ಅಸ್ಸಾಂ
ಅಸ್ಸಾಂ | |
ರಾಜಧಾನಿ - ಸ್ಥಾನ |
ದಿಸ್ಪುರ್ - |
ಅತಿ ದೊಡ್ಡ ನಗರ | ಗುವಾಹತಿ |
ಜನಸಂಖ್ಯೆ (2004) - ಸಾಂದ್ರತೆ |
26,655,528 (14th) - 340/km² |
ವಿಸ್ತೀರ್ಣ - ಜಿಲ್ಲೆಗಳು |
78,438 km² (16th) - 27 |
ಸಮಯ ವಲಯ | IST (UTC+5:30) |
ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ಆಗೋಸ್ತು ೧೫,೧೯೪೭ - ಸಯ್ಯದ್ ಸಿಬ್ತೆ ರಜಿ - ತರುಣ್ ಗೊಗೋಯ್ - Unicameral (126) |
ಅಧಿಕೃತ ಭಾಷೆ(ಗಳು) | ಅಸ್ಸಾಮೀಸ್,ಬೋಡೋ,ಬಂಗಾಳಿ |
Abbreviation (ISO) | IN-AS |
ಅಂತರ್ಜಾಲ ತಾಣ: www.assam.gov.in | |
ಅಸ್ಸಾಂ ರಾಜ್ಯದ ಮುದ್ರೆ |
ಪೀಠಿಕೆ
[ಬದಲಾಯಿಸಿ](ಬ್ಲಾಗ್ ಮಾದರಿಯ ಪ್ರಬಂಧ ?)
- ತನ್ನಲ್ಲಿ ಅದ್ಭುತ ಸಾಹಿತ್ಯ,ಸಂಸ್ಕೃತಿ,ಪ್ರಾಕೃತಿಕ ಸಂಪತ್ತು ಇದ್ದರೂ ಅಸ್ಸಾಮ್ ತನ್ನದೇ ಆದ ಸಮಸ್ಯೆಗಳಲ್ಲಿ ಮುಳುಗಿದೆ,ಇದರಿಂದ ಈ ರಾಜ್ಯ ಮುಂಚೂಣಿಗೆ ಬರಲಾಗುತ್ತಿಲ್ಲ.ಇದೇ ಸಮಸ್ಯೆ ಉಳಿದ ಈಶಾನ್ಯ ರಾಜ್ಯಗಳಾದ ಮೇಘಾಲಯ, ತ್ರಿಪುರ, ಮಿಜೋರಾಮ್, ಮಣೀಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶಗಳನ್ನೂ ಕಾಡುತ್ತಿದೆ. ಸಪ್ತ ಸೋದರಿಯರ ನಾಡು ಎಂದೇ ಹೆಸರಾದ ಈ ರಾಜ್ಯಗಳ ಸಮಸ್ಯೆಗಳಲ್ಲಿಈ ಸಾಮ್ಯತೆ ಇದೆ. ಅಸ್ಸಾಮ್ ಈ ಎಲ್ಲಾ ತೊಂದರೆಗಳ ನಡುವೆ ತನ್ನ ಸಾಹಿತ್ಯ ಸಂಸ್ಕೃತಿಗಳನ್ನು ಪೋಷಿಸಿಕೊಂಡು ಬಂದಿದೆ.
- ಅಸ್ಸಾಮ್ ನಲ್ಲಿ ಉಳಿದ ಎಲ್ಲಾ ರಾಜ್ಯಗಳಿಗಿಂತಾ ಹೆಚ್ಚು ಬುಡಕಟ್ಟು ಜನಾಂಗದ ಜನತೆ ಇದ್ದಾರೆ. ಈ ಸಮೂಹವನ್ನು ಆರ್ಯನರು,ಅನಾರ್ಯರು ಅಥವಾ ಮಂಗೋಲಾಯ್ಡ್ ಮತ್ತು ಇಂಡೋ-ಇರಾನಿಯನ್ ಎಂದು ವಿಭಜಿಸಲಾಗುತ್ತದೆ. ಇದರೊಂದಿಗೆ ಬೋಡೋ, ಕಾರ್ಬಿ, ರಾಜಬನ್ಸಿ,ಮಿರಿ,ಮಿಶಿಮ ಮತ್ತು ರಭ ಮುಂತಾದ ಬುಡಕಟ್ಟುಗಳೂ ಇವೆ. ಇಂದಿನ ಪ್ರಖ್ಯಾತ ಟೆನ್ನಿಸ್ ಆಟಗಾರ ಸೋಮ್ದೇವ ದೇವ್ ವರ್ಮನ್ ಗೌಹಾಟಿಯಲ್ಲಿ ೧೯೮೫ ರಲ್ಲಿ ಹುಟ್ಟಿದರು. ಈತ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಆಟಗಳಲ್ಲಿ ಅನೇಕ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಈತ ಅಸ್ಸಾಂ ರಾಜ್ಯದ ಐಕಾನ್ ಇದ್ದಂತೆ. ಅಸ್ಸಾಂ ಎಂದರೆ ನೆನಪಾಗುವ ಮತ್ತೊಂದು ಅಂಶ ನಮ್ಮ ಮಿಲಿಟರಿಯ ಅಸ್ಸಾಂ ರೈಫಲ್ ಮತ್ತು ಅಸ್ಸಾಂ ರೆಜಿಮೆಂಟ್' ಇವು ಬ್ರಿಟಿಶರ ಕಾಲದಲ್ಲೇ ಸ್ಥಾಪಿಸಲ್ಪಟ್ಟು ಈಗ ತಮ್ಮ ಕೇಂದ್ರವನ್ನು ಶಿಲ್ಲಾಂಗನಲ್ಲಿ ಹೊಂದಿವೆ.
- ಅಸ್ಸಾಮ್ ಪುರಾತನ ದೇವಾಲಯಗಳ ನಾಡು. ಎಲ್ಲಿ ನೋಡಿದರೂ ಶಿವನ ದೇವಾಲಯಗಳೇ ಇವೆ. ಇವು ತಮ್ಮ ಗಾತ್ರ ಮತ್ತು ಸೌಂದರ್ಯದಿಂದ ಹೆಸರಾಗದಿದ್ದರೂ ತಮ್ಮ ಐತಿಹ್ಯಗಳಿಗೆ ಪ್ರಸಿದ್ದವಾಗಿವೆ. ಉದಾಹರಣೆಗೆ ಕಾಮಾಕ್ಯಾ ದೇವಾಲಯದ ಶಕ್ತಿ ದೇವತೆ ’ಬಹಿಷ್ಟೆಯಾಗುವ ಭಗವತಿ’ಎಂದು ಹೆಸರಾಗಿದ್ದಾಳೆ. ಇದರೊಂದಿಗೆ ರಾಷ್ಟ್ರಿಯ ಪಾರ್ಕ್,ಅಭಯಾರಣ್ಯಗಳು ಸಾಕಷ್ಟಿವೆ. ಅಸ್ಸಾಮ್ ಇವೇ ಕಾರಣಕ್ಕಾಗಿ ಪ್ರಸಿದ್ಧ. ಈಶಾನ್ಯ ರಾಜ್ಯಗಳನ್ನು ರಹಸ್ಯಗಳ ನಾಡು ಎಂದು ಇತಿಹಾಸಕಾರರು ಕರೆದಿದ್ದಾರೆ. ಈ ಏಳೂ ರಾಜ್ಯಗಳ ಗುಚ್ಚವನ್ನು ’ಸಿಲಿಗುರಿ ಕಾರಿಡಾರ್’ ಅಥವಾ ’ಚಿಕನ್ ನೆಕ್’ ಎಂದು ಕರೆಯುತ್ತಾರೆ. ಏಕೆಂದರೆ ಈ ಏಳೂ ರಾಜ್ಯಗಳನ್ನು ಭೂಪಟದಲ್ಲಿ ನೋಡಿದಾಗ ಕೋಳಿಯ ಕತ್ತಿನಂತೆ ಚಾಚಿಕೊಂಡಿರುವುದನ್ನು ಕಾಣಬಹುದು. ಇಲ್ಲಿನ ಪ್ರಮುಖ ಭಾಷೆಗಳು ಮಣಿಪುರಿ, ಖಾಸಿ, ಕಾಕೋ, ಹಮರ್, ಕುಕಿ ಮತ್ತು ಜೆಮೆನಾಗ. ಇಡೀ ರಾಜ್ಯದಲ್ಲಿ ಎಲ್ಲೆಲ್ಲೂ ಶಿವ ದೇವಾಲಯ ಮತ್ತು ಕಾಮಾಕ್ಯಾ ದೇವಾಲಯ ಇದ್ದು ಅಸ್ಸಾಮ್ ಕಾಮಾಕ್ಯಾ ಮಾತೆಯ ಮಡಿಲಂತೆ ಇದೆ. ಇಲ್ಲಿ ಪ್ರವಾಸ ಮಾಡಲು ಇಚ್ಚಿಸುವ ಜನ ಗೌಹಾಟಿ, ತೇಜ್ಪುರ ಮತ್ತು ದಿಬ್ರೂಗಡಗಳನ್ನು ಕೇಂದ್ರವಾಗಿರಿಸಿಕೊಂಡು ಸುತ್ತಬಹುದು.
ಇತಿಹಾಸ
[ಬದಲಾಯಿಸಿ]- ಅಸ್ಸಾಂನ ಇತಿಹಾಸ ಕ್ರಿಸ್ತ ಪೂರ್ವದಿಂದ ಆರಂಭವಾದ ಬಗ್ಗೆ ಸಾಕಷ್ಟು ಉಲ್ಲೇಖಗಳು ಇತಿಹಾಸದಲ್ಲಿ ನಮಗೆ ದೊರೆಯುತ್ತವೆ. ನಿಯೋಲಿಥಿಕ್ ಆದಿಮಾನವರ ಕೆಲ ಕುರುಹುಗಳು ಇಲ್ಲಿನ ರೋಂಗ್ರಾಮ್ ಬೆಟ್ಟ-ಗುಡ್ಡಗಳಲ್ಲಿ ದೊರೆತಿವೆ. ಅಸ್ಸಾಂ ಎಂಬ ಪದದ ಮೂಲದ ಬಗ್ಗೆ ಸಾಕಷ್ಟು ವಾದಗಳಿವೆ.ಈ ಪದ ಅಸ್ಸಾಂ ರಾಜ್ಯವನ್ನು ಆಳಿದ"ಅಹೋಂ" ವಂಶಸ್ಥರಿಂದ ಬಂದಿತು ಎಂದು ಹೇಳಲಾಗುತ್ತದೆ. ಅಸ್ಸಾಂ ರಾಜ್ಯವು ಏರು-ತಗ್ಗುಗಳಿಂದ ಕೂಡಿದ ರಾಜ್ಯವಾದುದರಿಂದ ’ಅಸಮ’ಎಂದು ಕರೆಯಲ್ಪಟ್ಟು ನಂತರ ಅಸ್ಸಾಂ ಆಯಿತೆಂದು ಹೇಳಲಾಗುತ್ತದೆ. ನಂತರ ಮಧ್ಯ ಏಷ್ಯಾದಿಂದ ಬಂದ ಆರ್ಯನರು ಇಲ್ಲಿ ನೆಲೆನಿಂತು ಹಿಂದೂ ಧರ್ಮವನ್ನು ಇಲ್ಲಿ ಹರಡಿದರು.ನಂತರ ಬಂದ ಮಂಗೋಲಿಯನರು, ದ್ರಾವಿಡರು, ಇರಾನಿಯರು, ಮುಸ್ಲಿಮರು, ಬೌದ್ಧರು ಹಾಗೂ ಕ್ರೈಸ್ತರು ಈ ರಾಜ್ಯದಲ್ಲಿ ನೆಲೆ ನಿಂತು ಇಲ್ಲಿನ ಸಂಸ್ಕೃತಿಯಲ್ಲಿ ಬೆರೆತು ಹೋದರೂ ತಮ್ಮ ಅಸ್ಥಿತ್ವವನ್ನು ಉಳಿಸಿಕೊಂಡು ಅಸ್ಸಾಂ ಸಂಸ್ಕೃತಿಗೆ ತಮ್ಮ ಕೊಡುಗೆ ನೀಡಿದ್ದಾರೆ.
ಪೌರಾಣಿಕ
[ಬದಲಾಯಿಸಿ]- ಭಾರತದ ಮಹಾಕಾವ್ಯವಾದ ಮಹಾಭಾರತದಲ್ಲಿ ಕಾಮರೂಪ ರಾಜ್ಯದ ಉಲ್ಲೇಖ ಬರುತ್ತದೆ.ವರ್ಮ ವಂಶಸ್ಥರು ಅಂದು ಅಸ್ಸಾಂ ರಾಜ್ಯವನ್ನು ಆಳುತ್ತಿದ್ದರು. ಅಂದು ಪ್ರಾಗ್ಜ್ಯೋತತಿಷ್ಯಪುರ ಅವರ ರಾಜಧಾನಿಯಾಗಿತ್ತು.ಈ ಪ್ರಾಗ್ಜ್ಯೋೊತಿಷ್ಯಪುರವೇ ಇಂದಿನ ಗೌಹಾತಿ ನಗರ ಎಂದು ಹೇಳಲಾಗುತ್ತದೆ.ವರ್ಮ ವಂಶಸ್ಥರ ನಂತರ ಶಲಸ್ಥಂಭ,ಪಾಲ ಮತ್ತು ತಾಯ್-ಶನ್ ವಂಶಸ್ಥರು ಒಟ್ಟು ಒಂದು ಸಾವಿರ ವರ್ಷಗಳ ಕಾಲ ರಾಜ್ಯಭಾರ ನಡೆಸುತ್ತಾರೆ.ಈ ಅವಧಿಯಲ್ಲಿ ಅಸ್ಸಾಂನಲ್ಲಿ ಹಿಂದೂ ಧರ್ಮ ವ್ಯಾಪಕವಾಗಿ ಹರಡುತ್ತದೆ.ಇವರು ವಿಷ್ಣು ಪೂಜಕರು.
ಮಧ್ಯ ಕಾಲೀನ
[ಬದಲಾಯಿಸಿ]- ೧೩ನೇ ಶತಮಾನದಲ್ಲಿ ಅಹೋಂ ವಂಶದ ಆಳ್ವಿಕೆಯ ಕಾಲದಲ್ಲಿ ಈ ಪ್ರದೇಶ ಉನ್ನತಿಗೆ ಬಂತು.ಬ್ರಹ್ಮಪುತ್ರ ಕಣಿವೆಯ ಮಾಲೀಕತ್ವಕ್ಕಾಗಿ ಸ್ಥಳೀಯರಾದ ಕಚೂರಿ,ಚುತಿಯಾ ಇತರ ಕುಲದವರೊಂದಿಗೆ ಅಹೋಮರ ಹೋರಾಟ ನಡೆಯಿತು.ಗೆಲುವು ಸಾಧಿಸಿದ ಅಹೋಮರು ಮುಂದಿನ ೬೦೦ ವರ್ಷಗಳು ಇಲ್ಲಿ ಆಳ್ವಿಕೆ ನಡೆಸುತ್ತಾರೆ. ಈ ಅರಸರನ್ನು ಹೊರತು ಪಡಿಸಿ ೧೫ ನೇ ಶತಮಾನದ ಸಾಂಸ್ಕೃತಿಕ ಹರಿಕಾರ ಶ್ರೀ ಮಾತ ಶಂಕರದೇವ ಹಿಂದೂ ಧರ್ಮದ ಏಳಿಗೆಗೆ ತನ್ನದೇ ಆದ ಕೊಡುಗೆ ನೀಡಿದ್ದಾನೆ.ಈತನ ಸಾಂಸ್ಕೃತಿಕ ಪ್ರಚಾರ ’ಸತ್ರ’ಗಳ (ಅಸ್ಸಾಮಿ ’ಕ್ಸೋತ್ರೋ’) ಮೂಲಕ ನಡೆಯಿತು.ಈ ಕ್ಸತ್ರಗಳು ಅಸ್ಸಾಮ್ನಣ ಜನಜೀವನದ ಒಂದು ಭಾಗವಾಗಿ ಹೋಗಿವೆ.
- ಮುಂದೆ ಮೊಘಲರ ಮತ್ತು ಮುಸಲ್ಮಾನ್ ಅರಸರ ಆಳ್ವಿಕೆಗೆ ಒಳಗಾಗದೆ ಉಳಿದ ಈ ರಾಜ್ಯ ಸುಮಾರು ೧೮೨೪ ರಲ್ಲಿ ಟೀ ತೋಟಗಳ ಮಾಲೀಕರಾಗಿ ಆಗಮಿಸಿದ ಬ್ರಿಟೀಶರ ಪ್ರಭಾವಕ್ಕೆ ಒಳಗಾಯಿತು.ಆಂಗ್ಲ ಸಂಸ್ಕೃತಿ ಇಲ್ಲಿ ನೆಲೆಯೂರಿತು.ಇವರ ಹಿಂದೆ ಬಂದ ಕ್ರೈಸ್ತ ಮಿಶನರಿಗಳು ಇವರನ್ನು ವಿದ್ಯಾಭ್ಯಾಸದ ಮೂಲಕ ನಾಗರೀಕರನ್ನಾಗಿ ಮಾಡಲು ಶ್ರಮಿಸಿದರು.ಮಿಶನರಿಗಳ ಆಸ್ಪತ್ರೆಗಳು ಮತ್ತು ಅವರ ಸೇವಾ ಮನೋಭಾವ ಜನರ ಮನ ಗೆದ್ದವು. ೧೯ ಮತ್ತು ೨೦ ನೇ ಶತಮಾನದ ಸಾಂಸ್ಕೃತಿಕ ಬೆಳವಣಿಗೆಗೆ ಇವರ ಕೊಡುಗೆ ಮೂಲಾಧಾರವಾಗಿದೆ.
- ಅಸ್ಸಾಮರ ಮೂಲ ಸಂಸ್ಕೃತಿಯಿಂದ ಬಂದ ಕೆಲವು ಆಚರಣೆಗಳು ಗಮನಾರ್ಹವಾಗಿವೆ. ಮೊದಲನೆಯದಾಗಿ ಅಸ್ಸಾಮರು ಅಡಿಕೆ,ಗಮೋಸ ವಸ್ತ್ರ ಎಂಬ ಸಾಂಪ್ರದಾಯಿಕ ರೇಶ್ಮೆ ಬಟ್ಟೆಗೆ ಹಾಗೂ ಕ್ಸೋರೈ ಎಂಬ ಪಾತ್ರೆಗೆ ಹೆಚ್ಚು ಗೌರವ ಸಲ್ಲಿಸುತ್ತಾರೆ.’ತಮುಲಪಾನ’ ಅಥವಾ ಅಡಿಕೆ ಮತ್ತು ವೀಳ್ಯ ಗೌರವದ ಸಂಕೇತವಾಗಿ ಪರಿಗಣಿಸಲ್ಪಡುತ್ತದೆ.ಇದರ ವಿನಿಮಯದಿಂದ ಗೌರವ, ಸ್ನೇಹ ಮತ್ತು ಸಂಸ್ಕೃತಿ ವೃದ್ದಿಸುತ್ತದೆ ಎಂದು ಭಾವಿಸಲಾಗುತ್ತದೆ.
- ಗಮೋಸಾ ಎಂಬ ವಸ್ತ್ರ ಮೂರು ಬದಿ ಕೆಂಪು ಅಂಚುಗಳನ್ನು, ನಾಲ್ಕನೆ ಬದಿ ಅಲಂಕಾರಿಕ ಎಳೆಗಳನ್ನು ಹೊಂದಿರುತ್ತದೆ.ಇದನ್ನು ಹೆಗಲಮೇಲೆ ವಿಶೇಷ ಸಂಧರ್ಭಗಳಲ್ಲಿ ಧರಿಸಲಾಗುತ್ತದೆ.ಇದನ್ನು ಧರಿಸುವುದರಿಂದ ಮತ್ತು ಇತರರಿಗೆ ಅರ್ಪಿಸುವುದರಿಂದ ಅವರಿಗೆ ಉನ್ನತ ಗೌರವ ಸಲ್ಲಿಸಿದಂತೆ ಎಂದು ಭಾವಿಸಲಾಗುತ್ತದೆ.ಗಮೋಸಾ ಪದದ ಮೂಲ ಕಾಮರೂಪದಿಂದ ಬಂದಿದೆ, ಗಾಮ ಎಂದರೆ ’ಚಾದರ್’ ಎಂಬರ್ಥವಿದೆ.
- ’ಕ್ಸೊರೈ’ ಎಂಬುದು ಮತ್ತೊಂದು ಪ್ರಾತಿನಿಧಿಕ ವಸ್ತು.ಇದನ್ನು ಲೋಹದಿಂದ ತಯಾರಿಸಲಾಗುತ್ತಿದ್ದು ಹೂದಾನಿ ಆಕಾರದಲ್ಲಿರುತ್ತದೆ ಮೇಲೆ ತಟ್ಟೆಯಾಕಾರವಿರುತ್ತದೆ. ಇದೇ ರೀತಿಯ ಮೂರುಕಾಲುಗಳ ಚಿಕ್ಕ ಸ್ಟೂಲನ್ನು ಕರ್ನಾಟಕದ ವೀರಶೈವರು ನೈವೇದ್ಯದ ತಟ್ಟೆಯನ್ನಿಡಲು (ತವಗೆ ಮಣೆ) ಬಳಸುತ್ತಾರೆ. ವೀಳ್ಯ ಮತ್ತು ಗಮೋಸವನ್ನು ಇದರಲ್ಲಿಟ್ಟು ಅತಿಥಿಗಳಿಗೆ ಮತ್ತು ದೇವರಿಗೆ ಅರ್ಪಿಸುವ ವಾಡಿಕೆ ಇದೆ.ಇದು ಅವರ ಅತ್ಯುನ್ನತ ಗೌರವದ ಸಂಕೇತ. ಜಾಪಿ ಅಸ್ಸಾಮಿ ಹ್ಯಾಟ್ ಧರಿಸುವಿಕೆಯೂ ಚಾಲ್ತಿಯಲ್ಲಿದೆ.
