ಸುರಂಗ
ಸುರಂಗವು ಮಾನವನಿರ್ಮಿತ ಭೂಗರ್ಭ ಮಾರ್ಗ (ಟನಲ್). ರಸ್ತೆ, ರೈಲು ಮಾರ್ಗ, ಕಾಲುವೆ ಮುಂತಾದವುಗಳಿಗೆ ಅಡ್ಡಲಾಗಿ ದುರ್ಗಮ ಬೆಟ್ಟ, ಗುಡ್ಡ ಇತ್ಯಾದಿ ಎದುರಾದಾಗ ಇವನ್ನು ಬಳಸಿ ಇನ್ನೊಂದು ಪಾರ್ಶ್ವ ತಲಪುವ ಬದಲು ಅಲ್ಲಿಯ ಅಡಚಣೆಯ ಅಡ್ಡ ಮಾತ್ರ ಸುರಂಗ ಕೊರೆದು ಮುಂದುವರಿಯಲಾಗುತ್ತದೆ. ರಸ್ತೆ ಮತ್ತು ರೈಲುಮಾರ್ಗ ಅಡ್ಡ ಹಾಯುವಲ್ಲಿ ಮೇಲು ಅಥವಾ ಕೆಳ ಸುರಂಗ ರಚಿಸುವುದು ವಾಡಿಕೆ. ದಟ್ಟ ವಾಹನಸಂಚಾರವಿರುವ ಹಾದಿಗಳಲ್ಲಿ ಪಾದಚಾರಿಗಳಿಗೆಂದೇ ಭೂಮ್ಯಂತರ್ಗತ (ಸಬ್‍ವೇ) ಸುರಂಗಗಳನ್ನು ನಿರ್ಮಿಸುವುದುಂಟು.
ಅಸ್ತರಿ (ಲೈನಿಂಗ್)
[ಬದಲಾಯಿಸಿ]ಸುರಂಗ ನಿರ್ಮಾಣ ಏನಿದ್ದರೂ ಮೊದಲ ಹಂತದಲ್ಲಿ ಸ್ಥೂಲ ಕಾರ್ಯ. ಆಗ ಅದರ ಆಕಾರ ನಿಖರವಾಗಿರದು. ಇದನ್ನು ಅಚ್ಚುಗಟ್ಟಾಗಿ ಪೂರೈಸಲು ಸುರಂಗದ ಒಳಮೈಗೆ ಅಸ್ತರಿ ಲೇಪಿಸಲಾಗುವುದು. ಇನ್ನು ಶಿಥಿಲಶಿಲೆಗಳನ್ನೂ ಮಣ್ಣುಜರಿತವನ್ನೂ ನಿವಾರಿಸಲು ಭದ್ರ ಅಸ್ತರಿಯನ್ನು ಹಚ್ಚಲೇಬೇಕು. ಭೂಸ್ತರಗಳ ಮೂಲಕ ನೀರು ಜಿನುಗುವುದನ್ನು ತಡೆಗಟ್ಟಲು, ಅಂತರ್ಜಲ ಮಟ್ಟ ಕಾಪಾಡಲು, ಸುರಂಗದ ಮೂಲಕ ನೀರು ಹರಿಯುವ ಸಂದರ್ಭದಲ್ಲಿ ಭೂಸವೆತ ಉಂಟಾಗದಂತೆ ಮಾಡಲು ಇತ್ಯಾದಿಗಳಿಗೆ ಅಸ್ತರಿ ಅಗತ್ಯ.
ವಾತಾಯನ
[ಬದಲಾಯಿಸಿ]ಸುರಂಗನಿರ್ಮಾಣ ಕಾಲದಲ್ಲಿ ತುಂಬ ದೂಳು ಉತ್ಪತ್ತಿಯಾಗುತ್ತದೆ. ಇದರಿಂದ ಉಸಿರಾಟಕ್ಕೆ ತೊಂದರೆ. ರಸ್ತೆ, ರೈಲು ಸುರಂಗಗಳಲ್ಲಿ ವಾಹನಗಳಿಂದಾಗುವ ಮಾಲಿನ್ಯದಿಂದ ಪ್ರಯಾಣಿಕರ ಉಸಿರಾಟಕ್ಕೂ ಅಡಚಣೆಯಾಗುತ್ತದೆ. ವಾಹನಗಳು ಸುರಂಗದೊಳಗೆ ಸ್ಥಗಿತಗೊಂಡಾಗಲಂತೂ ಇದರ ಅಪಾಯ ಬಲು ಹೆಚ್ಚು. ಇದಕ್ಕೆ ಸರಳ ಪರಿಹಾರ, ಲಂಬವಾದ ಕಂಡಿಗಳನ್ನು ಬಿಡುವುದು. ಇವು ವಾತಾವರಣದೊಂದಿಗೆ ಸಂಪರ್ಕ ಹೊಂದಿರುವುದರಿಂದ (ಚಿತ್ರ-1), ನೈಸರ್ಗಿಕ ವಹನ (ಕನ್ವೆಕ್ಷನ್) ಕ್ರಿಯೆಯಿಂದ ಕಲುಷಿತ ಗಾಳಿ ಮೇಲೇರಿ ಹೊರಹೋಗಿ, ತಾಜಾ ಗಾಳಿ ಒಳನುಗ್ಗುತ್ತದೆ. ಆದರೆ ಈ ಸುಲಭ ವ್ಯವಸ್ಥೆಗೆ ಬೇಕಾದ ಸನ್ನಿವೇಶ ಬಲುಪಾಲು ಅಲಭ್ಯ. ಆದ್ದರಿಂದ ವಿಶ್ವಾಸಾರ್ಹವಾದ ಯಾಂತ್ರಿಕ ವಾತಾಯನ ವ್ಯವಸ್ಥೆಯನ್ನು ಸುರಂಗಕ್ಕೆ ಅಳವಡಿಸಲಾಗುತ್ತದೆ.
ಇತಿಹಾಸ
[ಬದಲಾಯಿಸಿ]ಯುಗಾಂತರಗಳಿಂದಲೂ ಸುರಂಗ ನಿರ್ಮಾಣ ಆಗುತ್ತಲೇ ಇದೆ. ನಿಸರ್ಗದಲ್ಲಿ ಹೆಗ್ಗಣಗಳಂಥ ಕೆಲವು ಪ್ರಾಣಿಗಳು ನೆಲದಲ್ಲಿ ಬಿಲ ತೋಡಿ ವಾಸಿಸುತ್ತವೆ. ಭೂಗರ್ಭದಲ್ಲಿ ಹರಿಯುವ ನೀರು, ಭೂಸ್ತರಗಳಲ್ಲಿರುವ ಕೆಲವು ಖನಿಜಗಳನ್ನು ವಿಲೀನಿಸಿ ನೀಳ ಮತ್ತು ವಿಶಾಲ ಸುರಂಗಗಳನ್ನೂ ಡೊಗರುಗಳನ್ನೂ ಉಂಟುಮಾಡುತ್ತದೆ. ಗುಹಾವಾಸಿ ಮಾನವ ತನ್ನ ಆವಶ್ಯಕತೆಗೆ ತಕ್ಕಂತೆ ನಿಸರ್ಗಲಭ್ಯ ಗುಹೆಗಳನ್ನು ವಿಸ್ತರಿಸಿಕೊಂಡಿರಬಹುದಾದ ಸಾಧ್ಯತೆಗಳಿವೆ. ಎದುರು ದಡಗಳಲ್ಲಿದ್ದ ಅರಮನೆಯನ್ನೂ ಜೂಪಿಟರ್‍ನ ಗುಡಿಯನ್ನೂ ಸಂಪರ್ಕಿಸಲು ಬ್ಯಾಬಿಲೋನಿಯದ ದೊರೆ ಯೂಫ್ರೆಟೀಸ್ ನದಿಯ ಕೆಳಗೆ ಸುರಂಗ ನಿರ್ಮಿಸಿದ (ಕ್ರಿ.ಪೂ.ಸು. 2180-60). ಇದು 3.6 ಮೀ ಅಗಲ, 4.5 ಮೀ ಎತ್ತರ ಮತ್ತು 910 ಮೀ ಉದ್ದವಿತ್ತು. ಇದನ್ನು ಇಟ್ಟಿಗೆ ಕಲ್ಲುಗಾರೆ ಕೆಲಸದಿಂದ ಅಸ್ತರಿಸಲಾಗಿತ್ತು. ಮಾನವನಿರ್ಮಿತ ಪ್ರಥಮ ಸುರಂಗವಿದು. ಇದೇ ಮೊದಲ ಪಾದಚಾರಿ ಸುರಂಗವೂ ಹೌದು. ಜುಡಾದ ದೊರೆ ಹೆಝೇಕಿಯಾ ಕ್ರಿ.ಪೂ. 8ನೆಯ ಶತಮಾನದಲ್ಲಿ ಜೆರೂಸಲೆಮ್ ನಗರಕ್ಕೆ ನೀರು ಪೂರೈಸಲು ಸುರಂಗ ನಿರ್ಮಿಸಿದ. ಕ್ರಿ.ಪೂ. 687ರಲ್ಲಿ ನೀರು ಪೂರೈಕೆಗಾಗಿ ಗ್ರೀಕರು ಸಾಮೋಸ್ ದ್ವೀಪದಲ್ಲಿ ಸುರಂಗ ಕೊರೆಸಿದರು. ಶಿಲಾಂತರ್ಗತ ದೇವಾಲಯಗಳ ನಿರ್ಮಾಣಕ್ಕೆ ನ್ಯೂಬಿಯನ್ನರು, ಭಾರತೀಯರು (ಅಜಂತ, ಎಲ್ಲೋರ), ಮತ್ತು ಅಮೆರಿಕದ ಆಜ್ಟೆಕ್ ಜನ ಸುರಂಗಗಳನ್ನು ನಿರ್ಮಿಸಿದ್ದಾರೆ. ರೋಮನ್ನರು ರಸ್ತೆ, ಮೋರಿ, ನೀರುಪೂರೈಕೆ ಇತ್ಯಾದಿಗಳಿಗೆ ಹೇರಳವಾಗಿ ಸುರಂಗಗಳನ್ನು ರಚಿಸಿದ್ದಾರೆ. ಕ್ರಿ.ಶ. 50ರಲ್ಲಿ ಚಕ್ರವರ್ತಿ ಕ್ಲಾಡಿಯಸ್ 6 ಕಿಮೀ ಉದ್ದ, 3 ಮೀ ಅಗಲ ಮತ್ತು 1.8 ಮೀ ಎತ್ತರದ ಮೊದಲ ರೋಮನ್ ಸುರಂಗ ನಿರ್ಮಿಸಿದ. ¥sóÀ್ಯೂಸಿನೋ ಸರೋವರದಿಂದ ನೀರು ಹರಿಸಲು ಮಾಂಟೆಸಾಲ್ವಿಯ ಪರ್ವತದಲ್ಲಿ 5.6 ಕಿಮೀ ಉದ್ದದ ಸುರಂಗ ನಿರ್ಮಿಸಲಾಗಿತ್ತು. ಇದಕ್ಕೆ 30,000 ಜನ 11 ವರ್ಷ ಶ್ರಮಿಸಿದರು. ಅಂದಿಗೆ ಅದು ಅತಿ ಭಾರೀ ಲೋಕೋಪಯೋಗಿ ಕಾರ್ಯವಾಗಿತ್ತು.
ರೋಮನ್ನರ ಅನಂತರ 10 ಶತಮಾನಗಳ ಕಾಲ ಸುರಂಗದ ಕೆಲಸ ಸ್ಥಗಿತಗೊಂಡಿದ್ದು, 1565ರ ಸುಮಾರಿಗೆ ಐವಾನ್ ದ ಟೆರಿಬಲ್‍ನ (1530-84) ಕಾಲದಲ್ಲಿ ಪುನಃ ಪ್ರಾರಂಭವಾಯಿತು. ಆದರೂ ಸು. 1613ರಲ್ಲಿ ಸಿಡಿಮದ್ದಿನ ಶೋಧವಾಗುವ ತನಕವೂ ಹೆಚ್ಚು ಮುಂದುವರಿಯಲಿಲ್ಲ. 1679ರಲ್ಲಿ ಫ್ರಾನ್ಸ್‍ನ ಲಾಂಗ್ಯುಡಾಕ್‍ನಲ್ಲಿ 157 ಮೀ ಉದ್ದದ ಸುರಂಗವನ್ನು ಮೊದಲಬಾರಿಗೆ ಜಲಯಾನಕ್ಕಾಗಿ ಸಿದ್ಧಪಡಿಸಿದರು. 1776-77ರಲ್ಲಿ ಇಂಗ್ಲೆಂಡಿನಲ್ಲಿ ಮೊದಲಬಾರಿಗೆ ರಸ್ತೆಗಾಗಿ ಸುರಂಗ ನಿರ್ಮಿಸಿದರು.
19ನೆಯ ಶತಮಾನದಲ್ಲಿ ವೈಜ್ಞಾನಿಕವಾಗಿ ಸುರಂಗನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಇಂಗ್ಲೆಂಡಿನಲ್ಲಿ ಮಾರ್ಕ್ ಬ್ರುನೆಲ್ (1806-59) ಮೆತು ಭೂಸ್ತರಗಳಲ್ಲಿ ನಿರಪಾಯವಾಗಿ ಸುರಂಗ ತೋಡಲು ಶೀಲ್ಡ್ ವಿಧಾನವನ್ನು ಶೋಧಿಸಿದ. ಇದನ್ನು ಮೊದಲಬಾರಿಗೆ ಲಂಡನ್‍ನಲ್ಲಿ ಥೇಮ್ಸ್ ನದಿಯ ಅಡಿಯಲ್ಲಿ ಸುರಂಗ ಕೊರೆಯಲು ಉಪಯೋಗಿಸಿದರು. ಬೈರಿಗೆಯಂತ್ರ ಮತ್ತು ಸ್ಫೋಟಕಗಳ ಉಪಜ್ಞೆಯಾದ ಬಳಿಕ ಸುರಂಗ ನಿರ್ಮಾಣಕಾರ್ಯ ಶೀಘ್ರಗತಿಯಲ್ಲಿ ಮುಂದುವರಿಯಿತು. ¥sóÁರೆಸ್ಟ್ ಹಿಲ್‍ನಲ್ಲಿ 349.5 ಮೀ ಉದ್ದದ 19ನೆಯ ಶತಮಾನದ ಮೊದಲ ಸುರಂಗ ಸಿದ್ಧವಾಯಿತು (1851-53).
20ನೆಯ ಶತಮಾನದಲ್ಲಿ ಸುರಂಗಗಳು ವಿಪುಲವಾಗಿ ನಿರ್ಮಾಣ ಗೊಂಡಿವೆ. ಅನೇಕ ಬಗೆಯ ಯಂತ್ರೋಪಕರಣಗಳ ಬಳಕೆ ಹಾಗೂ ಸಹಕಾರಿ ತಂತ್ರವಿದ್ಯೆಯ ಅಭಿವೃದ್ಧಿಯೇ ಇದರ ಕಾರಣ. ಆ ಶತಮಾನದ ಅದ್ಭುತ ಯೋಜನೆ ಎಂದರೆ ಇಂಗ್ಲಿಷ್ ಕಡಲ್ಗಾಲುವೆಯ ಅಡಿಯಲ್ಲಿ ನಿರ್ಮಾಣವಾಗಿರುವ ಚಾನಲ್ ಸುರಂಗ. ಇದು ಮೂರು ಸುರಂಗಗಳ ಸಂಕೀರ್ಣ. ಎರಡು ಸುರಂಗಗಳ ವ್ಯಾಸ 8.36 ಮೀ.(ಅಸ್ತರಿಗೆ ಮುಂಚೆ) ಇವುಗಳಲ್ಲಿ ರೈಲುಗಳು ಸಂಚರಿಸುತ್ತವೆ. ಇವುಗಳ ನಡುವೆ ಇರುವುದು ಸೇವಾಸುರಂಗ, ಇದರ ವ್ಯಾಸ (ಅಸ್ತರಿಗೆ ಮುಂಚೆ) 5.7 ಮೀ. ಇದು ತುರ್ತುಸೇವೆ, ವಾತಾಯನ ಮತ್ತು ಜಲರೇಚಣೆ, ವಿದ್ಯುತ್ಪೂರೈಕೆ ಮುಂತಾದವುಗಳಿಗಾಗಿ ಇದೆ. ಕಡಲ್ಗಾಲುವೆ ಒಟ್ಟು 51 ಕಿಮೀ ಉದ್ದವಿದ್ದು ಏರಿಳಿಯುತ್ತ, ಅಂಕುಡೊಂಕಾಗಿ ಮುಂದುವರಿದು, ಇಂಗ್ಲೆಂಡನ್ನೂ ಫ್ರಾನ್ಸನ್ನೂ ಸಂಪರ್ಕಿಸುತ್ತದೆ(ಚಿತ್ರ-3). ನ್ಯೂಯಾರ್ಕಿನ ಬಳಿ ಇರುವ ನೀರುಪೂರೈಕೆ ಸುರಂಗ ಪ್ರಪಂಚದಲ್ಲೇ ಅತಿ ದೀರ್ಘವಾದದ್ದು (168.9 ಕಿಮೀ ಉದ್ದ). ರಸ್ತೆ ಸುರಂಗಗಳ ಪೈಕಿ ಅತಿ ದೀರ್ಘವಾದದ್ದು ನಾರ್ವೆಯಲ್ಲಿದೆ. ಇದರ ಉದ್ದ 24.5 ಕಿಮೀ. ರೈಲು ಸುರಂಗಗಳ ಪೈಕಿ ಈ ಹಿರಿಮೆ ಜಪಾನಿನ ಟ್ಸುಗಾಮಿ ಖಾರಿಯ ಅಡಿಯಲ್ಲಿರುವ 58.35 ಕಿಮೀ ಉದ್ದದ ಸೈಕಾನ್ ಸುರಂಗಕ್ಕೆ ಸಲ್ಲುತ್ತದೆ.
ಭಾರತದಲ್ಲಿ
[ಬದಲಾಯಿಸಿ]ಭಾರತದಲ್ಲಿ ರೈಲು ಮಾರ್ಗಗಳಿಗೆ, ನೀರುಸಾಗಣೆಗೆ ಸುರಂಗಗಳು ಹೇರಳವಾಗಿ ನಿರ್ಮಾಣವಾಗಿವೆ, ರಸ್ತೆಗೆ ಬಲು ವಿರಳ. ಭಾರತದ ಅತಿ ದೀರ್ಘ ಸುರಂಗ ಹಿಮಾಚಲ ಪ್ರದೇಶದ ನಾತ್ಛಾಝಕ್ರಿ ಜಲವಿದ್ಯುತ್‍ಯೋಜನೆಯ ಹೆಡ್‍ರೇಸ್ ಸುರಂಗ. ಇದರ ವ್ಯಾಸ 10.15ಮೀ, ಉದ್ದ 27.4 ಕಿಮೀ. ಪಶ್ಚಿಮ ಕರಾವಳಿಯಲ್ಲಿ ಸಾಗುವ 760 ಕಿಮೀ ಉದ್ದದ ಕೊಂಕಣ ರೈಲು ಮಾರ್ಗದಲ್ಲಿ 75 ಸುರಂಗಗಳಿವೆ. ಅವುಗಳ ಪೈಕಿ ಕರ್ಬುದೆ ಸುರಂಗದ ಉದ್ದ 6.5 ಕಿಮೀ. ಇದು ಭಾರತದ ಅತಿ ಉದ್ದದ ರೈಲು ಸುರಂಗ. ಕಾಶ್ಮೀರದಲ್ಲಿಯ ಶ್ರೀನಗರ ರಸ್ತೆಗೆ ಹಿಮಾಲಯದ ಬಾನಿಹಾಳ್ ಎಂಬಲ್ಲಿ 2.4 ಕಿಮೀ ಉದ್ದದ ಜೋಡಿ ಸುರಂಗಗಳಿವೆ (ಜವಾಹರ್ ಸುರಂಗ). ಪುಣೆ-ಮುಂಬೈ ಎಕ್ಸ್‍ಪ್ರೆಸ್ ವೇಯಲ್ಲಿ ಹಲವು ಸುರಂಗಗಳಿವೆ. ಕೋಲ್ಕತದಲ್ಲಿ ಬೃಹನ್ನಗರ ರೈಲು ಸಾರಿಗೆಗಾಗಿ ಸುರಂಗಗಳನ್ನು ನಿರ್ಮಿಸಿದ್ದಾರೆ. ಈ ಭೂಗತ ರೈಲುಮಾರ್ಗ ವ್ಯವಸ್ಥೆ ಭಾರತದಲ್ಲಿ ಮೊದಲನೆಯದು.
ಕರ್ನಾಟಕದಲ್ಲಿ ಮೊದಲ ಸುರಂಗವನ್ನು ಕೃಷ್ಣರಾಜ ಸಾಗರದ ಅಣೆಯ ಬಲದಂಡೆಯಲ್ಲಿ ನಾಲೆಗಾಗಿ ನಿರ್ಮಿಸಿದರು. ಇದರ ಉದ್ದ 107 ಮೀ. ವಿಶ್ವೇಶ್ವರಯ್ಯ ನಾಲೆಗೆ ಹುಲಿಕೆರೆ ಎಂಬಲ್ಲಿ 2.805 ಕಿಮೀ ಉದ್ದದ ಸುರಂಗವಿದೆ. ಕೊಂಕಣ ರೈಲು ಮಾರ್ಗದಲ್ಲಿರುವ 2.96 ಕಿಮೀ ಉದ್ದದ ಕಾರವಾರ ಸುರಂಗ ಕರ್ನಾಟಕದ ದೀರ್ಘತಮ ರೈಲು ಸುರಂಗ. 9.76 ಕಿಮೀ ಉದ್ದದ ಬಾಗೂರು-ನವಿಲೆ ಸುರಂಗ ಕರ್ನಾಟಕ ರಾಜ್ಯದಲ್ಲಿ ಅತಿ ದೀರ್ಘ ಸುರಂಗ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Trans Global Highway and proposed tunnels.
- Royal Engineers Museum British Army First World War Tunnelling.
- ITA-AITES International Tunnelling Association
- Tunnels & Tunnelling International magazine
- Project Triton – Trentino Research & Innovation for Tunnel Monitoring at "DISI" (Dipartimento di Ingegneria e Scienza dell'Informazione) (University of Trento) Italy
- Pipe Jacking