ಪ್ರಜಾಮತ
೧೯೩೧ರಲ್ಲಿ ಆರಂಭವಾದ ಕನ್ನಡ ವಾರಪತ್ರಿಕೆ ಪ್ರಜಾಮತ ಬಹಳ ಜನಪ್ರಿಯವಾಗಿತ್ತು. ಆಗ ಬಿ.ಎನ್.ಗುಪ್ತರು ಅದರ ಮಾಲೀಕ ಹಾಗೂ ಸಂಪಾದಕರಾಗಿದ್ದರು.
ಮೈಸೂರು ಸರ್ಕಾರ ಅದರ ಪ್ರಕಟಣೆಯನ್ನು ನಿಲ್ಲಿಸಿದ್ದಾಗ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿತ್ತು. ಅದರ ಪ್ರತಿಗಳ ಮಾರಾಟವನ್ನು ನಿಲ್ಲಿಸಿದ್ದಾಗ,ಪ್ರಜಾಮಿತ್ರ ಎಂಬ ಹೆಸರಿನಿಂದ ಮಾರಾಟವಾಗುತ್ತಿತ್ತು.
ಪ್ರಜಾಮತದ ತೆಲುಗು ಆವೃತ್ತಿಯನ್ನೂ ಪ್ರಾರಂಭಿಸಲಾಗಿತ್ತು.
ಬಿ.ಎಂ.ಶ್ರೀನಿವಾಸಯ್ಯ, ಎಂ.ಎಸ್.ಗುರುಪಾದಸ್ವಾಮಿ, ತಿ.ಸಿದ್ದಪ್ಪ, ಹ.ವೆಂ.ನಾಗರಾಜರಾವ್ ಇದರ ಸಂಪಾದಕರುಗಳಾಗಿದ್ದವರು.
‘ಪ್ರಜಾಮತ’ದ ದೀಪಾವಳಿ ಸಂಚಿಕೆಯೂ ಅತ್ಯಂತ ಜನಪ್ರಿಯವಾಗಿತ್ತು.
‘ಜನಪ್ರಗತಿ’ ಹಾಗೂ ‘ಚಿತ್ರಗುಪ್ತ’ ವಾರಪತ್ರಿಕೆಗಳು ಕಣ್ಮರೆಯಾದ ನಂತರ ಹೆಚ್ಚು ಜನಪ್ರಿಯವಾಗಿದ್ದದ್ದು ‘ಪ್ರಜಾಮತ’.
ಏಕಕಾಲಕ್ಕೆ ಲಕ್ಷ ಪ್ರಸಾರ ತಂದುಕೊಟ್ಟ ಕನ್ನಡ ಪತ್ರಿಕೆಗಳೆಂದರೆ ‘ಪ್ರಜಾಮತ’, ‘ಪ್ರಜಾವಾಣಿ’ ಹಾಗೂ ‘ಸುಧಾ’. ಈ ಸಂದರ್ಭದಲ್ಲಿ ಆ ಪತ್ರಿಕೆಗಳನ್ನು ಸಂಪಾದಿಸುತ್ತಿದ್ದ ಹ.ವೆಂ.ನಾಗರಾಜರಾವ್, ಟಿ.ಎಸ್.ರಾಮಚಂದ್ರರಾವ್ ಹಾಗೂ ಇ.ಆರ್.ಸೇತೂರಾಂ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸನ್ಮಾನವನ್ನಿಟ್ಟುಕೊಂಡಿತ್ತು. ಬಹುಶಃ ಆ ಮೂರೂ ಪತ್ರಿಕೆಗಳಲ್ಲಿ ಲಕ್ಷ ಪ್ರಸಾರವನ್ನು ಮೊದಲು ತಲುಪಿದ್ದು ‘ಪ್ರಜಾಮತ’ ವಾರಪತ್ರಿಕೆ.