೨೦ನೇ ಶತಮಾನ-ಜನ ಜೀವನ
[ಬದಲಾಯಿಸಿ]- ೧೯೪೭ ರಲ್ಲಿ ಭಾರತ ಗಣರಾಜ್ಯಕ್ಕೆ ಸೇರ್ಪಡೆಯಾದ ಅಸ್ಸಾಮ್ನ ಲ್ಲಿ ೨೦೦೧ರ ಜನಗಣತಿಯಂತೆ ೨.೬೬ ಕೋಟಿ ಜನರಿದ್ದಾರೆ. ಈ ರಾಜ್ಯದ ಒಟ್ಟು ವಿಸ್ತೀರ್ಣ ೭೮೫೨೩ ಚದರ ಕಿ.ಮಿ. ಈ ರಾಜ್ಯದಲ್ಲಿ ತಿನ್ಸುನಖಿಯಾ, ದಿಬ್ರುಘರ್, ಶಿಬ್ಸಾಾಗರ್, ಧೇಮ್ಜಿದ, ಜೋರ್ಹಟ್, ಲಖಿಮ್ಪುುರ, ಗೋಲಾಘಾಟ್, ಸೋನಿತ್ಪುಿರ, ಕಾರ್ಬಿ ಆಂಗ್ಲಾಂಾಗ್,ನಾಗಾಂವ್,ಡುರಾಂಗ್,ಕಾಮರೂಪ,ನಲಬಾರಿ,ಬಾರ್ ಪೇಟ,ಬೊಂಗಾಯ್ ಗಾಂವ್,ಗೋಲಪಾರ,ಕೋಕ್ರಜಾರ್,ಧುಬ್ರಿ,ಉತ್ತರ ಕಾಚಾರ್ ಹಿಲ್ಸ್, ಕಾಚಾರ್, ಹೈಲಕಂಡಿ,ಕರೀಂಗಂಜ್,ಕಾಮರೂಪ ಮೆಟ್ರೊ,ಬಕ್ಸಾ, ಉದಾಲ್ಗು್ರಿ, ಮತ್ತು ಚಿರಾಂಗ್ ಮುಂತಾದ ೨೭ ಜಿಲ್ಲೆಗಳಿವೆ.ಇಲ್ಲಿನ ಜನ ಸಂಖ್ಯೆಯ ಶೇ.೮೯ ಗ್ರಾಮ ವಾಸಿಗಳು. ಈ ರಾಜ್ಯದಲ್ಲಿ ಪ್ರತಿ ಚದರ ಕಿ.ಮಿಗೆ ಜನ ಸಾಂದ್ರತೆ ೩೪೦ ಇದೆ. ಸ್ತ್ರಿ-ಪುರುಷರ ಅನುಪಾತ ೯೩೨:೧೦೦೦ ಇದೆ.ಈ ರಾಜ್ಯದಲ್ಲಿ ಈ ವರೆಗೆ ೧೯ ಜನ ಮುಖ್ಯ ಮಂತ್ರಿಗಳು ಕಾರ್ಯ ನಿರ್ವಹಿಸಿದ್ದು ತರುಣ್ ಗೋಗೊಯ್ ಈಗಿನ ಮುಖಮಂತ್ರಿ. ಪ್ರಸ್ತುತ ಅಸ್ಸಾಂ ರಾಜ್ಯದ ಮಹಾ ಚುನಾವಣೆ ನಡೆಯ ಬೇಕಿದೆ.ಇಲ್ಲಿ ೧೨೬ ಅಸೆಂಬ್ಲಿ ಕ್ಷೇತ್ರಗಳಿವೆ,ಲೋಕಸಭೆಗೆ ೧೪ ಕ್ಷೇತ್ರಗಳು ಮತ್ತು ರಾಜ್ಯ ಸಭೆಗೆ ೭ ಸ್ಥಾನಗಳು ಇವೆ. ಭಾರತ ರಾಷ್ಟ್ರಿಯ ಕಾಂಗ್ರೆಸ್,ಅಸ್ಸಾಂ ಗಣ ಪರಿಷತ್ ಮತ್ತು ಬಿಜೆಪಿ ಪ್ರಮುಖ ರಾಜಕೀಯ ಪಕ್ಷಗಳು.ಅಸ್ಸಾಮ್ನಲ್ಲಿ ಸುಮಾರು ೪೫ ಭಾಷೆ-ಉಪ ಭಾಷೆಗಳಿವೆ.
- ಅಸ್ಸಾಮ್ನಅ ದೇಸಿ ನೃತ್ಯ ಬಿಹು, ರಾಜ್ಯ ಪುಷ್ಪ ಕೊಪೋ ಪೂಲ್,ರಾಜ್ಯದ ಮರ ಹೋಲೋಂಗ್, ರಾಜ್ಯ ಪಕ್ಷಿ ಬಿಳಿ ಕೊಕ್ಕಿನ ಮರ ಕುಟುಕ, ನಾಡಗೀತೆ-’ಓ ಮೋರ್ ಆಪೋನಾರ್ ದೇಸ್...’ ಇಲ್ಲಿ ಸಾಕಷ್ಟು ಸಂಖ್ಯೆಯ ಮ್ಯುಸಿಯಂಗಳು,ಲಲಿತ ಕಲಾ ಭವನಗಳು,ಸಂಗೀತ-ನಾಟಕ ಕಲಾ ಕೇಂದ್ರಗಳು,ಹೆರಿಟೇಜ್ ಪಾರ್ಕ್ಗ್ಳು, ಜ಼ೂಗಳು ಮತ್ತು ಪ್ಲಾನೆಟೇರಿಯಂಗಳು ಸಾಕಷ್ಟಿವೆ.ಈ ರಾಜ್ಯದಲ್ಲಿ ಗೌಹಾತಿ,ಬಾಲಿಪುರ ಮತ್ತು ತೇಜ್ಪುಗರ ಸೇರಿದಂತೆ ಒಟ್ಟು ಮೂರು ವಿಮಾನ ನಿಲ್ದಾಣಗಳಿವೆ.
- ಗೌಹಾತಿ ರಾಜ್ಯದ ದೊಡ್ಡ ನಗರ. ಅಸ್ಸಾಮ್ ನ ಬೋಡೋ ಜನರು ಪ್ರತ್ಯೇಕ ಬೋಡೋ ಲ್ಯಾಂಡ್ಗಾಾಗಿ ಬೋಡೋ ಲಿಬರೇಶನ್ ಟೈಗರ್ ಗುಂಪು ಕಟ್ಟಿಕೊಂಡು ಇನ್ನೂ ಹೋರಾಟ ನಡೆಸುತ್ತಿದ್ದಾರೆ. ಈಗ ಕೋಕ್ರಜಾರ್ ಜಿಲ್ಲೆಯಲ್ಲಿ ಬೋಡೋಗಳಿಗಾಗಿ ಸಾಕಷ್ಟು ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ಉಲ್ಫಾ ಅಥವಾ ಯುನೈಟೆಡ್ ಲಿಬರೇಶನ್ & ಬೋಡೋಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ/National Democratic Front of Bodoland ಅಸ್ಸಾಂ ನ ಒಂದು ಪ್ರಮುಖ ಸಂಘಟನೆ ಎಂದು ಗುರುತಿಸುವಷ್ಟು ಮಟ್ಟಿಗೆ ಶಕ್ತಿಯುತವಾಗಿದೆ. ಆದಿವಾಸಿಗಳನ್ನು ಕನಿಷ್ಟವಾಗಿ ಕಾಣಲಾಗುತ್ತಿದೆ ಆದುದರಿಂದ ಪ್ರತ್ಯೇಕ ರಾಜ್ಯ ಕೊಡಿ ಎಂಬುದು ಇವರ ಬೇಡಿಕೆ.ಇವರ ಅಟಾಟೋಪಗಳಿಂದ ಜನಜೀವನ ಆಗಾಗ ಅಸ್ಥವ್ಯಸ್ಥವಾಗುವುದುಂಟು.
ಸನ್ನಿವೇಶ-ಪ್ರಕೃತಿ
[ಬದಲಾಯಿಸಿ]- ಅಸ್ಸಾಂನ ಗಡಿ ಭೂತನ್ ದೇಶಕ್ಕೆ ಹೊಂದಿಕೊಂಡಿದೆ.ಚೀನ ಆಗಾಗ ಇಲ್ಲಿ ಗಡಿಯಲ್ಲಿ ತಂಟೆ ಮಾಡುವುದುಂಟು. ಸ್ವಲ್ಪ ಭಾಗ ಬಾಂಗ್ಲಾ ಗಡಿ.ಈ ಸಪ್ತ ಸೋದರಿಯರ ನಾಡಿನಲ್ಲಿ ಅರುಣಾಚಲ ಪ್ರದೇಶ ಚೀನದ ಭೀತಿಯಲ್ಲಿ, ಮೇಘಾಲಯ ಮತ್ತು ತ್ರಿಪುರ ಕಳ್ಳ ವಲಸೆಗಾರರ ಸಮಸ್ಯೆಯಲ್ಲಿ, ಮಿಜೋರಾಂ ,ಮಣಿಪುರ ಮತ್ತು ನಾಗಾಲ್ಯಾಂಡ್ ಆಂತರಿಕ ಉಗ್ರಗಾಮಿಗಳ ನೋವಿನಲ್ಲಿವೆ.ಈ ಬಡ ಸೋದರಿಯರ ಕಡೆಗೆ ಭಾರತ ಅಷ್ಟೆನೂ ಪ್ರೀತಿಯಿಂದ ನೋಡದೇ ಅವಗಣನೆಗೆ ತುತ್ತಾಗಿವೆ. ಇದರೊಂದಿಗೆ ಆಗಾಗ ಸಂಭವಿಸುವ ಭೂಕಂಪ ಮತ್ತು ಪ್ರವಾಹ ಸಹಾ ಈ ರಾಜ್ಯಗಳ ಸಮಸ್ಯೆ.
- ಬ್ರಹ್ಮಪುತ್ರಾ ನದಿ ಅಸ್ಸಾಂನಲ್ಲಿ ಹರಿಯುತ್ತಿದ್ದು ಇಡೀ ದೇಶದಲ್ಲೇ ಪುರುಷನ ಹೆಸರಿನಲ್ಲಿರುವ ಏಕೈಕ ನದಿ ಇದು. ಈ ನದೀ ತಟದಲ್ಲಿ ವ್ಯವಸಾಯ,ಪಶುಪಾಲನೆ ನಡೆಯುತ್ತಿದ್ದು ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಅಸ್ಸಾಂ ರಾಜ್ಯಕ್ಕೆ ವಾರ್ಷಿಕವಾಗಿ ೭೦ ರಿಂದ ೧೨೫ ಇಂಚು ಮಳೆಯಾಗುತ್ತದೆ. ಇದರಿಂದ ಈ ರಾಜ್ಯದ ಕಾಡುಗಳಲ್ಲಿ ಸುಮಾರು ೭೫ ಜಾತಿಯ ಮರ-ಮುಟ್ಟುಗಳು ಇವೆ. ಕಾಡುಗಳಲ್ಲಿ ಘೇಂಡಾಮೃಗ,ಆನೆಗಳಂತಹ ಭಾರಿ ಪ್ರಾಣಿಗಳು,ಬಾರಸಿಂಗ ಜಿಂಕೆ,ಕೋತಿಗಳು ಇತ್ಯಾದಿ ಪ್ರಾಣಿ ವರ್ಗ ಹಾಗೂ ನೂರಾರು ಜಾತಿಯ ಆರ್ಕಿಡ್ಗಳಳು ಕಂಡುಬರುತ್ತವೆ. ಘೇಂಡಾಮೃಗಗಳಿಗಾಗಿ ಇರುವ ಪ್ರಸಿದ್ದ ರಾಷ್ಟ್ರೀಯ ಉದ್ಯಾನವನ ಕಾಜಿರಂಗ ಇಲ್ಲಿದೆ.
ಸಂಸ್ಕೃತಿ-ಧರ್ಮ
[ಬದಲಾಯಿಸಿ]- ಅಸ್ಸಾಮ್ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡಿರುವ ರಾಜ್ಯ.ಮಧ್ಯ ಏಶ್ಯಾದಿಂದ ಬಂದ ಆರ್ಯನರು,ಇರಾನಿ ಜನರು,ಬುಡ ಕಟ್ಟು ಜನಾಂಗ ಒಂದಾಗಿ ಬೆರೆತು ಅಸ್ಸಾಂನ ಹೊಸ ಜನಾಂಗ ರೂಪಿತವಾಗಿದೆ.ಅಸ್ಸಾಂನ ಸಂಸ್ಕೃತಿಯಲ್ಲಿ ಶ್ರೀ ಮಾತ ಶಂಕರದೇವನ ಪಾತ್ರ ದೊಡ್ಡದು. ಆತ ಸ್ಥಾಪಿಸಿದ ಸತ್ರಗಳು ಸಂಸ್ಕೃತಿಯ ಪ್ರಚಾರಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿವೆ. ೧೪೪೯ ರಲ್ಲಿ ನಾಗೊವ್ ನಲ್ಲಿ ಜನಿಸಿದ ಈತ ಅಸ್ಸಾಂನ ಬಸವಣ್ಣನಿದ್ದಂತೆ. ಅಸ್ಪೃಶ್ಯತೆಯನ್ನು ವಿರೋಧಿಸಿ ಶ್ರೀ ಕೃಷ್ಣನನ್ನು ತನ್ನ ಆರಾಧ್ಯ ದೈವವನ್ನಾಗಿ ಮಾಡಿಕೊಂಡ. ಸತ್ರಗಳೆಂಬ ಧರ್ಮ ಪ್ರಚಾರ ಕೇಂದ್ರಗಳನ್ನು ಸ್ಥಾಪಿಸಿ ಕ್ಸಾತ್ರಿಯ ನೃತ್ಯ ಎಂಬ ಹೊಸ ನೃತ್ಯ ಪ್ರಕಾರವೊಂದನ್ನು ಕಂಡು ಹಿಡಿದ.ವಿಶೇಷವಾದ ಉಡುಪು,ಆಭರಣಗಳನ್ನು ಧರಿಸಿ ಸಂಗೀತ ಉಪಕರಣ ಮತ್ತು ಆಂಗಿಕ ಆಭಿನಯದೊಂದಿಗೆ ಅನೇಕ ಪ್ರಸಂಗಗಳನ್ನು ಅಭಿನಯಿಸಲಾಗುತ್ತದೆ. ಶ್ರೀ ಮಾತ ಶಂಕರದೇವ ೧೫೬೭ ರಲ್ಲಿ ನಿಧನ ಹೊಂದಿದ. ಈತನ ಸತ್ರಗಳು ಶಾಖೆಗಳನ್ನು ಹೊಂದಿದ್ದು ಈ ಮುಂದಿನವು ಪ್ರಮುಖವಾದವು. ಮೋದ್ಪುೆರ ಸತ್ರ,ಶ್ರೀ ದುಹತ್ ಬೆಲಗುರಿ ಸತ್ರ,ಪತ್ ಚಶಿ ಸತ್ರ,ಗಣಕ್ಕುಚಿ ಸತ್ರ,ಜನಿಯಾ ಸತ್ರ, ಸುಂದರಿದಿಯಾ ಸತ್ರ,ಬಾರ್ ಪೇಟ ಸತ್ರ, ಬರಾಡಿ ಸತ್ರ ಮತ್ತು ಸತ್ರ ಕನಾರ ಪ್ರಮುಖವಾದವು. ಅಸ್ಸಾಮಿಯರು ಧರಿಸುವ ಕೆಲವು ಸಾಂಪ್ರದಾಯಿಕ ಆಭರಣಗಳೆಂದರೆ ದುಗದುಗಿ, ಕೆರುಮೊನಿ,ತುರಿಯಾ,ಗಾಮ್ ಖಾರು, ಮತಿ ಖಾರು,ಧೋಲ್ ಬಿರಿ ಇತ್ಯಾದಿ.
- ಅಸ್ಸಾಂನಲ್ಲಿ ಬ್ರಾಹ್ಮಣರ ಸಂಖ್ಯೆ ಆದಿವಾಸಿಗಳಿಗೆ ಹೋಲಿಸಿದರೆ ಕಡಮೆ.ಇವರು ಹೆಚ್ಚಾಗಿ ಜೋರ್ಹಟ್,ಗೊಲಾಪಾರ ಮತ್ತು ಗೌಹಾಟಿ ಸುತ್ತಾಮುತ್ತಾ ವಾಸ ಮಾಡುತ್ತಾರೆ.ಇವರ ಉಪನಾಮಗಳು ಶರ್ಮಾ, ಬರುವಾ,ಚಕ್ರವರ್ತಿ ಇತ್ಯಾದಿ.ಇವರು ಹೆಚ್ಚಾಗಿ ತಮ್ಮನ್ನು ಗೋತ್ರಗಳ ಮೂಲಕ ಗುರುತಿಸಿಕೊಳ್ಳುತ್ತಾರೆ.ಜ್ನಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಬೀರೇಂದ್ರ ಕುಮಾರ ಭಟ್ಟಾಚಾರ್ಯ ಅಸ್ಸಾಮಿ ಬ್ರಾಹ್ಮಣರು.
ಹಬ್ಬಗಳು
[ಬದಲಾಯಿಸಿ]- ಅಸ್ಸಾಂ ಬಹುತೇಕ ಹಿಂದೂ ಧರ್ಮೀಯರನ್ನು ಹೊಂದಿದ ರಾಜ್ಯ.ಇಲ್ಲಿ ಸ್ಥಳೀಯ ಹಬ್ಬಗಳನ್ನು ಬಹಳ ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಗುತ್ತದೆ.ಇಲ್ಲಿನ ಹಬ್ಬಗಳಲ್ಲಿ ಪ್ರಮುಖವಾದದ್ದು ಬಿಹು ಹಬ್ಬ.ಇದನ್ನು ನಮ್ಮ ಸುಗ್ಗಿ ಹಬ್ಬಕ್ಕೆ ಹೋಲಿಸಬಹುದು. ಬಿಹು ಮೂರು ಘಟ್ಟಗಳಲ್ಲಿ ಆಚರಿಸಲ್ಪಡುತ್ತದೆ.ಬೇಸಾಯಗಾರರ ಹಬ್ಬವಾದ ಇದು ಮೊದಲಿಗೆ ರೊಂಗಾಲಿ ಅಥವಾ ಬೊಹಾಗ್ ಎಂಬ ಘಟ್ಟದಿಂದ ವಸಂತನ ಆಗಮನವನ್ನು ಸ್ವಾಗತಿಸುವುದರೊಂದಿಗೆ ಆರಂಭವಾಗುತ್ತದೆ.ಬಿಹು ಗೀತೆಗಳನ್ನು ಹಾಡಿ ವಸಂತ ತಮಗೆ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿ ಬೆಳೆಯ ನಾಟಿ ಮಾಡಲಾಗುತ್ತದೆ.ಎರಡನೇ ಘಟ್ಟ ಕೊಂಗಾಲಿ ಅಥವಾ ಕಾಟಿ.ಈ ಸಂದರ್ಭದಲ್ಲಿ ಹೊಲಗಳು ಬೆಳೆಗಳಿಂದ ತುಂಬಿರುತ್ತವೆ.ಒಳ್ಳೆ ಬೆಳೆಯ ನಿರೀಕ್ಷೆಯಿಂದ ದೇವರನ್ನು ಪ್ರಾರ್ಥಿಸುತ್ತಾರೆ. ಕೊನೆಯ ಹಂತ ಭೋಗಾಲಿ ಅಥವಾ ಮಘ.ಉತ್ತಮ ಬೆಳೆ ಬಂದು ಕಣಜ ತುಂಬಿರುತ್ತದೆ ಅದಕ್ಕಾಗಿ ದೇವರಿಗೆ ಕೃತಜ್ನತೆ ಸಲ್ಲಿಸಲು ಹಾಡುಗಳು ಮತ್ತು ನೃತ್ಯಗಳೊಂದಿಗೆ ಹಬ್ಬ ಆಚರಿಸಲಾಗುತ್ತದೆ. ಪ್ರತೀ ಘಟ್ಟದ ಆರಂಭದ ಮೊದಲ ದಿನವನ್ನು ’ಉರುಕಾ’ ಎಂದು ಕರೆಯಲಾಗುತ್ತದೆ.ರೊಂಗಾಲಿ ಬಿಹುವಿನ ಮೊದಲ ದಿನವನ್ನು’ಗೋರು ಕಾ ಬಿಹು’ ಎಂದು ಕರೆಯಲಾಗುತ್ತದೆ.ಅಂದು ಹಸುಗಳನ್ನು ನದಿಗೆ ಕರೆದೊಯ್ದು ಸ್ನಾನ ಮಾಡಿಸಿ ಅಲಂಕಾರ ಮಾಡಿ ಪೂಜಿಸಲಾಗುತ್ತದೆ.ಹಸು ಅಸ್ಸಾಮಿಯರಿಗೆ ಪವಿತ್ರ ಪ್ರಾಣಿಯಾಗಿದೆ.
- ಅಸ್ಸಾಮಿಯರು ದುರ್ಗಾ ಪೂಜೆ,ಡೋಲ್ ಜಾತ್ರಾ ಅಥವಾ ಫ಼ಕುವಾ,ಜನ್ಮಾಷ್ಟಮಿ ಮತ್ತು ಮುಸ್ಲಿಮ್ ಹಬ್ಬಗಳನ್ನು ಆಚರಿಸುತ್ತಾರೆ. ಇವರ ಇತರೆ ಹಬ್ಬಗಳೆಂದರೆ ಮೆಡಂ ಮಧೆ,ಅಲೀ ಆಯ್ ಲಿಗಾಂಗ್,ಕೋರೈ,ಗಾರ್ಜಾ,ಹಾಪ್ಸ ಹಾತಮೈ,ಜಾನೈ ,ಸ್ವರಕ್, ರಂಗ್ ಕೇರ್,ಹಾಜಾ ಕೇಕನ್, ಪೋರನ್ ಇತ್ಯಾದಿ.ಇವುಗಳೊಂದಿಗೆ ಟೀ ಹಬ್ಬ, ಅಂಬುಬಾಸಿ ಮೇಳ,ಜೋನ್ ಬೀಲ್,ಬೈಶಾಗು,ಬೊಹಾಗ್ಗಿಯೋ ಬಿಶು, ಬೈಕೋ,ಅಲಿ ಅಯ್ ಲಿಗಾಂಗ್ ಇತ್ಯಾದಿಗಳನ್ನು ಆಚರಿಸಲಾಗುತ್ತದೆ.
ನಾಟಕ-ಸಿನೆಮಾ
[ಬದಲಾಯಿಸಿ]- ಅಸ್ಸಾಂನಲ್ಲಿ ನಾಟಕಗಳ ಸ್ಥಾನ ದೊಡ್ಡದು.ಇದು ಒಂದು ಪ್ರಮುಖ ಅಭಿವ್ಯಕ್ತಿ ಕಲೆಯಾಗಿ ಪ್ರಾರಂಭವಾದದ್ದು ಶ್ರೀಮಾತ ಶಂಕರದೇವನ ಕಾಲದಲ್ಲಿ. ಧರ್ಮ ಪ್ರಚಾರಕ್ಕಾಗಿ ಪುರಾಣ ಪ್ರಸಂಗಗಳನ್ನು ಆರಿಸಿಕೊಂಡು ಅವನ್ನು ವಿಶೇಷ ಉಡುಪು,ಆಭರಣ ಮತ್ತು ನೃತ್ಯಗಳೊಂದಿಗೆ ಅಭಿನಯಿಸುತ್ತಿದ್ದರು.ಈ ಪ್ರಕಾರ ಇಂದಿಗೂ ಉಳಿದು,ಬೆಳೆದು ಬಂದಿದೆ.
- ಅಸ್ಸಾಂನಲ್ಲಿ ಮೊಬೈಲ್ ಥಿಯೇಟರ್ ಚಳುವಳಿ ಬಹಳ ಪ್ರಮುಖವಾದದ್ದು. ಇದು ಸುಮಾರು ೨೫-೩೦ ವರ್ಷಗಳಿಂದ ಬೆಳೆದು ಬಂದಿದೆ.ಇದನ್ನು ಸ್ಥಳೀಯವಾಗಿ ’ಬ್ರೆಮಮನ್’ ಎಂದು ಕರೆಯಲಾಗುತ್ತದೆ.ಬದಲಿಸಬಲ್ಲ ದೃಶ್ಯಗಳು,ಹಿನ್ನೆಲೆಗಳು ಇವುಗಳ ವೈಶಿಷ್ಟ್ಯ. (ಕರ್ನಾಟಕದಲ್ಲಿ ಚಲಿಸುವ ಸೀನರಿಗಳನ್ನು ಸುಮಾರು ೫೦ ವಷಗಳ ಹಿಂದೆಯೇ ಪ್ರಸಿದ್ದ ರಂಗ ಕಲಾವಿದ ಶ್ರೀ.ಗುಬ್ಬಿ ವೀರಣ್ಣ ಬಳಸಲು ಆರಂಭಿಸಿದ್ದರು).ಇಲ್ಲಿ ಅಭಿನಯಿಸಲು ಕೇವಲ ಪೌರಾಣಿಕ ಘಟನೆಗಳನ್ನು ಮಾತ್ರವಲ್ಲದೆ ಹಾಲಿವುಡ್ ನ ಪ್ರಖ್ಯಾತ ಚಲನಚಿತ್ರಗಳಾದ ಟೈಟಾನಿಕ್,ಸೂಪರ್ ಮ್ಯಾನ್, ಅನಕೊಂಡಾ,ಹಿಂದಿಯ ಶೋಲೆ, ಧೂಮ್-೨,ಡಾನ್,ಒಸಾಮ ಬಿನ್ ಲಾಡೆನ ಕಥೆಗಳು ಇಲ್ಲಿ ರಂಗದಮೇಲೆ ಬರುತ್ತವೆ.ಬಹಳಷ್ಟು ಬಾರಿ ಅಸ್ಸಾಮಿ ಚಲನಚಿತ್ರ ಕಲಾವಿದರು ಈ ನಾಟಕಗಳಲ್ಲಿ ಅಭಿನಯಿಸುವುದುಂಟು. ಈ ಮೊಬೈಲ್ ಥಿಯೇಟರ್ ವಹಿವಾಟು ವಾರ್ಷಿಕ ಸುಮಾರು ರೂ.೧೦ ಕೋಟಿ ಮೀರುತ್ತದೆ. ಫಣೀ ಶರ್ಮ,ಬಹಾರುಲ್ ಇಸ್ಲಾಮ್ ಪ್ರಮುಖ ಕಲಾವಿದರು.ಇಲ್ಲಿ ಸುಮಾರು ೧೪ ಪ್ರಮುಖ ಮೊಬೈಲ್ ಥಿಯೇಟರ್ ತಂಡಗಳಿವೆ. ಭಗವತಿ ಥಿಯೇಟರ್,ಬಿನಪಾಣಿ ಥಿಯೇಟರ್ ೨೫ ವರ್ಷಗಳಿಗೂ ಹಳೆಯವು. ಅಸ್ಸಾಂ ರಂಗ ಕಲಾಭ್ಯಾಸ ಈ ಮೊಬೈಲ್ ಥಿಯೇಟರುಗಳ ಉಲ್ಲೇಖವಿಲ್ಲದೆ ಪೂರ್ಣವಾಗುವುದಿಲ್ಲ.
- ಅಸ್ಸಾಮ್ ಚಿತ್ರ ರಂಗವನ್ನು ’ಜಾಲಿವುಡ್’ ಎಂದು ಕರೆಯಲಾಗುತ್ತದೆ.ಅಸ್ಸಾಂನ ಮೊದಲ ಚಲನಚಿತ್ರ ’ಜೋತಿಮತಿ’ ೧೯೩೫ ರಲ್ಲಿ ಬಿಡುಗಡೆಯಾಯಿತು.ಕೇವಲ ರೂ.೬೦೦೦-೦೦ ವೆಚ್ಚದಲ್ಲಿ ತಯಾರಾದ ಈ ಚಿತ್ರ ಯಶಸ್ವಿಯಾಗಲಿಲ್ಲ.೧೯೫೫ ರಲ್ಲಿ ತಯಾರಾದ ’ಪಿಯಾಲಿ ಪುಕನ್’ ರಾಷ್ಟ್ರೀಯ ಪ್ರಶಸ್ತಿ ಗೆದ್ದಿತು.ಅಸ್ಸಾಮ್ ಚಲನಚಿತ್ರ ರಂಗಕ್ಕೆ ರಂಗು ತಂದವರು ೧೯೫೯ ರಲ್ಲಿ ಚಿತ್ರ ನಟನಾಗಿ ಬಂದ ಶ್ರೀ.ಭೂಪೆನ್ ಹಜಾರಿಕಾ. ಅನೇಕ ರಾಷ್ಟ್ರೀಯ ಮತ್ತು ಅಂತರ ರಾಷ್ಟೀಯ ಪ್ರಶಸ್ತಿಗಳನ್ನು ಗೆದ್ದಿರುವ ಇವರು ಇಂದಿಗೂ ಅಸ್ಸಾಂನಲ್ಲಿ ಜನಪ್ರಿಯ.ಇವರು ೧೯೫೯ ರಲ್ಲಿ ಚಿತ್ರರಂಗ ಪ್ರವೇಶಿಸಿ ಅಪಾರ ಜನಪ್ರಿಯತೆ ಪಡೆದು ೧೯೬೭ ರಿಂದ ೧೯೭೨ ರ ವರೆಗೆ ಶಾಸಕರಾಗಿದ್ದರು.ಅಸ್ಸಾಂನಲ್ಲಿ ಮೊದಲ ಸ್ಟುಡಿಯೋ ಸ್ಥಾಪನೆ ಮಾಡಿದರು. ೧೯೩೯ ರಲ್ಲಿ ಬಾಲನಟನಾಗಿ ’ಇಂದ್ರ ಮಾಲತಿ’ ಚಲನಚಿತ್ರದಿಂದ ರಂಗ ಪ್ರವೇಶ ಮಾಡಿದ ಇವರು ನಟನೆ,ನಿರ್ದೇಶನ,ಸಂಗೀತ ನಿರ್ದೇಶನ, ಗಾಯನ, ನಿರ್ಮಾಣ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡ ಆಲ್ ರೌಂಡರ್.೧೯೬೦,೧೯೬೪ ಮತ್ತು ೧೯೬೭ ರಲ್ಲಿ ಕ್ರಮವಾಗಿ ’ತಮ ಶಕುಂತಲಾ’, ’ಪ್ರತಿದ್ವನಿ’ ಮತ್ತು ’ಲೋಟಿ ಪೋಟಿ’ ಚಿತ್ರಗಳ ನಿರ್ಮಾಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದರು.೧೯೮೧ ರಿಂದ ೧೯೯೦ ರವರೆಗೆ ಕೇಂದ್ರೀಯ ಸೆನ್ಸಾರ್ ಬೋಡ೯ನ ಚೇರಮೆನ್ ಆಗಿದ್ದರು.
- ಸಾಕಷ್ಟು ಬೆಂಗಾಲಿ ಚಿತ್ರಗಳಿಗೇ ಅಲ್ಲದೆ ಹಿಂದಿ ಚಿತ್ರವೊಂದಕ್ಕೂ ಸಂಗೀತ ನೀಡಿದ್ದಾರೆ (ರುಡಾಲಿ). ಭೂಪೇನ್ ಹಜಾರಿಕಾ ಅಸ್ಸಾಮ್ ಲಾವಣಿ ಮತ್ತು ಸ್ಥಳೀಯ ಜನಪದ ಗೀತೆಗಳನ್ನು ಸುಶಾವ್ಯವಾಗಿ ಹಾಡಬಲ್ಲರು.ಸ್ಥಳೀಯ ಕಲಾವಿದರನ್ನು ಬಳಸಿ ಸಾಕಷ್ಟು ಕಾರ್ಯಕ್ರಮಗಳನ್ನೂ ನೀಡಿದ್ದಾರೆ.ಇವರ ಪ್ರಮುಖ ಚಲನಚಿತ್ರಗಳು ಸಂಧ್ಯಾರಾಗ (೧೯೭೭), ಅನಿರ್ಬನ್ (೧೯೮೧), ಅಗ್ನಿ ಸ್ನಾನ್ (೧೯೮೫),ಕೋಲಾಹಲ್ (೧೯೮೮), ಸರೋತಿ (೧೯೯೧), ಅಬರ್ಟನ್ (೧೯೯೩),ಇತಿಹಾಸ್ (೧೯೯೫), ಹಾಗೂ ಕಾಲ್ ಸಂಧ್ಯಾ(೧೯೯೭). ೧೯೭೭ ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು ದಾದಾ ಸಾಹೇಬ್ ಫ಼ಾಲ್ಕೆಪ್ರಶಸ್ತಿ ಪಡೆದಿದ್ದಾರೆ.ನೂರಾರು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಪ್ರಸ್ತುತ ಇವರ ಆರೋಗ್ಯ ಹದಗೆಟ್ಟಿದ್ದು ಆಸ್ಪತ್ರೆಯಿಂದ ಬಂದು ವಿಶ್ರಾಂತಿಯಲ್ಲಿದ್ದಾರೆ.ಭಗವಂತ ಈ ಹಿರಿಯ ಕಲಾಜೀವಿಗೆ ಹೆಚ್ಚು ಅಯುಸ್ಸು ನೀಡಲಿ.
- ೧೯೭೫ ರಲ್ಲಿ ಹಜಾರಿಕಾರ ಸಂಗೀತಕ್ಕೆ ’ಚಮೇಲೆ ಮೇಮ್ಸಾತಬ್’ ಚಿತ್ರದಿಂದ ರಾಷ್ಟ್ರೀಯ ಪ್ರಶಸ್ತಿ ದೊರಕಿತು.೧೯೯೧ ರಲ್ಲಿ ಮಲಯಾ ಗೋಸ್ವಾಮಿ ಉತ್ತಮ ನಟಿ ಪ್ರಶಸ್ತಿ ಪಡೆದರು. ಡಾ.ಭಬೇಂದ್ರನಾಥ ಸೈಕಿಯಾ,ಜಾಹ್ನು ಬರುವಾ,ಮಲಯಾ ಗೋಸ್ವಾಮಿ,ಬಿಜು ಪುಕುವ್,ತಪನ್ದಾಗಸ್,ಪ್ರಸ್ತುತಿ ಪರಾಶರ್ ಸಿನೆಮಾ ಕ್ಷೇತ್ರದ ಪ್ರಮುಖ ಹೆಸರುಗಳು. ಗೌಹಾತಿಯಲ್ಲಿ ೯ ಚಲನಚಿತ್ರ ಮಂದಿರಗಳಿವೆ.ಹೆಚ್ಚಾಗಿ ಅಸ್ಸಾಮಿ ಚಿತ್ರಗಳು, ನಂತರ ಬೆಂಗಾಲಿ,ಹಿಂದಿ ಹಾಗೂ ಆಂಗ್ಲ ಚಿತ್ರಗಳು ಪ್ರದರ್ಶನಗೊಳ್ಳುತ್ತವೆ. ಅಸ್ಸಾಮಿನಲ್ಲಿ ನಾಲ್ಕೈದು ಟಿವಿ ಚಾನಲಗಳಿವೆ.ಎನ್ಇ, ಟೀವಿ, ನ್ಯೂಸ್ ಲೈವ್,ಡಿವೈ ೩೬೫, ನ್ಯೂಸ್ ಟೈಮ್ ಅಸ್ಸಾಂ, ಮತ್ತು ಡಿಡಿ ನಾರ್ತ್ ಈಸ್ಟ್.
ನೃತ್ಯ-ಸಂಗೀತ
[ಬದಲಾಯಿಸಿ]- ಅಸ್ಸಾಂನ ಸಾಂಸ್ಕೃತಿಕ ಪರಂಪರೆಯಲ್ಲಿ ನೃತ್ಯ ಮತ್ತು ಸಂಗೀತ ಪ್ರಮುಖ ಸ್ಥಾನ ಪಡೆದಿವೆ. ನೃತ್ಯದಲ್ಲಿ ಆದಿವಾಸಿ ನೃತ್ಯ ಜಾನಪದ ನೃತ್ಯ ಮತ್ತು ಶಾಸ್ತ್ರೀಯ ನೃತ್ಯ ಪ್ರಮುಖವಾದವುಗಳಾಗಿವೆ. ಆದಿವಾಸಿ ನೃತ್ಯದಲ್ಲಿ ಬಿಹು ನೃತ್ಯ,ಬುಗುರುಂಬಾ (ಬೋಡೋ ನೃತ್ಯ),ದಿಯೋರಾನಿ (ಸರ್ಪದೇವತೆ ನೃತ್ಯ) ಪ್ರಮುಖವಾದವುಗಳಾಗಿವೆ. ಜಾನಪದ ನೃತ್ಯದಲ್ಲಿ ’ಜೂಮರ್’ ಟೀ ತೋಟದ ಕೆಲಸಗಾರರಿಂದ ಅಭಿನಯಿಸಲ್ಪಡುವ ನೃತ್ಯ ಪ್ರಾಕಾರ. ಮತ್ತೊಂದು ಸತ್ರಿಯ ನೃತ್ಯ ಅಥವಾ ಶಾಸ್ತ್ರಿಯ ನೃತ್ಯ. ಇದು ಭರತನ ನಾಟ್ಯ ಶಾಸ್ತ್ರಕ್ಕೆ ಅನುಗುಣವಾಗಿದ್ದು ಇಲ್ಲಿ ಶ್ರೀಮಾತ ಶಂಕರದೇವನ ಸತ್ರಿಯ ನೃತ್ಯವನ್ನು ಅಭಿನಯಿಸಲಾಗುತ್ತದೆ.ಅಸ್ಸಾಂನ ಶಾಸ್ತ್ರಿಯ ನೃತ್ಯವು ಸವಾಗುವ ಮತ್ತು ರಂಗ್ಗುರವ,ಓಜಾಪಲಿ ನೃತ್ಯ ಹಾಗೂ ದೇವಘರಾ ಮತ್ತು ದೇವನಾಟರ್ ನೃತ್ಯ ಪ್ರಕಾರಗಳನ್ನು ಹೊಂದಿದೆ.
- ಸಂಗೀತ ಪ್ರಕಾರದಲ್ಲಿ ಜಾನಪದ ಮತ್ತು ಭಕ್ತಿ ಸಂಗೀತ ಪ್ರಮುಖವಾದವುಗಳು.ಜಾನಪದ ಪ್ರಕಾರದಲ್ಲಿ ಕಾಮರೂಪ.ಗೋಲ್ಪುರರಿಯ,ಓಜಾಪಲಿ,ಜುಮುರ್ ಮತ್ತು ಬಿಹು ಗೀತೆಗಳು ಪ್ರಮುಖವಾದವು.ಈ ಹಾಡುಗಳನ್ನು ಅಯಾಯ ಹಬ್ಬಗಳಲ್ಲಿ ಹಾಡಲಾಗುತ್ತದೆ. ಭಕ್ತಿ ಸಂಗೀತಕ್ಕೆ ಶ್ರೀಮಾತ ಶಂಕರದೇವನ ಕೊಡುಗೆ ಅನನ್ಯವಾದದ್ದು.ಈತನ ಸತ್ರಿಯ ಗಾಯನ ಮತ್ತು ನೃತ್ಯ ಅಸ್ಸಾಮ್ನ್ ಅವಿಭಾಜ್ಯ ಅಂಗವಾಗಿದೆ. ಈ ಸಂಗೀತವನ್ನು ಸ್ಥಳೀಯ ಸಂಗೀತ ಸಾಧನಗಳಾದ ಡೋಲ್, ಫ಼ೆಪ,ತಾಲ್,ಗೊಗೋವ,ಟೋಕಾ ಇತ್ಯಾದಿಗಳನ್ನು ಬಳಸಿ ಹಾಡಲಾಗುತ್ತದೆ.
- ಸತ್ರಿಯಾ ನೃತ್ಯವು ಪ್ರಮುಖವಾಗಿ ಭಜನೆಗಳು ಮತ್ತು ಪುರಾಣ ದೃಶ್ಯಗಳ ಅಭಿನಯವನ್ನು ಒಳಗೊಂಡಿರುತ್ತದೆ. ಈ ನೃತ್ಯವನ್ನು ವಾದ್ಯಗಳೊಂದಿಗೆ ವಿಶೇಷ ಉಡುಪು ಧರಿಸಿ ಅಭಿನಯಿಸಲಾಗುತ್ತದೆ. ಡೋಲು. ತಾಳ, ಕೊಳಲು,ವಯಲಿನ್,ಹಾರ್ಮೋನಿಯಂ,ಘಂಟೆ,ಶಂಖ ಇತ್ಯಾದಿಗಳು ಬಳಕೆಯಾಗುತ್ತವೆ. ಸತ್ರಿಯ ನೃತ್ಯಕ್ಕೆ ಬಳಸುವ ಉಡುಪುಗಳು ವೈವಿಧ್ಯವಾದವು.ಲೊಹಂಗಾ ಎಂಬ ಕೆಳ ಉಡುಪು,ಕಸೋಲಿ ಎಂಬ ಶಲ್ಯ, ತಂಗ್ಲಿ ಎಂಬ ತಲೆಗೆ ಧರಿಸುವ, ಎರಡೂ ಭುಜದ ಮೇಲೆ ಬರುವ ಉಡುಪು,ಪಾಗುರಿ ಎಂಬ ಪೇಟ,ಸದರ್ ಎಂಬ ಮೇಲುಡುಪು ಧರಿಸಲಾಗುತ್ತದೆ.ಇದರೊಂದಿಗೆ ಕಪಾಲಿ ಎಂಬ ತಲೆಗೆ ಧರಿಸುವ ಆಭರಣ,ಗೋಲ್ಪೊಿಟ,ಜೂನ್ ಬರಿ,ದುಗದುಗಿ ಎಂಬ ನೆಕ್ಲೇಸ್ಗ್ಳು, ಲುಕಪಾರೊ, ಕೇರು.ತುರಿಯಾ,ಸೋನಾ ಎಂಬ ಕಿವಿಯ ಅಭರಣಗಳು,ಗಾಮ್ಖೋರು,ಮುತಿಖರು ಎಂಬ ಬಳೆಗಳು,ಜುಮಕಾ ಎಂಬ ಕಾಲ್ಗೆಜ್ಜೆ ಧರಿಸಲಾಗುತ್ತದೆ. ಇವನ್ನು ಧರಿಸಿದ ವ್ಯಕ್ತಿ ಬಹುತೇಕ ನಮ್ಮ ಪೌರಾಣಿಕ ನಾಟಕಗಳಲ್ಲಿನ ಪಾತ್ರಧಾರಿಯಂತೆ ಕಾಣುತ್ತಾನೆ.ತುಮಕೂರು ಸುತ್ತ ಮುತ್ತಲಲ್ಲಿ ಪ್ರಚಲಿತವಿರುವ ವೀರಗಾಸೆ ನೃತ್ಯ, ನೃತ್ಯಗಾರರ ಉಡುಪಿಗೆ ಬಹಳ ಹೋಲಿಕೆ ಕಂಡು ಬರುತ್ತದೆ. ಈ ನೃತ್ಯವನ್ನು ಐದು ಭಂಗಿಗಳಲ್ಲಿ, ೪೪ ವಿಧದ ಲಕ್ಷಣಗಳಲ್ಲಿ, ೭ ವಿಧದ ತಾಳಗಳೊಂದಿಗೆ ಅಭಿನಯಿಸಲಾಗುತ್ತದೆ.ಪೌರಾಣಿಕ ಪ್ರಸಂಗಗಳಾದ ಪತ್ನಿ ಪ್ರಸಾದ,ಕಾಳಿದಮನ,ಕೇಳಿ ಗೋಪಾಲ,ರುಕ್ಮಿಣೀ ಹರಣ,ಪಾರಿಜಾತ ಹರಣ,ಶ್ರೀ ರಾಮ ವಿಜಯ ಮುಂತಾದ ಪ್ರಸಂಗಗಳನ್ನು ಈ ನಾಟಕ-ನೃತ್ಯ ಪ್ರಕಾರಗಳಲ್ಲಿ ಅಭಿನಯಿಸಲಾಗುತ್ತದೆ.
ಸಾಹಿತ್ಯ
[ಬದಲಾಯಿಸಿ]- ಸುಮಾರು ೧೪ನೇ ಶತಮಾನದಿಂದ ಬೆಳೆದು ಬಂದಿರುವ ಅಸ್ಸಾಂ ಸಾಹಿತ್ಯ ಪ್ರಕಾರ ಅಲ್ಲಿನ ಜನಪದ ಗೀತೆಗಳು, ಧಾರ್ಮಿಕ ಹಾಡುಗಳು, ಲಾವಣಿಗಳು ಮತ್ತು ಹಬ್ಬದ ಹಾಡುಗಳಿಂದ ಸಮೃದ್ದವಾಗಿದೆ. ಸಾಹಿತ್ಯದ ಕೃಷಿ ಮೊದಲಿಗೆ ಮಾಧವ ಕಂದಲಿ,ಹೇಮಾ ಸರಸ್ವತಿ ಮತ್ತುಹರಿವರ ಬಿಪ್ರ ಇವರ ಕೃತಿಗಳಿಂದ ಪ್ರಾರಂಭವಾಯಿತು.ಮೊದಲ ಸಾಹಿತ್ಯ ಕೃತಿಗಳು ಎಪಿಕ್ಗರಳು ಮತ್ತು ಪೌರಾಣಿಕ ಕಥನಗಳಾಗಿದ್ದವು.ಇಲ್ಲಿ ಶ್ರೀಮಾತ ಶಂಕರದೇವ ಮತ್ತು ಮಾಧವ ದೇವ ಇವರ ಕೊಡುಗೆ ಗಣನೀಯವಾಗಿದೆ. ಅಸ್ಸಾಂ ಸಾಹಿತ್ಯದ ಮೂಲ ಭಾಷೆಯಾಗಿ ಸಂಸ್ಕೃತ ಇದ್ದು ನಂತರ ಬ್ರಜವಳಿ ಎಂಬ ಭಾಷೆ ಚಾಲ್ತಿಗೆ ಬಂತು.ಈ ಭಾಷೆ ನಂತರ ಮರೆಯಾದರೂ ಅಸ್ಸಾಂ ಸಾಹಿತ್ಯದ ಮೇಲೆ ತನ್ನ ನೆರಳನ್ನು ಉಳಿಸಿ ಹೋಗಿದೆ.
