪಸ್
Linnaeus, 1758
Type species
ಪರ್ವತದ ಮೊಲ (ಲೀಪಸ್ ಟಿಮಿಡಸ್)
Linnaeus, 1758
ಪ್ರಭೇದಗಳು

ಪಠ್ಯ ನೋಡಿ

ಮೊಲವು ಮ್ಯಾಮೇಲಿಯ ವರ್ಗದ ಲ್ಯಾಗೊಮಾರ್ಫ ಗಣದ ಲೆಪೊರಿಡೀ ಕುಟುಂಬಕ್ಕೆ ಸೇರಿದ ಲೀಪಸ್ ಜಾತಿಯ ಪ್ರಾಣಿ (ಹೇರ್). ಕುಂದಿಲಿಗಳಿಗೆ ಹತ್ತಿರ ಸಂಬಂಧಿ. ಮೊಲಕ್ಕೆ ಕುಂದಿಲಿಗೂ ಹಲವಾರು ಹೊರ ವ್ಯತ್ಯಾಸಗಳುಂಟು.

ವ್ಯಾಪ್ತಿ

[ಬದಲಾಯಿಸಿ]

ಲೀಪಸ್ ಜಾತಿಯಲ್ಲಿ ಸುಮಾರು 26 ಪ್ರಭೇದಗಳಿದ್ದು ಇವು ಯೂರೇಷ್ಯ, ಏಷ್ಯದ ಬಹುಭಾಗ, ಆಫ್ರಿಕ, ಉತ್ತರ ಅಮೆರಿಕಗಳಲ್ಲಿ ಕಾಣದೊರೆಯುವುವು. ದಕ್ಷಿಣ ಅಮೆರಿಕ, ಆಸ್ಟ್ರೇಲಿಯ, ನ್ಯೂಜ಼ೀಲೆಂಡಗಳಲ್ಲಿ ಇವನ್ನು ಬೇರೆಡೆಯಿಂದ ತಂದು ಬಿಡಲಾಗಿದ್ದು ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಜೀವಿಸುತ್ತವೆ.

ಮುಖ್ಯ ಪ್ರಭೇದಗಳು

[ಬದಲಾಯಿಸಿ]

ಈ ಪ್ರಭೇದಗಳ ಪೈಕಿ ಮುಖ್ಯವಾದವು ಲೀ. ಅಮೆರಿಕಾನಸ್ (ಉತ್ತರ ಅಮೆರಿಕದ ಉತ್ತರ ಭಾಗ), ಲೀ. ಯುರೋಪಿಯಸ್ (ಯುರೋಪ್), ಲೀ. ಆರ್ಕ್ಟಿಕಸ್ (ಉತ್ತರ ಧ್ರುವಪ್ರದೇಶ), ಲೀ. ನೈಗ್ರಿಕಾಲಿಸ್ (ಭಾರತ).[][]

ಭಾರತದ ಮೊಲ

[ಬದಲಾಯಿಸಿ]

ಭಾರತದಲ್ಲಿ ಸಿಕ್ಕುವ ಮೊಲಕ್ಕೆ ಬ್ಲಾಕ್-ನೇಪ್‍ಡ್ ಹೇರ್ ಅಥವಾ ಇಂಡಿಯನ್ ಹೇರ್ ಎಂಬ ಹೆಸರುಂಟು. ಇದರಲ್ಲಿ ಸುಮಾರು 7 ವಿಭಿನ್ನ ಬಗೆಗಳಿದ್ದು ದೇಹದ ಬಣ್ಣ, ಗಾತ್ರಗಳಲ್ಲಿ ವ್ಯತ್ಯಾಸವನ್ನು ಪ್ರದರ್ಶಿಸುವುವು. ಇವುಗಳ ಸರಾಸರಿ ಉದ್ದ 40-50 ಸೆಂ.ಮೀ; ತೂಕ 1.8-3.6 ಕೆ.ಜಿ. ಕತ್ತಿನ ಮೇಲೆ ಅಂದರೆ ಕಿವಿಯಿಂದ ಹಿಡಿದು ಭುಜದವರೆಗೆ ಕಗ್ಗಂದು ಇಲ್ಲವೆ ಕಪ್ಪು ಬಣ್ಣದ ಗುರುತು ಇದೆ. ಬಾಲದ ಮೇಲ್ಮೈ ಕೂಡ ಕಪ್ಪು; ಬಾಲದ ಉದ್ದ ಸುಮಾರು 10 ಸೆಂ.ಮೀ. ಮುಂಗಾಲುಗಳು ಚಿಕ್ಕವು; ಇವುಗಳಲ್ಲಿ ತಲಾ 5 ಬೆರಳುಗಳಿವೆ. ಹಿಂಗಾಲುಗಳು ಬಲು ಉದ್ದ; ಇವುಗಳಲ್ಲಿ ತಲಾ 4 ಬೆರಳುಗಳಿವೆ. ಮೊಲದ ಕಿವಿ ಕುಂದಿಲಿಯದಕ್ಕಿಂತ ತುಂಬ ಉದ್ದ.