೧೯೬೮-೧೯೬೯ ಸಮಯದಲ್ಲಿ 'ಪ್ರಜಾಮತ' ಜಿ. ವೈ. ಹುಬ್ಳೀಕರ್, ಅಗರಂ ನರಸಿಂಹನ್, ಪ. ಸ. ಕುಮಾರ್, ವಾಮನ ರಾವ್ ಸಾಕ್ರೆ ಮುಂತಾದ ಅಂದಿನ ಕಾಲದ ಪ್ರತಿಭಾವಾಂತರನ್ನು ಒಂದುಗೂಡಿಸಿತ್ತು. ಆ ಕಾಲದಲ್ಲಿ ‘ಪ್ರಜಾಮತ’ಕ್ಕೆ ತನ್ನದೇ ಆದ ‘ಯೂಎಸ್‍ಪಿ’ (ಬ್ಯುಸಿನೆಸ್ ಭಾಷೆಯಲ್ಲಿ ಯೂನಿಕ್ ಸೆಲ್ಲಿಂಗ್ ಪ್ರಪೋಸಿಷನ್ಸ್ ಅಥವಾ ಪಾಯಿಂಟ್ಸ್)ಗಳಿದ್ದವು. ಉಳಿದ ವಾರಪತ್ರಿಕೆಗಳಿಗಿಂತಲೂ ದೊಡ್ಡದಾಗಿತ್ತು. ತೀರಾ ದಪ್ಪವೂ ಅಲ್ಲದ ತೀರಾ ತೆಳುವೂ ಅಲ್ಲದ ರಕ್ಷಾಪುಟದಲ್ಲಿ ಸಿನಿಮಾ ತಾರೆಯರ ಭರ್ಜರಿ ಚಿತ್ರಗಳು ಮುದ್ರಿತವಾಗುತ್ತಿದ್ದವು.
ಅಂದಿನ ಕಾಲಕ್ಕೆ ಕನ್ನಡ ಪತ್ರಿಕೋದ್ಯಮದಲ್ಲಿ ಅತ್ಯಂತ ಮುಂದುವರೆದ ಮುದ್ರಣದ ಅವಕಾಶ ಪಡೆದು, ಆಕರ್ಷಕ ಬಣ್ಣಗಳ ಛಾಯಾಚಿತ್ರಗಳೊಂದಿಗೆ ಪ್ರಕಟವಾಗುತ್ತಿದ್ದ ಅಗರಂ ನರಸಿಂಹನ್ ಅವರ "ಫುಟ್ಪಾತ್ ಅಂಗಡಿಗಳು ಹಬ್ಬತ್ತಿರುವ ಪಿಡುಗು", "ಬಾಲಾಪರಾಧ", "ಕ್ಯಾಬರೆ ನೃತ್ಯ", "ಬೆಂಗಳೂರಿನ ಕೊಳಚೆ ಪ್ರದೇಶಗಳ ಸಮಸ್ಯೆ", ಇತ್ಯಾದಿ ಸಚಿತ್ರ ಬರಹಗಳು, ಅರ್ಥಶಾಸ್ತ್ರ, ಸಾರ್ವಜನಿಕ ಆರೋಗ್ಯ ಇತ್ಯಾದಿ ವಿಷಯಗಳ ಬಗ್ಗೆ ಅವರು ಬರೆಯುತ್ತಿದ್ದ ಲೇಖನಗಳು, ನರಸಿಂಹನ್ ಅವರೇ ಬರೆಯುತ್ತಿದ್ದ "ಸುದ್ಧಿ ಹಿಂದಿನ ಸತ್ಯ", "ವಿಚಿತ್ರ ವಿಶ್ವ" ಅಂಕಣಗಳು ಇತ್ಯಾದಿ, ನಿಯತಕಾಲಿಕಕ್ಕೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದ್ದವು. ಅವರ, "ಟೈಮ್", "ನ್ಯೊಸ್ವೀಕ್ ", "ಇಲಸ್ಟ್ರೇಟೆಡ್ ವೀಕ್ಲಿ" ಇತ್ಯಾದಿ ಇಂಗ್ಲಿಷ್ ನಿಯತಕಾಲಿಕಗಳ ಮಾದರೀ ಲೇಖನಗಳು ವಿದ್ಯಾವಂತ ವರ್ಗಗಳಿಗೆ ಆಕರ್ಷಕವಾಗಿರುತ್ತಿತ್ತು.
ಜಿ.ವೈ.ಹುಬ್ಳೀಕರ್ ಅವರ ‘ಚಿಂಗಾರಿ’ ವ್ಯಂಗ್ಯ ಚಿತ್ರ ಮಾಲಿಕೆ ಪ್ರಕಟವಾಗುತ್ತಿತ್ತು. ಹುಡುಗರು ಕದ್ದು-ಮುಚ್ಚಿ ಓದುತ್ತಿದ್ದ ‘ಗುಪ್ತ ಸಮಾಲೋಚನೆ’ ಹಾಗೂ ‘ದಾಂಪತ್ಯ ಸಮಸ್ಯೆಗಳು’ ಅಂಕಣಗಳು ಪ್ರಕಟವಾಗುತ್ತಿದ್ದವು. ಈ ಎರಡನೆಯ ಅಂಕಣವನ್ನು ಪತ್ರಿಕೆಯ ಸಹ-ಸಂಪಾದಕರಾಗಿದ್ದ ಕಾದಂಬರಿಕಾರ ಮ.ನ.ಮೂರ್ತಿಯವರು ನಿರ್ವಹಿಸುತ್ತಿದ್ದರು. ಉಳಿದಂತೆ ‘ಜಾನುಪ್ರಿಯ’ರ ಕ್ರೀಡಾಪುಟ ಅದ್ಭುತವಾಗಿತ್ತು. [‘ಜಾನುಪ್ರಿಯ’ ಮುಂದೆ ತಮ್ಮದೇ ಕ್ರೀಡಾ ಪತ್ರಿಕೆ ಮಾಡಿದರು. ಆ ಕ್ರೀಡಾ ವಾರ ಪತ್ರಿಕೆ ಕೆಲವು ಕಾಲ ನಡೆದು ನಿಂತುಹೋಯಿತು. ಅನಂತರ ಅವರು ಕೆಲಕಾಲ ‘ಜ್ವಾಲಾಮುಖಿ’ ಪತ್ರಿಕೆಗೆ ತನಿಖಾತ್ಮಕ ಲೇಖನಗಳನ್ನೂ ಬರೆದಿದ್ದಾರೆ]. ಮುಂದೆ ಈ ಪುಟವನ್ನು ‘ವೇಣುಪಿತ’ (‘ನಾನಿನ್ನ ಮರೆಯಲಾರೆ’ ಖ್ಯಾತಿಯ ಅ.ರಾ.ಆನಂದ, ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಉಪ-ಸುದ್ದಿ ಸಂಪಾದಕರಾಗಿದ್ದವರು) ಮುಂದುವರಿಸಿದರು. ಆ ಕಾಲದಲ್ಲಿ ಕ್ರೀಡಾವರದಿಗಳನ್ನು ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ಓದುವುದೇ ರೋಮಾಂಚನ ತರುತ್ತಿತ್ತು. [‘ಪ್ರಜಾವಾಣಿ’/‘ಸುಧಾ’ದಲ್ಲಿ ‘ಸೂರಿ’ (ಎಚ್.ಎಸ್.ಸೂರ್ಯನಾರಾಯಣ), ‘ಸಂಕ’ದಲ್ಲಿ ಎಸ್.ದೇವನಾಥ್, ‘ಕಪ್ರ’ದಲ್ಲಿ ಅ.ರಾ.ಆನಂದ/ಚ.ಶ್ರೀ.ಪ್ರಭಾಕರ ..... ಕ್ರೀದಾ ಪತ್ರಿಕೋದ್ಯಮಕ್ಕೆ ಹೆಸರು ತಂದವರು]. ಮರೆಯಲಾಗದ ಮತ್ತೊಂದು ಅಂಶವೆಂದರೆ ‘ಪ್ರಜಾಮತ’ದ ಸಿನಿಮಾ ಪುಟಗಳು. ಬಹುಶಃ ಆ ಪುಟಗಳ ಹೆಸರು ‘ರೂಪವಾಣಿ’ ಅನ್ನಿಸುತ್ತದೆ. ದ್ವಾರಕಾನಾಥ್ ನಿರ್ವಹಿಸುತ್ತಿದ್ದ ಆ ವಿಭಾಗ ಓದುಗರನ್ನು ಸೂರೆಗೊಂಡಿತ್ತು. ಹಾಗೆಯೇ ಧಾರಾವಾಹಿ ಕಾದಂಬರಿಗಳು, ರಾಜಕೀಯ ವಿಶ್ಲೇಷಣೆ, ಹಾಸ್ಯ ಬರಹಗಳು, ಕತೆಗಳು ಆ ಪತ್ರಿಕೆಗೆ ಓದುಗ ವಲಯವನ್ನು ಸೃಷ್ಟಿಸಿದ್ದವು. ‘ಪ್ರಜಾಮತ’ದ ದೀಪಾವಳಿ ಸಂಚಿಕೆಗಳು ‘ಪ್ರಜಾವಾಣಿ’ಯ ದೀಪಾವಳಿ ಸಂಚಿಕೆಗಳಷ್ಟೇ ಸಂಗ್ರಹಯೋಗ್ಯವಾಗಿದ್ದವು.
‘ಬೀಚಿ’ಯವರ ಆತ್ಮಕತೆ ‘ನನ್ನ ಭಯಾಗ್ರಫಿ’ ಈ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ವಿವಾದಗಳನ್ನು ಹುಟ್ಟಿಹಾಕಿತ್ತು. ಜಿ.ಪಿ.ರಾಜರತ್ನಂ ಅವರ ಬಗ್ಗೆ ಬರೆದ ‘ಹಾತ್ಮೆ ಪೈಸಾ, ಕಿವೀಮೆ ಭಾಷಣಾ ...’ ಶೀರ್ಷಿಕೆಯ ಲೇಖನ. ರಾಜರತ್ನಂ ಅವರನ್ನು ಯಾವುದೇ ಸಮಾರಂಭಕ್ಕೆ ಆಹ್ವಾನಿಸಿದರೆ ತಮ್ಮ ಪುಸ್ತಕಗಳನ್ನು ಕೊಳ್ಳಿ ಎಂದು ಒತ್ತಾಯಿಸುತ್ತಾರೆ, ಹಾಗೆಯೇ ಸಮಾರಂಭ ಮುಗಿದ ನಂತರ ತಮ್ಮ ಪುಸ್ತಕಗಳನ್ನು ಮಾರಾಟಕ್ಕಿಡುತ್ತಾರೆ ಎಂಬುದು ಬೀಚಿಯವರ ಆಪಾದನೆಯಾಗಿತ್ತು. ಇದರಿಂದ ಮನನೊಂದು ಮುಂದೆ ರಾಜರತ್ನಂ ತಮ್ಮ ಆತ್ಮಕತೆ ‘ನಿರ್ಭಯಾಗ್ರಫಿ’ಯನ್ನು ಬರೆದರು.
ಮನ.ಮೂರ್ತಿಯವರ ನಂತರ ‘ಪ್ರಜಾವಾಣಿ’/‘ಕನ್ನಡಪ್ರಭ’ದ ಎಸ್.ಆರ್.ಕೃಷ್ಣಮೂರ್ತಿ (ಎಸ್ಸಾರ್ಕೆ) ‘ಪ್ರಜಾಮತ’ಕ್ಕೆ ಸಹ-ಸಂಪಾದಕರಾಗಿದ್ದರು. ಆ ಕಾಲದಲ್ಲಿಯೂ ಪತ್ರಿಕೆಗೆ ಓದುಗರ ಬೆಂಬಲವಿತ್ತು.
ಬಂಡವಾಳದ ಕೊರತೆ, ಬದಲಾದ ಓದುಗರ ಅಭಿರುಚಿ ‘ಪ್ರಜಾಮತ’ ಸೇರಿದಂತೆ ಅನೇಕ ಉತ್ತಮ ನಿಯತಕಾಲಿಕಗಳಿಗೆ ಉರುಳಾಯಿತು. ೧೯೮೭ರಲ್ಲಿ ಪ್ರಜಾಮತ ಪತ್ರಿಕೆಯ ಕೊನೆ ಸಂಚಿಕೆ ಪ್ರಕಟವಾಯಿತು. ೨೦೦೨ರಲ್ಲಿ ಪತ್ರಿಕೆಯನ್ನು ಮತ್ತೆ ತರುವ ಯತ್ನ ನಡೆಯಿತು.http://kannada.oneindia.in/news/2002/01/31/prajamata.html