- ಅಹೋಮರ ಇತಿಹಾಸವನ್ನು ’ಬುರಂಜಿ’ ಎಂದು ಕರೆಯಲಾಗುತ್ತದೆ.ಬುರಾಂಜಿಯನ್ನು ಮೊದಲಿಗೆ ’ತಾಯ್’ ಭಾಷೆಯಲ್ಲಿ ರಚಿಸಿದ್ದು ಇದನ್ನು ಓದಿದವರನ್ನು ಗೌರವದಿಂದ ಕಾಣಲಾಗುತ್ತದೆ. ಅಸ್ಸಾಂ ಸಾಹಿತ್ಯವನ್ನು ಆರನೇ ಶತಮಾನದಿಂದ ಹದಿನೈದನೇ ಶತಮಾನದವರೆಗೆ ಪುರಾತನ ಅಸ್ಸಾಮಿ ಎಂದೂ,೧೭ ನೇ ಶತಮಾನದಿಂದ ೧೯ ನೇ ಶತಮಾನದ ವರೆಗೆ ಮಧ್ಯಕಾಲೀನ ಅಸ್ಸಾಮಿ ಎಂದೂ ೧೯ ನೆ ಶತಮಾನದ ನಂತರ ಅಧುನಿಕ ಅಸ್ಸಾಮಿ ಸಾಹಿತ್ಯ ಕಾಲ ಎಂದು ಗುರುತಿಸಬಹುದು. ೧೮೪೬ ರಲ್ಲಿ ’ಅರುಣೋದಯ’ ಎಂಬ ಪತ್ರಿಕೆಯನ್ನು ಮಿಶನರಿಗಳು ಪ್ರಾರಂಭ ಮಾಡುತ್ತಾರೆ.ಹಾಗಾಗಿ ಇದು ಅರುಣೋದಯ ಕಾಲ ಎಂದೇ ಹೆಸರಾಗಿದೆ.ಸಾಹಿತ್ಯದ ಪೂರ್ವ ಕಾಲವಾದ ಅಂದು ಆನಂದ ರಾಮ ದೇಬಿಯಾಲ್, ಲಕ್ಷ್ಮಿಕಾಂತ್ ಬೇಜ್ಬದರುವ,ಹೇಮಚಂದ್ರ ಗೋಸ್ವಾಮಿ ಮುಂತಾದವರು ಪ್ರಮುಖ ಬರಹಗಾರರು. ಸಾಹಿತ್ಯದ ಹೊಸ ಚಿಂತನೆಗಳು ಅಂದು ಆರಂಭವಾದವು. ೨೦ ನೆ ಶತಮಾನದ ನಂತರದ ಕಾಲವನ್ನು ಜಾನಕಿ ಕಾಲ ಎಂದು ಕರೆಯಲಾಗುತ್ತದೆ.ಆಗ ಆರಂಭವಾದ ಜಾನಕಿ ಎಂಬ ಪತ್ರಿಕೆ ಸಾಹಿತ್ಯಕ್ಕೆ ಬೆನ್ನೆಲುಬಾಗಿ ನಿಂತಿತ್ತು.
- ಅಸ್ಸಾಂನ ಪ್ರಮುಖ ದಿನಪತ್ರಿಕೆಗಳು-ಅಸ್ಸಾಮಿಯ ಪ್ರತಿದಿನ್,ಅಸ್ಸಾಮಿಯ ಖಬರ್,ಅಗ್ರದೂತ್ ಹಾಗೂ ಟ್ರಿಬ್ಯೂನ್( ಆಂಗ್ಲ ಪತ್ರಿಕೆ). ಪ್ರಮುಖ ಮ್ಯಾಗಜಿನ್ಗರಳು- ಬಿಸ್ಮೊಯಯ್, ಪ್ರಾಂತಿಕ್,ಮಾಯ ತ್ರಿಶೂಲ್ ಇತ್ಯದಿ. ಅಸ್ಸಾಂ ಸಾಹಿತ್ಯ ಸಭೆ ಹಾಗೂ ಬೋಡೋ ಸಾಹಿತ್ಯ ಸಭಾ ಸಾಹಿತ್ಯದ ಬೆಳವಣಿಗೆಗೆ ಸಾಕಷ್ಟು ಶ್ರಮಿಸುತ್ತಿದ್ದು ಇಂದಿನ ನವೋದಯ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿದೆ.
ವಿವಾಹ
[ಬದಲಾಯಿಸಿ]- ವಿವಾಹ ಮತ್ತು ಅದರ ಪೂರ್ವೋತ್ತರಗಳು ಭಾರತದ ಎಲ್ಲಾ ರಾಜ್ಯಗಳ ಹಿಂದೂ ಸಂಸ್ಕೃತಿಯಲ್ಲಿ ಬಹುತೇಕ ಸಾಮಾನ್ಯವಾಗಿವೆ. ರಾಜ್ಯಗಳಲ್ಲಿ ವಿಭಿನ್ನ ಆಚರಣೆಗಳು ಕಂಡುಬಂದರೂ ಅವುಗಳ ಮೂಲ ಉದ್ದೇಶ ಒಂದೇ ಆಗಿರುತ್ತದೆ.ಅಸ್ಸಾಂನ ವಿವಾಹ ಭಾರತೀಯ ಹಿಂದೂ ಸಂಸ್ಕೃತಿಯ ವಿವಾಹವನ್ನು ಹೋಲಿದರು ತನ್ನದೇ ಆದ ವಿಶಿಷ್ಟ ಆಚರಣೆಗಳನ್ನು ಹೊಂದಿದೆ.ಅಸ್ಸಾಮೀಯರ ವಿವಾಹ ಆಚರಣೆ ಎರಡು ಅಥವಾ ಮೂರು ದಿನಗಳ ಅವಧಿ ಹೊಂದಿರುತ್ತದೆ.
- ಮೊದಲ ಹಂತದಲ್ಲಿ ವರನ ತಾಯಿ ವಧುವಿನ ಮನೆಗೆ ಭೇಟಿ ನೀಡಿ ಚಿನ್ನದ ಒಡವೆಯೊಂದನ್ನು ಸೊಸೆಗೆ ನೀಡಿ ಹರಸಿ ವಧುವಿನ ಬೈತಲೆಗೆ ಕುಂಕುಮ ಇಡುವುದರೊಂದಿಗೆ ವಿವಾಹ ಆಚರಣೆ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ವಧುವಿಗೆ ಮದುವೆಯ ವಿಶೇಷ ಉಡುಗೆಯೊಂದನ್ನು ನೀಡಲಾಗುತ್ತದೆ.ಇದನ್ನು ’ಜುರಾನ್’ ಎಂದು ಕರೆಯಲಾಗುತ್ತದೆ.
- ’ತೇಲ್ ದಿಯ’ ಎರಡನೇ ಹಂತ.ವರನ ತಾಯಿ ವಧುವಿಗೆ ಮೂರುಬಾರಿ ಎಣ್ಣೆ ಎರೆಯುತ್ತಾಳೆ.ನಂತರ ಪವಿತ್ರ ಸ್ನಾನ. ಮದುವೆಯ ದಿನ ವಧುವಿನ ಮನೆಗೆ ಮೊಸರಿನ ಕುಡಿಕೆ ಕಳುಹಿಸಲಾಗುತ್ತದೆ. ಈ ಆಚರಣೆ ’ದೈಯಾನ್ ದಿಯ’. ವಧು ಆ ಮೊಸರಿನಲ್ಲಿ ಅರ್ಧ ತಿಂದು ವರನ ಮನೆಗೆ ವಾಪಸ್ ಕಳುಹಿಸುತ್ತಾಳೆ.ನಂತರ ವರ ಮತ್ತು ವಧುವಿಗೆ ಸಾಂಪ್ರದಾಯಿಕ ಸ್ನಾನ ಮಾಡಿಸಲಾಗುತ್ತದೆ. ವಿವಾಹ ಸಂದರ್ಭದಲ್ಲಿ ವಧು ’ಮೆಖಲಾ ಚಾದರ್’ ಎಂಬ ವಿಶೇಷ ಉಡುಗೆ ಧರಿಸುತ್ತಾಳೆ. ವರ ರೇಷ್ಮೆ ಕುರ್ತಾ ಮತ್ತು ಧೋತಿ ಧರಿಸುತ್ತಾನೆ. ವಿವಾಹಕ್ಕೆ ಮೊದಲು ಆರತಕ್ಷತೆ ಇರುತ್ತದೆ.ವಿವಾಹ ಸಮಾರಂಭಕ್ಕೆ ಬಂದವರಿಗೆ ಮೀನು ಮತ್ತು ಮಾಂಸದ ಊಟ ಹಾಗೂ ಅಕ್ಕಿಯಿಂದ ತಯಾರಿಸಿದ ಬಿಯರ್ ನೀಡಲಾಗುತ್ತದೆ.
- ನಂತರ ವರನಿಗೆ ವಧುವಿನತಾಯಿ ಆರತಿ ಬೆಳಗಿ ಸ್ವಾಗತಿಸುತ್ತಾಳೆ.ವರ ವಧುವಿನ ತಂಗಿಗೆ ಭಾರಿ ವಧು ದಕ್ಷಿಣೆಯನ್ನು ನೀಡುತ್ತಾನೆ.ವಧುವಿನ ತಂಗಿ ವರನ ಕಾಲುಗಳನ್ನು ತೊಳೆದು ಗೌರವಿಸುತ್ತಾಳೆ. ಮುಂದೆ ವಿವಾಹ ಸಮಾರಂಭ. ವರನನ್ನು ವಧುವಿನ ಸೋದರ ತನ್ನ ತೋಳುಗಳಲ್ಲಿ ಎತ್ತಿ ತಂದು ಮಂಟಪದಲ್ಲಿ ಕೂರಿಸುತ್ತಾನೆ. ನಂತರ ಮಂಟಪಕ್ಕೆ ಬರುವ ವಧು ತುಪ್ಪ, ಜೇನು,ಮೊಸರು,ಹಾಲು ,ಸಕ್ಕರೆ ಒಳಗೊಂಡ ’ಅಮೃತ’ ಎಂಬ ರಸಾಯನ ಸೇವಿಸುತ್ತಾಳೆ. ಆಕೆಯನ್ನು ಅವಳ ಸೋದರ ಮಾವ ತನ್ನ ತೋಳುಗಳಲ್ಲಿ ಎತ್ತಿ ತಂದು ಮಂಟಪದಲ್ಲಿ ಕೂರಿಸುತ್ತಾನೆ.
- ಪವಿತ್ರ ಅಗ್ನಿಯ ಮುಂದೆ ಪಂಡಿತರು ಮಂತ್ರಗಳನ್ನು ಹೇಳುವುದರೊಂದಿಗೆ ಹಾರಗಳನ್ನು ವಧು ವರರು ಬದಲಾಯಿಸಿಕೊಳ್ಳುತ್ತಾರೆ. ನಂತರ ವರ ಮಂಗಳ ಸೂತ್ರವನ್ನು ವಧುವಿನ ಕೊರಳಿಗೆ ತೊಡಿಸುತ್ತಾನೆ. ಇಲ್ಲಿಗೆ ವಿವಾಹ ಸಮಾರಂಭ ಮುಕ್ತಾಯವಾಗಿ ವಧು ವರನ ಮನೆ ಸೇರುತ್ತಾಳೆ. ಈ ಪದ್ದತಿಗಳು ಭಾರತದ ಎಲ್ಲೆಡೆ ಒಂದೇ ರೀತಿ ಇರುವುದು ವಿಶೇಷ. ಇಂತಹ ವಿಶೇಷಗಳಿಂದಲೇ ಭಾರತೀಯ ವಿವಾಹಗಳು ಶಾಶ್ವತವಾಗಿ ಉಳಿಯುವುದು.
ವಿದ್ಯಾಭ್ಯಾಸ
[ಬದಲಾಯಿಸಿ]- ಅಸ್ಸಾಂ ರಾಜ್ಯದಲ್ಲಿ ಸಾಕ್ಷರತಾ ಪ್ರಮಾಣ ಶೇ.೬೫ ಇದೆ.ಇದಕ್ಕೆ ಕಾರಣ ಅಲ್ಲಿನ ಸರ್ಕಾರ ೧೪ ವರ್ಷದವರೆಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಆದೇಶ ಹೊರಡಿಸಿದೆ.ಪ್ರಸ್ತುತ ಅಸ್ಸಾಂ ರಾಜ್ಯದಲ್ಲಿ ೪೦ ಸಾವಿರಕ್ಕೂ ಹೆಚ್ಚು ಶಾಲೆಗಳಿವೆ.ಈ ಶಾಲೆಗಳಲ್ಲಿ ಬಹುತೇಕ ಬೆಂಗಾಲೀ ಮತ್ತು ಆಂಗ್ಲ ಭಾಷೆ ಶೈಕ್ಷಣಿಕ ಮಾಧ್ಯಮವಾಗಿದೆ.ಕೇಂದ್ರ ಸರ್ಕಾರದ ಕೇಂದ್ರಿಯ ವಿದ್ಯಾಲಯಗಳು ಸಾಕಷ್ಟಿವೆ. ಹಿಂದೆ ಮತ್ತು ಈಗ ಮಿಶನರಿಗಳು ಸ್ಥಾಪಿಸಿದ ಅನೇಕ ಶಾಲಾ ಕಾಲೇಜುಗಳು ಆಂಗ್ಲ ವಿದ್ಯಾಭ್ಯಾಸವನ್ನು ಪರಿಚಯಿಸಿ ಅಸ್ಸಾಂ ಮಕ್ಕಳಿಗೆ ಹೊಸ ಮನ್ವಂತರವನ್ನೇ ತೆರೆದಿವೆ.
- ಉನ್ನತ ವಿದ್ಯಾಭ್ಯಾಸಕ್ಕೂ ಸಾಕಷ್ಟು ಅವಕಾಶ ಇದ್ದು ಇಲ್ಲಿ ಗೌಹಾತಿ ವಿಶ್ವವಿದ್ಯಾಲಯ ೧೯೪೮ ರಲ್ಲಿ ಪ್ರಾರಂಭವಾಯಿತು. ಈ ವಿಶ್ವವಿದ್ಯಾಲಯದ ಅಡಿ ಸುಮಾರು ೨೦೦ ಕ್ಕೂ ಹೆಚ್ಚು ಕಾಲೇಜುಗಳು ಕಾರ್ಯ ನಿರ್ವಹಿಸುತ್ತವೆ. ದಿಬ್ರೂಘರ್ ಮತ್ತು ತೇಜ್ಪುಿರಗಳಲ್ಲಿ ವಿಶ್ವವಿದ್ಯಾಲಯಗಳು ಆರಂಭವಾಗಿದ್ದು ಇವುಗಳ ಅಧೀನದಲ್ಲಿನ ಪದವಿ ಕಾಲೇಜುಗಳಲ್ಲಿ ಕಲೆ, ವಿಜ್ಞಾನ, ವಾಣಿಜ್ಯ, ಕಾನೂನು ಮತ್ತು ಎಂಜಿನೀರಿಂಗ್ ಹಾಗು ವೈದ್ಯಕೀಯ ಶಿಕ್ಷಣ ನೀಡಲಾಗುತ್ತಿದೆ. ಅಸ್ಸಾಂನಲ್ಲಿ ಈಗ ೪ ಮೆಡಿಕಲ್ ಮತ್ತು ೪ ಎಂಜಿನೀರಿಂಗ್ ಕಾಲೇಜುಗಳು ಇವೆ. ಗೌಹಾತಿ ನಗರದಲ್ಲಿ ಪ್ರತಿಷ್ಟಿತ ಐ.ಐ.ಟಿ ಸಂಸ್ಥೆ ಇದೆ.೧೯೦೧ ರಲ್ಲಿ ಪ್ರಾರಂಭವಾದ ಕಾಟನ್ ಕಾಲೇಜ್ ಹಳೆಯ ವಿದ್ಯಾ ಸಂಸ್ಥೆ. ಸಿಲ್ಚಾನರ್ ನಲ್ಲಿ ಎನ್ಐ.ಟಿ ಸಂಸ್ಥೆ ಸಹಾ ಇದೆ. ಜೋರ್ಹಟ್ನನಲ್ಲಿ ಕೃಷಿ ವಿಶ್ವ ವಿದ್ಯಾಲಯ,ರೋಹಾದಲ್ಲಿ ಮೀನುಗಾರಿಕಾ ಕಾಲೇಜು ಕಾರ್ಯ ನಿರ್ವಹಿಸುತ್ತಿವೆ. ಅಸ್ಸಾಂನಲ್ಲೂ ಸಹ ಶಾಲೆ ಬಿಡುವ ಮಕ್ಕಳ ಸಂಖ್ಯೆ ೧೦ ನೇ ತರಗತಿ ನಂತರ ಶೇ.೭೫ ಇದೆ.
ಕಾಡು-ಕೃಷಿ-ವಾಣಿಜ್ಯ
[ಬದಲಾಯಿಸಿ]- ಬ್ರಹ್ಮಪುತ್ರಾ ನದಿ ಅಸ್ಸಾಮ್ನಿ ಜೀವನದಿ.ಇದು ರಾಜ್ಯದ ಉತ್ಪನ್ನವನ್ನು ಹೆಚ್ಚಿಸಿದಂತೆ ಅಲ್ಲಿನ ಸಮಸ್ಯೆಗಳಿಗೂ ಕಾರಣವಾಗಿದೆ.ಮಳೆಗಾಲದಲ್ಲಿ ಪ್ರವಾಹ ಸಾಮಾನ್ಯ. ಉಕ್ಕಿ ಹರಿಯುವ ಬ್ರಹ್ಮಪುತ್ರ ಜನರನ್ನು ಕಂಗೆಡಿಸುತ್ತದೆ. ಈ ನದಿಗೆ ಸಾಕಷ್ಟು ವ್ಯವಸಾಯ ಪ್ರದೇಶ ಇದೆ. ಇದರಿಂದ ಬೇಸಾಯ ಮತ್ತು ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಅಸ್ಸಾಂನಲ್ಲಿ ಸುಮಾರು ೪.೭೭ ಲಕ್ಷ ಹೆಕ್ಟೆರುಗಳಷ್ಟು ವ್ಯವಸಾಯ ಭೂಮಿ ಇದೆ.
- ಇಲ್ಲಿನ ಪ್ರಮುಖ ಆಹಾರ ಬೆಳೆ ಗೋಧಿ, ಭತ್ತ, ಹಣ್ಣು, ತರಕಾರಿ. ವಾಣಿಜ್ಯ ಬೆಳೆಗಳಾಗಿ ಅಡಕೆ,ಎಣ್ಣೆ ಕಾಳು, ಸಣಬು, ಕೊಬರಿ ಇದೆ. ಅಸ್ಸಾಂ ಇಡಿ ದೇಶದಲ್ಲಿ ಹೆಚ್ಚು ಅಡಕೆ ಬೆಳೆಯುವ ೩ ನೇ ರಾಜ್ಯ. ಟೀ ಬೆಳೆ ಇಲ್ಲಿನ ಪ್ರಮುಖ ಆದಾಯದ ಮೂಲ. ಆದರೆ ಟೀ ತೋಟಗಳ ಮಾಲಿಕತ್ವ ಸ್ಥಳೀಯರಿಗಿಂತಾ ಹೆಚ್ಚಾಗಿ ಕಂಪನಿಗಳ ಕೈಯಲ್ಲಿ ಇದೆ. ಜನ ಈ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ತಮ್ಮ ಜೀವನೋಪಾಯ ಕಂಡುಕೊಂಡಿದ್ದಾರೆ.
- ವ್ಯಾಪಾರ ವಹಿವಾಟಿನಲ್ಲಿ ಅಸ್ಸಾಂ ಹಿಂದುಳಿದಿದೆ. ಇವರ ಇತರೇ ಆದಾಯದ ಮೂಲ ಗೃಹ ಮತ್ತು ಗುಡಿ ಕೈಗಾರಿಕೆ. ಬೊಂಬಿನ ಕುಶಲ ಕಲೆಗಳಿಗೆ ಮತ್ತು ತಾಮ್ರ ಹಾಗು ಇತರ ಲೋಹಗಳ ಸಲಕರಣೆ ತಯಾರಿಕೆಗೆ ಅಸ್ಸಾಮ್ ಹೆಸರುವಾಸಿಯಾಗಿದೆ. ಇಲ್ಲಿ ರೇಷ್ಮೆ ಉದ್ಯಮ ಸಹಾ ಇದೆ. ಇಲ್ಲಿ ಉತ್ಪಾದನೆಯಾಗುವ ವಿಶಿಷ್ಟ ರೇಷ್ಮೆ ’ಮುಗ’ ವಿಶ್ವದ ಬೇರೆಲ್ಲೂ ಬೆಳೆಯಲ್ಪಡುವುದಿಲ್ಲ. ನವಿರಾದ ಎಳೆಗಳನ್ನು ಹೊಂದಿದ ಇದು ವಿಶ್ವ ವಿಖ್ಯಾತ. ಎರಿ, ಟಸ್ಸಾರ್,ಮತ್ತು ಮಲಬಾರಿ ಇತರೆ ಜಾತಿಯವು.
- ಇಷ್ಟೆಲ್ಲ ಇದ್ದರೂ ಇಲ್ಲಿನ ತಲಾ ಆದಾಯ ದೇಶದ ಸರಾಸರಿಗಿಂತಾ ಕಡಮೆ ಇದೆ. ಕೈಗಾರಿಕಾ ಬೆಳವಣಿಗೆ ಹೆಚ್ಚಿನ ಮಟ್ಟದಲ್ಲಿ ಇಲ್ಲ. ಇಲ್ಲಿನ ದೊಡ್ಡ ಕೈಗಾರಿಕೆ ತೈಲೋತ್ಪಾದನೆ. ೧೮೮೯ ರಲ್ಲಿ ಪ್ರಾರಂಭವಾದ ದಿಗ್ಬೋಬಯ್ ಹಳೆಯ ತೈಲೋತ್ಪಾದನಾ ಘಟಕ. ಬೊಂಗಾಯ್ಗಾಷವ್ ಮತ್ತು ನುಮಲಿಘರ್‌ನಲ್ಲಿ ಮತ್ತೆರಡು ಘಟಕಗಳಿವೆ.ಭಾರತೀಯ ತೈಲ ನಿಗಮ ಇಲ್ಲಿ ಸುಮಾರು ರೂ.೨೬೦೦ ಕೋಟಿವಹಿವಾಟು ನಡೆಸುತ್ತದೆ. ಇಲ್ಲಿ ತೈಲ ಬಾವಿಗಳಲ್ಲಿ ಉತ್ಪಾದನೆಯಾಗುವ ಉಪ ಉತ್ಪನ್ನಗಳಾದ ಗ್ಯಾಸ್, ಕಲ್ಲಿದ್ದಲು ಇಲ್ಲಿನ ವಾಣಿಜ್ಯಕ್ಕೆ ಕೊಡುಗೆಯನ್ನೇನೂ ನೀಡಿಲ್ಲ.
- ಅಸ್ಸಾಂನ ವ್ಯಾಪಾರದ ತೆರಿಗೆ ಆದಾಯ ವ್ಯಾಟ್ ೨೦೦೯-೧೦ ರಲ್ಲಿ ರೂ.೪.೪೦ ಕೋಟಿ ಮಾತ್ರಾ. ಕರ್ನಾಟಕದ ವಾರ್ಷಿಕ ವ್ಯಾಟ್ ತೆರಿಗೆ ಆದಾಯ ವಾರ್ಷಿಕ ರೂ.೨೨,೦೦೦ ಕೋಟಿ.
- ಅಸ್ಸಾಂನ ಕಾಡುಗಳು ಸ್ಥಳೀಯರಿಗೆ ಆದಾಯದ ಮೂಲಗಳಾಗಿವೆ. ಇಲ್ಲಿ ಬೆಳೆಯುವ ಮರ-ಮುಟ್ಟು,ಔಷದೀಯ ಸಸ್ಯಗಳು ಹೊರ ರಾಜ್ಯಗಳಿಗೆ ಮಾರಾಟವಾಗುತ್ತವೆ. ಅಸ್ಸಾಂನಲ್ಲಿ ಆಯುರ್ವೇದ ಸಸ್ಯಗಳ ಬಳಕೆ ಬಹಳ. ತುಳಸಿ, ಕಂಟಕಾರಿ, ಭಂಗಿ ಸೊಪ್ಪು, ಇತ್ಯಾದಿಗಳು ಬಹಳ ಬಳಕೆಯಾಗುತ್ತವೆ. ಇವುಗಳ ರಸ ಮತ್ತು ತೈಲಗಳನ್ನು ಫಿಸಿಯೋಥೆರಪಿಗೆ ಬಳಸಲಾಗುತ್ತದೆ. ಇದು ಈಗ ಒಂದು ಉದ್ಯಮವಾಗಿ ಬೆಳೆದಿದೆ. ಹಾಗೆಂದೇ ಇಂದು ಕರ್ನಾಟಕದ ಬಹುತೇಕ ಫಿಸಿಯೋಥೆರಪಿ ಕಾಲೇಜುಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಅಸ್ಸಾಮಿಯರೇ ಆಗಿದ್ದಾರೆ.
- ಅಸ್ಸಾಮ್ ಕಾಡುಗಳು ವಿಶಿಷ್ಟ ಏಕದಂತ ಘೇಂಡಾ ಮೃಗಗಳು, ಆನೆಗಳು, ಹುಲಿಗಳು ಮತ್ತು ಅನೇಕ ವಿಶಿಷ್ಟ ಪಕ್ಷಿಗಳಿಗೆ ಆಶ್ರಯ ತಾಣವಾಗಿವೆ. ಇಲ್ಲಿನ ಮಳೆ ಪ್ರಮಾಣ ವಾರ್ಷಿಕ ಸುಮಾರು ೩೦೫ ಇಂಚು.
ಅಭಯಾರಣ್ಯಗಳು
[ಬದಲಾಯಿಸಿ]- ಅಸ್ಸಾಂ ಅಭಯಾರಣ್ಯಗಳ ನಾಡು.ಅವುಗಳಲ್ಲಿ ಪ್ರಮುಖವಾದವನ್ನು ಇಲ್ಲಿ ಹೆಸರಿಸಲಾಗಿದೆ. ಇಲ್ಲಿ ೧೭ ಅಭಯಾರಣ್ಯಗಳು, ೯ ರಾಷ್ಟ್ರೀಯ ಉದ್ಯಾನವನಗಳು (ಕಾಜಿರಂಗ, ಮಾನಸ, ದಿಬ್ರು, ನಮೇರಿ, ಒರಾಂಗ್ ರಾಜೀವ್ ಗಾಂಧಿ ಪಾರ್ಕ್, ಪೊಬಿತಾರ, ಗಿಬ್ಬನ್, ಗರಂಪಾನಿ ಮತ್ತು ಚಕ್ರಶಿಲಾ), ೩ ಹುಲಿ ಅಭಯಾರಣ್ಯಗಳು (ಮಾನಸ,ನಮೇರಿ ಮತ್ತು ಕಾಜಿರಂಗ), ೫ ಆನೆ ಅಭಯಾರಣ್ಯಗಳು ಮತ್ತು ೩೩ ಸಾಮಾಜಿಕ ಅರಣ್ಯ ಪಾರ್ಕ್ಗಾಳು ಇವೆ.
- ಅಸ್ಸಾಂನ ಪ್ರಸಿದ್ದ ರಾಷ್ಟ್ರೀಯ ಉದ್ಯಾನವನ ಕಾಜಿರಂಗ. ಈ ಪಾರ್ಕ್ ಗೌಹಾತಿಯಿಂದ ೨೧೭ ಕಿಮಿ ಮತ್ತು ಜೋರ್ಹಟ್ ವಿಮಾನ ನಿಲ್ದಾಣದಿಂದ ೯೬ ಕಿಮಿ ದೂರವಿದೆ. ಇಲ್ಲಿಗೆ ಭೇಟಿ ನೀಡಲು ನವೆಂಬರ್'ನಿಂದ ಏಪ್ರಿಲ್ ಉತ್ತಮ ಕಾಲ. ಇಲ್ಲಿ ಈ ಕಾಲದಲ್ಲಿ ಬರುವ ಪ್ರವಾಸಿಗರಿಗಾಗಿ ಜೀಪ್ ಸಫಾರಿ,ಆನೆ ಸಫಾರಿ ಏರ್ಪಡಿಸಲಾಗುತ್ತದೆ. ಉಳಿದುಕೊಳ್ಳಲು ಸರ್ಕಾರಿ ಟೂರಿಸ್ಟ್ ಲಾಡ್ಜ್ಗಿಳಿವೆ. ಇದು ಅಂತರ ರಾಷ್ಟ್ರೀಯ ಮಾನ್ಯತೆ ಹೊಂದಿದ್ದು ಇಲ್ಲಿ ಅಳಿವಿನ ಅಂಚಿನಲ್ಲಿರುವ ಪ್ರಾಣಿ-ಪಕ್ಷಿಗಳ ಸಂರಕ್ಷಣೆಗೆ ಪ್ರಯತ್ನಿಸಲಾಗುತ್ತಿದೆ. ಇಲ್ಲಿ ಸುಮಾರು ೭೫ ಕ್ಕೂ ಹೆಚ್ಚು ವಿಧದ ಮರ-ಮುಟ್ಟುಗಳು, ೧೧೫ ಕ್ಕೂ ಹೆಚ್ಚು ಪ್ರಾಣಿ ವೈವಿಧ್ಯಗಳು ಮತ್ತು ನೂರಾರು ಪಕ್ಷಿ ಜಾತಿಗಳು ವಾಸ ಮಾಡುತ್ತಿವೆ. ಈ ಉದ್ಯಾನವನವು ಸುಮಾರು ೮೫೮.೯೮ ಚದರ ಕಿ.ಮಿ. ದೊಡ್ಡದು. ಇಲ್ಲಿ ವಿಶ್ವದಲ್ಲೇ ಅಪರೂಪವಾದ ಒಂಟಿ ಕೊಂಬಿನ ಘೇಂಡಾಮೃಗ ವಾಸಿಸುತ್ತದೆ. ಸುಮಾರು ೨ ಮೀಟರು ಉದ್ದ, ೨-೩ ಟನ್ ತೂಕದ ಈ ಪ್ರಾಣಿ ಸುಮಾರು ೫೦ ವರ್ಷಗಳವರೆಗೆ ಜೀವನ ನಡೆಸುತ್ತದೆ. ಈಗ ವಿಶ್ವದಲ್ಲಿ ಕೆಲವೇ ಸಾವಿರ ಒಂಟಿಕೊಂಬಿನ ಘೇಂಡಾಮೃಗಗಳು ಇದ್ದು ಅದರಲ್ಲಿನ ಮೂರನೇ ಎರಡು ಭಾಗದಷ್ಟು ಇಲ್ಲಿವೆ. ಅವುಗಳ ರಕ್ಷಣೆಗೆ ಸರ್ಕಾರ ಈ ರಾಷ್ಟ್ರೀಯ ಪಾರ್ಕ್'ನ್ನು ಸ್ಥಾಪನೆ ಮಾಡಿದೆ. ಈ ಪ್ರಾಣಿಗಳನ್ನು ಕೊಲ್ಲುವುದು ಅಪರಾಧ ಎಂದು ಕಾನೂನು ಮಾಡಿದ್ದರೂ ಸಹ ಈ ಪ್ರಾಣಿಯ ಕೊಂಬು ಪುರುಷತ್ವವನ್ನು ಹೆಚ್ಚಿಸುತ್ತದೆ ಎಂಬ ಮೂಢ ನಂಬಿಕೆಯಿಂದ ಇವನ್ನು ಕಳ್ಳ ಬೇಟೆಗಾರರು ಕೊಲ್ಲುತ್ತಿದ್ದಾರೆ. ಹಾಗಾಗಿ ಇವುಗಳ ಸಂತತಿ ಕಡಮೆಯಾಗುತ್ತಿದೆ.
- ಆನೆಗಳು ಇಲ್ಲಿನ ಮತ್ತೊಂದು ಆಕರ್ಷಣೆ.ಸ್ವಾಂಪ್ ಜಿಂಕೆ ಮತ್ತೊಂದು ವಿಶಿಷ್ಟ ಪ್ರಾಣಿ.೧೫೦ ಕೇಜಿ ತೂಗುವ ಇವುಗಳ ತುಪ್ಪಳ ಮತ್ತು ಕೊಂಬುಗಳೇ ಇವುಗಳ ಜೀವಕ್ಕೆ ಎರವಾಗುತ್ತಿವೆ. ಇವನ್ನು ಬಾರಾಸಿಂಗ ಎಂದೂ ಕರೆಯಲಾಗುತ್ತದೆ. ವಿಶ್ವದಲ್ಲೇ ವಿರಳವಾಗಿರುವ ಪಿಗ್ಮಿ ಹಾರ್ ಎಂಬ ಹಂದಿ ಜಾತಿಯ ಪ್ರಾಣಿ ಇಲ್ಲಿವೆ.ಕೆಂಪು ಕೂದಲಿನ ಗೋಲ್ಡನ್ ಲಂಗೂರ್ ಕೋತಿಗಳು ಅಸ್ಸಾಂ ಭೂತಾನ್ ಗಡಿಯಲ್ಲಿ ವಾಸಿಸುತ್ತವೆ. ಗಿಬ್ಬನ್ ಜಾತಿಯ ಕೋತಿಗಳೂ ಸಹಾ ಈ ಉದ್ಯಾನವನದಲ್ಲಿವೆ.
- ಸ್ಟಾರ್ಕ್,ಮಂಗಟ್ಟೆ (ಗ್ರೇಟ್ ಇಂಡಿಯನ್ ಹಾರ್ನ್ಬಿಜಲ್) ಮುಂತಾದ ಅಳಿವಿನಂಚಿನಲ್ಲಿರುವ ಪಕ್ಷಿಗಳು ಇಲ್ಲಿ ವಾಸಿಸುತ್ತವೆ. ನೋಡಲು ಸುಂದರವಾದ ಈ ಪಕ್ಷಿಗಳ ಜೊತೆಗೆ ಪ್ರತೀ ವರ್ಷ ಸೈಬೀರಿಯಾದಿಂದ ವಲಸೆ ಬರುವ ಅನೇಕ ಪಕ್ಷಿಗಳು ಇಲ್ಲಿ ನೋಡಲು ಸಿಗುತ್ತವೆ. ಮಾನಸ್ ಉದ್ಯಾನ ಗೌಹತಿಯಿಂದ ೧೭೬ ಕಿಮಿ ದೂರವಿದೆ. ಇಲ್ಲೂ ಸಹ ಘೇಂಡಾಮೃಗಗಳು,ಆನೆಗಳು ಮತ್ತಿತರ ಪ್ರಾಣಿಗಳಿವೆ. ನಮೇರಿ ರಾಷ್ಟ್ರೀಯ ಉದ್ಯಾನವನ ಗೌಹಾತಿಯಿಂದ ೩೫ ಕಿಮಿ ದೂರವಿದೆ.ಭಾಲುಕ್ ಪಂಗ್ ಇಲ್ಲಿನ ಪ್ರಮುಖ ಪ್ರಾಣಿ. ಇಲ್ಲಿಗೆ ಬರಲು ನವೆಂಬರ್‌ನಿಂದ ಮಾರ್ಚ್ ಉತ್ತಮ ಕಾಲ. ದಿಬ್ರು ರಾಷ್ಟ್ರೀಯ ಉದ್ಯಾನವನ ಗೌಹಾಟಿಯಿಂದ ೪೮೩ ಕಿಮಿ ದೂರವಿದೆ. ಇಲ್ಲಿ ಸುಮಾರು ೨೫೦ ವಿಧಗಳ ಪಕ್ಷಿ ಜಾತಿಗಳು ವಾಸ ಮಾಡುತ್ತವೆ. ಓರಂಗ್ ರಾಜೀವ್'ಗಾಂಧಿ ಪಾರ್ಕ್ ಗೌಹಾಟಿಯಿಂದ ೧೫೦ ಕಿಮಿ ದೂರವಿದೆ.ಇಲ್ಲೂ ಸಹ ಪ್ರವಾಸಿಗಳಿಗೆ ಸಾಕಷ್ಟು ಅನುಕೂಲಗಳನ್ನು ಕಲ್ಪಿಸಲಾಗಿದೆ.
ಆಹಾರ-ಅಭ್ಯಾಸ
[ಬದಲಾಯಿಸಿ]- ಬಹುತೇಕ ಅಸ್ಸಾಮಿಗಳು ಮಾಂಸಾಹಾರಿಗಳು. ಇವರ ಆಹಾರ ಪದಾರ್ಥದಲ್ಲಿ ಮಸಾಲೆಗಳ ಬಳಕೆ ಕಡಮೆ. ಆದರೆ ಗಿಡಮೂಲಿಕೆಗಳನ್ನು ತಮ್ಮ ಆಹಾರದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಮೀನು ಮತ್ತು ಹಂದಿ ಮಾಂಸದ ಬಳಕೆ ಜಾಸ್ತಿ. ರೋಹು, ಇಲ್ಲಿಶ್ ಮತ್ತು ಚಿತಲ್ ಜಾತಿಯ ಮೀನುಗಳು ಇಲ್ಲಿ ದೊರೆಯುತ್ತವೆ. ಪ್ರಮುಖ ಮೀನು ಪದಾರ್ಥ ’ತೆಂಗಾ’. ಊಟದೊಂದಿಗೆ ಹುರಿದ ಹಂದಿ ಮಾಂಸದ ಬಳಕೆ ಇದೆ. ಅನ್ನವನ್ನು ಬೇಯಿಸಿ , ಹುರಿದು ತಿನ್ನಲಾಗುತ್ತದೆ. ಹಾಲು ಮತ್ತು ಮೊಸರು ಬಳಸುತ್ತಾರೆ. ಸ್ಥಳೀಯವಾಗಿ ಅಕ್ಕಿಯಿಂದ ತಯಾರಿಸಿದ ಬಿಯರ್ ಬಳಕೆ ಸಾಮಾನ್ಯ.
- ಕಾಲಿಫ್ಲವರ್, ಬೀಟ್ರೂಗಟ್, ಕೂಲ್ದಿಲ್(ಬಾಳೆ ಹೂ), ಬಾಳೆ ಕಂದು, ಕುಂಬಳ, ಸೋರೆಕಾಯಿ (ಜಲಿಲಾನ್), ಪಡುವಲಕಾಯಿ (ದುಂದುಲಿ), ಬೂದುಗುಂಬಳ (ಕೋಮೋರ), ಹಾಗಲ (ಖೆರಲ), ಬೆಂಡೆ, ಕ್ಯಾರಟ್, ಟೊಮೋಟೋ, ಪಪ್ಪಾಯ ಮತ್ತು ಬೇಳೆಕಾಳುಗಳನ್ನು ಬಳಸಲಾಗುತ್ತದೆ. ಸೇಬನ್ನು ಅಪೀಲ್’ಎಂದು, ಬಾಳೆಯನ್ನು ಕೋಲ್ ಎಂದೂ, ಬೆಳ್ಳುಳ್ಳಿಗೆ ನಹಾರೋ, ಸೀಬೆಗೆ ಮಧುರಿಮ್ ಮತ್ತು ಕಡಲೇಬೀಜಕ್ಕೆ ಮೋಟುರ್ ಎಂದು ಕರೆಯುತ್ತಾರೆ.
- ಎರಿಪೋಲು ಎಂಬ ಪದಾರ್ಥ ಇಲ್ಲಿ ಬಹಳ ಪ್ರಸಿದ್ದ.ಇದನ್ನು ಇಲ್ಲಿನ ವಿಶೇಷ ರೇಶ್ಮೆ ’ಎರಿ’ಯ ಗೂಡಿನಿಂದ ನೂಲು ತೆಗೆದ ನಂತರ ಉಳಿಯುವ ಪ್ಯೂಪದಿಂದ ಹುರಿದು ತಯಾರಿಸಲಾಗುತ್ತದೆ. ಇದು ಇಲ್ಲಿನ ಸಾಂಪ್ರದಾಯಿಕ ಆಹಾರ. ಇಲ್ಲಿ ಟೀ ಬಳಕೆ ಜಾಸ್ತಿ ಇದೆ.
[೧][೨][೩][೪]
ಜಿಲ್ಲೆಗಳು
[ಬದಲಾಯಿಸಿ]ಅಸ್ಸಾಮ್ನುಲ್ಲಿ ಒಟ್ಟು ೨೭ ಜಿಲ್ಲೆಗಳು ಇವೆ.ಇವುಗಳನ್ನು ಸ್ಥೂಲವಾಗಿ ಕೇಂದ್ರ ಅಸ್ಸಾಂ ಜಿಲ್ಲೆಗಳು,ಪಶ್ಚಿಮ ಅಸ್ಸಾಂ ಜಿಲ್ಲೆಗಳು, ಉತ್ತರ ಅಸ್ಸಾಂ ಜಿಲ್ಲೆಗಳು ಮತ್ತು ದಕ್ಷಿಣ ಅಸ್ಸಾಂ ಜಿಲ್ಲೆಗಳು ಎಂದು ವಿಭಾಗಿಸಬಹುದು.
- ಧೇಮ್ಜಿ್ ಜಿಲ್ಲೆ
ಪಶ್ಚಿಮ ಅಸ್ಸಾಮ್ನಜಲ್ಲಿ ಬರುವ ಈ ಜಿಲ್ಲೆರಾಜ್ಯದ ರಾಜಧಾನಿ ಡಿಸ್ಪುರರದಿಂದ ೫೦೦ ಕಿಮಿ ದೂರವಿದೆ.ಗೇರುಕಾ ಮುಖ್ ಎಂಬ ಸ್ಥಳ ಜಿಲ್ಲಾ ಕೇಂದ್ರದಿಂದ ೪೪ ಕಿಮಿ ದೂರವಿದೆ.ಇದು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಸ್ಥಳ.ಇಲ್ಲಿ ಜಲ ವಿದ್ಯುದಾಗಾರವೊಂದಿದೆ.
- ಮಾಲಿನಿ ಥಾನ್
ಧೇಮ್ ಜಿಯಿಂದ ೪೨ ಕಿಮಿ ದೂರವಿದೆ.ಇಲ್ಲಿ ಮಾಲಿನಿ ದೇವಿಯ ಪುರಾತನ ಮಂದಿರವಿದೆ.ಪುರಾತನ ಇತಿಹಾಸದ ಪಳೆಯುಳಿಕೆಗಳು ಉತ್ಖನನದಿಂದ ದೊರೆತಿವೆ.
- ಗುಗುಹಾ ಧೋಲ್
ಜಿಲ್ಲಾ ಕೇಂದ್ರದಿಂದ ೨೫ ಕಿಮಿ ದೂರವಿದೆ. ಅಹೋಂ ಅರಸ ಗೌರಿನಾಥ ಸಿಂಘಾ ನಿರ್ಮಿಸಿದನೆಂದು ಹೇಳಲಾದ ಕಟ್ಟಡ ಇದೆ. ಇದರೊಂದಿಗೆ ರಾಜ್ಘತರ್,ಘರಾಕಿಯಾ ಥಾನ್ ಮತ್ತು ರಾಜ್ ಘರ್ ಆಲಿ ನೋಡಬಹುದಾದ ಸ್ಥಳಗಳು.
- ತೀನ್ಸುಲಖಿಯಾ ಜಿಲ್ಲೆ
ಗೌಹಾತಿಯಿಂದ ೫೦೦ ಕಿಮಿ ದೂರವಿರುವ ಈ ಪಟ್ಟಣ ಕೈಗಾರಿಕಾ ನಗರ ಎಂದು ಹೆಸರಾಗಿದೆ.ಇಲ್ಲಿ ಟೀ ವ್ಯಾಪಾರ ಹೆಚ್ಚಾಗಿ ನಡೆಯುತ್ತದೆ. ಕಿತ್ತಳೆ ಬೆಳೆಗೆ ಹೆಸರುವಾಸಿ.ಪ್ರವಾಸಿಗರಿಗಾಗಿ ದಹಿಂಗ್ ಪಟ್ಕಾಯ ಟೀ ಹಬ್ಬವನ್ನು ಪ್ರತೀ ವರ್ಷ ಜನವರಿ ತಿಂಗಳಲ್ಲಿ ಆಚರಿಸಲಾಗುತ್ತದೆ. ಹಬ್ಬದ ಅಚರಣೆಯ ಸ್ಥಳ ತೀನ್ಸುರಖಿಯಾದಿಂದ ೭೦ ಕಿಮಿ ದೂರವಿದೆ.ರಸ್ತೆ ಮತ್ತು ರೈಲು ಪ್ರಯಾಣದಿಂದ ಇಲ್ಲಿಗೆ ತಲುಪಬಹುದು.ಇಲ್ಲಿ ಶಿವಧಾಮ ಮತ್ತು ಮಾರುಕ್ ನಂದನ್ ಕಾನನ್ ಪಾರ್ಕ್ ನೋಡಬಹುದು.ತಂಗಲು ಉತ್ತಮ ಹೋಟೆಲುಗಳಿವೆ.ತೀನ್ಸುತಖಿಯಾದ ಬಳಿ ಟಿಬೆಟ್ ನಿರಾಶ್ರಿತರಿಗಾಗಿ ಒಂದು ಕ್ಯಾಂಪ್ ಇದ್ದು ಇಲ್ಲಿ ಬಹಳ ಸುಂದರವಾದ ಕಾರ್ಪೆಟ್ಗವಳನ್ನು ತಯಾರಿಸಲಾಗುತ್ತದೆ.
ದಿಬ್ರು ಸೈಕೋವ ರಾಷ್ಟ್ರೀಯ ಪಾರ್ಕ್
[ಬದಲಾಯಿಸಿ]ತೀನ್ಸುಯಖಿಯಾದಿಂದ ೧೪ ಕಿಮಿ ದೂರವಿದೆ.ತೀರ ಜೌಗು ಪ್ರದೇಶವಾಗಿದ್ದು ಕಾಡು ಕುದುರೆಗಳು,ಆನೆಗಳು,ವುಡ್ ಡಕ್,ಕಾಡೆಮ್ಮೆ,ಗಿಬ್ಬನ್ ಕೋತಿಗಳು ವಾಸಿಸುತ್ತವೆ.ಬೇರ್ಜಾನ್-ಬೋರ್ಜಾನೀ ಅಭಯಾರಣ್ಯ ತೀನ್ಸುಸಖಿಯಾದಿಂದ ೬ ಕಿಮಿ ದೂರವಿದೆ.ಇಲ್ಲಿ ಗಿಬ್ಬನ್ ಕೋತಿಗಳು ವಾಸಿಸುತ್ತವೆ.
- ಘಂಟೆ ದೇವಾಲಯ
ತೀನ್ಸುನಖಿಯದಿಂದ ೧೭ ಕಿಮಿ ದೂರವಿದೆ.ಇಲ್ಲಿ ಭಾರಿ ಗಾತ್ರದ ಹಳೆಯ ಅರಳಿ ಮರವೊಂದಿದೆ.ಭಕ್ತರು ಈ ದೇವಾಲಯಕ್ಕೆ ಬಂದು ತಮ್ಮ ಹರಕೆಯನ್ನು ಹೇಳಿಕೊಂಡು ಶಿವನಿಗೆ ಘಂಟೆಯೊಂದನ್ನು ಅರ್ಪಿಸಿ ಅದನ್ನು ಇಲ್ಲಿನ ಮರಕ್ಕೆ ಕಟ್ಟಿದರೆ ಅವರ ಆಸೆ ಈಡೇರುತ್ತದೆ ಎಂಬ ನಂಬಿಕೆ ಇದೆ.
- ದಿಗ್ಬೋ್ಯ್:
೧೮೮೯ ರಲ್ಲಿ ಮೊದಲನೇ ಎಣ್ಣೆ ಭಾವಿಯನ್ನು ಇಲ್ಲಿ ತೋಡಲಾಯ್ತು.ಬ್ರಿಟೀಷರು ಇಲ್ಲಿಗೆ ಬಂದು ತೈಲ ನಿಕ್ಷೇಪವನ್ನು ಕಂಡು ಹಿಡಿದು ಸ್ಥಳೀಯರಿಗೆ 'ಡಿಗ್ ಬಾಯ್, ಡಿಗ್’ ಎಂದು ಅಗೆಯಲು ಹೇಳಿದ ಕಾರಣ ಆ ಪದ ಅಪಭ್ರಂಶವಾಗಿ ದಿಗ್ಬೋತಯ್ ಆಯಿತೆಂದು ಹೇಳಲಾಗುತ್ತದೆ. ಎಣ್ಣೆ ಭಾವಿಗಾಗಿ ಬ್ರಿಟೀಷರು ಮತ್ತು ಬರ್ಮೀಯರ ನಡುವೆ ಯುದ್ದ ನಡೆದು ಅದು ಆಂಗ್ಲೊ-ಬರ್ಮಾ ಯುದ್ಧ ಎಂದು ಹೆಸರಾಗಿದೆ.ಈ ಯುದ್ಧ ಸ್ಮಾರಕ ವೊಂದು ಇಲ್ಲಿದೆ.
- ಸಾದಿಯ
ತೀನ್ಸು್ಖಿಯಾದಿಂದ ೭೫ ಕಿಮಿ ದೂರವಿದೆ.ಈ ಸ್ಥಳ ಮೊದಲು ಆದಿವಾಸಿಗಳ ಸರಕಿನ ಮಾರ್ಕೆಟ್ ಆಗಿತ್ತು.
- ಪರಶುರಾಮ ಕುಂಡ
ತೀನ್ಸುಮಖಿಯಾದಿಂದ ೧೫೦ ಕಿಮಿ ದೂರವಿದೆ.ಈ ಕೊಳದಲ್ಲಿ ಪ್ರತೀ ವರ್ಷ ಸಂಕ್ರಾಂತಿಯಂದು ನೂರಾರು ಭಕ್ತರು ಬಂದು ಸ್ನಾನ ಮಾಡಿ ತಮ್ಮ ಪಾಪಗಳನ್ನು ಕಳೆದುಕೊಂಡ ತೃಪ್ತಿ ಪಡೆಯುತ್ತಾರೆ.
- ಮಾರ್ಗರೀಟಾ
ಟೀ ತೋಟಗಳ ನಡುವೆ ಇರುವ ಈ ಸ್ಥಳ ತನ್ನ ದೈವೀಕ ಸೌಂದರ್ಯಕ್ಕೆ ಹೆಸರಾಗಿದೆ.ಇಲ್ಲಿ ಕುದುರೆಗಳ ಮೇಲೆ ಕುಳಿತು ಸುತ್ತಬಹುದು. ಮಾರ್ಗರೀಟದಲ್ಲಿ ಪ್ಲೈ-ವುಡ್ ತಯಾರಿಕಾ ಘಟಕವಿದೆ.
- ಪಂಗ್ನೌೀ ಪಾಸ್
ತೀನ್ಸುೀಖಿಯಾದಿಂದ ೧೩೦ ಕಿಮಿ ದೂರವಿದ್ದು ಮೈನ್ಮಾರ್ ದೇಶದ ಗಡಿ ಬಳಿಇದೆ.ಇಲ್ಲಿಗೆ ತಲುಪಲು ತೀರಾ ಕಷ್ಟಸಾಧ್ಯವಾದ ಹಾದಿ ಇದೆ.ಈ ಪ್ರದೇಶದಲ್ಲಿ ರಹಸ್ಯವಾದ ’ಲೇಕ್ ಆಫ಼್ ನೋ ರಿಟರ್ನ್’ ಎಂಬ ಸ್ಥಳವಿದೆ.ಇದು ಮೈನ್ಮಾರ್ ನಲ್ಲಿದ್ದು ಇಲ್ಲಿಗೆ ಭೇಟಿ ನೀಡಲು ಪ್ರತಿ ತಿಂಗಳ ೧೫ ಮತ್ತು ೩೦ ರಂದು ಅನುಮತಿಸಲಾಗುತ್ತದೆ. ಈ ಸ್ಥಳದಲ್ಲಿ ಹಿಂದೆ ವಿಮಾನವೊಂದು ರಹಸ್ಯವಾಗಿ ಕಣ್ಮರೆ ಆಯಿತೆಂದು ಹೇಳಲಾಗುತ್ತದೆ.
- ಶಿಬ್‍ಸಾಗರ್ ಜಿಲ್ಲೆ
ಜೋರ್ಹಟ್ನಿಂ್ದ ೫೫ ಕಿಮಿ ದೂರವಿದೆ.ಸಿಮಲ್ಗು್ರಿ ರೈಲು ನಿಲ್ದಾಣದಿಂದ ೧೬ ಕಿಮಿ ಇದೆ.ಈ ಪ್ರದೇಶ ಬಹಳ ಹಿಂದೆ ಆದಿವಾಸಿಗಳ ಆಡಳಿತದಲ್ಲಿತ್ತು.ಈ ನಗರದಲ್ಲಿ ೧೦೪ ಅಡಿ ಎತ್ತರದ ಶಿವನ ವಿಗ್ರಹ ಇದೆ. ಇಲ್ಲಿಗೆ ಭೇಟಿ ನೀಡಲು ಸೆಪ್ಟೆಂಬರ್‌ನಿಂದ ಏಪ್ರಿಲ್ ಉತ್ತಮ ಕಾಲ.ಇಲ್ಲಿ ೧೭೦೩ ರಲ್ಲಿ ನಿರ್ಮಿಸಲಾದ ಏಕಶಿಲಾ ಸೇತುವೆ ಇದೆ.ಇದು ಇಂದಿಗೂ ಸುಸ್ಥಿಯಲ್ಲಿದ್ದು ಈಗಲೂ ಇದರ ಮೇಲೆ ರಾಷ್ಟ್ರೀಯ ಹೆದ್ದಾರಿ-೩೭ ಸಾಗುತ್ತದೆ.
- ರಂಗ್ ಘರ್
೧೭೪೬ ರಲ್ಲಿ ಅಹೋಂ ಅರಸರಿಂದ ನಿರ್ಮಿಸಲ್ಪಟ್ಟ ಎರಡು ಅಂತಸ್ತಿನ ಕಟ್ಟಡ ಮತ್ತು ಆಟದ ಮೈದಾನ ಇದೆ.
- ಕರೆಂಗ್ ಘರ್ ಮತ್ತು ತಾತಾಲ್ ಘರ್
೧೭೦೦ ರಲ್ಲಿ ಈ ಅರಮನೆಗಳು ಅಹೋಂ ಅರಸರಿಂದ ನಿರ್ಮಿಸಲ್ಪಟ್ಟವು.ಈ ಅರಮನೆಗಳಿಂದ ಭೂಗತ ದಾರಿಗಳಿವೆ ಎಂದು ಹೇಳಲಾಗುತ್ತದೆ.ಸರಕು ದಾಸ್ತಾನಿಗೆ ನೆಲಮಾಳಿಗೆಗಳಿವೆ.
- ಚಾರೈಡಿಯೋ
ಇದು ಅಹೋಂ ಅರಸರ ಸಮಾಧಿ ಸ್ಥಳ. ಇಲ್ಲಿ ಅವರ ಪವಿತ್ರಾತ್ಮಗಳಿವೆ ಎಂದು ನಂಬಲಾಗುತ್ತದೆ.ಇಲ್ಲಿ ೧೭೩೪ ರಲ್ಲಿ ೧೨೯ ಎಕರೆಗಳಷ್ಟು ವಿಸ್ತಾರವಾದ ಕೆರೆಯೊಂದನ್ನು ನಿರ್ಮಿಸಲಾಯ್ತು.ಈ ಕೆರೆಯ ದಂಡೆಯ ಮೇಲೆ ಶಿವನ ದೇವಾಲಯವೊಂದಿದೆ.
- ಜೋಯ್ಸಾಯಗರ್ ಕೆರೆ
೩೧೮ ಎಕರೆಗಳಷ್ಟು ವಿಸ್ತಾರವಾಗಿರುವ ಇದು ಮಾನವ ನಿರ್ಮಿತವಾದದ್ದು.ಗೌರೀ ಸಾಗರ ಮತ್ತು ರುದ್ರ ಸಾಗರ ಕೆರೆಗಳು ನೋಡ ತಕ್ಕವು.
- ಆಜನ್ ಪೀರ್ ದರ್ಗಾ ಶರೀಫ್
ಶಿವಸಾಗರದಿಂದ ೨೨ ಕಿಮಿ ದೂರವಿದ್ದು ಮುಸಲ್ಮಾನ ಸಂತ ಆಜನ್ ಪೀರ್‌ನ ಸಮಾಧಿ ಸ್ಥಳವಾಗಿದೆ.ಇಲ್ಲಿಗೆ ಮುಸ್ಲೀಮರು ಬಂದು ಈ ಸಂತನನ್ನು ಪ್ರಾರ್ಥಿಸುತ್ತಾರೆ.
- ದಿಬ್ರುಘರ್ ಜಿಲ್ಲೆ
ಅರುಣಚಲ ಪ್ರದೇಶದ ಪಕ್ಕ ಇರುವ ಈ ಜಿಲ್ಲೆಯನ್ನು ಟೀ ತೋಟಗಳು ಸುತ್ತುವರೆದಿವೆ. ಹಿಮಾಲಯದ ಹಿನ್ನೆಲೆ ಹೊಂದಿದ ಈ ಜಿಲ್ಲೆ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದೆ.ರಾಷ್ಟ್ರಿಯ ಹೆದ್ದಾರಿ-೩೭ ಇಲ್ಲಿಗೆ ತಲುಪುತ್ತದೆ.ರೈಲು ಅನುಕೂಲ ಸಾಕಷ್ಟಿದೆ.ಕೋಲ್ಕತ್ತದಿಂದ ವಿಮಾನ ಸೌಲಭ್ಯ ಇದೆ.ದಿಬ್ರೂಘರ್‌ನಲ್ಲಿ ಒಂದು ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಇದೆ.
- ಕೋಲಿ ಆಯಿ ಮಂದಿರ
ಕೋಲಿ ಆಯಿ ಎಂಬಾಕೆ ದಿಬಾರು ಸತ್ರದ ಮುಖ್ಯ ಪೂಜಾರಿಯ ಮಗಳು. ಈಕೆಗೆ ಭವಿಷ್ಯ ಹೇಳುವ ವಿಶೇಷ ಶಕ್ತಿ ಇತ್ತೆಂದು ಹೇಳಲಾಗುತ್ತದೆ.ಈಕೆಯ ಮರಣಾನಂತರ ದೇವಾಲಯ ನಿರ್ಮಿಸಿ ಆಕೆಯ ಸಮಾಧಿಗೆ ಪೂಜೆ ಸಲ್ಲಿಸಲಾಗುತ್ತದೆ.ಇಲ್ಲಿಗೆ ಪ್ರತೀ ವರ್ಷ ಸಹಸ್ರಾರು ಅಸ್ಸಾಮಿಯರು ಭೇಟಿ ನೀಡುತ್ತಾರೆ.ದಿನೋಯ್ ಸತ್ರ,ದೆಹಿಂಘ್ ನಾಮ್ಟಿ್ ಸತ್ರ,ದಿನ್ ಜೋಯ್ ಸತ್ರ,ಮೊಡರ್ ಕಾಲ್ ಸತ್ರ,ಘರ್ ಪಾರ ಸತ್ರ ಮುಂತಾದುವುಗಳಿವೆ.
- ಜೋರ್‌ಹಟ್ ಜಿಲ್ಲೆ
ಜೋರ್‌ಹಟ್ ಅಹೋಂ ಅರಸರ ಕೊನೆಯ ರಾಜಧಾನಿಯಾಗಿತ್ತು.ಇಲ್ಲಿ ಸುಮಾರು ೧೩೫ ಕ್ಕೂ ಹೆಚ್ಚು ಟೀ ತೋಟಗಳಿವೆ.ಈ ಜಿಲ್ಲೆಯಲ್ಲಿ ಸುಮಾರು ೧.೫ ಲಕ್ಷ ಜನಸಂಖ್ಯೆ ಇದೆ.೧೮೫೬ ರಲ್ಲಿ ಸ್ಥಾಪಿತವಾದ ಈಸ್ಟ್ರನ್ ಥಿಯೋಲಾಜಿಕಲ್ ಕಾಲೇಜ್ ಮತ್ತು ೧೯೪೮ ರಲ್ಲಿ ಸ್ಥಾಪಿತವಾದ ಅಸ್ಸಾಮ್ ಕೃಷಿ ಕಾಲೇಜು ಇದೆ. ಅರಸರ ಕಾಲದಲ್ಲಿ ಆನೆಗಳನ್ನು ಹಿಡಿಯಲು ನಿರ್ಮಿಸಿದ್ದ ಖೆಡ್ಡಾ ಈಗಲೂ ಗಾಜ್ಪುರರದಲ್ಲಿದೆ. ಈ ಜಿಲ್ಲೆಯಲ್ಲಿರುವ ಅಸ್ಸಂನ ಪ್ರಸಿದ್ದ ಸಿನ್ನಮೋರ್ ಟೀ ತೋಟ ೧೮೫೦ ರಿಂದ ಪ್ರಸಿದ್ದಿಯಾಗಿದೆ.
- ಮಜುಲಿ
ಮಜುಲಿ ಬ್ರಹ್ಮಪುತ್ರ ನದಿಯಿಂದ ಸುತ್ತುವರೆದು ದ್ವೀಪದಂತಾಗಿದೆ.ಇದು ವೈಷ್ಣವರಿಗೆ ಪವಿತ್ರವಾದ ಸ್ಥಳ.ಇಲ್ಲಿ ಅವರಿಗೆ ಪವಿತ್ರವಾದ ನಾಲ್ಕು ಸತ್ರಗಳಿವೆ.ಆಯುನಿಯಾತಿ, ದಕ್ಷಿಣಾಪಥ, ಘರಾಮುರ್,ಮತ್ತು ಕಮಲಬಾರಿ ಇವು ಶ್ರೀಮಾತ ಶಂಕರದೇವನ ಕಾಲದಲ್ಲಿ ಸ್ಥಾಪಿತವಾಗಿ ಸಾಂಸ್ಕೃತಿಕ ಬೆಳವಣಿಗೆಗೆ ಸಹಕಾರಿಯಾಗಿವೆ.ಇಲ್ಲಿ ಕೃಷ್ಣನ ಜೀವನಕ್ಕೆ ಸಂಬಂಧಿಸಿದ ಪ್ರಸಂಗಗಳನ್ನು ಅಭಿನಯಿಸಲಾಗುತ್ತದೆ.
- ಬಿಲ್ಲೇಶ್ವರ ಶಿವದೇವಾಲಯ,
ಬುರಿ ಗೋಸಾಯ್ ದೇವಾಲಯಗಳು ನೋಡತಕ್ಕ ಸ್ಥಳಗಳು. ಬಂಗಾಲ ಪುಕುರಿ ಕೆರೆ ರೂಪ್ ಸಿಂಗ್ ಬಂಗಾಲನಿಂದ ನಿರ್ಮಿತವಾಯ್ತು.ರೂಪ್ ಸಿಂಗ್ ಈ ಕೆರೆ ನಿರ್ಮಿಸಲು ತಾನು ಮಾಡಿದ ಕೊಲೆಗೆ ಪ್ರತಿಫ಼ಲವಾಗಿ ಪಡೆದ ಹಣದಿಂದ ನಿರ್ಮಿಸಿದ ಎಂಬ ಕಾರಣಕ್ಕಾಗಿ ಇಂದಿಗೂ ಜನ ಇದರ ನೀರನ್ನು ಬಳಸುವುದಿಲ್ಲ.
- ಗೋಲಾಘಾಟ್ ಜಿಲ್ಲೆ
ಈ ಜಿಲ್ಲೆಯಲ್ಲೆ ಪ್ರಸಿದ್ದ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಇದೆ. ೧೯೦೮ ರಲ್ಲಿ ಸ್ಥಾಪಿತವಾದ ಈ ಪಾರ್ಕ್ ೧೯೮೫ ರಲ್ಲಿ ವಿಶ್ವ ಸಂಸ್ಥೆಯಿಂದ ಸಂರಕ್ಷಿತ ಪ್ರದೇಶ ಎಂದು ಗುರುತಿಸಲ್ಪಟ್ಟಿದೆ. ಈ ಪಾರ್ಕನ್ನು ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಮುಚ್ಚಲಾಗಿರುತ್ತದೆ. ಇಲ್ಲಿಗೆ ಭೇಟಿ ನೀಡಲು ನವೆಂಬರ್‌ನಿಂದ ಮಾರ್ಚ್ ಉತ್ತಮ ಕಾಲ. ಈ ಪಾರ್ಕ್‌ನಲ್ಲಿ ಜೀಪ್ ಸಫ಼ಾರಿ,ಆನೆ ಸಫ಼ಾರಿ ಇದೆ.ತಂಗಲು ಅಸ್ಸಾಮ್ ಸರಕಾರದ ಟೂರಿಸ್ಟ್ ಲಾಡ್ಜ್ ಇದೆ. ಗೋಲಾಘಾಟ್‌ನಿಂದ ೧೮ ಕಿಮಿ ದೂರದಲ್ಲಿ ಬಿಸಿನೀರ ಬುಗ್ಗೆ ಇದೆ. ಇದನ್ನು ಅಸ್ಸಾಮಿಯರು ಗರಂ ಪಾನಿ ಎಂದು ಕರೆಯುತ್ತಾರೆ.ಇದು ದಿಮಾಪುರ ರಸ್ತೆಯ ರಾಷ್ಟ್ರೀಯ ಹೆದ್ದಾರಿ-೩೯ ರ ಬಳಿಯೆ ಇದೆ.ಇದಕ್ಕೆ ತುಸು ದೂರದಲ್ಲಿ ಒಂದು ಶಿವ ದೇವಾಲಯವಿದೆ. ಬಾರ್ಡೊವಾ,ಬಾರ್‌ಪೇಟ,ಮಾದುಪುರಗಳಲ್ಲಿ ವೈಷ್ನವ ಸತ್ರಗಳಿವೆ.ನುಮಿಲಿ ಘರ್‌ನ ಶಿವದೇವಾಲಯ ಅಹೋಂ ಅರಸರಿಂದ ನಿರ್ಮಿತವಾದದ್ದು.ಇಲ್ಲಿ ಸಾವಿರಾರು ಸಂಖ್ಯೆಯ ಕೋತಿಗಳಿವೆ.
- ನಲಬಾರಿ ಜಿಲ್ಲೆ
ಇದು ಗೌಹಾತಿಯಿಂದ ೯೫ ಕಿಮಿ ದೂರವಿದೆ.ಇಲ್ಲಿ ಮುಬಾರಿ ದಾಸ ಹಬ್ಬವನ್ನು ಅಚರಿಸಲಾಗುತ್ತಿದ್ದು ಇದು ಸಾಮಾಜಿಕ ಮತ್ತು ಸಾಂಸ್ಕೃತಿಕ ಹಬ್ಬ.ಇಲ್ಲಿ ಶ್ರೀ ಕೃಷ್ಣನ ರಾಸ ಲೀಲಾ ದೃಶ್ಯಗಳನ್ನು ಶ್ರದ್ದೆ ಮತ್ತು ಭಕ್ತಿಗಳಿಂದ ಆಚರಿಸಲಾಗುತ್ತದೆ. ಹರಿ ದೇವಾಲಯದ ಅಂಗಳದಲ್ಲಿ ನವೆಂಬರ್ ತಿಂಗಳಲ್ಲಿ ಈ ಹಬ್ಬ ನಡೆಯುತ್ತದೆ. ವಾಸುದೇವ ದೇವಾಲಯ,ಕಾಲ ಭೈರವ ಲಿಂಗರಾಜ ಮಂದಿರ,ಬಾಗೇಶ್ವರಿ,ಗೌರಿ ದೇವಾಲಯ,ಹರಿ ಮಂದಿರ,ಬಿಲ್ಲೇಶ್ವರ ಮಂದಿರ,ಅಡಬಾರಿ ಕಾಳಿ ದೇವಾಲಯ ನೋಡತಕ್ಕ ಸ್ಥಳಗಳು. ಗೋ ಹೈ ಕಮಾಲ್ ಅಲಿ ರಸ್ತೆಯು ಕೋಚ್ ಅರಸ ಕಮಾಲ್ ನಿಂದ ನಿರ್ಮಿಸಲ್ಪಟ್ಟಿತು.ಕೂಚ್ ಬಿಹಾರ ಮತ್ತು ಉತ್ತರ ಲಖಿಂಪುರಗಳನ್ನು ಸಂಪರ್ಕಿಸುವ ಈ ರಸ್ತೆಯ ನಿರ್ಮಾಣ ಅದ್ಭುತವಾಗಿದೆ.