ಮೊಲಗಳು ಸಸ್ಯಾಹಾರಿಗಳು. ಮೈದಾನ ಪ್ರದೇಶದ ಹುಲ್ಲುಗಾವಲುಗಳು ಇವುಗಳ ಮೆಚ್ಚಿನ ನೆಲೆ. ಹಳ್ಳಿಗಳ ಕೃಷಿಭೂಮಿಗಳ ಸನಿಹದಲ್ಲೂ ವಾಸಿಸುತ್ತವೆ. ಕೆಲವೊಮ್ಮೆ ಹಳ್ಳಿರಸ್ತೆಗಳಿಗೂ ಮನೆತೋಟಗಳಿಗೂ ಬರುವುದುಂಟು. ಸಾಧಾರಣವಾಗಿ ನಿಶಾಚಾರಿಗಳಾದ ಇವು ಸಂಜೆ ವೇಳೆ ತಮ್ಮ ನೆಲೆಗಳಿಂದ ಹೊರಬಂದು ಹುಲ್ಲಿನ ಎಳೆಚಿಗುರು ಮುಂತಾದನ್ನು ತಿನ್ನುತ್ತವೆ. ಅದರೆ ಹಲವಾರು ಸಲ ಹಗಲಿನಲ್ಲೂ ಆಹಾರಾನ್ವೇಷಣೆಯಲ್ಲಿ ತೊಡಗುವುದುಂಟು.

ಸ್ವಭಾವ

[ಬದಲಾಯಿಸಿ]

ಸಾಮಾನ್ಯವಾಗಿ ಹಗಲಿನಲ್ಲಿ ಪೊದೆಗಳಲ್ಲೂ ಹುಲ್ಲು ತೆಂಡೆಗಳಲ್ಲೋ ಅಡಗಿದ್ದು ತಮ್ಮ ಸಹಜ ವೈರಿಗಳಾದ ನರಿ, ಮುಂಗಸಿ, ಕಾಡುಬೆಕ್ಕು ಮುಂತಾದವುಗಳಿಂದ ರಕ್ಷಣೆ ಪಡೆಯುತ್ತವೆ. ಇವುಗಳ ಮೈಬಣ್ಣ ವಾಸಸ್ಥಳಗಳ ಹಿನ್ನಲೆಯೊಂದಿಗೆ ಚೆನ್ನಾಗಿ ಹೊಂದುಕೊಳ್ಳುವುದರಿಂದ ಸುಲಭವಾಗಿ ಕಣ್ಣಿಗೆ ಬೀಳವು. ಅಲ್ಲದೆ ವೈರಿಯೊ ಮನುಷ್ಯರೊ ತುಂಬ ಹತ್ತಿರ ಬರುವವರೆಗೂ ಚಲಿಸದೆ ಅಡಗಿದ್ದು ಕೊನೆಯ ಗಳಿಗೆಯಲ್ಲಿ ಚಂಗನೆ ನೆಗೆದು ಓಡಿ ಹೋಗುವುವು. ಇದರಿಂದಾಗಿ ಇವನ್ನು ಹಿಡಿಯುವುದು ಕಷ್ಟ. ಕೊಂಚ ದೂರ ಓಡಿ ಬಳಿಕ ಹಿಂಗಾಲಿನ ಮೇಲೆ ನಿಂತು ಹಿಂದಕ್ಕೆ ತಿರುಗಿ ನೋಡುವುದು ಇವುಗಳ ಸ್ವಭಾವ.

ಸಂತಾನೋತ್ಪತ್ತಿ

[ಬದಲಾಯಿಸಿ]

ಮೊಲ ವರ್ಷವಿಡೀ ಮರಿಗಳನ್ನು ಹಾಕುತ್ತದೆ. ಒಂದು ಸಲಿಗೆ ಒಂದು ಇಲ್ಲವೆ ಎರಡು ಮರಿಗಳು ಹುಟ್ಟುತ್ತವೆ. ಕುಂದಿಲಿಯ ಮರಿಗಳಂತಲ್ಲದೆ ಮೊಲದ ಮರಿಗಳು ಹುಟ್ಟುವಾಗಲೇ ಮೈತುಂಬ ಕೂದಲನ್ನು ತೆರೆದಿರುವ ಕಣ್ಣುಗಳನ್ನೂ ಪಡೆದಿರುವುವು.[]

ಮೊಲದ ಮಾಂಸ ರುಚಿಕರವಾದ್ದರಿಂದ ಇದನ್ನು ಬೇಟೆಯಾಡುವುದಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Hoffman, R. S.; Smith, A. T. (2005). "Order Lagomorpha". In Wilson, D. E.; Reeder, D. M (eds.). Mammal Species of the World (3rd ed.). Johns Hopkins University Press. pp. 195–205. ISBN 978-0-8018-8221-0. OCLC 62265494. {{cite book}}: Invalid |ref=harv (help)
  2. Database, Mammal Diversity (2022-02-01), Mammal Diversity Database, doi:10.5281/zenodo.5945626, retrieved 2022-03-24
  3. Langley, Liz (19 December 2014). "What's the Difference Between Rabbits and Hares?". National Geographic. Archived from the original on December 20, 2014.


ಹೆಚ್ಚಿನ ಓದಿಗೆ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: