ಭಾರತದ ಸ್ವಾತಂತ್ರ್ಯ ಚಳುವಳಿ
ಭಾರತದಲ್ಲಿ ಸ್ವಾತಂತ್ರ್ಯ ಸಮರದ ಹೋರಾಟ ಮೂರು ಹಂತದಲ್ಲಿ ನಡೆಯುತ್ತದೆ.
- ದೇಶೀಯ ರಾಜರು ಬ್ರಿಟಿಷರ ವಿರುದ್ಧ ಹೋರಾಡಿದ್ದು ಮೊದಲನೆಯದು.
- ದೇಶಪ್ರೇಮಿಗಳೂ ಸ್ವಾತಂತ್ರ್ಯಪ್ರಿಯ ವೀರ ಸರದಾರರೂ ಪಾಳೆಯಗಾರರೂ ಮತ್ತು ಇತರರು ಬ್ರಿಟಿಷರ ವಿರುದ್ಧ ಸಶಸ್ತ್ರ ಬಂಡಾಯವೆದ್ದು ಅವರ ಗುಂಡಿಗೆ ಎದೆಯೊಡ್ಡಿದ್ದು ಎರಡನೆಯದು.
- ಕಾಂಗ್ರೆಸ್ ಮತ್ತು ಗಾಂಧೀಜಿಯವರ ನೇತೃತ್ವದ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟ ಮೂರನೆಯದು.
ಬ್ರಿಟಿಷರು ದತ್ತು ಸ್ವೀಕಾರ ಕಾಯಿದೆ, ಸಹಾಯಕ ಸೈನ್ಯಪದ್ಧತಿ ಮತ್ತು ಅವರ ಒಡೆದು ಆಳುವ ಕುಟಿಲನೀತಿಯಿಂದ ಭಾರತದ ಎಲ್ಲ ರಾಜ್ಯಗಳನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡರು. ಅದರಲ್ಲಿ ಕೆಲವೊಂದು ರಾಜ್ಯಗಳು ಅವರ ಹಿಡಿತಕ್ಕೆ ಸಿಕ್ಕಿರಲಿಲ್ಲ. ಬ್ರಿಟಿಷರ ರಾಜ್ಯದಾಹ ಮತ್ತು ಆಕ್ರಮಣನೀತಿಯೇ ಈ ಹೋರಾಟಗಳಿಗೆ ಮೂಲ. ದೇಶೀಯ ರಾಜರು ತಮ್ಮ ರಾಜ್ಯ ಮತ್ತು ಹಕ್ಕುಗಳನ್ನು ಕಾಯ್ದುಕೊಳ್ಳಬೇಕಾಗಿ ಬಂದಾಗ ಬ್ರಿಟಿಷರ ವಿರುದ್ಧ ಹೋರಾಡಬೇಕಾಯಿತು. ಅವರಲ್ಲಿ ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನರನ್ನು ಪ್ರಥಮವಾಗಿ ಗಮನಿಸಬೇಕು. ದಿನ ದಿನಕ್ಕೆ ಬೆಳೆಯುತ್ತಿದ್ದ ಬ್ರಿಟಿಷರ ಬಲವನ್ನು ಗಮನಿಸಿದ ಹೈದರ್ ಮರಾಠರ ಮತ್ತು ಹೈದರಾಬಾದಿನ ನಿಜಾಮನ ಸಹಕಾರದೊಂದಿಗೆ ಕೆಲವು ಸಾರಿ ಹೋರಾಡಿದ. ಆದರೆ ಮರಾಠರೂ ನಿಜಾಮನೂ ಬ್ರಿಟಿಷರ ಕಡೆಯೇ ಸೇರಿಹೋದದ್ದು ಸ್ವಾತಂತ್ರ್ಯ ಸಂಗ್ರಾಮದ ದಿಕ್ಕನ್ನೇ ಬದಲಿಸಿತೆನ್ನಬಹುದು. ಹೈದರನ ಅಕಾಲಮರಣ ಬ್ರಿಟಿಷರಿಗೆ ಅನುಕೂಲ ಪರಿಸ್ಥಿತಿಯಾಯಿತು. ಟಿಪ್ಪುಸುಲ್ತಾನ್ ತಂದೆಯಂತೆಯೇ ಹೋರಾಟವನ್ನು ಮುಂದುವರಿಸಿದ. ಆದರೆ ನಾಲ್ಕನೆಯ ಮೈಸೂರು ಯುದ್ಧದಲ್ಲಿ ಆತ ಮರಣವನ್ನಪ್ಪಿದ (೧೭೯೯). ಅವನ ಸಾವಿನೊಂದಿಗೆ ಅಂದಿನ ಮೈಸೂರು ರಾಜ್ಯ ಹರಿದು ಹಂಚಿಹೋಯಿತು.[೧]
ಕರ್ನಾಟಕದಲ್ಲಿ ನಡೆದ ಹೋರಾಟಗಳು
ಕರ್ನಾಟಕದಲ್ಲಿ ಸಶಸ್ತ್ರ ಬಂಡಾಯದ ಹೋರಾಟವನ್ನು ಕಾಣುತ್ತೇವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಗೆ ಸೇರಿದ ಶೂರ ಧೋಂಡಿಯ ವಾಘ 1780ರಲ್ಲಿ ಹೈದರನ ಸೈನ್ಯ ಸೇರಿ ತರಬೇತಿ ಪಡೆದು ಓಡಿಹೋಗಿದ್ದವನು. ಟಿಪ್ಪುವಿನ ಆಹ್ವಾನಕ್ಕೆ ಕಿವಿಗೊಟ್ಟು ಮತ್ತೆ ಶ್ರೀರಂಗಪಟ್ಟಣಕ್ಕೆ ಬಂದಾಗ ಬಲಾತ್ಕಾರದಿಂದ ಮುಸಲ್ಮಾನನಾದ. 1799ರಲ್ಲಿ ಶ್ರೀರಂಗಪಟ್ಟಣದ ಪತನದ ಕಾಲದಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಬಿದನೂರು, ಶಿಕಾರಿಪುರ ಪ್ರದೇಶಗಳ ಜನರನ್ನು ಸಂಘಟಿಸಿದ. ಐಗೂರಿನ ಕೃಷ್ಣಪ್ಪನಾಯಕ, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಹೆಗ್ಗಡೆ, ಬಳ್ಳಾರಿಯ ರಾಯದುರ್ಗದ ಪಾಳೆಯಗಾರ ಮತ್ತು ಆನೆಗೊಂದಿಯ ಪಾಳೆಯಗಾರರ ನೆರವಿನಿಂದ ಬ್ರಿಟಿಷರ ಎದುರಾಗಿ ಬಂಡಾಯ ಹೂಡಿದ. ಲೋಂಡಾದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಲು ಬಂದ ಮರಾಠ ಸೇನಾನಿ ಗೋಖಲೆಯನ್ನು ಕೊಂದ. ಬ್ರಿಟಿಷ್ ವಿರೋಧಿಗಳನ್ನೆಲ್ಲ ಸಂಘಟಿಸಲು ಪ್ರಯತ್ನಿಸಿದ. ಇವನ ಚಟುವಟಿಕೆಯನ್ನು ಬ್ರಿಟಿಷರು ಸಹಿಸಲಾರದೆ ಹೋದರು. ಆರ್ಥರ್ ವೆಲ್ಲೆಸ್ಲಿ ಧೋಂಡಿಯನನ್ನು ಹಿಡಿಯಲು ಟೋರಿನ್, ಸ್ಟೀವನ್‍ಸನ್ ಮತ್ತು ಪೇಟ್ಕರ್ ಎಂಬ ಮೂರು ಮಂದಿ ಸೇನಾಪತಿಗಳನ್ನು ಕಳುಹಿಸಿದ. ಧೋಂಡಿಯ ತಂಗಿದ್ದನೆಂಬ ಕೋಟೆ, ಸ್ಥಳಗಳನ್ನೆಲ್ಲ ಶೋಧಿಸುತ್ತ ಅವನ ಕಡೆಯವರನ್ನೆಲ್ಲ ಕೊಲ್ಲುತ್ತ ಬ್ರಿಟಿಷ್ ಸೇನೆ ದಾಂದಲೆ ನಡೆಸಿತು. ಕೊನೆಗೆ ಒಬ್ಬ ಸೈನಿಕ ಮತ್ತು ಧೋಂಡಿಯನ ಕೈಲಿ ಅನ್ನ ತಿಂದ ಸಲಬತ್ ಎಂಬ ದ್ರೋಹಿಗಳು ಕೊಟ್ಟ ಸುಳುವಿನ ಮೇಲೆ ಬ್ರಿಟಿಷ್ ಸೇನೆ ಧೋಂಡಿಯನ ಬೆನ್ನುಹತ್ತಿತು. 1800 ಸೆಪ್ಟೆಂಬರ್‍ನಲ್ಲಿ ರಾಯಚೂರು ಜಿಲ್ಲೆಯ ಕೋಣಗಲ್ಲಿನಲ್ಲಿ ಧೋಂಡಿಯ ವಾಘ ಮರಾಠರ, ನಿಜಾಮನ ಮತ್ತು ಆಂಗ್ಲರ ಮೂರು ಸೇನೆಗಳನ್ನು ಎದುರಿಸಿ ಹೋರಾಡುತ್ತ ಮಡಿದ. ಐಗೂರು ಕೃಷ್ಣಪ್ಪನಾಯಕ 1802 ಫೆಬ್ರವರಿಯವರೆಗೂ ಹೋರಾಡುತ್ತ ಕೊನೆಗೆ ಸುಬ್ರಹ್ಮಣ್ಯ ಘಟ್ಟದಲ್ಲಿ ಮಡಿದ. ಕೊಪ್ಪಳದ ಕೋಟೆಯನ್ನು ಗೆದ್ದುಕೊಂಡು ಬಂಡಾಯ ಹೂಡಿದ (1819) ವೀರಪ್ಪನನ್ನೂ ಬ್ರಿಟಿಷ್ ಸೇನೆ ಕೊಂದಿತು. 1820-21ರಲ್ಲಿ ಬಿದರೆ ಜಿಲ್ಲೆಯ ಸುಳಿಯಳ್ಳಿ ದೇಶಮುಖ್, ತಿರುಮಲರಾವ್ ಮತ್ತು ಮೇಘಶ್ಯಾಮ್ ದೇಶಮುಖರು ಬಂಡಾಯದ ಮುಂದಾಳಾಗಿದ್ದರು. 1824ರಲ್ಲಿ ಬಿಜಾಪುರ ಜಿಲ್ಲೆಯ ಸಿಂದಗಿಯ ಬಂಡಾಯವನ್ನು ಇಂಗ್ಲಿಷ್ ಸೇನೆ ಕ್ರೌರ್ಯದಿಂದ ಹತ್ತಿಕ್ಕಿತು. ಸಿಂದಗಿಯ ಬಂಡಾಯಗಾರರಾಗಿದ್ದ ದಿವಾಕರ ದೀಕ್ಷಿತ, ರಾವ್‍ಜಿ ರಾಸ್ತಿಯ, ಬಾಳಪ್ಪ ದೇಶಪಾಂಡೆ, ಅಲೂಪ ಪಿಂಡಾರಿ, ಶೆಟ್ಟಿಯಪ್ಪ ಮತ್ತು ಶೀನಪ್ಪ ಇವರನ್ನು ಹಿಡಿದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಬ್ರಿಟಿಷ್ ಸರ್ಕಾರ ಘೋಷಿಸಿತ್ತು. ದೇಶದ್ರೋಹಿ ಅಣ್ಣಪ್ಪ ಪಟಕಿ ಎಂಬಾತ ಮೋಸ ಬಗೆದ. ಸಿಂದಗಿ ಬ್ರಿಟಿಷರ ವಶವಾಯಿತು, ಬಂಡಾಯಗಾರರೆಲ್ಲ ಸೆರೆಯಾದರು.
ಕಿತ್ತೂರಿನ ಬಂಡಾಯ
ಬ್ರಿಟಿಷರು ವಾರಸುದಾರರಿಲ್ಲವೆಂಬ ನೆಪದಿಂದ ಕಿತ್ತೂರು ಸಂಸ್ಥಾನವನ್ನು ನುಂಗಲು ಹವಣಿಸಿದರು. ಬ್ರಿಟಿಷರಿಗೆ ಕಿತ್ತೂರಿನ ಮೇಲೆ ಮೊದಲಿ ನಿಂದಲೂ ಕಣ್ಣಿತ್ತು. ಉದಾಹರಣೆಯಾಗಿ 1822ರಲ್ಲೇ ಧಾರವಾಡದ ಕಲೆಕ್ಟರ್ ಥ್ಯಾಕರೆ ಕಿತ್ತೂರು ದೇಸಾಯಿಗೆ “ಕಳ್ಳಕಾಕರಿಗೆ ಆಶ್ರಯ ಕೊಡುತ್ತಿದ್ದೀಯೆ, ಸುತ್ತ ಮುತ್ತಣ ಪ್ರಾಂತದವರಿಗೆ ತೊಂದರೆಯಾಗುತ್ತಿದೆ” ಎಂದೆಲ್ಲ ಆಪಾದನೆ ಮಾಡಿದ್ದ.
ಕಿತ್ತೂರು ರಾಣಿ ಚೆನ್ನಮ್ಮ
ಕಿತ್ತೂರ ರಾಣಿ ಚೆನ್ನಮ್ಮ ಬ್ರಿಟಿಷರ ಕುಟಿಲ ನೀತಿಯನ್ನರಿತು ಯುದ್ಧಸನ್ನದ್ಧಳಾದಳು. ಕೊಲ್ಲಾಪುರದ ಅರಸ ಬ್ರಿಟಿಷರ ಕೈಗೊಂಬೆಯೆನ್ನುವುದು ತಿಳಿಯದೆ ಚೆನ್ನಮ್ಮ ಅವನ ಸಹಾಯ ಬೇಡಿದಳು. ಅವನಿಂದ ಬ್ರಿಟಿಷರಿಗೆ ವಿಷಯ ತಿಳಿದು ಅವರು ಹೆದರಿದರು. ಬ್ರಿಟಿಷ್ ಸೈನಿಕರು ಕಿತ್ತೂರಿನ ಕೋಟೆಯನ್ನು ಮುತ್ತಿದರು. 1824 ಅಕ್ಟೋಬರ್ 23ರ ಮೊದಲ ಮುತ್ತಿಗೆಯಲ್ಲಿ ಥ್ಯಾಕರೆ ಸತ್ತು ಕಿತ್ತೂರ ವೀರರಿಗೆ ಜಯವಾಯಿತು. ಆದರೆ ಮುಂದೆ ದೇಶದ್ರೋಹಿಗಳ ಸಂಚಿನಿಂದ 1824 ನವೆಂಬರ್ 3ರ ಯುದ್ಧದಲ್ಲಿ ಕಿತ್ತೂರಿಗೆ ಸೋಲಾಯಿತು. ಚೆನ್ನಮ್ಮನನ್ನು ಬಂಧಿಸಿ ಬೈಲಹೊಂಗಲದಲ್ಲಿ ಸೆರೆಹಾಕಿದರು. ಚೆನ್ನಮ್ಮ 1830 ಫೆಬ್ರವರಿ 30ರಂದು ಸೆರೆಯಲ್ಲೇ ಮೃತಳಾದಳು.
ಕಿತ್ತೂರಿನ ಪತನ
ಮುಂದೆ ರಾಜ್ಯ ಅಥವಾ ಸಂಸ್ಥಾನಗಳ ಮಟ್ಟದಲ್ಲಿ ಬಂಡಾಯ ನಡೆಯದಿದ್ದರೂ ಪಾಳೆಯಗಾರರೂ ಅನೇಕ ದೇಶಪ್ರೇಮಿಗಳೂ ಒಟ್ಟುಗೂಡಿ ಬ್ರಿಟಿಷರೊಂದಿಗೆ ಹೋರಾಡಿದರು. ಕಿತ್ತೂರಿನ ಪತನದ ಅನಂತರ ವೀರ ಸೈನಿಕ ಸಂಗೊಳ್ಳಿ ರಾಯಣ್ಣ ಕಿತ್ತೂರ ದತ್ತಕ ಶಿವಲಿಂಗಪ್ಪನ ಪರ ಬಂಡಾಯದ ನೇತೃತ್ವ ವಹಿಸಿ, ಬೀಡಿ ಊರಲ್ಲಿನ ಬ್ರಿಟಿಷ್ ಕಚೇರಿ ಸುಟ್ಟು (1830) ಮುಂದೆ ಅನೇಕ ಕಡೆಗಳಲ್ಲಿ ಬ್ರಿಟಿಷರ ಸೈನ್ಯಕ್ಕೆ ಮಣ್ಣುಮುಕ್ಕಿಸಿದ. ಆದರೆ ದ್ರೋಹಿಗಳ ಮೋಸದಿಂದ ಬಂಧಿತನಾಗಿ ಗಲ್ಲಿಗೆ ಏರಿಸಲ್ಪಟ್ಟ. ಕಿತ್ತೂರಲ್ಲಿ ಶಂಕ್ರಣ್ಣ (1833), ಗಜಪತಿ, ಸುನಾಯಿ ಶೆಟ್ಟಿ ಮತ್ತು ಕೊಟಿಗಿ (1836) ಇವರ ಬಂಡಾಯಗಳಾದವು. ರಾಯಣ್ಣನನ್ನು ಹಿಡಿದುಕೊಟ್ಟ ದ್ರೋಹಿಯ ಕೊಲೆಯಾಗಿ 1837-38ರಲ್ಲಿ ಇನ್ನೊಂದು ಬಂಡಾಯ ನಡೆಯಿತು.
ಕರ್ನಾಟಕದಲ್ಲಿ ಬಂಡಾಯ ಹೋರಾಟಗಾರರ ವಿಸ್ತರಣೆ
ಕಿತ್ತೂರಲ್ಲಿ ಈ ಬಂಡಾಯಗಳ ಸರಣಿ ನಡೆಯುತ್ತಿದ್ದಾಗಲೇ 1830-31ರಲ್ಲಿ ಬಿದನೂರಲ್ಲಿ ಬೂದಿಬಸಪ್ಪನೆಂಬ ವ್ಯಕ್ತಿಯ ನಾಯಕತ್ವದಲ್ಲಿ ಬಂಡಾಯವಾಯಿತು. ಬ್ರಿಟಿಷರ ಕಂದಾಯ ವಸೂಲಿ ನೀತಿಯ ಬಗ್ಗೆ ಅಸಮಾಧಾನ ತಳೆದ ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡದ ರೈತರು ಈ ಬಂಡಾಯದಲ್ಲಿ ವ್ಯಾಪಕವಾಗಿ ಪಾಲುಗೊಂಡರು. ಚಿತ್ರದುರ್ಗ, ತುಮಕೂರು, ಬೆಂಗಳೂರು ಜಿಲ್ಲೆಗಳಲ್ಲೂ ಇದರ ಪ್ರಭಾವ ಕಾಣಿಸಿತು. ಈ ಬಂಡಾಯ 1931ರಲ್ಲೇ ಕೊನೆಗೊಂಡರೂ ಬೂದಿಬಸಪ್ಪನ ಬಂಧನ 1834ರಲ್ಲಿ ಆಯಿತು. ಇದರ ಹಿಂದೆಯೇ 1835-37ರಲ್ಲಿ ಕೊಡಗಿನ ಬಂಡಾಯಗಳ ಸರಣಿ ಆರಂಭವಾಯಿತು. ಅಪರಂಪರಸ್ವಾಮಿ ಮತ್ತು ಕಲ್ಯಾಣಸ್ವಾಮಿ ಇವರು ಒಬ್ಬರ ಅನಂತರ ಒಬ್ಬರಾಗಿ ತಾವು ಕೊಡಗಿನ ಪದಚ್ಯುತ ರಾಜರ ವಂಶಸ್ಥರೆಂದು ಹೇಳಿಕೊಂಡು ಬಂಡು ಹೂಡಿ ಬಂಧಿತರಾದರು. ಕಲ್ಯಾಣಸ್ವಾಮಿಯ ಬಂಧನವಾದಾಗ ಪುಟ್ಟಬಸಪ್ಪ ನೆಂಬಾತ ತಾನೇ ಕಲ್ಯಾಣಸ್ವಾಮಿಯೆಂದು ಹೇಳಿಕೊಂಡು, ಕೊಡಗಿನ ಅರಸರ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಡು ಹೂಡಿದ. ಬಂಗವಾಡಿಯ ಬಂಗ ಅರಸನೂ ಈತನನ್ನು ಸೇರಿಕೊಂಡ. 1837 ಮೇ ತಿಂಗಳಿನಲ್ಲಿ ಪುಟ್ಟಬಸಪ್ಪನನ್ನು ಬಂಧಿಸಿ ಗಲ್ಲಿಗೇರಿಸಿದರು. ಬೆಳ್ಳಾರೆ, ಬಂಟವಾಳ, ಮಂಗಳೂರು, ಕಾಸರಗೋಡುಗಳವರೆಗೂ ಈ ಬಂಡಾಯ ವ್ಯಾಪಿಸಿತ್ತು.
ಸಾತಾರದ ಛತ್ರಪತಿಯ ಅಧಿಕಾರಿಯಾಗಿದ್ದ ನರಸಿಂಗ ದತ್ತಾತ್ರೇಯ ಪೇಟ್ಕರ್ ಸುರಪುರದ ಜಮಾದಾರ ಕೊಹೆರನ್ ಎಂಬಾತನ ಜೊತೆ ಸೇರಿ 1841 ಮೇನಲ್ಲಿ ಬಾದಾಮಿಯಲ್ಲಿ ಹೂಡಿದ ಬಂಡಾಯ ಸುಮಾರು ಒಂದು ತಿಂಗಳು ಸಾಗಿತು. 1852 ಮಾರ್ಚ್‍ನಲ್ಲಿ ಬಿದರೆ ಜಿಲ್ಲೆಯಲ್ಲಿ ಲಿಂಗಪ್ಪ ಎಂಬಾತ ಬಂಡಾಯವೇಳಲು ಬ್ರಿಟಿಷ್ ಸೇನೆಯ ನೆರವಿನಿಂದ ನಿಜಾಮನು ಅದನ್ನು ಹತ್ತಿಕ್ಕಿದ.
ಕರ್ನಾಟಕದಲ್ಲಿ ೧೮೫೭ರ ಸ್ವಾತಂತ್ರ್ಯ ಹೋರಾಟದ
ಅಖಿಲ ಭಾರತ ಮಟ್ಟದಲ್ಲಿ ೧೮೫೭ರಲ್ಲಿ ಭಾರತೀಯರು ಬ್ರಿಟಿಷರ ವಿರುದ್ಧ ಬಂಡಾಯವೆದ್ದಾಗ, ಕರ್ನಾಟಕದಲ್ಲೂ ಸ್ವಾತಂತ್ರ್ಯ ಹೋರಾಟ ಮತ್ತೆ ಬಿರುಸಾಯಿತು. ಮುಧೋಳ ಸಂಸ್ಥಾನಕ್ಕೆ ಸೇರಿದ್ದ ಹಲಗಲಿಯ ಬೇಡರು ಬಾಬಾಜಿ ನಿಂಬಾಳ್ಕರ್ ಎಂಬಾತನಿಂದ ಪ್ರೇರಿತರಾಗಿ ಅಸ್ತ್ರಗಳ ಕಾಯಿದೆಯನ್ನು (ನಿಶ್ಯಸ್ತ್ರೀಕರಣ) ಪ್ರತಿಭಟಿಸಿ 1857 ನವೆಂಬರ್‍ನಲ್ಲಿ ಬಂಡೆದ್ದರು. ಲೆಫ್ಟಿನೆಂಟ್ ಕರ್ನಲ್ ಮಾಲ್ಕಮ್ ಇವರ ವಿರುದ್ದ ಕಾರ್ಯಾಚರಣೆ ನಡೆಸಿದ. ಬೇಡನಾಯಕರಾದ ಜಡಗ್ಯಾ, ಬಾಳ್ಯಾ ಮುಂತಾದ 290 ಜನರನ್ನು ಬಂಧಿಸಿ 19 ಜನರನ್ನು ಗಲ್ಲಿಗೇರಿಸಲಾಯಿತು. ಗುಲ್ಬರ್ಗ ಜಿಲ್ಲೆಯ ಸುರಪುರದ ದೊರೆ ವೆಂಕಟಪ್ಪನಾಯಕ ಬ್ರಿಟಿಷರ ಬೆಳಗಾಂವಿಯ ಸೇನೆಯಲ್ಲಿ ದಂಗೆಯೇಳಲು ಪ್ರಚೋದನೆ ನೀಡಿದ್ದ ವಿಚಾರ ಬ್ರಿಟಿಷರಿಗೆ ತಿಳಿದು ಸಂಧಾನಗಳೆಲ್ಲ ಮುರಿದುಬಿದ್ದು ಯುದ್ಧವಾಯಿತು. ವೆಂಕಟಪ್ಪನಾಯಕ ಕೋಟೆಯಿಂದ ತಪ್ಪಿಸಿಕೊಂಡು, ಹೈದರಾಬಾದಿನ ನಿಜಾಮನ ಸಹಾಯ ಬೇಡಿದ. ಆದರೆ ನಿಜಾಮ ನಾಯಕನನ್ನು ಹಿಡಿದು ಬ್ರಿಟಿಷರಿಗೆ ಒಪ್ಪಿಸಿದ. ವಿಚಾರಣೆಯಾಗಿ ವೆಂಕಟಪ್ಪನಾಯಕನಿಗೆ ನಾಲ್ಕು ವರ್ಷ ಶಿಕ್ಷೆಯಾಗಿ, ದೂರದ ಬಂದೀಖಾನೆಗೆ ಅವನನ್ನು ಸಾಗಿಸುತ್ತಿದ್ದಾಗ ಆತ ದಾರಿಯಲ್ಲೆ ಆತ್ಮಹತ್ಯೆ ಮಾಡಿಕೊಂಡು ಮರಣಹೊಂದಿದ. ಧಾರವಾಡ ಜಿಲ್ಲೆಯ ನರಗುಂದದ ಪಾಳೆಯಗಾರ ಭಾಸ್ಕರರಾವ್ ಭಾವೆ (ಬಾಬಾಸಾಹೇಬ) ದತ್ತಕ ಪ್ರಕರಣದಿಂದಾಗಿ ಬ್ರಿಟಿಷರ ವಿರುದ್ಧ ಸಿಡಿದೆದ್ದ. ಮುಂಡರಗಿ ಭೀಮರಾಯನೆಂಬ ಬ್ರಿಟಿಷ್ ಸರ್ಕಾರದ ಮಾಜಿ ಅಧಿಕಾರಿ, ಹಮ್ಮಿಗೆಯ ಕೆಂಚನಗೌಡ, ಡಂಬಳ, ಸೊರಟೂರು ಮತ್ತು ಗೋವನಕೊಪ್ಪಗಳ ದೇಸಾಯರು ಇವನ ಜೊತೆ ಸಹಕರಿಸಿದರು. ನರಗುಂದ ಮುತ್ತಲು ಹೊರಟ ಮ್ಯಾನ್ಸನ್ ಎಂಬ ಅಧಿಕಾರಿಯನ್ನು ಸುರೇಬಾನ ಎಂಬಲ್ಲಿ ಭಾವೆ ಕೊಂದ. 1858 ಜೂನ್‍ನಲ್ಲಿ ಮಾಲ್ಕಮ್ ನರಗುಂದ ಕೋಟೆ ಮುತ್ತಿದ. ಬಾಬಾಸಾಹೇಬ ಕೋಟೆಯಿಂದ ಪಾರಾಗಿ, ಮುಂದೆ ವಂಚನೆಗೆ ಈಡಾಗಿ ಬಂಧಿತನಾಗಿ ಬೆಳಗಾಂವಿಯಲ್ಲಿ ಗಲ್ಲಿಗೇರಿಸಲ್ಪಟ್ಟ. ಇದೇ ಕಾಲಕ್ಕೆ ಮುಂಡರಗಿ ಭೀಮರಾಯ ಗದುಗಿನ ಖಜಾನೆ ಲೂಟಿಮಾಡಿ ಕೊಪ್ಪಳದುರ್ಗವನ್ನು ಕೇಂದ್ರವಾಗಿಟ್ಟುಕೊಂಡು ಬ್ರಿಟಿಷರನ್ನು ಪ್ರತಿಭಟಿಸಿದ. ಬ್ರಿಟಿಷ್ ಸೇನೆ ಕೋಟೆಯನ್ನು ಮುತ್ತಲು ಭೀಮರಾಯನೂ ಹಮ್ಮಿಗೆ ಕೆಂಚನಗೌಡನೂ ಹೋರಾಡಿ ಹತರಾದರು. ಅನೇಕರ ಬಂಧನವಾಗಿ 75 ಜನಕ್ಕೆ ಗಲ್ಲಾಯಿತು. ಮೇಲೆ ಹೇಳಿದ ಕೆಲವರಲ್ಲದೆ ಅನೇಕ ಮಂದಿ ದೇಶಭಕ್ತ ವೀರರು ಹೋರಾಡಿ ತಮ್ಮ ಪ್ರಾಣವನ್ನರ್ಪಿಸಿದ್ದಾರೆ. ಎಲ್ಲ ವೀರ ಹೋರಾಟಗಾರರನ್ನು ಬ್ರಿಟಿಷರು ನೇರವಾಗಿ ಸೋಲಿಸಲಾಗಲಿ, ಹಿಡಿಯಲಾಗಲಿ ಆಗದೆ ವಂಚನೆಯಿಂದ, ದ್ರೋಹಿಗಳ ಸಹಾಯದಿಂದ ಹಿಡಿಸಿರುವುದು ಗಮನಿಸಬೇಕಾದ ಅಂಶ. ಇಲ್ಲಿಗೆ 1857-58ರ ಸಶಸ್ತ್ರ ಸ್ವಾತಂತ್ರ್ಯ ಹೋರಾಟ ಕರ್ನಾಟಕದಲ್ಲಿ ಕೊನೆಯಾಯಿತೆನ್ನಬಹುದು.
ಅಹಿಂಸಾತ್ಮಕ ಕಾಂಗ್ರೆಸ್ ಪ್ರವೇಶ
ಕರ್ನಾಟಕದಲ್ಲಿ ಅಹಿಂಸಾತ್ಮಕ ಹೋರಾಟ ಕಾಂಗ್ರೆಸ್‍ನ ಪ್ರವೇಶ ದೊಂದಿಗೆ ಪ್ರಾರಂಭವಾಯಿತು. ಕರ್ನಾಟಕದ ಜನತೆಗೆ ದೊರಕಿದ ಪಾಶ್ಚಾತ್ಯ ಶಿಕ್ಷಣ, ಕರ್ನಾಟಕದ ಹಿಂದಿನ ಇತಿಹಾಸ ಮತ್ತು ಸ್ವಾತಂತ್ರ್ಯ ಹೋರಾಟದ ಅಭ್ಯಾಸ ಮತ್ತು ಅದರ ಜೊತೆ ಬಂದ ಸಾಮಾಜಿಕ ಚಳವಳಿಗಳು ಹಾಗೂ ಟಿಳಕರ ಮತ್ತು ಇತರರ ಪ್ರಭಾವದಿಂದ ಕರ್ನಾಟಕದಲ್ಲಿ ಸುಪ್ತವಾಗಿದ್ದ ರಾಷ್ಟ್ರೀಯ ಜಾಗೃತಿ ಮತ್ತೆ ಪ್ರಬಲವಾಯಿತು. ಅಖಂಡ ಭಾರತದೊಡನೆ ಕರ್ನಾಟಕವನ್ನೂ ಕುಟಿಲೋಪಾಯಗಳಿಂದ ತಮ್ಮ ಹಿಡಿತದಲ್ಲಿ ಭದ್ರಪಡಿಸಿಕೊಂಡಿದ್ದ ಬ್ರಿಟಿಷರನ್ನು ಬಲಪ್ರಯೋಗದಿಂದ ಗೆಲ್ಲುವ ಬದಲು ಅಸಹಕಾರ ಅಸ್ತ್ರದಿಂದ ಜಯಿಸಬೇಕೆಂದು ತೀರ್ಮಾನಿಸಿದ ಭಾರತದ ಜನತೆಗೆ ಕಾಂಗ್ರೆಸ್ ದಾರಿ ತೋರಿತು. 1885ರಲ್ಲಿ ಕಾಂಗ್ರೆಸ್ ಸ್ಥಾಪನೆ ಆದಾಗ ಬೆಳಗಾಂವಿ, ಬಳ್ಳಾರಿಗಳಿಂದ ಪ್ರತಿನಿಧಿಗಳು ಹೋಗಿದ್ದರು. 1893ರಲ್ಲಿ ಎ.ಒ. ಹ್ಯೂಮ್ ಬೆಳಗಾಂವಿ, ಧಾರವಾಡಗಳಿಗೆ ಭೇಟಿನೀಡಿ ಭಾಷಣ ಮಾಡಿದರು. ಬೆಳಗಾಂವಿಯಲ್ಲಿ 1895ರಲ್ಲಿ ದಿನ್‍ಶಾ ವಾಚ್ಛಾರ ಅಧ್ಯಕ್ಷತೆಯಲ್ಲೂ 1903ರಲ್ಲಿ ಧಾರವಾಡದಲ್ಲಿ ದಾಜಿ ಆಬಾಜಿ ಖರೆ ಅವರ ಅಧ್ಯಕ್ಷತೆಯಲ್ಲೂ ಮುಂಬಯಿ ಪ್ರಾಂತೀಯ ರಾಜಕೀಯ ಸಮ್ಮೇಳನ ಸೇರಿತು. ಧಾರವಾಡದ ಪರಿಷತ್ತಿಗೆ ಟಿಳಕರು, ಫಿರೋಜ್ ಮೆಹ್ತಾ ಬಂದಿದ್ದರು. ಟಿಳಕರು 1905ರಲ್ಲಿ ಬಳ್ಳಾರಿಗೂ 1906ರಲ್ಲಿ ಬೆಳಗಾಂವಿ, ಗುರ್ಲಹೊಸೂರು, ಬೈಲಹೊಂಗಲಗಳಿಗೂ ಭೇಟಿ ನೀಡಿ ಭಾಷಣ ಮಾಡಿದರು. ಬಂಗಾಲದ ವಿಭಜನೆಯನ್ನು ಪ್ರತಿಭಟಿಸಿ 1906-7ರಲ್ಲಿ ಧಾರವಾಡ, ಬೆಳಗಾಂವಿ, ಗದಗ, ಕಿತ್ತೂರು, ಅಳಣಾವರ, ಬಾಗಲಕೋಟೆ ಮುಂತಾದ ಊರುಗಳಲ್ಲಿ ಪ್ರತಿಭಟನಾ ಸಭೆಗಳೂ ವಿದೇಶೀ ವಸ್ತ್ರಗಳ ಬಹಿಷ್ಕಾರ ಮತ್ತು ದಹನವಾಯಿತು. ಬೆಳಗಾಂವಿಯಲ್ಲಿ ಮದ್ಯದ ಅಂಗಡಿಗಳ ಮುಂದೆ ಧರಣಿ ನಡೆದು 15 ಜನರಿಗೆ ಶಿಕ್ಷೆಯೂ ಆಯಿತು. ಬೆಳಗಾಂವಿ, ಧಾರವಾಡ, ಹುಬ್ಬಳ್ಳಿ, ನವಲಗುಂದ, ನರಗುಂದ, ಹಾನಗಲ್ಲು, ಅಗಡಿ, ಬಾಗಲಕೋಟೆ, ಬಾದಾಮಿ, ಬಿಜಾಪುರಗಳಲ್ಲಿ ರಾಷ್ಟ್ರೀಯ ಶಾಲೆಗಳ ಸ್ಥಾಪನೆ ಆಯಿತು. 1910ರ ವರೆಗೆ ಈ ಶಾಲೆಗಳು ನಡೆದವು. ಟಿಳಕರ ಕೇಸರಿಯೇ ಅಲ್ಲದೆ ರಾಜಹಂಸ, ಕರ್ನಾಟಕವೃತ್ತ, ಧನಂಜಯ, ಕರ್ನಾಟಕ ಕೇಸರಿ ಮುಂತಾದ ಕನ್ನಡ ಪತ್ರಿಕೆಗಳು ಆಗ ರಾಷ್ಟ್ರೀಯ ವಿಚಾರದತ್ತ ಜನರ ಗಮನ ಸೆಳೆಯುತ್ತಿದ್ದವು. 1907ರಲ್ಲಿ ಸೂರತ್ ಕಾಂಗ್ರೆಸ್ಸಿಗೆ ಬೆಳಗಾಂವಿಯ ಗಂಗಾಧರರಾವ್ ದೇಶಪಾಂಡೆ, ಧಾರವಾಡದ ಆಲೂರ ವೆಂಕಟರಾವ್, ಬಿಜಾಪುರದ ಶ್ರೀನಿವಾಸರಾವ್ ಕೌಜಲಗಿ ಇವರುಗಳು ತೆರಳಿ ಟಿಳಕರ ಪಕ್ಷವಹಿಸಿದರು.
ಚಳುವಳಿಗಳಿಗೆ ಕನ್ನಡಿಗರ ಪ್ರತಿಕ್ರಿಯೆ
ಹೋಮ್ ರೂಲ್ ಚಳವಳಿ
ಹೋಮ್ ರೂಲ್ ಚಳವಳಿ ಆರಂಭ ಆದಾಗ (1916) ಟಿಳಕರು ಬೆಳಗಾಂವಿ, ನಿಪ್ಪಾಣಿ, ಸಂಕೇಶ್ವರಗಳಲ್ಲಿ ಹೋಮ್ ರೂಲ್ ಲೀಗ್ ಸಂಘಟನೆಗೆ ಬಂದರು. ಆನಿಬೆಸೆಂಟರೂ ಅವರ ನ್ಯೂ ಇಂಡಿಯ ಪತ್ರಿಕೆಯೂ ಮೈಸೂರು ಸಂಸ್ಥಾನದಲ್ಲಿ ವಿಶೇಷ ಜಾಗೃತಿಗೆ ಕಾರಣವಾದವು. ಧಾರವಾಡ, ಉತ್ತರ ಕನ್ನಡದ ಸಿದ್ದಾಪುರ, ದಕ್ಷಿಣ ಕನ್ನಡದ ಮುಲ್ಕಿಗಳಲ್ಲೂ ಹೋಮ್ ರೂಲ್ ಲೀಗಿನ ಶಾಖೆಗಳು ಆರಂಭವಾಗಿ ಕರ್ನಾಟಕದ ಪ್ರಮುಖ ನಗರಗಳಲ್ಲಿ, ಮೈಸೂರು-ಬೆಂಗಳೂರುಗಳಲ್ಲೂ ಕೂಡ ಹರತಾಳ-ಮೆರವಣಿಗೆಗಳಾದವು.
ಅಸಹಕಾರ ಚಳವಳಿ
ಅಸಹಕಾರ ಚಳವಳಿ ಘೋಷಣೆ ಆಗುವ ಮೊದಲೇ ಕರ್ನಾಟಕದಲ್ಲಿ ಸಾಕಷ್ಟು ಜಾಗೃತಿಯಾಗಿತ್ತು. ಜಾಗೃತ ಭಾರತೀಯರು ಬ್ರಿಟಿಷರು ತಮ್ಮ ದೇಶದಲ್ಲಿ ಅನುಸರಿಸುತ್ತಿದ್ದ ರಾಜಕೀಯ ನೀತಿತತ್ತ್ವಗಳಿಗೂ ಭಾರತದಲ್ಲಿ ಅವರು ಅನುಸರಿಸುತ್ತಿದ್ದ ನೀತಿಗೂ ಇದ್ದ ಭಿನ್ನತೆಯನ್ನು ಅರಿತು ಕೊಂಡರು. ಇಂಗ್ಲೆಂಡಿನಲ್ಲಿದ್ದುದು ಉದಾರನೀತಿಯಾದರೆ ಭಾರತದಲ್ಲಿ ಇದ್ದದ್ದು ಪ್ರಗತಿವಿರೋಧ ನೀತಿ. ಇಂಗ್ಲೆಂಡಿನಲ್ಲಿ ಬ್ರಿಟಿಷರು ಪ್ರಜಾಭಿಪ್ರಾಯಕ್ಕೆ ತಲೆಬಾಗಿದ್ದರೆ ಭಾರತದಲ್ಲಿ ಸಾಮ್ರಾಜ್ಯ ನೀತಿಯನ್ನು ಅನುಸರಿಸುತ್ತಿದ್ದರು. ಈ ವಿಚಾರಗಳು ಭಾರತೀಯರಲ್ಲಿ ಅಸಮಾಧಾನವ ನ್ನುಂಟುಮಾಡಿದ್ದವು. ಈ ಕಾಲಕ್ಕೆ ಸರಿಯಾಗಿ ಗಾಂಧಿಯವರು ಮುಂದೆ ಬಂದರು, ಕರ್ನಾಟಕತ್ವದಲ್ಲಿ ಏಕೀಕರಣದ ಬೇಡಿಕೆಗಳು ರಾಷ್ಟ್ರೀಯತೆಗೆ ಪೂರಕವಾಗಿ ಬೆಳೆದು ಅಖಿಲ ಕರ್ನಾಟಕ ಪ್ರಥಮ ರಾಜಕೀಯ ಪರಿಷತ್ತು ಧಾರವಾಡದಲ್ಲಿ 1920ರಲ್ಲಿ ಸೇರಿತು. ನಾಗಪುರ ಕಾಂಗ್ರೆಸ್ ಸಮ್ಮೇಳನಕ್ಕೆ ಕರ್ನಾಟಕದಿಂದ 800 ಪ್ರತಿನಿಧಿಗಳು ತೆರಳಿದರು. ಆಗ ಅಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ಪ್ರಾಂತೀಯ ಕಾಂಗ್ರೆಸ್ ಘಟಕ ನೀಡಲು, ಗಂಗಾಧರರಾವ್ ದೇಶಪಾಂಡೆ ಅದರ ಪ್ರಥಮಾಧ್ಯಕ್ಷರಾದರು. ಅಸಹಕಾರದ ಕರೆಯಂತೆ ಅನೇಕರು ತಮ್ಮ ವೃತ್ತಿಯನ್ನು, ವಕೀಲಿ, ಕಾಲೇಜು ಮುಂತಾದವನ್ನು ತ್ಯಜಿಸಿದರು. ವಕೀಲಿ ತ್ಯಜಿಸಿದವರಲ್ಲಿ ಗಂಗಾಧರರಾವ್ ದೇಶಪಾಂಡೆ, ಕಾರ್ನಾಡ ಸದಾಶಿವರಾವ್, ಆಲೂರ ವೆಂಕಟರಾವ್, ಕೌಜಲಗಿ ಶ್ರೀನಿವಾಸರಾವ್ ಹಾಗೂ ಎಸ್.ಎಸ್. ಶಾಸ್ತ್ರಿ ಪ್ರಮುಖರು. ಕರ್ನಾಟಕದಲ್ಲಿ 50 ರಾಷ್ಟ್ರೀಯ ಶಾಲೆಗಳನ್ನು ಪ್ರಾರಂಭಿಸಲಾಯಿತು. ಬ್ರಿಟಿಷ್ ಕರ್ನಾಟಕದಲ್ಲಿ ರಾಜದ್ರೋಹಿ ಭಾಷಣ, ಲೇಖನ, ಸಾರಾಯಿ ಅಂಗಡಿ ಮುಂದೆ ಧರಣಿ ಮುಂತಾದ ಚಟುವಟಿಕೆಗಳಿಗಾಗಿ 100 ಜನ ಬಂಧಿತರಾದರು. ಧಾರವಾಡದಲ್ಲಿ 1921 ಜುಲೈನಲ್ಲಿ ನಡೆದ ಧರಣಿಯ ಕಾಲಕ್ಕೆ ಗೋಲೀಬಾರಾಗಿ ಮೂವರೂ ಬೆಂಗಳೂರಲ್ಲಿ, 1921 ನವೆಂಬರ್‍ನಲ್ಲಿ ಗೋಲೀಬಾರಾಗಿ ಇಬ್ಬರೂ ಮಡಿದರು. ಖಿಲಾಫತ್ ಚಳವಳಿಯಿಂದಾಗಿ ಕರ್ನಾಟಕದಲ್ಲೂ ಮುಸಲ್ಮಾನರು ಹೋರಾಟಕ್ಕೆ ಇಳಿದರು. ನಾಗಪುರ ಧ್ವಜಸತ್ಯಾಗ್ರಹದಲ್ಲಿ (1923) ಕರ್ನಾಟಕದ 50 ಜನರಾದರೂ ಬಂಧಿತರಾದರು. ಆ ಕಾಲದಲ್ಲೇ ಬಂಧಿತರಾದ ನಾ.ಸು.ಹರ್ಡೀಕರರು ಜೈಲಿನಲ್ಲಿದ್ದಾಗ ಹಿಂದುಸ್ಥಾನೀ ಸೇವಾದಳವೆಂಬ ಅಖಿಲ ಭಾರತ ಸಂಘಟನೆ ಕಟ್ಟಿದರು. ಹುಬ್ಬಳ್ಳಿ ಇದರ ಕೇಂದ್ರವಾಯಿತು. 1924ರಲ್ಲಿ ಬೆಳಗಾಂವಿಯಲ್ಲಿ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆಯಿತು. ಈ ಅಧಿವೇಶನದ ಕಾಲಕ್ಕೂ ಮುಂದೆ ನಡೆದ ಇತರ ಎಲ್ಲ ಚಳವಳಿಗಳ ಕಾಲಕ್ಕೂ ಸೇವಾದಳದ ಶಿಸ್ತಿನ ಸ್ವಯಂಸೇವಕ ಸೇವಕಿಯರು ಅಪೂರ್ವ ಸೇವೆ ಸಲ್ಲಿಸಿದರು.
ಕಾನೂನು ಭಂಗ ಚಳವಳಿ
1930ರಲ್ಲಿ ಕಾನೂನುಭಂಗ ಚಳವಳಿ ಆರಂಭ ಆದಾಗ ಕರ್ನಾಟಕದಲ್ಲಿ ಕಾಂಗ್ರೆಸ್ ವ್ಯಾಪಕವಾಗಿ ಸಂಘಟಿತವಾಗಿತ್ತು. ಉಪ್ಪಿನ ಸತ್ಯಾಗ್ರಹವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ಸಂಘಟಿಸಿತು. ಏಪ್ರಿಲ್ 13ರಂದು ಅನೇಕ ಸಹಸ್ರ ಜನರು ಭಾಗವಹಿಸಿ ಉಪ್ಪಿನ ಕಾನೂನನ್ನು ಮುರಿದರು. ಅಂಕೋಲದಲ್ಲಿ ಸತತವಾಗಿ 45 ದಿನ ಉಪ್ಪಿನ ಸತ್ಯಾಗ್ರಹ ನಡೆಯಿತಲ್ಲದೆ ಆ ಜಿಲ್ಲೆಯ ಇತರ ಕರಾವಳಿ ಕೇಂದ್ರಗಳಲ್ಲೂ ಇದೇ ರೀತಿ ಸತ್ಯಾಗ್ರಹವಾಗಿ ಉಪ್ಪಿನ ಕಾನೂನು ರದ್ದಾಯಿತು. ಕರ್ನಾಟಕದಲ್ಲಿ ಒಟ್ಟು 30 ಕೇಂದ್ರಗಳಲ್ಲಿ ಉಪ್ಪಿನ ಸತ್ಯಾಗ್ರಹವಾಯಿತು. ಈ ಪೈಕಿ ಮಂಗಳೂರು, ಮಲ್ಪೆ, ಧಾರವಾಡ ಜಿಲ್ಲೆಯ ಕಿರೇಸೂರ, ಯಾವಗಲ್ಲ, ಬಿಜಾಪುರದ ಜಿಲ್ಲೆಯ ಜಿಸನಾಳ ಮುಖ್ಯವಾದುವು. ಇದರ ಹಿಂದೆಯೇ ಕಾದಿಟ್ಟ ಅಡವಿಗಳಲ್ಲಿ ಮರ ಕಡಿದು ಅರಣ್ಯ ಸತ್ಯಾಗ್ರಹ, ಗೋಮಾಳ ತೆರಿಗೆ ಕೊಡದ ಸತ್ಯಾಗ್ರಹ, ಮದ್ಯದ ಅಂಗಡಿಗಳ ಮುಂದೆ ಧರಣಿ, ಈಚಲುಮರಗಳನ್ನು ಕಡಿದುಹಾಕುವುದು ಮುಂತಾದವೆಲ್ಲ ನಡೆದು ಧಾರವಾಡ ಜಿಲ್ಲೆಯ ಹಿರೇಕೆರೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ, ಸಿದ್ದಾಪುರ ಹಾಗೂ ಅಂಕೋಲ ತಾಲ್ಲೂಕುಗಳಲ್ಲಿ ಭೂಕಂದಾಯ ನಿರಾಕರಣ ಸತ್ಯಾಗ್ರಹವೂ ಆಯಿತು. 1931 ಮಾರ್ಚ್‍ನಲ್ಲಾದ ಗಾಂಧಿ-ಇರ್ವಿನ್ ಒಪ್ಪಂದದವರೆಗೆ ನಡೆದ ಈ ಚಳವಳಿಯಲ್ಲಿ ಬೆಳಗಾಂವಿ ಜಿಲ್ಲೆಯ 750 ಮಂದಿಯನ್ನು ಸೇರಿಸಿ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 1850 ಸ್ತ್ರೀ ಪುರುಷರು ಶಿಕ್ಷೆಗೆ ಒಳಗಾದರು.
1932-33ರಲ್ಲಿ ಚಳವಳಿ ಮತ್ತೆ ಆರಂಭವಾದಾಗ, ಮೇಲಿನಂತೆಯೇ ವಿವಿಧ ಸ್ವರೂಪದ ಚಳವಳಿಗಳಾದವು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಹಾಗೂ ಅಂಕೋಲ ತಾಲ್ಲೂಕುಗಳಲ್ಲಿ ಕರ ನಿರಾಕರಣ ಚಳವಳಿ ಇನ್ನಷ್ಟು ಉಗ್ರವಾಗಿ ಸಾಗಿ ಸಿದ್ದಾಪುರ ತಾಲ್ಲೂಕಿನ 420 ಕುಟುಂಬಗಳೂ ಅಂಕೋಲ ತಾಲ್ಲೂಕಿನ 400 ಕುಟುಂಬಗಳೂ ಸರ್ಕಾರದ ಎಲ್ಲ ವಿಧದ ದಬ್ಬಾಳಿಕೆ ಹಿಂಸೆಗಳನ್ನು ಕೊನೆತನಕ ಎದುರಿಸಿ ಹೋರಾಡಿ ಬರ್ಡೋಲಿಗೆ ಸರಿಗಟ್ಟುವ ತ್ಯಾಗಮಾಡಿ ಕರ್ನಾಟಕದ ಕೀರ್ತಿಗೆ ಕಾರಣರಾದರು. ಉತ್ತರಕನ್ನಡ ಜಿಲ್ಲೆ ಒಂದರಲ್ಲೇ 100 ಜನ ಸ್ತ್ರೀಯರ ಸಹಿತ 1,000 ಜನ ಶಿಕ್ಷೆಗೆ ಒಳಗಾದರು. ಇತರ ಬ್ರಿಟಿಷ್ ಜಿಲ್ಲೆಗಳಿಂದಲೂ ಸು.2,000 ಜನ ಕಾರಾಗೃಹವಾಸ ಅನುಭವಿಸಿದರು. 1937ರಲ್ಲಿ ಮದರಾಸು ಮತ್ತು ಮುಂಬಯಿ ವಿಧಾನಸಭೆಗಳಿಗೆ ಚುನಾವಣೆಗಳಾದಾಗ ಕರ್ನಾಟಕ ಜಿಲ್ಲೆಗಳಿಂದಲೂ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಿತು. ಜಿಲ್ಲಾ ಸಮಿತಿಗಳೆಲ್ಲ ಕಾಂಗ್ರೆಸ್ಸಿನ ವಶವಾದವು.
ಕಾಂಗ್ರೆಸ್ ಪ್ರನಾಳಿಕೆಗಳು
ಸಂಸ್ಥಾನ ಪ್ರದೇಶಗಳಲ್ಲಿ ಚಳವಳಿ ನಡೆಸಲು ಕಾಂಗ್ರೆಸ್ ಅನುಮತಿ ನೀಡಿರದಿದ್ದರೂ ಕಾಂಗ್ರೆಸ್ ಸಮಿತಿಗಳ ಸಂಘಟನೆ, ಖಾದಿ, ಅಸ್ಪøಶ್ಯತಾ ನಿರೋಧ ಮುಂತಾದ ರಚನಾತ್ಮಕ ಕಾರ್ಯಗಳಿಗೆ ಅನುಮತಿ ನೀಡಿತ್ತು. ಮೈಸೂರು ಸಂಸ್ಥಾನದಲ್ಲಿ (1921) ಇಡೀ ಸಂಸ್ಥಾನಕ್ಕೆ ಒಂದೇ ಜಿಲ್ಲಾ ಕಾಂಗ್ರೆಸ್ ಸಮಿತಿಯೆಂದು ಸಂಘಟಿಸಿದ್ದರು. ಎಸ್.ಎಸ್.ಸೆಟ್ಟೂರು ಇದರ ಅಧ್ಯಕ್ಷರೂ ಎನ್.ಎನ್.ಎಮ್. ರಜ್ಜಿ ಕಾರ್ಯದರ್ಶಿಗಳೂ ಆಗಿದ್ದರು. ಸೇವಾದಳದ ಸಂಘಟನೆ ಕೂಡ ಹಳೆಯ ಮೈಸೂರಲ್ಲಿ ಆಗಿ 1917ರಲ್ಲಿ ಸ್ಥಾಪನೆಗೊಂಡ ನ್ಯಾಷನಲ್ ಹೈಸ್ಕೂಲ್ ಸೇವಾದಳದ ಚಟುವಟಿಕೆಗಳ ಕೇಂದ್ರವಾಯಿತು. 1924 ಜನವರಿಯಲ್ಲಿ ಕೊಪ್ಪ ತಾಲ್ಲೂಕಿನ ಹರಿಹರಿಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹೊಸಕೊಪ್ಪ ಕೃಷ್ಣರಾಯರು ಸಂಘಟಿಸಿದ ಸಭೆಯೊಂದು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರದ ಬೇಡಿಕೆಯನ್ನು ಮಂಡಿಸಿತು. 1927ರಲ್ಲಿ ಗಾಂಧೀಜಿ ಖಾದಿ ಪ್ರಚಾರಕ್ಕಾಗಿ ಹಳೆಯ ಸಂಸ್ಥಾನದಲ್ಲಿ ಪ್ರವಾಸ ಮಾಡಿದರು. 1928 ಹಾಗೂ 29ರಲ್ಲಿ ಬೆಂಗಳೂರಲ್ಲಿ ಆದ ಗಣಪತಿ ಗಲಭೆಗಳು ಜನಜಾಗೃತಿಗೆ ಕಾರಣ ಆದವು. 1930 ಜನವರಿ 26ಕ್ಕೆ ಮೈಸೂರು ಸಂಸ್ಥಾನದಲ್ಲೆಲ್ಲ ಅನೇಕ ಕಡೆ ತ್ರಿವರ್ಣಧ್ವಜ ಹಾರಿಸಿ ಸ್ವಾತಂತ್ರ್ಯದಿನ ಆಚರಿಸಲಾಯಿತು. 1930-33ರ ಅವಧಿಯಲ್ಲಿ ಬ್ರಿಟಿಷ್ ಜಿಲ್ಲೆಗಳಲ್ಲಿ ನಡೆದ ಚಳವಳಿಗಳಲ್ಲಿ ಸಂಸ್ಥಾನದ ನೂರಾರು ಸೇವಾದಳ ಸ್ವಯಂಸೇವಕರು ಭಾಗವಹಿಸಿ ಜೈಲು ಕಂಡರು. ಬ್ರಿಟಿಷ್ ಪ್ರಾಂತಗಳಲ್ಲಿ ನಡೆದ 1937ರ ಚುನಾವಣೆಗಳಲ್ಲಿ ಕಾಂಗ್ರೆಸ್ ಸರ್ಕಾರಗಳು ಅಧಿಕಾರಕ್ಕೆ ಬಂದುದರಿಂದಲೂ ಅನ್ಯ ಕೆಲವು ಕಾರಣಗಳಿಂದಲೂ ಹೊಸದಾಗಿ ಹುಟ್ಟಿಕೊಂಡಿದ್ದ ಸಂಯುಕ್ತ ಪ್ರಜಾಪಕ್ಷ ಮತ್ತು ಕಾಂಗ್ರೆಸ್ ಒಂದಾಗಿ ಟಿ. ಸಿದ್ದಲಿಂಗಯ್ಯನವರ ಅಧ್ಯಕ್ಷತೆಯಲ್ಲಿ 1938 ಏಪ್ರಿಲ್‍ನಲ್ಲಿ ಮದ್ದೂರು ತಾಲ್ಲೂಕಿನ ಶಿವಪುರದಲ್ಲಿ ಮೈಸೂರು ಕಾಂಗ್ರೆಸ್ಸಿನ ಮೊದಲ ಅಧಿವೇಶನವಾಯಿತು. ಸಾವಿರಾರು ಜನ ಸೇರಿದ ಈ ಕಾರ್ಯಕ್ರಮದಲ್ಲಿ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿ ತ್ರಿವರ್ಣಧ್ವಜ ಹಾರಿಸಿ ಅನೇಕ ನಾಯಕರು ಬಂಧಿತರಾದರು. ಇಡೀ ಸಂಸ್ಥಾನದಲ್ಲಿ ಧ್ವಜಸತ್ಯಾಗ್ರಹವಾಗಿ ನೂರಾರು ಜನ ಜೈಲು ಕಂಡರು. ಏಪ್ರಿಲ್ ತಿಂಗಳ ಕೊನೆಗೆ ವಿದುರಾಶ್ವತ್ಥದಲ್ಲಿ ನಡೆದ ಕಾಂಗ್ರೆಸ್ ಸಭೆಯ ಕಾಲಕ್ಕೆ ಗೋಲೀಬಾರಾಗಿ ಕೆಲವರು ಸತ್ತರು. ಇದರಿಂದಾಗಿ ಸಂಸ್ಥಾನದಲ್ಲಿ ಅಪೂರ್ವ ಜಾಗೃತಿ ಉಂಟಾಯಿತು. ವಿದುರಾಶ್ವತ್ಥ ಮೈಸೂರಿನ ಜಲಿಯನ್‍ವಾಲಾಬಾಗ್ ಎಂದು ಪ್ರಸಿದ್ಧವಾಯಿತು. ಮೈಸೂರು ಪೋಲಿಸ್ ಠಾಣೆಯ ಕಟ್ಟಡಕ್ಕೆ ಹ್ಯಾಮಿಲ್ಟನ್ ಬಿಲ್ಡಿಂಗ್ ಎಂಬುದಾಗಿ ಒಬ್ಬ ಕುಖ್ಯಾತ ಬಿಳಿಯ ಪೋಲಿಸ್ ಅಧಿಕಾರಿಯೊಬ್ಬನ ಹೆಸರನ್ನು ಇಟ್ಟಾಗ ತಗಡೂರು ರಾಮಚಂದ್ರರಾಯರೂ ಎಂ.ಎನ್. ಜೋಯಿಸರೂ ಹ್ಯಾಮಿಲ್ಟನ್ ಸತ್ಯಾಗ್ರಹವನ್ನು ಸಂಘಟಿಸಲು 1929 ಫೆಬ್ರವರಿ 15ರಿಂದ ಅನೇಕರು ಬಂಧಿತರಾದರು. ಅದೇ ವರ್ಷ ಆಗಸ್ಟ್‍ನಲ್ಲಿ ಪ್ರತಿಬಂಧಕಾಜ್ಞೆ ಭಂಗಿಸಿ ಕೋಲಾರ ಚಿನ್ನದ ಗಣಿ ಪ್ರದೇಶ ಸಂದರ್ಶಿಸಿದ ಕಾಂಗ್ರೆಸ್ ಕಾರ್ಯಸಮಿತಿಯ ಅಧ್ಯಕ್ಷ ಎಚ್.ಸಿ. ದಾಸಪ್ಪ ಹಾಗೂ 12 ಮಂದಿ ಸದಸ್ಯರನ್ನು ಬಂಧಿಸಿದಾಗ ಅಲ್ಲಿ ಸತ್ಯಾಗ್ರಹವನ್ನು ಬಿರುಸಿನಿಂದ ನಡೆಸಿ ನೂರಾರು ಜನ ಬಂಧಿತರಾದರು. ಇದರ ಹಿಂದೆಯೇ ಜವಾಬ್ದಾರಿ ಸರ್ಕಾರದ ಬೇಡಿಕೆ ಒತ್ತಾಯಿಸಲು ಸಂಸ್ಥಾನದಲ್ಲಿ ಅರಣ್ಯ ಸತ್ಯಾಗ್ರಹವನ್ನು ಸೆಪ್ಟೆಂಬರ್‍ನಲ್ಲಿ ಆರಂಭಿಸಲು ಚಿತ್ರದುರ್ಗ ಜಿಲ್ಲೆಯ ತುರುವನೂರಲ್ಲಿ ಎಸ್. ನಿಜಲಿಂಗಪ್ಪ ಹಾಗೂ ಇತರರ ಬಂಧನವಾಯಿತು. ಅದರ ಅನಂತರ ಗ್ರಾಮಾಂತರ ಪ್ರದೇಶಗಳಲ್ಲಿ ಈ ಸತ್ಯಾಗ್ರಹ ಉಗ್ರವಾಗಿ ನಡೆದು 1600ಕ್ಕೂ ಮೇಲ್ಪಟ್ಟು ಜನಕ್ಕೆ ಶಿಕ್ಷೆಯಾಯಿತು. ಬಂಧಿತರಿಗೂ ಸತ್ಯಾಗ್ರಹಕ್ಕೆ ಬೆಂಬಲ ನೀಡಿದ ಗ್ರಾಮಸ್ಥರಿಗೂ ಪೋಲಿಸರು ಅಮಾನುಷ ಹಿಂಸೆ ಕೊಟ್ಟರು. ಮುಂದೆ ಗಾಂಧೀಜಿಯ ಸಲಹೆಯಂತೆ ಸತ್ಯಾಗ್ರಹ ನಿಂತು 1939,40,41ರ ಅವಧಿಯಲ್ಲಿ ನಡೆದ ಚುನಾವಣೆಗಳಲ್ಲಿ ಪುರಸಭೆ, ಜಿಲ್ಲಾ ಸಮಿತಿ ಮತ್ತು ಪ್ರಜಾಪ್ರತಿನಿಧಿ ಸಭೆಗಳಲ್ಲಿ ಕಾಂಗ್ರೆಸ್ ಅಪೂರ್ವ ವಿಜಯ ಗಳಿಸಿತು.
ಕರ್ನಾಟಕದಲ್ಲಿ ಹೊಸ ರಾಜಕೀಯ ಸಂಘಟನೆಗಳ ಉದಯ
ಹೈದರಾಬಾದು ಸಂಸ್ಥಾನದಲ್ಲಿ ಮೊದಲಿನಿಂದ ಜನರ ಹಕ್ಕುಗಳ ರಕ್ಷಣೆಗೆ ಮುಂದಾದ ಸಂಸ್ಥೆ ಆರ್ಯಸಮಾಜ. 1920ರಲ್ಲಿ ರಾಯಚೂರಿನಲ್ಲಿ ಹಮ್‍ದರ್ದ್ ರಾಷ್ಟ್ರೀಯ ಶಾಲೆ ಆರಂಭಿಸಿದ ಪಂಡಿತ ತಾರಾನಾಥರನ್ನು ಅದೇ ವರ್ಷ ಸಂಸ್ಥಾನದಿಂದ ಗಡೀಪಾರು ಮಾಡಲಾಯಿತು. ಸಂಸ್ಥಾನದಲ್ಲಿ ರಾಜಕೀಯ ಚಳವಳಿಗೆ ಇದ್ದ ವಿರೋಧವನ್ನು ಗಮನಿಸಿ, ರಾಜಕೀಯ ಉದ್ದೇಶವನ್ನೇ ಇಟ್ಟುಕೊಂಡು, ಸಾಹಿತ್ಯ ಚಟುವಟಿಕೆಗಳ ಹೆಸರಲ್ಲಿ 1934ರಲ್ಲಿ ರಾಯಚೂರಲ್ಲಿ ಕಾರವಾನ ಶ್ರೀನಿವಾಸರಾಯರು ಅಧ್ಯಕ್ಷರಾಗಿ ಹೈದರಾಬಾದು ಕಾಂಗ್ರೆಸ್ ಸ್ಥಾಪನೆ ಆದಾಗ ಈ ಪರಿಷತ್ತು ಅದರಲ್ಲಿ ಐಕ್ಯಗೊಂಡಿತು. ಕಾಂಗ್ರೆಸ್ ಮೇಲೆ ಪ್ರತಿಬಂಧ ಹೇರಿದಾಗ ಐದು ಜನರ ಪ್ರಥಮ ತಂಡ ಹೈದರಬಾದಿನಲ್ಲಿ ಸತ್ಯಾಗ್ರಹ ಹೂಡಲು ಅದರಲ್ಲಿ ಕನ್ನಡಿಗರಾದ ಜನಾರ್ದನರಾವ್ ದೇಸಾಯಿ ಒಬ್ಬರಾಗಿದ್ದರು. ಮತ್ತೆ ಕರ್ನಾಟಕ ಪರಿಷತ್ತನ್ನು ಸಂಘಟಿಸಿ ದೇಸಾಯಿಯವರ ಅಧ್ಯಕ್ಷತೆಯಲ್ಲಿ ಬೀದರ್‍ನಲ್ಲಿ ಅದರ ಅಧಿವೇಶನವನ್ನು 1940ರಲ್ಲಿ ನಡೆಸಿದರು. ಇದೇ ಹೈದರಾಬಾದು ಕರ್ನಾಟಕದ ರಾಜಕೀಯ ಸಂಘಟನೆ ಆಯಿತು.
ಇತರ ಕನ್ನಡ ಸಂಸ್ಥಾನಗಳ ಪೈಕಿ ಸಾಂಗಲಿ, ಮಿರ್ಜಿ, ಜಮಖಂಡಿ, ಮುಧೋಳ ಹಾಗೂ ರಾಮದುರ್ಗಗಳಲ್ಲಿ ಪ್ರಜಾ ಚಳವಳಿ ಬಲವಾಗಿದ್ದು, ಬೇರೆ ಬೇರೆ ಕಿರು ಸಂಸ್ಥಾನಗಳಲ್ಲಿ ಇದ್ದ ಪ್ರಜಾ ಸಂಘಟನೆಗಳನ್ನು ಒಟ್ಟುಗೂಡಿಸಿ ಬೆಳಗಾಂವಿ ಜಿಲ್ಲೆಯ ಕುಡಚಿಯಲ್ಲಿ ದಕ್ಷಿಣ ಸಂಸ್ಥಾನಗಳ ಪ್ರಜಾಪರಿಷತ್ತನ್ನು ನರಿಮನ್ ಅವರ ಅಧ್ಯಕ್ಷತೆಯಲ್ಲಿ 1937ರಲ್ಲಿ ಸಂಘಟಿಸಿದರು. ಈ ಸಂಸ್ಥಾನಗಳ ಪೈಕಿ ರಾಮದುರ್ಗದಲ್ಲಿ ನಡೆದ ಚಳವಳಿ ಹಿಂಸಾರೂಪ ತಾಳಿ 1939 ಏಪ್ರಿಲ್‍ನಲ್ಲಿ ಎಂಟುಮಂದಿ ಪೋಲಿಸರ ಹತ್ಯೆಯಾಗಿ ಸಂಬಂಧಿಸಿದ ಆರು ಜನರಿಗೆ ಗಲ್ಲು ಶಿಕ್ಷೆ ಆದ ಪ್ರಕರಣ ಒಂದು ದುರಂತ ಘಟನೆ. ಎಲ್ಲ ಸಂಸ್ಥಾನಗಳಲ್ಲೂ ನಡೆದ ಘಟನೆಗಳು 1942ರ ಭಾರತ ಬಿಟ್ಟು ತೊಲಗಿ ಚಳವಳಿಗೆ ಹಿನ್ನೆಲೆ ಒದಗಿಸಿದವೆನ್ನಬಹುದು.
ಗಾಂಧೀ ನೇತೃತ್ವದ ಸ್ವಾತಂತ್ರ್ಯ ಚಳುವಳಿ
1939ರಲ್ಲಿ ಎರಡನೆಯ ಮಹಾಯುದ್ಧ ಆರಂಭವಾದಾಗ ಬ್ರಿಟಿಷ್ ಪ್ರಾಂತಗಳಲ್ಲಿನ ಕಾಂಗ್ರೆಸ್ ಸರ್ಕಾರಗಳು ರಾಜೀನಾಮೆ ನೀಡಿದ್ದರ ಹಿಂದೆಯೆ ಯುದ್ಧವಿರೋಧೀ ವೈಯಕ್ತಿಕ ಸತ್ಯಾಗ್ರಹಕ್ಕೆ ಗಾಂಧೀಜಿ ಕರೆ ನೀಡಲು ಕರ್ನಾಟಕದ ಜಿಲ್ಲೆಗಳಲ್ಲಿ ನೂರಾರು ಸತ್ಯಾಗ್ರಹಿಗಳು 1940-41ರಲ್ಲಿ ವೈಯಕ್ತಿಕ ಸತ್ಯಾಗ್ರಹ ನಡೆಸಿ ಜೈಲು ಕಂಡರು. ಇದರ ಹಿಂದೆಯೇ ಹೋರಾಡಿದ ಅಂತಿಮ ಘಟ್ಟವಾದ ಭಾರತ ಬಿಟ್ಟು ತೊಲಗಿ ಚಳವಳಿಯನ್ನು 1942 ಆಗಸ್ಟ್‍ನಲ್ಲಿ ಹೂಡಿದಾಗ ಸಂಸ್ಥಾನದಲ್ಲಿ ಎಲ್ಲ ಕಡೆ ಸಮಾನವಾಗಿ ಈ ಚಳವಳಿ ಸಾಗಿತು. ವಿದ್ಯಾರ್ಥಿಗಳೂ ಕಾರ್ಮಿಕರೂ ಬೃಹತ್ ಪ್ರಮಾಣದಲ್ಲಿ ಚಳವಳಿಯಲ್ಲಿ ಪಾಲುಗೊಂಡರಲ್ಲದೆ ಸರ್ಕಾರವನ್ನೇ ಸ್ಥಗಿತಗೊಳಿಸಬೇಕೆಂಬ ಉದ್ದೇಶದಿಂದ ಎಲ್ಲೆಡೆ ಬುಡಮೇಲು ಹಾಗೂ ವಿಧ್ವಂಸಕ ಕೃತ್ಯಗಳೂ ನಡೆದವು. ಚನ್ನಬಸಪ್ಪ ಅಂಬಿಲಿ ಅವರು ಅಧ್ಯಕ್ಷರಾಗಿದ್ದ ಒಂದು ಕ್ರಿಯಾಸಮಿತಿ ಮುಂಬಯಿ ಕೇಂದ್ರದಿಂದ ಚಳವಳಿಗೆ ಮಾರ್ಗದರ್ಶನ ಮತ್ತು ನೆರವು ನೀಡುತ್ತಿತ್ತು. ಬೆಳಗಾಂವಿ, ಧಾರವಾಡ ಜಿಲ್ಲೆಗಳಲ್ಲೂ ಮೈಸೂರು, ಬೆಂಗಳೂರು, ನಗರಗಳಲ್ಲೂ ಈ ಚಳವಳಿ ಉಗ್ರವಾಗಿತ್ತು. ಬೆಂಗಳೂರು, ಭದ್ರಾವತಿ, ಕೆ.ಜಿ.ಎಫ್. ದಾವಣಗೆರೆಗಳಲ್ಲಿ 33,000 ಕಾರ್ಮಿಕರು ಮೂರು ವಾರ ಸತತ ಸಂಪುಹೂಡಿದರು. ದೂರವಾಣಿ ತಂತಿ ಕತ್ತರಿಸುವುದು, ರೈಲುಕಂಬಿ ಕೀಳುವುದು ಎಲ್ಲೆಡೆ ಸಾಗಿತು. ಇದರಿಂದ ಬೆಂಗಳೂರು-ಗುಂತಕಲ್ಲು ನಡುವೆ ಎರಡು ವಾರ ರೈಲು ಓಡಾಟ ನಿಂತಿತು. ಕರ್ನಾಟಕದಲ್ಲಿ 26 ರೈಲು ನಿಲ್ದಾಣಗಳು ಹಾನಿಗೊಳಗಾದವು. ಬ್ರಿಟಿಷರ ವಿರುದ್ಧ ವಿಧ್ವಂಸಕ ಕೃತ್ಯ ನಡೆಸಲು ನೂರಾರು ಸ್ವಾತಂತ್ರ್ಯಯೋಧರು ಭೂಗತರಾಗಿ ಜೀವದ ಹಂಗುತೊರೆದು ಕೆಲಸಮಾಡಿದರು. ಬೆಂಗಳೂರು, ನಿಪ್ಪಾಣಿಗಳಲ್ಲಿ ಅಂಚೆಕಚೇರಿಗಳನ್ನು ಸುಟ್ಟರು. ಇದರಂತೆ ಗ್ರಾಮಚಾವಡಿ ಮುಂತಾದ ಸರ್ಕಾರೀ ಕೇಂದ್ರಗಳೂ ಹಾನಿಗೊಳಗಾದವು. ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಲ್ಲಿ ಗಾಂಧೀಜಿಯವರ ಬಂಧನ ಮತ್ತು ಮಹಾದೇವ ದೇಸಾಯಿಯವರ ಮರಣಗಳ ಬಗ್ಗೆ ನಡೆದ ಪ್ರತಿಭಟನಾ ಮೆರವಣಿಗೆಗಳ ಮೇಲೆ ಗೋಲೀಬಾರಾಗಿ 150 ಜನ ಸತ್ತರು. ಇದೇ ರೀತಿ ದಾವಣಗೆರೆಯಲ್ಲಿ 5, ಬೈಲಹೊಂಗಲದಲ್ಲಿ 7, ತಿಪಟೂರು, ನಿಪ್ಪಾಣಿ, ಹುಬ್ಬಳ್ಳಿ, ಕಡಿವೆ-ಶಿವಪುರಗಳಲ್ಲಿ (ಬೆಳಗಾಂವಿ ಜಿಲ್ಲೆ) ಒಂದೊಂದು ಮರಣಗಳಾದವು. ಕೊಲ್ಲಾಪುರ ಸಂಸ್ಥಾನದ ಗಾರಗೋಟಿ ಎಂಬಲ್ಲಿ ಕಂದಾಯದ ಹಣ ಲೂಟಿಮಾಡಲು ಯತ್ನಿಸಿ, ನಿಪ್ಪಾಣಿಯ ಏಳು ಸ್ವಾತಂತ್ರ್ಯ ಯೋಧರು ಅಸುನೀಗಿದರು. ಹಾವೇರಿ ತಾಲ್ಲೂಕು ಹೊಸರಿತ್ತಿಯಲ್ಲಿ 1943 ಏಪ್ರಿಲ್ 1ರಂದು ಹಪ್ತೆ ಲೂಟಿಮಾಡುವ ಯತ್ನದಲ್ಲಿ ಸ್ವಾತಂತ್ರ್ಯಯೋಧರಾದ ಮೈಲಾರ ಮಹಾದೇವಪ್ಪ, ಮಡಿವಾಳರ ತಿರುಕಪ್ಪ, ಹಿರೇಮಠದ ವೀರಯ್ಯನವರು ಪೋಲಿಸರ ಗುಂಡಿಗೆ ಬಲಿಯಾದರು. ಹಾಸನ ಜಿಲ್ಲೆಯಲ್ಲಿ ಸಂತೆ ಸುಂಕದ ವಿರುದ್ಧ ವ್ಯಾಪಕ ಧರಣಿ ನಡೆದಿರಲು ಶ್ರವಣಬೆಳಗೊಳದಲ್ಲಿ ಪೋಲಿಸರ ದೌರ್ಜನ್ಯದ ವಿರುದ್ಧ ರೊಚ್ಚಿಗೆದ್ದ ಜನರ ಕಲ್ಲು ಎಸೆತಕ್ಕೆ ಒಬ್ಬ ಪೋಲಿಸ್ ಪೇದೆ ಅಸುನೀಗಿದ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರಲ್ಲಿ ಕಂದಾಯ ವಸೂಲಿ ವಿರುದ್ಧ ಪ್ರತಿಭಟಿಸಿ ಗ್ರಾಮವನ್ನು ಸ್ವತಂತ್ರ ಹಳ್ಳಿ ಎಂಬುದಾಗಿ ಸಾರಿದರು. ತಮ್ಮದೇ ಆದ ಸರ್ಕಾರ ರಚಿಸಿಕೊಂಡು ಗ್ರಾಮದ ಆಡಳಿತ ನಡೆಸತೊಡಗಿದರು. ಜನರನ್ನು ಹದ್ದಿಗೆ ತರಲು ಹೋದ ಅಮಲ್ದಾರರೂ ಪೋಲಿಸ್ ಇನ್ಸ್‍ಪೆಕ್ಟರರೂ ನಿರಾಯುಧ ಹಳ್ಳಿಗರ ಮೇಲೆ ಲಾಠಿಪ್ರಯೋಗ ನಡೆಸಿದಾಗ ರೊಚ್ಚಿಗೆದ್ದ ಜನರ ಏಟಿನಿಂದ ಅಮಲ್ದಾರರೂ ಪೋಲಿಸ್ ಆಧಿಕಾರಿಯೂ ಸತ್ತರು. ಈ ಪ್ರಕರಣದಲ್ಲಿ ಪೋಲಿಸರ ಅಸಾಧಾರಣ ದೌರ್ಜನ್ಯಕ್ಕೆ ಆ ಊರವರು ಒಳಗಾದರಲ್ಲದೆ 1943 ಮಾರ್ಚ್‍ನಲ್ಲಿ ಐದು ಮಂದಿಯನ್ನು ಗಲ್ಲಿಗೇರಿಸಿ ಅಂದಿನ ಬ್ರಿಟಿಷ್ ಸರ್ಕಾರ ತನ್ನ ಸೇಡನ್ನು ತೀರಿಸಿಕೊಂಡಿತು. 1942-43ರಲ್ಲಿ ಚಳವಳಿ ಉಗ್ರವಾಗಿ ಸಾಗಿತು. ಇಡೀ ಕರ್ನಾಟಕದಲ್ಲಿ 7,000 ಜನ ಶಿಕ್ಷೆಗೆ ಒಳಗಾದರು. ಕೊಡಗಿನಿಂದ 50 ಜನರೂ ಹೈದರಾಬಾದು ಕರ್ನಾಟಕದಿಂದ 200 ಜನರೂ ಆಗ ಜೈಲಿಗೆ ಹೋದರು. 1944 ಆಗಸ್ಟ್‍ನಲ್ಲಿ ಕ್ರಿಯಾಸಮಿತಿಯ ಸದಸ್ಯರಾಗಿದ್ದು ಭೂಗತರಾಗಿದ್ದ ರಂಗನಾಥ ದಿವಾಕರರು ಪೋಲಿಸರಿಗೆ ಶರಣಾಗುವವರೆಗೆ ಕರ್ನಾಟಕದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಚಳವಳಿ ಸಾಗಿಯೇ ಇತ್ತು.
ಭಾರತ ಒಕ್ಕೂಟ ರಚನೆ
ದೇಶ ಸ್ವತಂತ್ರವಾದಮೇಲೆ ಮೈಸೂರು ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ಸೇರಿಸಲು ಚಳವಳಿ ನಡೆಯಿತು. ಎಲ್ಲ ಪ್ರಮುಖ ಊರುಗಳಿಂದ ಮೈಸೂರಿಗೆ ಸತ್ಯಾಗ್ರಹಿಗಳ ಜಾತಾ ಕಾಲ್ನಡಿಗೆಯಿಂದ ಸಾಗಿದುದರ ಜೊತೆಗೆ ತಾಲ್ಲೂಕು ಕಚೇರಿಗಳ ಮುಂದೆ ಧರಣಿ ಮುಂತಾದವೂ ಸಂಸ್ಥಾನದ ಗಡಿಯಾಚೆಯ ಶಿಬಿರಗಳಿಂದ ಸಂಸ್ಥಾನದಲ್ಲಿ ಕೆಲವು ವಿಧ್ವಂಸಕ ಕೃತ್ಯಗಳೂ ನಡೆದವು. ಈ ಅಲ್ಪಕಾಲದ ಚಳವಳಿಯಲ್ಲಿ ಸು. 20 ಜನ ಅಸುನೀಗಿದರು. ಕಡೆಗೆ 42 ದಿನಗಳ ತೀವ್ರ ಸತ್ಯಾಗ್ರಹದ ಆನಂತರ ಕೆ.ಸಿ. ರೆಡ್ಡಿಯವರ ನೇತೃತ್ವದಲ್ಲಿ 1947 ಅಕ್ಟೋಬರ್ 24ರಂದು ಜವಾಬ್ದಾರಿ ಸರ್ಕಾರದ ಸ್ಥಾಪನೆಯಾಗಿ ಮೈಸೂರು ಭಾರತದ ಒಕ್ಕೂಟದಲ್ಲಿ ಸೇರಿತು.
ಹೈದರಾಬಾದಿನಲ್ಲಿ 1948 ಸೆಪ್ಟೆಂಬರಿನಲ್ಲಿ ಪೋಲಿಸ್ ಕಾರ್ಯಾಚರಣೆ ಆಗುವವರೆಗೂ ಸ್ಫೋಟಕ ಪರಿಸ್ಥಿತಿ ಮುಂದುವರಿಯಿತು. ಹೈದರಾಬಾದು ಕರ್ನಾಟಕದ ನೂರಾರು ತರುಣರು ಈ ಕಾಲದಲ್ಲಿ ಭಾರತದ ಒಕ್ಕೂಟದ ಪರ ಚಳವಳಿ ನಡೆಸಿ ಜೈಲು ಸೇರಿದರು. ಹೈದರಾಬಾದಿನ ಮತಾಂಧ ರಜಾಕಾರರು ಈ ಕಾಲದಲ್ಲಿ ನಡೆಸಿದ ಹಿಂಸೆ, ಅನಾಚಾರ, ಕೊಲೆಸುಲಿಗೆಗಳು ಲೆಕ್ಕವಿಲ್ಲದಷ್ಟು. ಈ ರಜಾಕಾರರಿಂದ ಪ್ರಾಣ, ಮಾನ ಕಳೆದುಕೊಂಡವರೆಷ್ಟೋ ಮಂದಿ. ಸಾವಿರಾರು ಮಂದಿ ನಿರಾಶ್ರಿತರಾದರು. ಈ ಕಾಲದಲ್ಲಿ ಕರ್ನಾಟಕದ ನೂರಾರು ಜನ ಗಡಿಯ ಈಚೆ ಶಿಬಿರಗಳನ್ನು ಏರ್ಪಡಿಸಿ ಗಡಿಯೊಳಗಿನ ಜನರಿಗೆ ರಜಾಕಾರರಿಂದ ರಕ್ಷಣೆ ನೀಡಲು ತಿಂಗಳುಗಟ್ಟಲೆ ಸಶಸ್ತ್ರರಾಗಿ ದುಡಿಯಬೇಕಾಯಿತು. ಈ ಕಾಲದಲ್ಲಿ ಕನ್ನಡಿಗರೇ ಆದ ಸ್ವಾಮಿ ರಮಾನಂದ ತೀರ್ಥರು ಹೈದರಾಬಾದು ಸಂಸ್ಥಾನದ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಜನರಿಗೆ ಯೋಗ್ಯ ಮಾರ್ಗದರ್ಶನ ನೀಡಿದರು. ಇಲ್ಲಿ ಉಲ್ಲೇಖಿಸಿರುವ ಸ್ವಾತಂತ್ರ್ಯವೀರರುಗಳಲ್ಲದೆ ಇತರ ಸಾವಿರಾರು ಮಂದಿ ವೀರರು ಕರ್ನಾಟಕದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ತಮ್ಮ ಪ್ರಾಣ ಅರ್ಪಿಸಿದ್ದಾರೆ. ಎಷ್ಟೋ ಮಂದಿ ಗುಪ್ತವಾಗಿ ಕಾರ್ಯಾಚರಣೆ ನಡೆಸಿ ಯಾರಿಗೂ ತಿಳಿಯದಂತೆಯೇ ಪೋಲಿಸರ ಗುಂಡಿಗೆ ಬಲಿಯಾಗಿದ್ದಾರೆ. ಒಟ್ಟಿನಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರ್ನಾಟಕದ ಕೊಡುಗೆ ಅಪಾರ.
ಉಲ್ಲೇಖ
- ↑ https://leverageedu.com/blog/revolt-of-1857/
ಭಾರತದ ಸ್ವಾತಂತ್ರ್ಯ | |
---|---|
ಚರಿತ್ರೆ: | ವಸಾಹತುಶಾಹಿ - ಈಸ್ಟ್ ಇಂಡಿಯಾ ಕಂಪನಿ - ಪ್ಲಾಸೀ ಕದನ - ಬಕ್ಸರ್ ಕದನ |
ತತ್ವಗಳು: | ರಾಷ್ಟ್ರೀಯತೆ - ಸ್ವರಾಜ್ - ಗಾಂಧಿವಾದ - ಸತ್ಯಾಗ್ರಹ - ಹಿಂದೂ ರಾಷ್ಟ್ರೀಯತೆ - ಸ್ವದೇಶಿ - ಸಮಾಜವಾದ |
ಘಟನೆ-ಚಳುವಳಿಗಳು: | ೧೮೫೭ರ ದಂಗೆ - ಬಂಗಾಳದ ವಿಭಜನೆ - ಕ್ರಾಂತಿಕಾರಿಗಳು - ಚಂಪಾರಣ ಮತ್ತು ಖೇಡಾ - ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ - ಅಸಹಕಾರ - ಸೈಮನ್ ಆಯೋಗ - ನೆಹರು ವರದಿ - ಉಪ್ಪಿನ ಸತ್ಯಾಗ್ರಹ - ೧೯೩೫ರ ಭಾರತ ಸರ್ಕಾರ ಕಾಯ್ದೆ - ಕ್ರಿಪ್ ಆಯೋಗ - ಭಾರತ ಬಿಟ್ಟು ತೊಲಗಿ - ಮುಂಬೈ ದಂಗೆ |
ಸಂಘಟನೆಗಳು: | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ - ಗದರ್ - ಹೋಂ ರೂಲ್ ಚಳುವಳಿ - ಭಾರತೀಯ ರಾಷ್ಟ್ರೀಯ ಸೇನೆ - ಆಜಾದ್ ಹಿಂದ್ - ಅನುಶೀಲನ ಸಮಿತಿ |
ನಾಯಕರು: | ಮಂಗಲ ಪಾಂಡೆ - ಝಾನ್ಸಿ ರಾಣಿ ಲಕ್ಷ್ಮೀಬಾಯಿ - ಬಾಲ ಗಂಗಾಧರ ತಿಲಕ್ - ಗೋಪಾಲ ಕೃಷ್ಣ ಗೋಖಲೆ - ಮಹಾತ್ಮಾ ಗಾಂಧಿ - ಸರ್ದಾರ್ ಪಟೇಲ್ - ಸುಭಾಷ್ ಚಂದ್ರ ಬೋಸ್ - ಜವಾಹರಲಾಲ್ ನೆಹರು - ಮೌಲಾನಾ ಆಜಾದ್ - ಚಂದ್ರಶೇಖರ್ ಆಜಾದ್ - ರಾಜಾಜಿ - ಭಗತ್ ಸಿಂಗ್ |
ಬ್ರಿಟಿಷ್ ಆಡಳಿತ: | ರಾಬರ್ಟ್ ಕ್ಲೈವ್ - ಲೂಯಿ ಮೌಂಟ್‌ಬ್ಯಾಟನ್ |
ಸ್ವಾತಂತ್ರ್ಯ: | ಕ್ಯಾಬಿನೆಟ್ ಆಯೋಗ - ಭಾರತದ ಸ್ವಾತಂತ್ರ್ಯ ಕಾಯ್ದೆ - ಭಾರತದ ವಿಭಜನೆ - ಭಾರತದ ರಾಜಕೀಯ ಒಗ್ಗೂಡುವಿಕೆ - ಭಾರತದ ಸಂವಿಧಾನ |