- ಬಾರ್‌ಪೇಟಾ ಜಿಲ್ಲೆ
ಬಾರ್‌ಪೇಟ ಪಟ್ಟಣವು ರಾಜಧಾನಿಯಿಂದ ೧೪೦ ಕಿಮಿ ದೂರವಿದೆ. ಈ ಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿ-೩೧ ಹಾದುಹೋಗುತ್ತದೆ.ಇಲ್ಲಿನ ಹೋಳಿಹಬ್ಬ ಅಥವಾ ದೌಲಿ ಜಾತ್ರೆ ಪ್ರಸಿದ್ದವಾಗಿದೆ.ಇದನ್ನು ವಸಂತ ಹಬ್ಬ ಎಂದೂ ಕರೆಯಬಹುದು.ವಸಂತನ ಆಗಮನವನ್ನು ಸ್ವಾಗತಿಸುವ ಸಲುವಾಗಿ ನೃತ್ಯಗಳು ಮತ್ತು ಹೋಳಿ ಹಾಡುಗಳನ್ನು ಹಾಡುತ್ತಾರೆ.ಇದೇ ಸಂದರ್ಭಗಳಲ್ಲಿ ಇಲ್ಲಿನ ಸತ್ರಗಳಾದ ಬಾರ್‌ಪೇಟ ಸತ್ರ,ಸೌಂದರಿಯ ಸತ್ರ ಮತ್ತು ಗಣಕ್ಕುಚಿ ಸತ್ರಗಳಲ್ಲಿ ದಶಾವತಾರದ ನೃತ್ಯಗಳನ್ನು ಅಭಿನಯಿಸಲಾಗುತ್ತದೆ.ಇಲ್ಲಿನ ಸತ್ರಗಳು ಮತ್ತು ಅವುಗಳ ಶಾಖೆಗಳಲ್ಲಿ ಜಾನಪದ ಲೋಕಸಂಗೀತ, ಲಾವಣಿ ಮತ್ತು ಧಾರ್ಮಿಕ ಹಾಗೂ ಸಾಂಸ್ಕೃತಿಕ ಗೀತೆಗಳನ್ನು ಹಾಡಿ ಅಭಿನಯಿಸಲಾಗುತ್ತದೆ.ಇಲ್ಲಿ ಹಿತ್ತಾಳೆ ಕರಕುಶಲ ವಸ್ತುಗಳನ್ನು ತಯಾರಿಸಲಾಗುತ್ತದೆ. ಅಷ್ಟೇನು ಮುಂದುವರೆಯದ ಇಲ್ಲಿ ವಿಶೇಷಗಳೇನೂ ಇಲ್ಲ.
ಪಾಠಶಾಲ
[ಬದಲಾಯಿಸಿ]- ಇದನ್ನು ಅಸ್ಸಾಮಿನ ಹಾಲಿವುಡ್ ಎಂದು ಕರೆಯ ಬಹುದು.ಇದು ಬಾರ್‌ಪೇಟದಿಂದ ೩೭ ಕಿಮಿ ದೂರವಿದೆ.ಇಲ್ಲಿ ಸಾಕಷ್ಟು ರಂಗ ಚಟುವಟಿಕೆಗಳು ಸದಾಕಾಲ ನಡೆಯುತ್ತಿರುತ್ತವೆ. ಮಾನಸ್ ರಾಷ್ಟ್ರೀಯ ಪಾರ್ಕ್ ಇದೆ.
- ಬೊಂಗಾಯ್ಗಾಾವ್ ಜಿಲ್ಲೆ
- ಜೋಗಿ ಗೋಪಾ ಒಂದು ಐತಿಹಾಸಿಕ ಪ್ರಸಿದ್ದ ಸ್ಥಳ.ಈ ಪ್ರದೇಶಕ್ಕೆ ಹಿಂದೆ ಅಭಯಪುರಿ ಎಂದು ಕರೆಯಲಾಗುತ್ತಿತ್ತು.ಇಲ್ಲಿ ಅಶೋಕ ಅಷ್ಟಮಿಯ ದಿನ ಸಹಸ್ರಾರು ಭಕ್ತರು ನೆರೆದು ಪ್ರಾರ್ಥಿಸುತ್ತಾರೆ. ಬಾಗೇಶ್ವರಿ ಬೆಟ್ಟ ಬೊಂಗಾಯ್ಗಾಾವ್ನಿಂುದ ೧ ಕಿಮಿ ದೂರವಿದೆ.ಈ ಪ್ರದೇಶ ಬಿಜೋರ ಟೀ ತೋಟದಿಂದ ಸುತ್ತುವರೆದಿದೆ.ಇಲ್ಲಿರುವ ಶಿವ ದೇವಾಲಯಕ್ಕೆ ಪ್ರತೀ ಶಿವರಾತ್ರಿಯಂದು ಸಹಸ್ರಾರು ಭಕ್ತರು ಭೇಟಿ ನೀಡಿ ಶಿವನ ಧ್ಯಾನದಲ್ಲಿ ತೊಡಗುತ್ತಾರೆ.ಇಲ್ಲಿ ಅನೇಕ ಕಲ್ಲಿನ ಗುಹೆಗಳು ಇದ್ದು ಇವು ಮಾನವ ನಿರ್ಮಿತ ಗುಹೆಗಳಂತೆ ಕಾಣುತ್ತವೆ.ಇವೆ ಬಹುಶಃ ಸಲಸ್ಥಂಭರ ಕಾಲದಲ್ಲಿ ನಿರ್ಮಿತವಾಗಿರಬಹುದೆಂದು ಹೇಳಲಾಗುತ್ತದೆ.
- ಗೋಲಾಪಾರ ಜಿಲ್ಲೆ
- ತುಕ್ರೇಶ್ವರಿ ದೇವಾಲಯ: ಇದು ಬಹಳ ಹಿಂದೆ ಸತ್ತ ಪತಿಯೊಂದಿಗೆ ಸತೀ ಹೋದ ಪತಿವ್ರತೆಯೋರ್ವಳ ಸ್ಮರಣಾರ್ಥ ಇಲ್ಲಿನ ಬೆಟ್ಟದ ಮೇಲೆ ನಿರ್ಮಿಸಿದ ದೇವಾಲಯ.ಇದು ಗೋಲಾಪರದಿಂದ ೧೫ ಕಿಮಿ ದೂರವಿದೆ.ಮದುವೆಯಾದ ಹೆಣ್ಣು ಮಕ್ಕಳು ಇಲ್ಲಿ ಬಂದು ತಮ್ಮ ಗಂಡನ ಆರೋಗ್ಯ ಮತ್ತು ತಮ್ಮ ಮುತೈದೆತನಕ್ಕಾಗಿ ತುಕ್ರೇಶ್ವರಿಯನ್ನು ಪ್ರಾರ್ಥಿಸುತ್ತಾರೆ.
ನಂದೇಶ್ವರ ದೇವಾಲಯ:ಇದು ೧೦-೧೧ ನೇ ಶತಮಾನದಲ್ಲಿ ನಿರ್ಮಿತವಾದ ಶಿವ ದೇವಾಲಯ. ಶಿವರಾತ್ರಿಯಂದು ನೂರಾರು ಭಕ್ತರು ಆಗಮಿಸಿ ಶಿವನಿಗೆ ಪೂಜೆ ಸಲ್ಲಿಸುತ್ತಾರೆ.
- ಶ್ರೀ ಜೋಯಬಂ ಕಾಮಾಕ್ಯ ದೇವಾಲಯ: ಗೋಲಾಪಾರದಿಂದ ೫೦ ಕಿಮಿ ದೂರವಿರುವ ಈ ದೇವಾಲಯ ಭಾರತ ದೇಶದ ೫೧ ಶಕ್ತಿ ಸ್ಥಳಗಳಲ್ಲಿ ಒಂದೆಂದು ಹೆಸರಾಗಿದೆ.ಬೆಟ್ಟದ ಮೇಲೆ ಇರುವ ಈ ದೇವಾಲಯವು ೧೭ ನೇ ಶತಮಾನದಲ್ಲಿ ಉಂಟಾದ ಭಾರಿ ಭೂಕಂಪದಿಂದ ಹಾನಿಗೊಳಗಾಗಿತ್ತು. ನಂತರ ಇದನ್ನು ಜೀರ್ಣೋದ್ದಾರ ಮಾಡಲಾಯಿತು.
- ಸೂರ್ಯ ಪಹಾಡ್: ಇದು ಪುರಾತನ ಸೂರ್ಯ ದೇವಾಲಯ.ಇಲ್ಲಿ ಪ್ರಾಕ್ತನ ಶಾಸ್ತ್ರಜ್ನರು ಸದಾ ಉತ್ಖನನದಲ್ಲಿ ತೊಡಗಿರುತ್ತಾರೆ. ಮೊದಲು ಇಲ್ಲಿ ೧ ಲಕ್ಷ ಶಿವಲಿಂಗಗಳು ಇದ್ದವೆಂದು ಹೇಳಲಾಗುತ್ತದೆ.
ಧುಬ್ರಿ ಜಿಲ್ಲೆ
[ಬದಲಾಯಿಸಿ]ಧುಬ್ರಿ ರಾಜಧಾನಿಯಿಂದ ೨೯೫ ಕಿಮಿ ದೂರವಿದೆ.ಧುಬ್ರಿಯನ್ನು ಅಸ್ಸಾಮಿನ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ.ವಿವಿಧ ಸಂಸ್ಕೃತಿ,ಭಾಷೆಗಳ ಜನತೆ ಇಲ್ಲಿ ನೆಲಸಿರುವುದರಿಂದ ಈ ಸ್ಥಳ ವಿಶಿಷ್ಟಗಳ ಸಂಗಮವಾಗಿದೆ.ಇಲ್ಲಿನ ಪ್ರಮುಖ ಭಾಷೆ ಗೋಲ್ಪೋರಿಯ.
- ಚಕ್ರಶಿಲಾ ಪ್ರಾಣಿಧಾಮ
- ಧುಬ್ರಿಯಿಂದ ೬೮ ಕಿಮಿ ದೂರ ಮತ್ತು ಗೌಹಾಟಿಯಿಂದ ೨೧೯ ಕಿಮಿ ದೂರವಿದೆ.ಇದನ್ನು ೧೯೯೪ ರಲ್ಲಿ ಸ್ಥಾಪಿಸಲಾಯ್ತು.೪೫೫೬ ಹೆಕ್ಟೇರ್ ಪ್ರದೇಶ ಒಳಗೊಂಡ ಈ ಪ್ರಾಣಿಧಾಮ ಲಂಗೂರ್ ಕೋತಿ,ಚಿರತೆ,ಪ್ಯಾಂಗೋಲಿನ್,ಹಾರುವ ಅಳಿಲು ಮತ್ತು ಅನೇಕ ಜಾತಿಯ ಪಕ್ಷಿಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಸಿಖ್ ಗುರುದ್ವಾರ,ಪಾಂಚ್ಪೀವರ್ ದರ್ಗಾ,ದುಭಾನಿಘಾಟ್,ದೂಧ್ನಾಗಥ್ ಮಂದಿರ,ರಂಗ್ಮಳತಿ ಮಸೀದಿ,ರಾಮ್ ರಾಯ್ ಕುಟಿ ಸತ್ರ (೪೫ ಕಿಮಿ),ಮೀರ್‌ಜುಮ್ಲಾ ಟೂಂಬ್ (೫೫ ಕಿಮಿ) ನೋಡುವಂತಹ ಸ್ಥಳಗಳು.
ಕಾಮರೂಪ ಮತ್ತು ಕಾಮರೂಪ ಮೆಟ್ರೋ ಜಿಲ್ಲೆ
[ಬದಲಾಯಿಸಿ]- ಇಲ್ಲಿ ಆಡಳಿತದ ಅನುಕೂಲಕ್ಕಾಗಿ ಎರಡು ಜಿಲ್ಲೆಗಳಿದ್ದರೂ ಎರಡಕ್ಕೂ ಗೌಹಾಟಿ ಜಿಲ್ಲಾ ಕೇಂದ್ರ.ಈ ಸ್ಥಳ ಬಹಳ ಪುರಾತನವಾದದ್ದು. ಕಾಮರೂಪದ ಉಲ್ಲೇಖ ಪುರಾಣ ಮತ್ತು ಇತಿಹಾಸಗಳಲ್ಲಿ ಬರುತ್ತದೆ. ಈ ಪ್ರದೇಶವನ್ನು ಮೊದಲಿಗೆ ಪ್ರಾಗ್ಜ್ಯೋ್ತಿಷ್ಯಪುರ ಎಂದು ಕರೆಯಲಾಗುತ್ತಿತ್ತು.ಪುರಾಣ ಕಥೆಗಳಂತೆ ಈಶ್ವರ ಪಾರ್ವತಿಯನ್ನು ಕಳೆದುಕೊಂಡು ದುಃಖದಲ್ಲಿದಾಗ ಆತನನ್ನು ಸಂತೋಷಪಡಿಸಲು ದೇವತೆಗಳು ಕಾಮನನ್ನು ಕಳುಹಿಸುತ್ತಾರೆ.ಕಾಮದೇವ ಶಿವನಮೇಲೆ ಮದನ ಬಾಣವನು ಬಿಟ್ಟಾಗ ಸಿಟ್ಟಿಗೆದ್ದ ಶಿವ ಅವನನ್ನು ತನ್ನ ಮೂರನೇ ಕಣ್ಣಿನಿಂದ ಸುಡುತ್ತಾನೆ.ಇದು ಕಾಮದಹನ.ಕಾಮನ ರೂಪವನ್ನು ಸುಟ್ಟದ್ದರಿಂದ ಈ ಪ್ರದೇಶ ಕಾಮರೂಪ ಎಂದು ಹೆಸರಾಗಿದೆ.ಕಾಮನ ಸ್ಮರಣಾರ್ಥ ಮದನ ಕಾಮದೇವ ದೇವಾಲಯ ಇಲ್ಲಿದ್ದು ಇದು ೧೦-೧೨ ನೇ ಶತಮಾನದಲ್ಲಿ ನಿರ್ಮಾಣವಾಗಿದೆ.ಈ ದೇವಾಲಯ ಗೌಹಾಟಿಯಿಂದ ೪೦ ಕಿಮಿ ದೂರವಿದೆ.ಈ ಜಿಲ್ಲೆ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ.
- ಗೌಹಾತಿ ನಗರ
- ಅಸ್ಸಾಮ್ ರಾಜ್ಯದಲ್ಲಿ ದೊಡ್ಡನಗರ. ಸುಮಾರು ೯ ಲಕ್ಷ ಜನಸಂಖ್ಯೆ ಉಳ್ಳ ಈ ನಗರ ಎಲ್ಲ ರಾಜ್ಯಗಳ ರಾಜಧಾನಿಯಂತೆ ಇದೆ.ಇದು ಪುರಾತನ ನಗರವಾದುದರಿಂದ ಚಿಕ್ಕ ಚಿಕ್ಕ ರಸ್ತೆಗಳು ಜಾಸ್ತಿ. ಈ ರಸ್ತೆಗಳಲ್ಲಿ ಭರಿಸಲಾಗದ ಅತೀ ಟ್ರಾಫ಼ಿಕ್,ಕಿರುಗುಟ್ಟುವ ಆಟೋಗಳು, ಅಡ್ಡಿಮಾಡುವ ಸೈಕಲ್ ರಿಕ್ಷಾಗಳು ಮತ್ತು ಮೇಲೇ ಬರುವ ಸಿಟಿ ಬಸ್ಸುಗಳು ತುಂಬಿವೆ.(ಬೆಂಗಳೂರಿನ ಕಲಾಸಿಪಾಳ್ಯ!) ಇಲ್ಲಿ ಸಾರ್ವಜನಿಕ ಸಾರಿಗೆ ಇದ್ದು ಅದನ್ನು ಅಸ್ಸಾಂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ವಹಿಸುತ್ತದೆ.ಲೋಕಪ್ರಿಯ ಗೋಪೀನಾಥ ಬಾರ್ಡೋಯ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಿದೆ.ಇಲ್ಲಿ ನೋಡತಕ್ಕ ಸ್ಥಳಗಳು ಪಾನ್ ಬಜಾರ್,ಫ಼್ಯಾನ್ಸಿ ಬಜಾರ್,ಪಲ್ತಾನ್ ಬಜಾರ್.ಸುತ್ತಲು ಆಟೋ ಮತ್ತು ಬಸ್ ಸೌಕರ್ಯವಿದೆ.ಸಾಕಷ್ಟು ಲಾಡ್ಜ್ಗಬಳಿವೆ.ಈ ನಗರದಲ್ಲಿ ಈಕ್ವೆಸ್ಟ್ರಿಯನ್ ಕುದುರೆ ಸವಾರಿ ಮತ್ತು ಮೋಟಾರ್ ಸೈಕಲ್ ಪ್ರವಾಸಕ್ಕೆ ಅವಕಾಶವಿದೆ.ಇದನ್ನು ಏರ್ಪಡಿಸುವ ಸಾಕಷ್ಟು ಪ್ರವಾಸಿ ಸಂಸ್ಥೆಗಳು ಇಲ್ಲಿವೆ.ಗೌಹಾತಿ ಬಳಿಯ ಕಾಮಾಕ್ಯ ಮಾತೆಯ ದೇವಾಲಯ ಸುಪಸಿದ್ದ.ಇದು ಸದಾ ಭಕ್ತರಿಂದ ತುಂಬಿರುತ್ತದೆ.
- ಭಸ್ಮಾಚಲ
- ಇಲ್ಲಿ ಒಂದು ಶಿವ ದೇವಾಲಯವಿದೆ.ಶಿವನನ್ನು ಇಲ್ಲಿ ಹುಣ್ಣಿಮೆಯ ದಿನದಂದು ಪೂಜಿಸಲಾಗುತ್ತದೆ.ಇಲ್ಲಿ ಇಂದ್ರಲೋಕದ ಅಪ್ಸರೆ ಊರ್ವಶಿ ಶಿವನಿಗಾಗಿ ಜೇನು ತುಪ್ಪವನ್ನು ತಂದಳೆಂದು ಹೇಳಲಾಗುತ್ತದೆ.ಹಾಗಾಗಿ ಇದನ್ನು ಊರ್ವಶಿ ದ್ವೀಪ ಎಂದೂ ಕರೆಯಲಾಗುತ್ತದೆ.
- ಇಲ್ಲಿ ಅನೇಕ ಅದ್ಭುತ ದೇವಾಲಯಗಳಿವೆ. ನವಗ್ರಹ ದೇವಾಲಯ ಅದರಲ್ಲಿ ಪ್ರಮುಖವಾದದ್ದು.ಎಲ್ಲ ಗ್ರಹಗಳನ್ನು ಇಲ್ಲಿ ಒಂದೆಡೆ ಪೂಜಿಸುವ ಅನುಕೂಲ ಮಾಡಲಾಗಿದೆ.ಇದು ಹಳೆಯ ದೇವಾಲಯ.ಜನರು ಸದಾಇಲ್ಲಿ ತುಂಬಿರುತ್ತಾರೆ.ಉಮಾನಂದ ದೇವಾಲಯ, ಶ್ರೀ ಕೃಷ್ನನ ಹೆಜ್ಜೆ ಗುರುತಿದೆ ಎಂದು ಹೇಳಲಾಗುವ ರುದ್ರೇಶ್ವರ ದೇವಾಲಯಗಳಿವೆ.ಬುರಬುರಿ ದೇವಾಲಯ,ಚೈತನ್ಯ ಗೌಡಿಯ ಮಠ,ಶಾಮರಾಯ ಸತ್ರ,ಪೀರ್ ಮಜಹರ್ ಸಮಾಧಿ,ಹಜ಼ರತ್ ಸೈಯದ್ ಆಲಿಯ ದರ್ಗಾ ನೋಡತಕ್ಕ ಇತರ ಸ್ಥಳಗಳು.
ಸರಾಯ್ಘಾತಟ್ ಯುದ್ಧ ಸ್ಮಾರಕ
[ಬದಲಾಯಿಸಿ]- ೧೬೭೧ ರಲ್ಲಿ ಅಹೋಮರು ಮತ್ತು ಮುಘಲರ ನಡುವೆ ನಡೆದ ಯುದ್ಧದ ಸ್ಮರಣಾರ್ಥ ಕಟ್ಟಡವೊಂದನ್ನು ನಿರ್ಮಿಸಲಾಗಿದೆ
- ಸುವಲ್ಕುತಚ್ಚಿ
- ಇದು ಒಂದು ಚಿಕ್ಕ ಗ್ರಾಮವಾಗಿದ್ದು ಇಲ್ಲಿ ಅಸ್ಸಾಂ ರೇಷ್ಮೆ ನೇಯ್ಗೆ ಕೇಂದ್ರವಿದೆ.ಅದ್ಭುತ ಕಲಾಕಾರಿಕೆ ಉಳ್ಳ ಅಳಿವಿನ ಅಂಚಿನಲ್ಲಿರುವ ಈ ರೇಷ್ಮೆ ನೇಯ್ಗೆ ಉದ್ಯಮವನ್ನು ಉಳಿಸಿಕೊಳ್ಳಲು ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ.೧೯೮೬ ರಲ್ಲಿ ನ್ಯಾಶನಲ್ ಇನ್ಸ್ಟಿುಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ಸ್ಥಾಪನೆಯಾಗಿದ್ದು ಈ ಸಂಸ್ಥೆಯ ಮೂಲಕ ಸುಮಾರು ರೂ.೬೫೦ ಕೋಟಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ.
- ಹಯಗ್ರೀವ ಮಾಧವ ದೇವಾಲಯ,ಅಶ್ವಕ್ರಾಂತ ದೇವಾಲಯ.ಜನಾರ್ಧನ ದೇವಾಲಯ,ಉಗ್ರತಾರ ದೇವಾಲಯ ಮತ್ತು ದಿರ್ಗೇಶ್ವರದೇವಾಲಯಗಳು ತಮ್ಮ ಸ್ಥಳ ಪುರಾಣ ಮತ್ತು ಶಿಲ್ಪ ಕಲೆಗಳಿಗೆ ಹೆಸರುವಾಸಿಯಾಗಿವೆ.ಗೌಹಾತಿ ಬಳಿ ಬಾಲಾಜಿ ದೇವಾಲಯವೊಂದಿದ್ದು ಈ ದೇವಾಲಯವನ್ನು ತಿರುಪತಿಯಲ್ಲಿರುವ ವೆಂಕಟೇಶ್ವರನ ದೇವಾಲಯದಂತೆಯೇ ನಿರ್ಮಿಸಲಾಗಿದೆ.ಬಾಲಾಜಿಯ ವಿಗ್ರಹ ೯ ಟನ್ ತೂಕವಿದೆ.
ರಾಜಕೀಯ ಮತ್ತು ಸರ್ಕಾರ
[ಬದಲಾಯಿಸಿ]- ಆಗಸ್ಟ್ 2015 ರಲ್ಲಿ ರಾಜ್ಯದ ಲ್ಲಿ 32 ಆಡಳಿತಾತ್ಮಕ ಜಿಲ್ಲೆಗಳಿವೆ.. ಆಗಸ್ಟ್ 15, 2015 ರಂದು, ಹಿಂದಿನ 27 ಜಿಲ್ಲೆಗಳು ಜೊತೆಗೆ ಐದು ಹೊಸ ಜಿಲ್ಲೆಗಳು ರೂಪುಗೊಂಡವು. ಐದು ಹೊಸ ಜಿಲ್ಲೆಗಳಲ್ಲಿ ವಿಸ್ವನಾಥ ಜಿಲ್ಲೆ ಸೋನಿತಪುರದಿಂದ, ಚರೈದೇವೊ ಜಿಲ್ಲೆ ಶಿವಸಾಗರದಿಂದ, ಹೊಜಾಯ್ ಜಿಲ್ಲೆ ನಾಗಾವ್ ನಿಂದ ದಕ್ಷಿಣ ಸಲಮಾರಾ ಮಂಕಚರ್ ಧೂಬ್ರಿ ಯಿಂದ, ಪಶ್ಚಿಮ ಕರ್ಬಿ ಅಂಗಲಾಮಗ್’ ಕರ್ಬಿ ಅಂಗಲಾಮಗ್ ನಿಂದ ಒಡೆದು ಹೊಸ 5 ಜಿಲ್ಲೆಗಲನ್ನು ರಚಿಲಾಯಿತು. ಈ ಜಿಲ್ಲೆಗಳು ಉಪವಿಭಾಗ 54 "ಉಪ-ವಿಭಾಗ" ಅಥವಾ ಮೊಖುಮಾ ಗಳನ್ನಾಗಿ ವಿಭಾಗಿಸಿದೆ. ಪ್ರತಿ ಜಿಲ್ಲೆಯು ಜಿಲ್ಲಾಧಿಕಾರಿ, ಜಿಲ್ಲಾ ಮ್ಯಾಜಿಸ್ಟ್ರೇಟ್, ಜಿಲ್ಲಾ ಪಂಚಾಯತ್ ಕಚೇರಿ, ಮತ್ತು ಜಿಲ್ಲಾ ನ್ಯಾಯಾಲಯ ಕಚೇರಿ, ಆಡಳಿತವು ಸಾಮಾನ್ಯವಾಗಿ ಜಿಲ್ಲೆಯ ಕೇಂದ್ರ ದಲ್ಲಿ ಇದೆ.
- ಜಿಲ್ಲೆಗಳಲ್ಲಿ ಹಿಂದಿನ ಜಿಲ್ಲೆಗಳ ಉಪ ವಿಭಾಗಗಳಿವೆ. ನದಿಗಳು, ಬೆಟ್ಟಗಳ, ಕಾಡುಗಳು, ಮತ್ತು ಇತ್ಯಾದಿ ವೈಶಿಷ್ಟ್ಯಗಳ ಆಧಾರದ ಮೇಲೆ ಬಹುತೇಕ ಹೊಸದಾಗಿ ವಿಭಾಗಿಸಲಾಗಿದೆ. ಇತರ ಸರಾಜ್ಯಗಳಂತೆ, ಅಸ್ಸಾಂ ಸರ್ಕಾರ ಭಾರತದ ಗಣರಾಜ್ಯದಲ್ಲಿ ಅಸ್ಸಾಂ ರಾಜ್ಯದ ಪ್ರಾಂತೀಯ ಆಡಳಿತಾತ್ಮಕ ಅಧಿಕಾರವನ್ನು ಹೊಂದಿದೆ.
- ಇತರ ರಾಜ್ಯಗಳಂತೆ, ಅಸ್ಸಾಂ ಭಾರತ ಸರ್ಕಾರದಿಂದ ನಾಮನಿರ್ದೇಶನ ಮಾಡಲ್ಪಡುವ (ನೇಮಿಸಲ್ಪಟ್ಟ) ಗವರ್ನರ್’ನ್ನು ಒಳಗೊಂಡಿದೆ. ರಾಜ್ಯದ ಮುಖ್ಯಸ್ಥ, ಅಸ್ಸಾಂ ವಿಧಾನಸಭೆಯಲ್ಲಿ 126-ಸದಸ್ಯರ ಬಹುಮತ ಗುಂಪಿನ ಬೆಂಬಲವುಳ್ಳವನು ನಾಯಕ ಸರ್ಕಾರದ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ . ಶಾಸನಸಭೆಯು ಏಕಸಭೆಯ, ಶಾಸಕಾಂಗ ಆಗಿದೆ. ಅಸ್ಸಾಂ ಶಾಸನಸಭೆಯಅವಧಿ ಗರಿಷ್ಠ 5 ವರ್ಷಗಳ ಕಾಲ. ಅದರ ಸದಸ್ಯರನ್ನು ವಯಸ್ಕ ಮತದಾರರ ಮೂಲಕ ಆಯ್ಕೆ ಮಾಡಲಾಗುತ್ತದೆ. ಮುಖ್ಯಮಂತ್ರಿಗೆ ಮಂತ್ರಿಮಂಡಳ ಸಹಾಯ ಮಾಡುತ್ತದೆ. ಮಂತ್ರಿಮಂಡಳದ ಗಾತ್ರ ನಿರ್ಬಂಧಿಸಲ್ಪಟ್ಟಿದೆ.[೧]
- ೨೦೧೧ ರಿಂದ ೨೦೧೬ ರ ಅವಧಿಯ ಸರ್ಕಾರ
- ಭಾರತದ ಅಸ್ಸಾಂನ 13ನೆಯ ವಿಧಾನಸಭೆಯ 126 ಕ್ಷೇತ್ರಗಳಿಂದ ಸದಸ್ಯರನ್ನು ಚುನಾಯಿಸುವ ಚುನಾವಣೆ, 4 ಮತ್ತು 11 ಏಪ್ರಿಲ್, 2011 ರಂದು ಎರಡು ಹಂತಗಳಲ್ಲಿ ನಡೆಯಿತು. ಫಲಿತಾಂಶವನ್ನು ಮೇ 13 ರಂದು ಪ್ರಕಟಿಸಲಾಯಿತು. [1] ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಇದರ ಹಾಲಿ ಮುಖ್ಯಮಂತ್ರಿಯಾಗಿರುವ ತರುಣ್ ಗೊಗೋಯ್ ಪ್ರಚಂಡ ಬಹುಮತವನ್ನು ಪಡೆದು (79 ಸ್ಥಾನಗಳು) ಚುನಾವಣೆಯಲ್ಲಿ ಮೂರನೇ ನೇ ಬಾರಿಗೆ ಪ್ರಮಾಣವಚನವನ್ನು ಸ್ವೀಕರಿಸಿದರು.
ಅಸ್ಸಾಂಗೆ ಬಾಂಗ್ಲಾ ವಲಸಿಗರ ಸಮಸ್ಯೆ
[ಬದಲಾಯಿಸಿ]- ಬಾಂಗ್ಲಾ ವಲಸಿಗರ ಸಮಸ್ಯೆಗೆ ದೊಡ್ಡ ಇತಿಹಾಸವಿದೆ. ಬ್ರಿಟಿಷ್ ವಸಾಹತುಶಾಹಿಗಳು ಮೊದಲಿಗೆ ಅಸ್ಸಾಂನಲ್ಲಿ ಚಹಾ ತೋಟ ಮಾಡಿದಾಗ, ಕೂಲಿ ಕೆಲಸಕ್ಕೆ ಬಾಂಗ್ಲಾದಿಂದ ಮುಸ್ಲಿಮರನ್ನು ಕರೆತಂದಿದ್ದಾರೆ. ಆಗಿನ್ನೂ ದೇಶ ಸ್ವಾತಂತ್ರ್ಯಗೊಂಡಿರಲಿಲ್ಲ. ಭಾರತ, ಪಾಕಿಸ್ತಾನ ಪ್ರತ್ಯೇಕವಾಗಿರಲಿಲ್ಲ. 47ರ ದೇಶ ವಿಭಜನೆ ಬಳಿಕವೂ ಪೂರ್ವ ಪಾಕಿಸ್ತಾನದಿಂದ ವಲಸೆ ಮುಂದುವರಿದಿತ್ತು. 71ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾ ಬೇರೆಯಾದ ನಂತರವೂ ಅಸ್ಸಾಂಗೆ ಜನ ಬರುವುದು ನಿರಂತರವಾಗಿ ಮುಂದುವರಿದಿದೆ.
- ಅಸ್ಸಾಮಿನಲ್ಲಿ ಸ್ಥಳೀಯ ಬುಡಕಟ್ಟುಗಳು ಮತ್ತು ವಲಸಿಗರ ನಡುವೆ ತಿಕ್ಕಾಟ ನಡೆಯುತ್ತಿದೆ. ಭೂಮಿ ಮೇಲಿನ ಒಡೆತನ. ಭಾಷೆ– ಸಂಸ್ಕೃತಿ ಉಳಿಸಿಕೊಳ್ಳಲು ಜನ ಆರಂಭಿಸಿರುವ ಹೋರಾಟವು ಕ್ರಮೇಣ ಮತೀಯವಾದದ ರೂಪ ಪಡೆದಿದೆ. ‘ಅಕ್ರಮವಾಗಿ ನುಸುಳಿರುವ ಮುಸ್ಲಿಮರು ಭೂಮಿ ಹಕ್ಕು ಕಸಿದುಕೊಳ್ಳುತ್ತಿದ್ದಾರೆ. ನಮ್ಮ ಭಾಷೆ– ಸಂಸ್ಕೃತಿ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂಬ ಭಾವನೆ ಸ್ಥಳೀಯರಲ್ಲಿದೆ. ಹಿಂದೆ ಇದೇ ಕಾರಣಕ್ಕೆ ಬೋಡೊ ಚಳವಳಿ ಹುಟ್ಟಿಕೊಂಡಿದ್ದು. ಅನಂತರ ಬೋಡೊ ಕೌನ್ಸಿಲ್ ಸ್ಥಾಪನೆಯಾಗಿದ್ದು.
- 1971ರ ಬಳಿಕ ನಡೆದಿರುವ ಪ್ರತಿ ಚುನಾವಣೆಯಲ್ಲೂ ವಲಸಿಗರ ಸಮಸ್ಯೆಗೆ ಸಿಕ್ಕಾಪಟ್ಟೆ ಪ್ರಾಮುಖ್ಯತೆ ಸಿಕ್ಕಿದೆ. ವಲಸೆ ಸಮಸ್ಯೆ ವಿರುದ್ಧ ಹೋರಾಡಿದ್ದ ‘ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘ’ (ಎಎಎಸ್‌ಯು)ದ ನಾಯಕರು ಸ್ಥಾಪಿಸಿದ ‘ಅಸ್ಸಾಂ ಗಣ ಪರಿಷತ್’ (ಎಜಿಪಿ) ಮೂರು ದಶಕದ ಹಿಂದೆ ರಾಜ್ಯದ ಪ್ರಬಲ ರಾಜಕೀಯ ಶಕ್ತಿಯಾಗಿ ಮೆರೆಯಿತು. ವಲಸೆ ಸಮಸ್ಯೆ ವಿರುದ್ಧ ಹೋರಾಡಿದ್ದ ಎಜಿಪಿ 1985ರಲ್ಲಿ ಮೊದಲ ಸಲ ಅಧಿಕಾರಕ್ಕೆ ಬಂದಿತು.[೨]
ಅಸ್ಸಾಂನ ಮತಾಧಾರಿತ ಜನಸಂಖ್ಯೆಯ ವಿಂಗಡಣೆ
[ಬದಲಾಯಿಸಿ]- 2011 ರ ಜನಗಣತಿಯ ಪ್ರಕಾರ, 61.5% ರಷ್ಟು ಹಿಂದೂಗಳಾಗಿದ್ದು, 34.22% ಮುಸ್ಲಿಮರಾಗಿದ್ದಾರೆ. ಕ್ರಿಶ್ಚಿಯನ್ ಅಲ್ಪಸಂಖ್ಯಾತರನ್ನು (3.7%) ಪರಿಶಿಷ್ಟ ಪಂಗಡ ಜನಸಂಖ್ಯೆಯ ನಡುವೆ ಕಾಣಬಹುದು. ಅಸ್ಸಾಂನ ಪರಿಶಿಷ್ಟ ಪಂಗಡದ ಜನಸಂಖ್ಯೆ ಸುಮಾರು 13%. ಇದರಲ್ಲಿ ಬೋಡೋಗಳು 40% ನಷ್ಟು. ಇತರೆ ಧರ್ಮಗಳು: ಜೈನ ಧರ್ಮ (0.1%), ಬೌದ್ಧ (0.2%), ಸಿಖ್ ಧರ್ಮ (0.1%) ಮತ್ತು ಪಶುಪತಿ? (ಖಮ್ತಿ ನಡುವೆ, ಫಾಕೆ, ಅಯಿತೊನ್ ಇತ್ಯಾದಿ ಸಮುದಾಯಗಳು) ಸೇರಿವೆ.
- ಭಾರತದ 2011 ರ ಜನಗಣತಿಯ ಪ್ರಕಾರ ಅಸ್ಸಾಂನ 32 ಜಿಲ್ಲೆಗಳಲ್ಲಿ, 9 ಮುಸ್ಲಿಂ ಬಾಹುಳ್ಯ ಹೊಂದಿವೆ. ಅವು, ಧುಬ್ರಿ, ಗೊಅಲಾಪುರ, ಬರಾಪೇತ, ಮೋರಿಗಾಂ, ನಾಗೋಂನ್, ಕರೀಂಗಂಜ್, ಹೈಲಿಖಂಡಿ, ದರ್ರಾಂಗ ಮತ್ತು ಬೊಂಗೈಗಾಂವ್.[೩]
ಭಾಷೆ
[ಬದಲಾಯಿಸಿ]- ಬಂಗಾಳಿಯು ಬರಾಕ್ ವ್ಯಾಲಿಯ ಮೂರು ಜಿಲ್ಲೆಗಳಲ್ಲಿ ಅಧಿಕೃತ ಸ್ಥಾನಮಾನ ಹೊಂದಿದೆ, ಮತ್ತು ರಾಜ್ಯದ (27.5%) ಎರಡನೇ ಅತ್ಯಂತ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದೆ. ಹಾಗೆಯೇ ಅಸ್ಸಾಮಿ ಮತ್ತು ಬೋಡೋ ಪ್ರಮುಖ ಸ್ಥಳೀಯ ಮತ್ತು ಅಧಿಕೃತ ಭಾಷೆಗಳಾಗಿವೆ.
- ಪ್ರಾಚೀನ ಕಾಮರೂಪ ಮತ್ತು ಕಮತಪುರ, ಕಚಾರಿ, ಸುತಿಯ,ಬೊರಾಹಿ, ಅಹೋಮಾ ಮತ್ತು ಕೋಚ್ ಮಧ್ಯಕಾಲೀನ ರಾಜ್ಯಗಳಲ್ಲಿ - ಸಾಂಪ್ರದಾಯಿಕವಾಗಿ ಅಸ್ಸಾಮಿ ಸಾಮಾನ್ಯ ಭಾಷೆ (ಭಾಷೆಯು ಆಸ್ಟ್ರೊ, ಟಿಬೆಟೊ-ಬರ್ಮನ್ ಪ್ರಾಕೃತ ಸಮ್ಮಿಶ್ರ ಮೂಲದ್ದು) ಮತ್ತು ಒಂದು ಪ್ರಮುಖ ಭಾಷೆಯಾಗಿದೆ. ಭಾಷೆ ಕುರುಹುಗಳು ಚರ್ಯಪದ (ಸಿ. 7 ನೇ -8 ನೇ ಶತಮಾನದ AD) ಲಯಿಪ, ಸರಹಪ, ಇತ್ಯಾದಿ ಹಲವಾರು ಕವನಗಳು ಕಂಡುಬರುತ್ತದೆ. ಆಧುನಿಕ ಭಾಷೆಗಳಲ್ಲಿ ಕಾಮಪುರಿ, ಗೊಅಲ್ಪರಿಯ ಇತ್ಯಾದಿ ಅವಶೇಷಗಳಾಗಿವೆ.
- ಬೋಡೊ ಅಸ್ಸಾಂನ ಪುರಾತನ ಭಾಷೆ. ಜನಾಂಗೀಯ ಸಾಂಸ್ಕೃತಿಕ ಗುಂಪುಗಳ, ಪ್ರಾದೇಶಿಕ ವಿಭಾಗ, ಸಾಂಸ್ಕೃತಿಕ ಲಕ್ಷಣಗಳು, ಬೊಡೊ-ಕಚಾರಿ ಪದಗಳು, ಮತ್ತು ಉತ್ತರ ಪೂರ್ವ ವಲಯದಲ್ಲಿ ಎಲ್ಲ ನದಿಗಳ ಹೆಸರುಗಳು ಈಭಾಷೆಯವು.[೪][೫]
ಅಸ್ಸಾಂ ರಾಜ್ಯದಲ್ಲಿ ಪ್ರತ್ಯೇಕ ‘ಆಡಳಿತದ ರಾಜ್ಯ’ ಬೋಡೊಲ್ಯಾಂಡ್
[ಬದಲಾಯಿಸಿ]- ಪ್ರತ್ಯೇಕ ರಾಜ್ಯ ಅಥವಾ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಕ್ಕಾಗಿ ಅನೇಕ ದಶಕಗಳಿಂದ (೧೯೨೯ ರಿಂದ) ಬೋಡೊ ಜನರು ನಡೆಸುತ್ತಿದ್ದ ಸಶಸ್ತ್ರ ಮತ್ತು ಶಸ್ತ್ರರಹಿತ ಹೋರಾಟಕ್ಕೆ ೨೦೨೦ ರ ‘ಬೋಡೊ ಅಕಾರ್ಡ್’ ಮೂಲಕ ಕೊನೆಗೊಂಡಿದೆ. ಈಗ ಅಸ್ತಿತ್ವದಲ್ಲಿದ್ದ ಅರೆಸ್ವಾಯತ್ತ ಬೋಡೊ ಜಿಲ್ಲೆಗಳಿಗೆ, ಮತ್ತಷ್ಟು ಅಧಿಕಾರವನ್ನು ‘ಬೋಡೊ ಅಕಾರ್ಡ್’ ನೀಡುತ್ತದೆ. ಪ್ರತ್ಯೇಕ ಬೋಡೊಲ್ಯಾಂಡ್ ಹೋರಾಟಕ್ಕೆ ಈ ಒಪ್ಪಂದವು ಕೊನೆ ಹಾಕಿದೆ. ಪ್ರತ್ಯೇಕ ರಾಜ್ಯವೊಂದಕ್ಕೆ ನೀಡಲಾಗುವ ಬಹುಪಾಲು ಅಧಿಕಾರವನ್ನು ಸ್ವಾಯತ್ತ ಬೋಡೊಲ್ಯಾಂಡ್‌ಗೆ ಈ ಒಪ್ಪಂದವು ನೀಡುತ್ತದೆ. ಈ ಒಪ್ಪಂದವು ಪ್ರತ್ಯೇಕ ಬೋಡೊಲ್ಯಾಂಡ್‌ನತ್ತ ದೊಡ್ಡ ಹೆಜ್ಜೆ ಎಂದು ಭಾವಿಸಲಾಗಿದೆ.
- ರಾಜಕೀಯ ಪ್ರಾತಿನಿಧ್ಯ ಹೆಚ್ಚಳ:
- ಈಗ ಬಿಟಿಎಡಿಯ ಆಡಳಿತವನ್ನು ನೋಡಿಕೊಳ್ಳುತ್ತಿರುವ ಬೋಡೊಲ್ಯಾಂಡ್ ಭೌಗೋಳಿಕ ಸಮಿತಿ (ಬಿಟಿಸಿ) 40 ಸದಸ್ಯರ ಬಲ ಹೊಂದಿದೆ. ಬಿಟಿಎಡಿಗಿಂತಲೂ ಬಿಟಿಆರ್‌ನ ವ್ಯಾಪ್ತಿ ಹೆಚ್ಚುವುದರಿಂದ ಬಿಟಿಸಿ ಸದಸ್ಯರ ಸಂಖ್ಯೆ 40ರಿಂದ 60ಕ್ಕೆ ಏರಿಕೆ ಆಗಲಿದೆ.
- ಬಿಟಿಆರ್ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳ ಆಡಳಿತ ಕ್ಷೇತ್ರಗಳು, ವಿಧಾನಸಭಾ ಕ್ಷೇತ್ರಗಳು ಮತ್ತು ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡನೆ; ಈ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳು ಮತ್ತು ರಾಜ್ಯ ವಿಧಾನಸಭೆಯ ಕ್ಷೇತ್ರಗಳಲ್ಲಿ ಶೇ 65ರಷ್ಟು ಸ್ಥಾನಗಳನ್ನು ಬೋಡೊ ಬುಡಕಟ್ಟು ಜನರಿಗೆ ಮೀಸಲಿಡುವುದು; ಬಿಟಿಆರ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಬೋಡೊ ಬುಡಕಟ್ಟು ಸಮುದಾಯಗಳಿಗೆ ಮೀಸಲಿರಿಸಲಿಡುವುದು ಯೋಜನೆಯಲ್ಲಿದೆ.[೬][೭]
ನೋಡಿ
[ಬದಲಾಯಿಸಿ]- ಭಾರತದ ಚುನಾವಣೆಗಳು ೨೦೧೬
- ಅಸ್ಸಾಂ ವಿಧಾನ ಸಭೆ
- ಅಸ್ಸಾಂ ವಿಧಾನಸಭೆ ಚುನಾವಣೆ ೨೦೧೬|
- ಅಸ್ಸಾಂ ವಿಧಾನಸಭೆ ಚುನಾವಣೆ ೨೦೧೧
- ಭಾರತದಲ್ಲಿ ವಿಧಾನಸಭೆ ಚುನಾವಣೆಗಳು
- ತಮಿಳುನಾಡು-ಪಶ್ಚಿಮ ಬಂಗಾಳ-ಕೇರಳ-ಪುದುಚೇರಿ-ಅಸ್ಸಾಂ
- State Assembly elections in India
- ವಲಸಿಗರು ಮತ್ತು ರಾಷ್ಟ್ರೀಯ ಪೌರತ್ವದ ಸಮಸ್ಯೆ;೬-೮-೨೦೧೮
ಆಧಾರ
[ಬದಲಾಯಿಸಿ]- ೧.Barpujari, H. K. (ed.) (1990), The Comprehensive History of Assam, 1st edition, Guwahati, India: Assam Publication Board
- ೨.Tej Ram Sharma,1978,"Personal and geographical names in the Gupta inscriptions. (1.publ.)", Page 254,
- ೩.Barua Gunaviram Assam Buranji or A History of Assam 2008
- ೪.Census 2011 http://www.iloveindia.com/states/assam/economy.html
- ೫.Government of Assam, website http://assam.gov.in/
ಉಲ್ಲೇಖ
[ಬದಲಾಯಿಸಿ]- ↑ Government of Assam, website http://assam.gov.in/
- ↑ [೧]
- ↑ Government of Assam Census 2011. "onlineassam". Retrieved 6 June 2012.
- ↑ Distribution of the 22 Scheduled Languages". Census of India. Registrar General & Census Commissioner, India.
- ↑ 2001.Census Reference Tables, A-Series - Total Population". Census of India. Registrar General & Census Commissioner, India. 2001.
- ↑ ಅಸ್ಸಾಂನೊಳಗೆ ಪ್ರತ್ಯೇಕ ‘ರಾಜ್ಯ’ ಬೋಡೊಲ್ಯಾಂಡ್ ;ಪ್ರಜಾವಾಣಿ ವಾ;ರ್ತೆd: 08 ಫೆಬ್ರವರಿ 2020;
- ↑ Jan 28, 2020, Bodoland celebrates Accord
????